varthabharthi

ಕರಾವಳಿ

ಉಡುಪಿ: ಇಂದಿನಿಂದ ನೃತ್ಯೋತ್ಸವ-2019

ವಾರ್ತಾ ಭಾರತಿ : 9 Oct, 2019

ಉಡುಪಿ, ಅ.9: ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರ, ಪರ್ಯಾಯ ಪಲಿಮಾರು ಮಠದ ಸಹಯೋಗದೊಂದಿಗೆ ಎರಡು ದಿನಗಳ ಕಾಲ ‘ನೃತ್ಯೋತ್ಸವ-2019’ನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದೆ ಎಂದು ಸೃಷ್ಟಿ ನೃತ್ಯಕಲಾ ಕುಟೀರದ ನಿರ್ದೇಶಕಿ ಡಾ.ಮಂಜರಿ ಚಂದ್ರ ಪುಷ್ಪರಾಜ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ವೈವಿಧ್ಯಮಯ ನೃತ್ಯಪ್ರಕಾರಗಳನ್ನು ತಮ್ಮ ಸಂಸ್ಥೆಯ ಹಿರಿಯ ಮತ್ತು ಕಿರಿಯ ನೃತ್ಯ ಕಲಾವಿದೆಯರು ಪ್ರದರ್ಶಿಸಲಿದ್ದಾರೆ ಎಂದರು.

ಗುರುವಾರ ಬೆಳಗ್ಗೆ 9ಗಂಟೆಗೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಟಪಾಡಿಯ ತುಳಸಿ ದೇವಾಡಿಗ, ಪಾದೂರಿನ ಮೇಜರ್ ಜೆ.ಸಿ.ರಾಜಶೇಖರ್ ಹಾಗೂ ಎಂ.ಎಸ್.ವಿಷ್ಣು ಮತ್ತು ಪದ್ಮಲತಾ ಮುಖ್ಯ ಅತಿಥಿಗಳಾಗಿರುವರು.

ಬೆಳಗ್ಗೆ 10ರಿಂದ ಸಂಸ್ಥೆಯ ಕಲಾವಿದೆಯರಿಂದ ಐದು ಏಕವ್ಯಕ್ತಿ ನೃತ್ಯ, ಎರಡು ಯುಗಳ ಹಾಗೂ ಒಂದು ತ್ರಿವಳಿಯನ್ನೊಳಗೊಂಡ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ರಿಂದ ಸೃಷ್ಟಿ ಕಲಾವಿದೆಯರಿಂದ ‘ನೃತ್ಯ ಮಾರ್ಗಮ್’ ಎಂಬ ವಿಶಿಷ್ಟಿ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

ಶುಕ್ರವಾರ ಅ.11ರ ಬೆಳಗ್ಗೆ 8:30ರಿಂದ ಆರು ಏಕವ್ಯಕ್ತಿ ನೃತ್ಯ ಹಾಗೂ ಎರಡು ಯುಗಳ ನೃತ್ಯ ಪ್ರದರ್ಶನವಿರುತ್ತದೆ. ಅಪರಾಹ್ನ 3 ಗಂಟೆಗೆ ಸೃಷ್ಟಿಯ ಕಿರಿಯ ಕಲಾವಿದರಿಂದ ‘ಬಾರ್ಕೂರು ವೈಭವ’ ನೃತ್ಯರೂಪಕವಿರುತ್ತದೆ. ಸಂಜೆ 7:15ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಗುರು ಉಳ್ಳಾಲ್ ಮೋಹನ್ ಕುಮಾರ್ ಇವರಿಗೆ ‘ಸೃಷ್ಟಿ ಜೇಷ್ಠ, ಶ್ರೇಷ್ಠ ಪ್ರಶಸ್ತಿ’ ನೀಡಿ ಗೌರವಿಸಲಾ ಗುವುದು. ಬಳಿಕ 8 ರಿಂದ ಮಹಾಕಾಳಿ ನೃತ್ಯರೂಪಕದ ಪ್ರದರ್ಶನವಿರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸೃಷ್ಟಿ ನೃತ್ಯಕಲಾ ಕುಟೀರದ ಚಂದ್ರಶೇಖರ್ ಕೆ.ಎಸ್., ಅಕ್ಷತಾ ಪವನ್‌ಕುಮಾರ್, ವಿನೋದಾ ಹಾಗೂ ಪುಷ್ಪರಾಜ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)