varthabharthi

ಕ್ರೀಡೆ

ರಾಜಪಕ್ಸ ಅರ್ಧಶತಕ, ಪ್ರದೀಪ್ ಪ್ರಹಾರಕ್ಕೆ ಪಾಕ್ ತತ್ತರ

ಶ್ರೀಲಂಕಾಕ್ಕೆ ರೋಚಕ ಜಯ, ಸರಣಿ ಕೈವಶ

ವಾರ್ತಾ ಭಾರತಿ : 9 Oct, 2019

ಎರಡನೇ ಟ್ವೆಂಟಿ-20

ಲಾಹೋರ್, ಅ.8: ಆರಂಭಿಕ ಆಟಗಾರ ಭಾನುಕ ರಾಜಪಕ್ಸ ಅರ್ಧಶತಕ(77, 48 ಎಸೆತ)ಕೊಡುಗೆ ಹಾಗೂ ವೇಗದ ಬೌಲರ್ ನುವಾನ್ ಪ್ರದೀಪ್(4-25)ನೇತೃತ್ವದ ಬೌಲರ್‌ಗಳ ಅಮೋಘ ಬೌಲಿಂಗ್ ನೆರವಿನಿಂದ ಶ್ರೀಲಂಕಾ ತಂಡ ಆತಿಥೇಯ ಪಾಕಿಸ್ತಾನ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 35 ರನ್‌ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ ಶ್ರೀಲಂಕಾ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಂಡಿತು. ಸೋಮವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾದ ನಾಯಕ ಶನಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ದಿಟ್ಟ ಹೋರಾಟ ನೀಡಿದ ರಾಜಪಕ್ಸ(77, 48 ಎಸೆತ, 4 ಬೌಂಡರಿ, 6 ಸಿಕ್ಸರ್)ಜಯಸೂರ್ಯ(34, 28 ಎಸೆತ)ಹಾಗೂ ಶನಕಾ(ಔಟಾಗದೆ 27)ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಲು ನೆರವಾದರು. ಪಾಕ್ ಬೌಲಿಂಗ್‌ನಲ್ಲಿ ಮುಹಮ್ಮದ್ ಆಮಿರ್ 4 ಓವರ್‌ಗಳಲ್ಲಿ 40 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. ಇಮಾದ್ ವಸೀಂ(1-27), ರಿಯಾಝ್(1-31) ಹಾಗೂ ಶಾದಾಬ್ ಖಾನ್(1-38)ತಲಾ ಒಂದು ವಿಕೆಟ್ ಪಡೆದರು.

ಗೆಲ್ಲಲು 183 ರನ್ ಗುರಿ ಪಡೆದ ಪಾಕಿಸ್ತಾನ 19 ಓವರ್‌ಗಳಲ್ಲಿ 147 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಮಾದ್ ವಸೀಂ(47,29 ಎಸೆತ, 8 ಬೌಂಡರಿ)ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಆಸಿಫ್ ಅಲಿ(29), ನಾಯಕ ಸರ್ಫರಾಝ್ ಅಹ್ಮದ್(26) ಹಾಗೂ ಅಹ್ಮದ್ ಶೆಹಝಾದ್(13) ಎರಡಂಕೆಯ ಸ್ಕೋರ್ ಗಳಿಸಿದರು.

ಲಂಕೆಯ ಪರ ನುವಾನ್ ಪ್ರದೀಪ್(4-25), ವನಿಂದು ಡಿಸಿಲ್ವಾ(3-38) ಹಾಗೂ ಉದಾನ(2-38)ಸಂಘಟಿತ ಪ್ರದರ್ಶನ ನೀಡಿ ಪಾಕ್‌ನ್ನು 150ರೊಳಗೆ ಕಟ್ಟಿಹಾಕಿದರು.

ಭಾನುಕ ರಾಜಪಕ್ಸ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)