varthabharthi

ಅಂತಾರಾಷ್ಟ್ರೀಯ

ವಿಶ್ವಸಂಸ್ಥೆ ವರದಿ

ಅಫ್ಘಾನ್: ಅಮೆರಿಕದ ವಾಯು ದಾಳಿಯಲ್ಲಿ ಕನಿಷ್ಠ 30 ನಾಗರಿಕರು ಹತ

ವಾರ್ತಾ ಭಾರತಿ : 9 Oct, 2019

 ಕಾಬೂಲ್, ಅ. 9: ಪಶ್ಚಿಮ ಅಫ್ಘಾನಿಸ್ತಾನದಲ್ಲಿರುವ ಹಲವಾರು ಮಾದಕ ದ್ರವ್ಯ ತಯಾರಿಕಾ ಸ್ಥಳಗಳ ಮೇಲೆ ಮೇ ತಿಂಗಳಲ್ಲಿ ಅಮೆರಿಕದ ಯುದ್ಧವಿಮಾನಗಳು ನಡೆಸಿದ ಬಾಂಬ್ ದಾಳಿಗಳಲ್ಲಿ ಕನಿಷ್ಠ 30 ನಾಗರಿಕರು ಹತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಫ್ಘಾನಿಸ್ತಾನದಲ್ಲಿರುವ ಘಟಕ (ಯುಎನ್‌ಎಎಮ್‌ಎ) ಬುಧವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಹೇಳಿದೆ. ಆದರೆ, ಈ ವರದಿಗೆ ಅಮೆರಿಕ ಸೇನೆ ತಕ್ಷಣ ಆಕ್ಷೇಪ ವ್ಯಕ್ತಪಡಿಸಿದೆ.

ತಾಲಿಬಾನ್‌ನ ಮಾದಕ ದ್ರವ್ಯ ಪ್ರಯೋಗಾಲಯಗಳು ಎಂಬುದಾಗಿ ಅಮೆರಿಕ ಸೇನೆ ಗುರುತಿಸಿದ ಡಝನ್‌ಗಟ್ಟಳೆ ಸ್ಥಳಗಳ ಮೇಲೆ ಮೇ 5ರಂದು ಅಮೆರಿಕದ ಯುದ್ಧ ವಿಮಾನಗಳು ಬಾಂಬ್ ದಾಳಿಗಳನ್ನು ನಡೆಸಿದ್ದವು. ಈ ಬಗ್ಗೆ ಯುಎನ್‌ಎಎಮ್‌ಎ ನಾಲ್ಕು ತಿಂಗಳುಗಳ ಕಾಲ ತನಿಖೆ ನಡೆಸಿದೆ.

ಅಫ್ಘಾನಿಸ್ತಾನದ ಫರಾ ಪ್ರಾಂತದ ಬಕ್ವ ಜಿಲ್ಲೆಯಲ್ಲಿ ಹಾಗೂ ನೆರೆಯ ನೀಮ್‌ರೋಝ್ ಪ್ರಾಂತದ ಡೆಲರಮ್ ಜಿಲ್ಲೆಯ ಕೆಲವು ಭಾಗಗಳಲ್ಲಿ ದಾಳಿಗಳನ್ನು ನಡೆಸಲಾಗಿತ್ತು.

ದಾಳಿಗೊಳಗಾದ ಕೆಲವು ಸ್ಥಳಗಳಿಗೆ ಯುಎನ್‌ಎಎಮ್‌ಎ ಸತ್ಯಶೋಧನಾ ತಂಡವನ್ನು ಕಳುಹಿಸಿತ್ತು ಹಾಗೂ 21 ಸಂತ್ರಸ್ತರೊಂದಿಗೆ ಸಂದರ್ಶನ ನಡೆಸಿತ್ತು.

‘‘ಮೇ 5ರಂದು ನಡೆದ ವಾಯು ದಾಳಿಯಲ್ಲಿ 14 ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದಂತೆ 39 ನಾಗರಿಕ ಸಾವು-ನೋವುಗಳು (30 ಸಾವುಗಳು ಮತ್ತು 9 ಮಂದಿಗೆ ಗಾಯ) ಸಂಭವಿಸಿರುವುದು ಗಮನಕ್ಕೆ ಬಂದಿದೆ’’ ಎಂದು ಯುಎನ್‌ಎಎಮ್‌ಎ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)