varthabharthi

ಕರಾವಳಿ

ಅಂಗಡಿ ಶೆಟರ್ ಮುರಿದು ಲಕ್ಷಾಂತರ ರೂ.ನಗದು ಕಳ್ಳತನ

ವಾರ್ತಾ ಭಾರತಿ : 9 Oct, 2019

ಉಡುಪಿ : ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಮೈತ್ರಿ ಕಾಂಪ್ಲೆಕ್ಸ್‌ನ ಹೋಲ್‌ಸೆಲ್ ವ್ಯವಹಾರದ ಅಂಗಡಿಯೊಂದಕ್ಕೆ ಕಳೆದ ರಾತ್ರಿ ನುಗ್ಗಿದ ಕಳ್ಳರು ಅಂಗಡಿಯೊಳಗೆ ಟೇಬಲ್‌ನ ಡ್ರಾಯರಿನಲ್ಲಿದ್ದ 12 ಲಕ್ಷ ರೂ.ನಗದನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಮೈತ್ರಿ ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿದ್ದ ರಮಾ ಎಂಟರ್‌ಪ್ರೈಸಸ್ ಎಂಬ ದಿನ ಬಳಕೆಯ ವಸ್ತುಗಳ ಹೋಲ್‌ಸೆಲ್ ಅಂಗಡಿ ಇದಾಗಿದ್ದು, ಅಂಗಡಿಯ ಮಾಲಕರಾದ ವಿಠಲ ನಾಯಕ್ ಅವರು ಮಂಗಳವಾರ ಸಂಜೆ 5:30ಕ್ಕೆ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಿದ್ದರು. ಕಳೆದ ಶನಿವಾರದಿಂದ ಬ್ಯಾಂಕುಗಳಿಗೆ ರಜೆಯಾದ ಕಾರಣ ಮೂರು ದಿನಗಳ ವ್ಯವಹಾರದಿಂದ ಬಂದ 12 ಲಕ್ಷ ರೂ.ಗಳನ್ನು ಅಂಗಡಿಯ ಟೇಬಲ್‌ನ ಡ್ರಾವರ್‌ನಲ್ಲಿರಿಸಿ ಬೀಗ ಹಾಕಿ ಅವರು ತೆರಳಿದ್ದರು. ಇಂದು ಬೆಳಗ್ಗೆ 8ಗಂಟೆಗೆ ಪ್ರಶಾಂತ್ ಎಂಬವರು ದೂರವಾಣಿ ಕರೆ ಮಾಡಿ ಅಂಗಡಿಯ ಶೆಟರ್ ಬಾಗಿಲು ತೆರೆದಿರುವುದಾಗಿ ತಿಳಿಸಿದಾಗಲೇ ಅವರಿಗೆ ಕಳ್ಳತನದ ಮಾಹಿತಿ ಸಿಕ್ಕಿತ್ತು.

ಕಳ್ಳರು ಶೆಟರ್ ಮುರಿದು, ಡ್ರಾವರನ್ನು ಮೀಟಿ ಬಾಗಿಲು ತೆಗೆದಿದ್ದು ಅದರಲ್ಲಿದ್ದ ನಗದನ್ನು ದೋಚಿದ್ದಾರೆ. ವಿಷಯ ತಿಳಿದವರೇ ಈ ಕಳ್ಳತನ ಮಾಡಿರುವ ಸಾಧ್ಯತೆ ಇದೆ ಎಂದವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)