varthabharthi

ಕರ್ನಾಟಕ

ಪ್ರವೇಶ ಶುಲ್ಕದ ನೆಪದಲ್ಲಿ ಪ್ರವಾಸಿಗರ ಹಗಲು ದರೋಡೆ: ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಆರೋಪ

ವಾರ್ತಾ ಭಾರತಿ : 9 Oct, 2019

ಚಿಕ್ಕಮಗಳೂರು, ಅ.9: ಕಾಫಿನಾಡು ಸುಂದರ ಪ್ರವಾಸಿ ತಾಣವಾಗಿದ್ದು, ಈ ಕಾರಣಕ್ಕೆ ಹೊರಜಿಲ್ಲೆಗಳ ಲಕ್ಷಾಂತರ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರ ವಾಹನಗಳಿಂದ ಅನಧೀಕೃತವಾಗಿ ಪ್ರವೇಶ ಶುಲ್ಕ ವಸೂಲಿ ಮಾಡುವ ದಂಧೆ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ನಗರ ಸಮೀಪದ ಅಲ್ಲಂಪುರ ಗ್ರಾಪಂ ವ್ಯಾಪ್ತಿಯಲ್ಲಿರುವ ಕೈಮರ ಗ್ರಾಮದಲ್ಲಿ ದತ್ತಪೀಠ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಮತ್ತಿತರ ಪ್ರವಾಸಿತಾಣಗಳಿಗೆ ತೆರಳುವ ಮಾರ್ಗದಲ್ಲಿ ಚೆಕ್‍ಪೋಸ್ಟ್ ಇಲ್ಲಿಂದ ಪ್ರವಾಸಿತಾಣಗಳಿಗೆ ತೆರಳುವ ಪ್ರವಾಸಿಗರ ಬೈಕ್, ಕಾರು ಮತ್ತಿತರ ವಾಹನಗಳಿಗೆ 10ರಿಂದ 30 ರೂ. ವರೆಗೆ ಪ್ರವೇಶ ಶುಲ್ಕವನ್ನು ಅನಧೀಕೃತವಾಗಿ ವಸೂಲಿ ಮಾಡಲಾಗುತ್ತಿದೆ ಎಂದ ಅವರು, ಹಣ ವಸೂಲಿ ಮಾಡುವವರು ಪ್ರವಾಸಿಗರಿಗೆ ನೀಡುವ ರಶೀದಿ ನಕಲಿಯಾಗಿದ್ದು, ರಶೀದಿಯಲ್ಲಿ ಯಾವುದೇ ಸಹಿ, ಸೀಲ್‍ಗಳಿಲ್ಲ. ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡುವ ಅಧಿಕಾರ ಇವರಿಗೆ ನೀಡಿದವರಾದರೂ ಯಾರೂ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರವಾಸಿಗರಿಗೆ ನೀಡುತ್ತಿರುವ ರಶೀದಿಯಲ್ಲಿ ಚಂದ್ರದ್ರೋಣ ಗ್ರಾಮ ಅರಣ್ಯ ಸಮಿತಿ, ಜಿಲ್ಲಾಡಳಿ, ಕೈಮರ ಎಂದು ನಮೂದಾಗಿದೆ. ಈ ಸಂಬಂಧ ಜಿಲ್ಲಾಡಳಿತ ಬಳಿ ವಿಚಾರಿಸಿದರೆ ಇಂತಹ ಯಾವುದೇ ಶುಲ್ಕ ವಸೂಲಿಗೆ ಜಿಲ್ಲಾಡಳಿತ ಮುಂದಾಗಿಲ್ಲ. ವಾಹನಗಳ ಪ್ರವೇಶ ಶುಲ್ಕ ವಸೂಲಾತಿ ಹಣ ಜಿಲ್ಲಾಡಳಿತದ ಬಳಿಯೂ ಇಲ್ಲ ಎಂದು ಜಿಲ್ಲಾಧಿಕಾರಿಯೇ ತಿಳಿಸಿದ್ದಾರೆ ಎಂದು ತಿಳಿಸಿದ ಅವರು, ಹಾಗಾದರೆ ಪ್ರವೇಶ ಶುಲ್ಕದ ನೆಪದಲ್ಲಿ ಪ್ರವಾಸಿಗರನ್ನು ಹಗಲು ದರೋಡೆ ಮಾಡುತ್ತಿರುವವರು ಯಾರು ಎಂಬುದನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು. ಹೊರಜಿಲ್ಲೆಗಳ ಪ್ರವಾಸಿಗರನ್ನು ಸೂಲಿಗೆ ಮಾಡುತ್ತಿರುವ ಅನಧೀಕೃತ ಸಂಸ್ಥೆ ಅಥವಾ ವ್ಯಕ್ತಿಗಳು ಯಾರೇ ಆಗಿದ್ದರು ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಅವರು ಆಗ್ರಹಿಸಿದರು. 

ಜಿಲ್ಲೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರ ವಾಹನಗಳು ಬರುತ್ತಿದ್ದು, ರಜಾದಿನಗಳಲ್ಲಿ ಲಕ್ಷಾಂತರ ರೂ. ಪ್ರವೇಶ ಶುಲ್ಕ ಸಂಗ್ರಹವಾಗುತ್ತಿದೆ. ಈ ಹಣ ಜಿಲ್ಲಾಡಳಿತದ ಖಜಾನೆಗೂ ಸಂದಾಯವಾಗುತ್ತಿಲ್ಲ. ಪ್ರವೇಶ ಶುಲ್ಕ ಸಂಗ್ರಹಿಸುತ್ತಿರುವ ಗ್ರಾಮ ಅರಣ್ಯ ಸಮಿತಿ ಈ ಹಣದಲ್ಲಿ ಪ್ರವಾಸಿ ತಾಣಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ?, ಇದುವರೆಗೂ ಸಂಗ್ರಹವಾದ ಪ್ರವೇಶ ಶುಲ್ಕ ಎಷ್ಟು? ಶುಲ್ಕ ವಸೂಲಿ ಮಾಡುತ್ತಿರುವ ಗ್ರಾಮ ಅರಣ್ಯ ಸಮಿತಿ ಪ್ರವಾಸಿ ತಾಣಗಳ ರಸ್ತೆಗಳ ನಿರ್ವಹಣೆ ಮಾಡುತ್ತಿದೆಯೇ? ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿರುವ ಅವರು, ಪ್ರವೇಶ ಶುಲ್ಕದ ಹೆಸರಿನಲ್ಲಿ ಅನಧೀಕೃತ ವ್ಯಕ್ತಿಗಳು ಅನಧೀಕೃತ ರಶೀದಿಗಳನ್ನು ಮುದ್ರಿಸಿಕೊಂಡು ಪ್ರವಾಸಿಗರನ್ನು ಸುಲಿಗೆ ಮಾಡುತ್ತಾ ಜಿಲ್ಲಾಡಳಿತವನ್ನು ವಂಚಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರವಾಸಿಗರನ್ನು ಹೆಜ್ಜೆ ಹೆಜ್ಜೆಗೂ ಸುಲಿಗೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಜಿಲ್ಲೆಯ ಪ್ರವಾಸಿ ತಾಣಗಳ ಆವರಣದಲ್ಲಿ ದೂರದ ಪ್ರವಾಸಿಗರು ಮದ್ಯಪಾನ ಮಾಡಿ ಬಾಟಲಿ ಮತ್ತಿತರ ತ್ಯಾಜ್ಯಗಳು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ಪರಿಸರ ಮಾಲಿನ್ಯ ತಡೆಯಲು, ಸ್ವಚ್ಛತೆ ಕಾಯ್ದುಕೊಳ್ಳಲು ಪೊಲೀಸ್ ಇಲಾಖೆ ಪೊಲೀಸ್ ಗಸ್ತುವಾಹನ ನಿಯೋಜಿಸಬೇಕೆಂದ ಅವರು, ಪ್ರವಾಸಿ ತಾಣಗಳಿಗೆ ತೆರಳುವ ವಾಹನಗಳಿಂದ ಪ್ರವೇಶ ಶುಲ್ಕ ವಸೂಲಿಯಲ್ಲಿ ಅಕ್ರಮ ತಡೆಗೆ ಶುಲ್ಕ ವಸೂಲಿಯನ್ನು ಕೈಬಿಡಬೇಕು. ಒಂದು ವೇಳೆ ಶುಲ್ಕ ವಸೂಲಿಯ ಅಗತ್ಯವಿದೆ ಎಂದಾದರೆ ಅದನ್ನು ಜಿಲ್ಲಾಡಳಿತದ ನಿಯಂತ್ರಣ ಮಾಡಬೇಕು. ನಕಲಿ ರಶೀದಿಗಳ ಮೂಲಕ ಹಣ ವಸೂಲಿ ಮಾಡುತ್ತಿರುವವರ ಮೇಲೆ ಕೂಡಲೇ ಕಾನೂನು ರೀತಿಯ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕೆಂದು ಇದೇ ವೇಳೆ ಅವರು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಅವರು ಪ್ರವಾಸಿಗರಿಂದ ಶುಲ್ಕ ವಸೂಲಿಗೆ ಬಳಸುತ್ತಿರುವ ಅನಧೀಕೃತ ರಶೀದಿಗಳನ್ನು ಪ್ರದರ್ಶಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಚಂದ್ರಪ್ಪ, ಹೊಲದಗದ್ದೆ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು, ಜಿಲ್ಲಾಡಳಿತ ಇದುವರೆಗೂ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ನೀಡಿರುವುದನ್ನು ಬಿಟ್ಟರೇ ಶಾಶ್ವತ ಪರಿಹಾರವನ್ನು ಇದುವರೆಗೂ ನೀಡಿಲ್ಲ. ಮನೆಹಾನಿ, ಜಮೀನು ಹಾನಿ, ಬೆಳೆ ಹಾನಿ ಪರಿಹಾರ ಕೋರಿ ಜಿಲ್ಲಾಡಳಿತಕ್ಕೆ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದರೂ ಇದುವರೆಗ್ಲೂರ್ಜಿಗಳನ್ನು ಜಿಲ್ಲಾಡಳಿತ ವಿಲೇವಾರಿ ಮಾಡಿಲ್ಲ. ಪರಿಹಾರದ ನಿರೀಕ್ಷೆಯಲ್ಲಿದ್ದ ಸಂತ್ರಸ್ಥರು ಸರಕಾರ ನಿರ್ಲಕ್ಷ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಸರಕಾರ ಸಮರ್ಪಕ ಸಮೀಕ್ಷೆ ಮಾಡಿ, ಸಂತ್ರಸ್ಥರ ಜಮೀನುಗಳ ದಾಖಲೆ ಹೊಂದಿರಲಿ, ಇಲ್ಲದಿರಲಿ ಅರ್ಜಿ ಸಲ್ಲಿಸಿದ ಎಲ್ಲ ಸಂತ್ರಸ್ಥರಿಗೂ ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ ನೀಡುವ 5 ಸಾವಿರ ಹಣವನ್ನು ಜಿಲ್ಲಾಡಳಿತ ಎಷ್ಟು ಸಂತ್ರಸ್ತರಿಗೆ ನೀಡಿದೆ ಎಂಬುದರ ಮಾಹಿತಿಯನ್ನು ಕೂಡಲೇ ನೀಡಬೇಕು. 
- ಎಸ್.ಎಲ್.ಬೋಜೇಗೌಡ, ವಿಧಾನಪರಿಷತ್ ಸದಸ್ಯ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)