varthabharthi

ರಾಷ್ಟ್ರೀಯ

ಶಾ ಫೈಸಲ್ ಕೂಡ ಇದೇ ಹಾದಿ ಹಿಡಿಯುವ ಸಾಧ್ಯತೆ

ರಾಜಕೀಯ ತೊರೆದ ಶೆಹ್ಲಾ ರಶೀದ್

ವಾರ್ತಾ ಭಾರತಿ : 9 Oct, 2019

ಶ್ರೀನಗರ್: ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಅವರ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ಪಕ್ಷ ವನ್ನು ಮಾರ್ಚ್ ತಿಂಗಳಲ್ಲಿ ಸೇರಿದ್ದ ಜೆಎನ್‍ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಬುಧವಾರ ರಾಜಕೀಯ ತೊರೆಯುವ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಬ್ಲಾಕ್ ಡೆವಲೆಪ್ಮೆಂಟ್ ಕೌನ್ಸಿಲ್ ಚುನಾವಣೆ ಘೋಷಿಸಿರುವುದರಿಂದ ತಾವು ಈ ನಿರ್ಧಾರವನ್ನು ಅನಿವಾರ್ಯ ವಾಗಿ ಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ.

ಈ ಚುನಾವಣೆಗಳನ್ನು ನಡೆಸಲು ಉದ್ದೇಶಿಸಿ ಸರಕಾರ ಜಗತ್ತಿನ ಕಣ್ಣಿಗೆ ಕಾಶ್ಮೀರದಲ್ಲಿ ಸಹಜ ಸ್ಥಿತಿಯಿದೆ ಎಂದು ತೋರ್ಪಡಿಸುವ ಯತ್ನ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

''ನ್ಯಾಯ ಹಾಗೂ ಉತ್ತಮ ಆಡಳಿತ ನೀಡಲು ಸಾಧ್ಯವೆಂದು  ಹಾಗೂ ಜಮ್ಮು ಕಾಶ್ಮೀರದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವೆಂಬ ನಂಬಿಕೆಯೊಂದಿಗೆ ರಾಜಕೀಯ ಸೇರಿದ್ದೆ. ಸರಕಾರ ಕಾನೂನನ್ನು ಗೌರವಿಸಿದ್ದರೆ ಇದೆಲ್ಲ ಸಾಧ್ಯವಾಗುತ್ತಿತ್ತು, ಜನರ ಮೇಲಿನ ದೌರ್ಜನ್ಯವನ್ನು ಕಾನೂನು ಬದ್ಧಗೊಳಿಸುವ ಪ್ರಕ್ರಿಯೆಯನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ, ಇದೇ ಕಾರಣದಿಂದ ಚುನಾವಣಾ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದೇನೆ,' ಎಂದು ಅವರು ಹೇಳಿದ್ದಾರೆ.

ಅದೇ ಸಮಯ ತಾವು ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ,  ಅನ್ಯಾಯದ ವಿರುದ್ಧ  ದನಿಯೆತ್ತುವುದಾಗಿ ಹಾಗು  ರಾಜ್ಯದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಮತ್ತು ರಾಜ್ಯದ ವಿಭಜನೆಯನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ಅಪೀಲಿನ ಮೂಲಕ ಸರ್ವ ಪ್ರಯತ್ನ ನಡೆಸುವುದಾಗಿಯೂ ಅವರು ಹೇಳಿದ್ದಾರೆ.

ಅತ್ತ ಆಗಸ್ಟ್ ಎರಡನೇ ವಾರದಿಂದ  ಬಂಧನದಲ್ಲಿರುವ ಶಾ  ಫೈಸಲ್ ತಮ್ಮ ಜೆಕೆಎಂಪಿ ಪಕ್ಷವನ್ನು  ವಿಸರ್ಜಿಸುವ ಕುರಿತು ಯೋಚಿಸುತ್ತಿದ್ದಾರೆನ್ನಲಾಗಿದೆ. ಅವರನ್ನು ಭೇಟಿಯಾದ ಪಕ್ಷದ ಸಹೋದ್ಯೋಗಿಗಳಿಗೆ ಈ ಕುರಿತು ಸುಳಿವು ನೀಡಿದ್ದಾರೆಂದು ಹೇಳಲಾಗಿದೆ. ಶೆಹ್ಲಾ ರಶೀದ್ ನಂತರ ರಾಜಕೀಯ ತೊರೆಯುವ ಸರದಿ ಅವರದ್ದಾಗಬಹುದು ಎಂದೂ ಹೇಳಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)