varthabharthi

ರಾಷ್ಟ್ರೀಯ

ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಕುಸಿದ ಭಾರತ

ವಾರ್ತಾ ಭಾರತಿ : 9 Oct, 2019

ಹೊಸದಿಲ್ಲಿ: ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತ ಈ ವರ್ಷ 10 ಸ್ಥಾನ ಕುಸಿತ ಕಂಡು 68ನೇ ಸ್ಥಾನ ಗಳಿಸಿದೆ.

ಇತರ ಆರ್ಥಿಕತೆಗಳು ತೋರಿದ ಸುಧಾರಣೆ ಭಾರತದ ಕುಸಿತಕ್ಕೆ ಮುಖ್ಯ ಕಾರಣ. ಸಿಂಗಾಪುರ ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಆರ್ಥಿಕತೆ ಎಂಬ ಸ್ಥಾನವನ್ನು ಅಮೆರಿಕದ ಕೈಯಿಂದ ಕಸಿದುಕೊಂಡಿದೆ.

ಜಿನೀವಾ ಮೂಲದ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ವಾರ್ಷಿಕವಾಗಿ ಪ್ರಕಟಿಸುವ ಈ ಸೂಚ್ಯಂಕದಲ್ಲಿ ಕಳೆದ ವರ್ಷ ಭಾರತ 58ನೇ ಸ್ಥಾನದಲ್ಲಿತ್ತು. ಬ್ರಿಕ್ಸ್ ಸದಸ್ಯ ದೇಶಗಳ ಪೈಕಿ ಭಾರತ, ಬ್ರೆಝಿಲ್ ದೇಶವನ್ನು ಹೊರತುಪಡಿಸಿದರೆ ಅತ್ಯಂತ ಕಳಪೆ ರ್ಯಾಂಕಿಂಗ್ ಪಡೆದಿದೆ. ಬ್ರೆಝಿಲ್ 71ನೇ ಸ್ಥಾನದಲ್ಲಿದೆ.

ಆರ್ಥಿಕ ಸ್ಥಿರತೆ ಮತ್ತು ಮಾರುಕಟ್ಟೆ ಗಾತ್ರ ಅಂಶಗಳಲ್ಲಿ ಭಾರತ ಉನ್ನತ ರ್ಯಾಂಕಿಂಗ್ ಗಳಿಸಿದೆ. ಆದಾಗ್ಯೂ ದೇಶದ ಹಣಕಾಸು ವಲಯ ತೀರಾ ಆಳ ಮತ್ತು ಭದ್ರವಾಗಿದ್ದು, ಅತ್ಯಧಿಕ ಕರ್ತವ್ಯಲೋಪ ದರದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆ ದುರ್ಬಲವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಭಾರತ ಕಾರ್ಪೊರೇಟ್ ಆಡಳಿತ ಕ್ಷೇತ್ರದಲ್ಲಿ 15ನೇ ರ್ಯಾಂಕಿಂಗ್ ಪಡೆದಿದ್ದರೆ, ಷೇರುದಾರರ ಆಡಳಿತ ವಿಚಾರದಲ್ಲಿ ದ್ವಿತೀಯ ಸ್ಥಾನಿಯಾಗಿದೆ. ಮಾರುಕಟ್ಟೆ ಗಾತ್ರದಲ್ಲಿ ಭಾರತ 3ನೇ ರ್ಯಾಂಕಿಂಗ್ ಹೊಂದಿದ್ದು, ಪುನರ್ ಬಳಕೆ ಮೂಲದ ಇಂಧನ ನಿಯಂತ್ರಣ ಕ್ಷೇತ್ರದಲ್ಲೂ ಇದೇ ಸ್ಥಾನದಲ್ಲಿದೆ.

ಆದರೆ ಮಾಹಿತಿ, ಸಂವಹನ ಹಾಗೂ ತಂತ್ರಜ್ಞಾನ ಅಳವಡಿಕೆಯ ಕೊರತೆ, ಹದಗೆಟ್ಟ ಆರೋಗ್ಯ ವ್ಯವಸ್ಥೆ ಮತ್ತು ನಿರೀಕ್ಷಿತ ಜೀವಿತಾವಧಿ ಅಂಶಗಳ ಕಾರಣದಿಂದ ಭಾರತದ ರ್ಯಾಂಕಿಂಗ್ ಕುಸಿದಿದೆ. ನಿರೀಕ್ಷಿತ ಜೀವಿತಾವಧಿ ಮಾನದಂಡದಲ್ಲಿ ಭಾರತ 141 ದೇಶಗಳ ಪೈಕಿ 109ನೇ ಸ್ಥಾನದಲ್ಲಿದೆ. ಇದು ಆಫ್ರಿಕಾ ದೇಶಗಳನ್ನು ಹೊರತುಪಡಿಸಿದರೆ ಕನಿಷ್ಠ ರ್ಯಾಂಕಿಂಗ್ ಆಗಿದ್ದು, ದಕ್ಷಿಣ ಏಷ್ಯಾ ಸರಾಸರಿಗಿಂತ ತೀರಾ ಕಡಿಮೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)