varthabharthi

ಕರಾವಳಿ

ಎನ್ ಎಂಪಿಟಿ ಖಾಸಗೀಕರಣಕ್ಕೆ ವಿರೋಧ, ಶೇ.50ರಷ್ಟು ಸ್ಥಳೀಯರ ನೇಮಕಾತಿಗೆ ಯು.ಟಿ.ಖಾದರ್ ಒತ್ತಾಯ

ವಾರ್ತಾ ಭಾರತಿ : 9 Oct, 2019

ಮಂಗಳೂರು : ಸರಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್, ಏರ್ಪೋರ್ಟ್ ಬಳಿಕ ಇದೀಗ ಎನ್ಎಂಪಿಟಿಯಲ್ಲೂ ಖಾಸಗೀಕರಣಕ್ಕೆ ಕೇಂದ್ರ ಸರಕಾರ ಮುಂದಾಗಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎನ್ ಎಂಪಿಟಿಯಲ್ಲಿ ಒಂದು ವಿಭಾಗದ ಕಂಟೇನರ್ ಗಳ ನಿರ್ವಹಣೆಯನ್ನು ಚೆಟ್ಟಿನಾಡ್ ಸಂಸ್ಥೆ ಗೆ ಈಗಾಗಲೇ ವಹಿಸಲಾಗಿದೆ. ಇನ್ನೊಂದು ಭಾಗವನ್ನು 2 ತಿಂಗಳಲ್ಲಿ ಜೆಎಸ್ ಡಬ್ಲ್ಯೂ ಸಂಸ್ಥೆ ಗೆ ನೀಡಲು ತೀರ್ಮಾನಿಸಲಾಗಿದೆ. ಎನ್ಎಂಪಿಟಿಯಲ್ಲಿ ಸುಮಾರು 40 ರಷ್ಟು ಶಿಪ್ಪಿಂಗ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಖಾಸಗೀಕರಣದಿಂದ ಈ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು ನಾಲ್ಕು ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಶ್ರೀನಿವಾಸ ಮಲ್ಯರು ಹಾಗೂ ಹಿಂದಿನ ಸಂಸದರು ಸ್ಥಳೀಯ ರಿಗೆ ಉದ್ಯೋಗವಕಾಶ ಹಾಗೂ ಅಭಿವೃದ್ಧಿ ಉದ್ದೇಶ ದಿಂದ ಈ ಸರಕಾರಿ ಸಂಸ್ಥೆ ಯನ್ನು ಹುಟ್ಟು ಹಾಕುವಲ್ಲಿ ಶ್ರಮಿಸಿದ್ದಾರೆ. ಹಾಗಾಗಿ ಸಂಸದರು ಹಾಗೂ ಶಾಸಕರ ನಿಯೋಗವನ್ನು ಕೇಂದ್ರ ದ ಶಿಪ್ಪಿಂಗ್ ಸಚಿವರ ಬಳಿ ಕೊಂಡೊಯ್ಯಬೇಕು. ಖಾಸಗೀಕರಣಕ್ಕೆ ವಿರೋಧವನ್ನು ನಾವು ವ್ಯಕ್ತಪಡಿಸುತ್ತೇವೆ . ಜತೆಗೆ ಇಲ್ಲಿ ಉದ್ಯೋಗ ಕಳೆದುಕೊಳ್ಳುವವರಿಗೆ ಪ್ರಥಮ ಆದ್ಯತೆಯಡಿ ಉದ್ಯೋಗ ನೀಡಬೇಕು. ನೇಮಕಾತಿ ಸಂದರ್ಭದಲ್ಲಿ ಶೇ.50 ಸ್ಥಳೀಯ ರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಬ್ಯಾಂಕ್ ಗಳು ವಿಲೀನವಾಗುತ್ತಿವೆ. ಈ ಸಂದರ್ಭದಲ್ಲಿ ಯೂ ಶೇ. 50ರಷ್ಟು ಸ್ಥಳೀಯರಿಗೆ ಆದ್ಯ ತೆ ನೀಡಬೇಕು. ಉಡುಪಿ, ದ.ಕ. ಕಾರವಾರ ಸಂಸದರು ಈ  ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಅವರು ಹೇಳಿದರು.

ಕಾಟಾಚಾರದ ಅಸೆಂಬ್ಲಿ

ರಾಜ್ಯ ಸರಕಾರ ಕಾಟಾಚಾರಕ್ಕೆ ನಾಳೆಯಿಂದ ಅಸೆಂಬ್ಲಿ ಅಧಿವೇಶನ ಕರೆದಿದ್ದು, ಇದು ಕೇವಲ ಹಣಕಾಸಿನ ಅನುಮೋದನೆ ಪಡೆಯುವುದಕ್ಕಾಗಿ ಮಾತ್ರ ಎಂದು ಶಾಸಕ ಖಾದರ್ ಟೀಕಿಸಿದರು.

10 ದಿನಗಳ ಅಧಿವೇಶನ ಇದೀಗ 3 ದಿನಗಳಿಗೆ ಸೀಮಿತಗೊಂಡಿದ್ದು ಪ್ರಶ್ನೋತ್ತರ, ವಿವಿಧ ಇಲಾಖೆಗಳ ವಿಷಯ ಚರ್ಚಿಸಲು ಕಾಲಾವಕಾಶ ಇಲ್ಲ ಎಂದು ದೂರಿದರು.

ಎನ್ ಆರ್ ಸಿ ಬಗ್ಗೆ ಆತಂಕ ಬೇಡ

ಎನ್ ಆರ್ ಸಿ ಬಗ್ಗೆ ವಿನಾ ಕಾರಣ ಗೊಂದಲ, ಆತಂಕ ಬೇಡ. ಈ ಬಗ್ಗೆ ಕಾನೂನು ಅರಿತು ಜಾಗರೂಕರಾಗಬೇಕು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು ‌

1955ರಲ್ಲಿ ನಾಗರಿಕ ಹಕ್ಕು ಕಾಯ್ದೆ ಜಾರಿಯಾಗಿದೆ. 2003ರಲ್ಲಿ ನಿಯಮ ರಚನೆಯಾಗಿದೆ.ಅದನ್ನೀಗ ಅಪ್ಡೇಟ್ ಮಾಡಲಾಗಿದೆ. ಹಾಗಾಗಿ ಇದರಲ್ಲಿ ಲೋಪದೋಷ ಇದ್ದಲ್ಲಿ ಸರಿಪಡಿಸಿಕೊಂಡು ಬಡವರಿಗೆ, ನಿರ್ಗತಿಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಸಚಿವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಎಲ್ಲವನ್ನೂ ರಾಜಕೀಯವಾಗಿ ನೋಡಬಾರದು ಎಂದಿರುವ ಕೇಂದ್ರ ಸಚಿವ ಅಮಿತ್ ಶಾರವರು ಎನ್ ಆರ್ ಸಿ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ  ಖಾದರ್ ಸುದ್ದಿ ಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಕೇಂದ್ರ ಸಚಿವರ ಹೇಳಿಕೆಗೆ ರಾಜ್ಯದ ಗ್ರಹ ಸಚಿವರು ಸ್ಪಷ್ಟ ಹೇಳಿಕೆ ನೀಡಬೇಕು ಎಂದವರು ಹೇಳಿದರು.
ಗೋಷ್ಠಿಯಲ್ಲಿ ಸದಾಶಿವ ಉಳ್ಳಾಲ್, ಈಶ್ವರ ಉಳ್ಳಾಲ್, ಮುಹಮ್ಮದ್ ಕುಂಞಿ, ಫಾರೂಕ್, ಸುದರ್ಶನ್ ಶೆಟ್ಟಿ, ಸಿರಾಜ್, ಸುನೀತಾ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)