varthabharthi

ಕರ್ನಾಟಕ

ಸ್ಪೀಕರ್ ಕಾಗೇರಿ ಆದೇಶಕ್ಕೆ ವ್ಯಾಪಕ ಟೀಕೆ

ವಿಧಾನಸಭೆ ಕಲಾಪ ಚಿತ್ರೀಕರಣಕ್ಕೆ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ

ವಾರ್ತಾ ಭಾರತಿ : 9 Oct, 2019

ಬೆಂಗಳೂರು, ಅ.9: ಗುರುವಾರದಿಂದ ಆರಂಭಗೊಳ್ಳಲಿರುವ ಮೂರು ದಿನಗಳ ವಿಧಾನಸಭೆಯ ಚಳಿಗಾಲದ ಅಧಿವೇಶನದ ಕಲಾಪದ ನೇರ ಚಿತ್ರೀಕರಣಕ್ಕೆ ಖಾಸಗಿ ಸುದ್ದಿ ವಾಹಿನಿಗಳಿಗೆ ನಿರ್ಬಂಧ ವಿಧಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೊರಡಿಸಿರುವ ಆದೇಶ ಹಾಗೂ ರಾಜ್ಯ ಸರಕಾರದ ಜಾಣ ಮೌನಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸಂಸತ್ ಮಾದರಿಯಲ್ಲಿ ರಾಜ್ಯದಲ್ಲಿಯೂ ದೃಶ್ಯ ಮಾಧ್ಯಮಗಳಿಂದ ವಿಧಾನಸಭೆಯ ಕಲಾಪದ ಚಿತ್ರೀಕರಣಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸರಕಾರಿ ಸ್ವಾಮ್ಯದ ದೂರದರ್ಶನದಿಂದ ಖಾಸಗಿ ಸುದ್ದಿ ವಾಹಿನಿಗಳು ಮುದ್ರಿತ ದೃಶ್ಯಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಗಳು ಹಾಗೂ ಮುದ್ರಣ ಮಾಧ್ಯಮಗಳ ಕ್ಯಾಮರಗಳು ವಿಧಾನಸಭೆಯ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡದಂತೆ ಮಾರ್ಷಲ್‌ಗಳಿಗೆ ಸ್ಪೀಕರ್ ಕಚೇರಿಯಿಂದ ಸ್ಪಷ್ಟ ಸೂಚನೆ ನೀಡಲಾಗಿದೆ. ಅಲ್ಲದೇ, ವಿಧಾನಸಭೆ ಆವರಣದೊಳಗೆ ಕಡ್ಡಾಯವಾಗಿ ಮೊಬೈಲ್ ಫೋನ್, ಟ್ಯಾಬ್‌ಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಈ ಅಧಿವೇಶನದಲ್ಲಿ ನೆರೆ ಪರಿಹಾರ ಸೇರಿದಂತೆ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸದನದಲ್ಲಿ ಕೋಲಾಹಲ ಎಬ್ಬಿಸಲು ನಿರ್ಧರಿಸಿವೆ. ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರಕಾರ ಮಾಡಿರುವ ವಿಳಂಬ, ರಾಜ್ಯ ಸರಕಾರದಿಂದ ನಿರೀಕ್ಷಿತ ಮಟ್ಟದ ಪರಿಹಾರ ದೊರಕದೆ, ಜನ ಸಾಮಾನ್ಯರು ಪರದಾಡುತ್ತಿರುವ ವಿಚಾರಗಳು ಸದನದಲ್ಲಿ ಚರ್ಚೆಗೊಳಪಟ್ಟು ಸರಕಾರ ಮುಜುಗರಕ್ಕೆ ಸಿಲುಕಲಿದೆ. ಅದರಲ್ಲೂ ಪ್ರಮುಖವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ರಾಜ್ಯದ ಖಜಾನೆ ಖಾಲಿಯಾಗಿದೆ, ತಂತಿಯ ಮೇಲಿನ ನಡಿಗೆ ಹೇಳಿಕೆ, ಸಚಿವರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಈಶ್ವರಪ್ಪ ಸಂತ್ರಸ್ತರ ಬಗ್ಗೆ ಲಘುವಾಗಿ ಮಾತನಾಡಿರುವುದು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ನೀಡಿರುವ ವಿವಾದಿತ ಹೇಳಿಕೆಗಳು ಸದನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳು ಹೆಚ್ಚಿವೆ.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡದೆ ಇರುವುದರಿಂದ, ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಾಗಳು ಮತ್ತು ಮುದ್ರಣ ಮಾಧ್ಯಮಗಳ ಕ್ಯಾಮರಾಗಳಿಗೆ ವಿಧಾನಸಭೆ ಪ್ರವೇಶ ನಿಷೇಧಿಸುವ ಬಗ್ಗೆ ಹಲವು ದಿನಗಳಿಂದ ಗಂಭೀರ ಚರ್ಚೆ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಕೆಲ ಸಚಿವರು, ಸ್ಪೀಕರ್‌ರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದರು ಎನ್ನಲಾಗುತ್ತಿದೆ.

ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯಲ್ಲಿ ಮಾಧ್ಯಮಗಳಿಗೆ ಪ್ರವೇಶ ನೀಡುವ ಬಗ್ಗೆ ಸ್ಪೀಕರ್ ಚಿಂತನೆ ನಡೆಸಿ, ಅದನ್ನು ಈ ಅಧಿವೇಶನದಿಂದಲೇ ಅನ್ವಯಿಸುವಂತೆ ಜಾರಿಗೆ ತಂದಿದ್ದಾರೆ. ದಿನಪತ್ರಿಕೆ ಹಾಗೂ ಸುದ್ದಿ ವಾಹಿನಿಗಳ ವರದಿಗಾರರಿಗೆ ಮಾತ್ರ ವಿಧಾನಸಭೆಯೊಳಗೆ ಪ್ರವೇಶ ನೀಡಲಾಗಿದೆ. ವಾರಪತ್ರಿಕೆ, ಪಾಕ್ಷಿಕ ಹಾಗೂ ಮಾಸಿಕ ಪತ್ರಿಕೆಗಳ ಪ್ರತಿನಿಧಿಗಳಿಗೆ ವೀಕ್ಷಕರ ಗ್ಯಾಲರಿಯಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.

ನಮ್ಮ ಸರಕಾರದ ಅವಧಿಯಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸಿರಲಿಲ್ಲ. ಮಾಧ್ಯಮಗಳಿಗೆ ಸಂಪೂರ್ಣ ಸ್ವಾತಂತ್ರವನ್ನು ಕೊಟ್ಟಿದ್ದೆವು. ಹಳೆಯ ಪ್ರಸ್ತಾಪ ಅನ್ನೋದಾದರೆ ನಾವು ಯಾಕೆ ಅದನ್ನು ಜಾರಿಗೆ ತಂದಿಲ್ಲ. ಹಾಗಿದ್ದಲ್ಲಿ, ನಮ್ಮ ಎಲ್ಲ ಪ್ರಸ್ತಾಪಗಳನ್ನು ಇವರು ಜಾರಿ ಮಾಡುತ್ತಾರಾ? ಸುಮ್ಮನೆ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಇದು.
-ಸಿದ್ದರಾಮಯ್ಯ, ಮಾಜಿ ಸಿಎಂ

ನನ್ನ ಅಧಿಕಾರಾವಧಿಯಲ್ಲಿ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಒಂದು ಕೊಠಡಿ ನಿಗದಿ ಮಾಡಲು ಸೂಚನೆ ಕೊಟ್ಟಿದ್ದೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಯಿತು. ಬಿಜೆಪಿ ಸರಕಾರ ವಿಧಾನಸಭೆ ಕಲಾಪವನ್ನು ಯಾವುದೇ ಚಾನೆಲ್‌ಗಳು ಚಿತ್ರೀಕರಿಸದಂತೆ ನಿರ್ಬಂಧ ವಿಧಿಸಿದೆ. ಸ್ಪೀಕರ್ ಯಾರ ಚಿತಾವಣೆಗಾಗಿ ಇದನ್ನು ಮಾಡಿದ್ದಾರೊ ಗೊತ್ತಿಲ್ಲ. ಮಾಧ್ಯಮಗಳನ್ನು ನಿರ್ಬಂಧಿಸಿರುವುದು ಬಿಜೆಪಿ ಸರಕಾರದ ತಪ್ಪು ನಿರ್ಧಾರ. ಬಿಜೆಪಿಯ ನಿಜ ಬಣ್ಣ ಬಯಲಾಗುತ್ತದೆ ಎಂಬ ಕಾರಣಕ್ಕಾಗಿ ನಿರ್ಬಂಧ ವಿಧಿಸಿರಬಹುದು.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಮಾಧ್ಯಮಗಳ ಸ್ವಾತಂತ್ರ್ಯ ಕುರಿತಾಗಿ ಮೊಸಳೆ ಕಣ್ಣೀರು ಸುರಿಸುತ್ತೆ. ಆದರೆ, ಅಧಿಕಾರಕ್ಕೆ ಬಂದರೆ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಸುತ್ತಿದೆ. ಇದೊಂದು ನಾಚಿಕೆಗೇಡಿನ ನಿರ್ಧಾರ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)