varthabharthiಕರಾವಳಿ

ಪುತ್ತೂರು ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

ವಾರ್ತಾ ಭಾರತಿ : 9 Oct, 2019

ಮಂಗಳೂರು, ಅ.9: ಪುತ್ತೂರು ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಕಾಲೇಜಿನ ಐವರು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಅತ್ಯಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆಟ್ಟಿ ಪುತ್ತೂರಿನ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಪುತ್ತೂರು ತಾಲೂಕಿನ ಬಜತ್ತೂರು ಗಾಣದಮನೆ ನಿವಾಸಿ ಗುರುನಂದನ್ (19), ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಪ್ರಜ್ವಲ್ (19), ಕಡಂಬು ನಿವಾಸಿ ಕಿಶನ್ (19), ಪುತ್ತೂರು ತಾಲೂಕಿನ ಆರ್ಯಾಪು ಪಿಲಿಗುಂಡ ನಿವಾಸಿ ಸುನೀಲ್ (19), ಬಂಟ್ವಾಳ ತಾಲೂಕಿನ ಬರಿಮಾರು ಬಲ್ಯ ನಿವಾಸಿ ಪ್ರಖ್ಯಾತ್ (19) ಎಂಬವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.

ಪ್ರಕರಣದ ಬಂಧಿತ ಆರೋಪಿಗಳು ಇದೇ ಮಾರ್ಚ್‌ನಲ್ಲಿ ಸಂತ್ರಸ್ತೆಯನ್ನು ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಲ್ಲದೆ, ಮೊಬೈಲ್‌ನಲ್ಲಿ ಘಟನೆಯ ವೀಡಿಯೊ ಚಿತ್ರೀಕರಿಸಿದ್ದರು. ಬಳಿಕ ಅತ್ಯಾಚಾರದ ವೀಡಿಯೊ ತುಣುಕೊಂದು ಜುಲೈ ತಿಂಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸದ್ದು ಮಾಡಿತ್ತು. ತದನಂತರ ಪ್ರಕರಣ ದಾಖಲಿಸಿಕೊಂಡಿದ್ದ ಜಿಲ್ಲಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ಜತೆಗೆ, ವೀಡಿಯೊವನ್ನು ವೈರಲ್ ಮಾಡಿದ್ದ ಆರೋಪದಲ್ಲಿ ಮತ್ತೊಂದು ಪ್ರಕರಣ ದಾಖಲಿಸಿ, ಎಂಟು ಆರೋಪಿಗಳನ್ನು ಬಂಧಿಸಿದ್ದರು.

‘ನ್ಯಾಯಾಲಯಕ್ಕೆ ಮೊದಲ ಹಂತದ ಆರೋಪಪಟ್ಟಿಯನ್ನು ಈಗಾಗಲೇ ಸಲ್ಲಿಕೆ ಮಾಡಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ಫೋನ್ ಕರೆಗಳ ಮಾಹಿತಿ ಇನ್ನು ಕೈಸೇರಬೇಕಿದೆ.

- ಬಿ.ಎಂ.ಲಕ್ಷ್ಮೀಪ್ರಸಾದ್, ದಕ್ಷಿಣ ಕನ್ನಡ ಎಸ್‌ಪಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)