varthabharthi

ಕರಾವಳಿ

ಅ. 11ರಂದು ಬಂಟ್ವಾಳದಿಂದ ಬೆಂಗಳೂರಿಗೆ ವಾಹನ ಜಾಥಾ

ವಾರ್ತಾ ಭಾರತಿ : 9 Oct, 2019

ಬಂಟ್ವಾಳ, ಅ. 9: ಪ್ರವಾಹ ಪೀಡಿತ, ಅಕಾಲಿಕ ಮಳೆ, ಬರ ನಿರ್ವಹಣೆಗೆ ನೆರವು ನೀಡಲು ಕೇಂದ್ರ, ರಾಜ್ಯ ಸರಕಾರಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬಂಟ್ವಾಳದಿಂದ ಬೆಂಗಳೂರಿಗೆ ವಾಹನ ಜಾಥಾವನ್ನು ಹಮ್ಮಿಕೊಂಡಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದ್ದಾರೆ.

ಬುಧವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ. 11ರಂದು ಬೆಳಿಗ್ಗೆ 9ಗಂಟೆಗೆ ಬಿ.ಸಿ.ರೋಡಿನ ಮಿನಿವಿಧಾನಸೌಧ ಮುಂಭಾಗದಲ್ಲಿ ವಾಹನ ಜಾಥಾಕ್ಕೆ ಚಾಲನೆ ಹಾಗೂ ಉದ್ಘಾಟನಾ ಸಭೆ ನಡೆಯಲಿದೆ.

ಇಲ್ಲಿಂದ ಆರಂಭವಾದ ಜಾಥಾವು ಮಡಂತ್ಯಾರು, ಬೆಳ್ತಂಗಡಿ, ಉಪ್ಪಿಂಗಡಿ, ಪುತ್ತೂರು, ಜಾಲ್ಸೂರು, ಸುಳ್ಯ, ಅರಂತೋಡು, ಕಲ್ಲುಗುಂಡಿ ಮಾರ್ಗವಾಗಿ ಸಂಪಾಜೆ ಗೇಟ್ ಬಳಿ ಸಮಾಪ್ತಿಯಾಗಲಿದೆ. ಈ ಎಲ್ಲ ಕಡೆಗಳಲ್ಲಿಯೂ ಮುಕ್ತ ಸಭೆಯೂ ನಡೆಯಲಿದೆ. ಇದೇ ಸಂದರ್ಭದಲ್ಲಿ ದ.ಕ. ಜಿಲ್ಲೆಯ 13 ಪ್ರಮುಖ ಒತ್ತಾಯಗಳನ್ನು ಸರಕಾರದ ಗಮನ ಸೆಳೆಯಲಾಗುವುದು ಎಂದು ಮಾಹಿತಿ ನೀಡಿದರು.

ಅ. 12ರಂದು ತಲಕಾವೇರಿಯಿಂದ ಹೊರಟ ಜಾಥಾವು ಬೆಂಗಳೂರಿಗೆ ತಲುಪಲಿದೆ. ಅ. 14ರಂದು ಮಧ್ಯಾಹ್ನ 1ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂತ್ರಸ್ತರ ಬಹಿರಂಗ ಅಧಿವೇಶನ ನಡೆಯಲಿದ್ದು, ದ.ಕ. ಜಿಲ್ಲೆಯಿಂದ 200ಕ್ಕೂ ಹೆಚ್ಚಿನ ರೈತರು ಭಾಗವಹಿಸುವರು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅಲ್ವಿನ್ ಮಿನೇಜಸ್, ತಾಲೂಕು ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಹರ್ಷಿತ್ ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)