varthabharthi

ಕರ್ನಾಟಕ

ಅನುಮತಿ ಪಡೆಯದೇ ರ್ಯಾಲಿ: ಎಸ್‌ಡಿಪಿಐ ಕಾರ್ಯಕರ್ತರ ಬಂಧನ, ಬಿಡುಗಡೆ

ವಾರ್ತಾ ಭಾರತಿ : 9 Oct, 2019

ಹುಬ್ಬಳ್ಳಿ, ಅ.9: ಅನುಮತಿ ಪಡೆಯದೆ ಪ್ರತಿಭಟನಾ ರ್ಯಾಲಿ ನಡೆಸಲು ಮುಂದಾದ ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಕಾರ್ಯಕರ್ತರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ವಿಳಂಬ ಖಂಡಿಸಿ, ಹಳೇ ಹುಬ್ಬಳ್ಳಿಯ ಕಸಬಾಪೇಟೆಯಲ್ಲಿರುವ ಪಕ್ಷದ ಕಚೇರಿಯಿಂದ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. 11 ಗಂಟೆ ಹೊತ್ತಿಗೆ ಪಕ್ಷದ ಕಾರ್ಯಕರ್ತರು ಕಚೇರಿಯತ್ತ ಜಮಾಯಿಸಿ, ರ್ಯಾಲಿಗೆ ಸಿದ್ಧತೆ ನಡೆಸುತ್ತಿದ್ದರು.

ಈ ವೇಳೆ ಸ್ಥಳಕ್ಕಾಗಮಿಸಿದ ಇನ್‌ಸ್ಪೆಕ್ಟರ್ ಶ್ಯಾಮರಾಜ ಸಜ್ಜನ, ಪೂರ್ವಾನುಮತಿ ಪಡೆಯದಿರುವುದರಿಂದ ರ್ಯಾಲಿಗೆ ಅವಕಾಶ ನೀಡುವುದಿಲ್ಲ. ಬೇಕಿದ್ದರೆ, ಮಿನಿ ವಿಧಾನಸೌಧಕ್ಕೆ ಹೋಗಿ ಮನವಿ ಕೊಡಿ ಎಂದು ಸಲಹೆ ನೀಡಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನೆರೆ ಪರಿಹಾರ ವಿಳಂಬ ಖಂಡಿಸಿ ರ್ಯಾಲಿ ಹಮ್ಮಿಕೊಂಡಿದ್ದೆವೆಯೇ ಹೊರತು, ಬೇರೆ ಯಾವುದೇ ಉದ್ದೇಶವಿಲ್ಲ. ಹಾಗಾಗಿ, ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.

ಕಾರ್ಯಕರ್ತರು ಮನವೊಲಿಕೆಗೆ ಬಗ್ಗದಿದ್ದಾಗ ಮತ್ತಷ್ಟು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿಕೊಂಡ ಇನ್‌ಸ್ಪೆಕ್ಟರ್, ಸುಮಾರು 32 ಮಂದಿ ಕಾರ್ಯಕರ್ತರನ್ನು ಬಂಧಿಸಿ ವಾಹನದಲ್ಲಿ ಸಿಎಎಆರ್ ಮೈದಾನಕ್ಕೆ ಕರೆ ತಂದರು. ಬಳಿಕ, ಎಲ್ಲರಿಗೂ ಎಚ್ಚರಿಕೆ ನೀಡಿ ಮಧ್ಯಾಹ್ನ 3ರ ಹೊತ್ತಿಗೆ ಬಿಡುಗಡೆ ಮಾಡಿದರು.

ಅನುಮತಿ ಕೊಟ್ಟು ನಿರಾಕರಣೆ: ಪ್ರತಿಭಟನಾ ರ್ಯಾಲಿಗೆ ನಾಲ್ಕು ದಿನದ ಹಿಂದೆ ಅನುಮತಿ ಕೊಟ್ಟಿದ್ದ ಪೊಲೀಸರು, ಮಂಗಳವಾರ ಕರೆ ಮಾಡಿ ರ್ಯಾಲಿಯಲ್ಲಿ ಭಾಗವಹಿಸುವವರ ಮಾಹಿತಿ ಕೇಳಿದರು. ಇದು ಸಾರ್ವಜನಿಕ ರ್ಯಾಲಿಯಾಗಿರುವುದರಿಂದ ಪದಾಧಿಕಾರಿಗಳನ್ನು ಹೊರತುಪಡಿಸಿ, ಉಳಿದವರ ಮಾಹಿತಿ ಸಿಗುವುದಿಲ್ಲ ಎಂದಿದ್ದೆವು.
ಹಾಗಾದರೆ, ನಿಮಗೆ ಅನುಮತಿ ನೀಡುವುದಿಲ್ಲ ಎಂದರು. ಬೆಳಗ್ಗೆ ರ್ಯಾಲಿ ಆರಂಭವಾಗಬೇಕೆನ್ನುವಷ್ಟರಲ್ಲಿ ಪೊಲೀಸರು ಸ್ಥಳ್ಕಕೆ ಬಂದು ಎಲ್ಲರನ್ನೂ ವಶಕ್ಕೆ ಪಡೆದು, ಬಳಿಕ ಬಿಟ್ಟು ಕಳಿಸಿದರು. ನ್ಯಾಯ ರೀತಿಯಲ್ಲಿ ರ್ಯಾಲಿ ನಡೆಸಲು ಬಿಡದ ಪೊಲೀಸರ ಕ್ರಮವನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಇರ್ಷಾದ ಅಹಮದ್ ರಿತ್ತಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)