varthabharthi

ಕರ್ನಾಟಕ

ಶೋಷಿತರನ್ನು ಸಂಕೋಲೆಯಿಂದ ಮುಕ್ತಿಗೊಳಿಸಲು ಶ್ರಮಿಸಿದವರು ಕಾನ್ಶಿರಾಮ್: ಕೆ.ಟಿ.ರಾಧಾಕೃಷ್ಣ

ವಾರ್ತಾ ಭಾರತಿ : 9 Oct, 2019

ಚಿಕ್ಕಮಗಳೂರು ಅ.9: ಬಹುಜನರಿಗೆ ಅಧಿಕಾರ ಎಂಬ ಕಾನ್ಷಿರಾಮ್ ಅವರ ಸಕಾರಾತ್ಮಕ ಸೂತ್ರ ಅಳವಡಿಸಿಕೊಂಡಾಗ ದೇಶದ ಸರ್ವೋದಯ ಸಾಧ್ಯ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ನುಡಿದರು.

ನಗರದ ಬಹುಜನ ಸಮಾಜಪಾರ್ಟಿಯ ಜಿಲ್ಲಾ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪಕ್ಷ ಸಂಸ್ಥಾಪಕ 'ಕಾನ್ಷಿರಾಮ್ ನೆನಪಿನದಿನ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಕಾರಾತ್ಮಕ ಮಾರ್ಗದಲ್ಲಿ ಹೆಜ್ಜೆಯಿಟ್ಟ ಅಪ್ರತಿಮ ರಾಜಕೀಯ ಮುತ್ಸದ್ಧಿ.  ಮೂಲತಃ ವಿಜ್ಞಾನಿಯಾಗಿ ವೈಜ್ಞಾನಿಕ ಆಲೋಚನೆಗಳನ್ನು ಹೊಂದಿದ್ದ ಕಾನ್ಷಿರಾಮ್, ರಾಜಕೀಯ ಅಧಿಕಾರದ ಮಹತ್ವ ಅರಿತು ಬಾಬಾಸಾಹೇಬರ ಅನುಯಾಯಿಯಾಗಿ, ಭಗವಾನ್‍ಬುದ್ಧರ ಚಿಂತನೆಗಳನ್ನು ಅಳವಡಿಸಿಕೊಂಡು ಬಿಎಸ್ಪಿ ಪಕ್ಷ ಆರಂಭಿಸಿದರೆಂದರು.  

ಸಕಾರಾತ್ಮಕವಾಗಿ ಯೋಚಿಸಿ ಶೋಷಿತರಿಗೆ ಅಧಿಕಾರಕೊಟ್ಟ ಮೊಟ್ಟಮೊದಲ ವ್ಯಕ್ತಿ.  ಸತ್ಯಶೋಧನೆಯ ಮಾರ್ಗವನ್ನು ಕಂಡುಕೊಂಡವರು.  ಶೋಷಿತರನ್ನು ಸಂಕೋಲೆಯಿಂದ ಮುಕ್ತಿಗೊಳಿಸಲು ಪ್ರಯತ್ನಿಸಿದವರು. ಪೆರಿಯಾರ್, ನಾರಾಯಣಗುರು, ಜ್ಯೋತಿ ಬಾಪುಲೆಯಂತಹ ಪ್ರಗತಿಪರ ಚಿಂತಕರನ್ನು ದೇಶಾದ್ಯಂತ ಅರಿತುಕೊಳ್ಳುವಂತೆ ಮಾಡಿದ ಮಹಾನ್‍ವ್ಯಕ್ತಿ ಕಾನ್ಷಿರಾಮ್ ಎಂದು ಬಣ್ಣಿಸಿದರು.  

ಅಹಿಂಸೆಯನ್ನು ಸಾರಿದ ಬುದ್ಧನನ್ನು ಕೊಟ್ಟ ಭಾರತವೆಂದು ಪ್ರಧಾನಿ ಮೋದಿ ಅವರು ಇತ್ತೀಚಿನ ಭಾಷಣದಲ್ಲಿ ಹೇಳಿರುವುದನ್ನು ಪ್ರಸ್ತಾಪಿಸಿದ ರಾಧಾಕೃಷ್ಣ,  ಮನುವಾದಿಗಳಿಂದ ಕೇವಲ ಕಣ್ಣೊರೆಸುವ ಮಾತುಗಳು ಸಾಲದು. ಜಾತಿಯ ಹೆಸರಿನಲ್ಲಿ ನಡೆದಿರುವ ದೌರ್ಜನ್ಯ ನಿಲ್ಲಬೇಕು.  ದೇವಸ್ಥಾನ ಪ್ರವೇಶ ಸಾರ್ವತ್ರೀಕರಿಸಬೇಕು. ಹಿಂದೂ ಹೆಸರಿನ ಭಯೋತ್ಪಾದಕರ ಮೇಲೆ ಕಠಿಣಕ್ರಮ ಜರುಗಿಸಬೇಕು. ಕಾನ್ಷಿರಾಮ್ ಅವರ ಅನುಯಾಯಿಗಳಷ್ಟೇ ಆಗದೆ ಅವರ ಆದರ್ಶಪಾಲಿಸುವಂತಾದರೆ ದೇಶದಲ್ಲಿ ದೊಡ್ಡ ಪರಿವರ್ತನೆ ತರಬಹುದೆಂದರು.

ಸಮಾರಂಭ ಉದ್ಘಾಟಿಸಿ ಬಿಎಸ್‍ಪಿ ರಾಜ್ಯಕಾರ್ಯದರ್ಶಿ ಪಿ.ವೆಲಾಯುಧನ್  ಮಾತನಾಡಿ ಸ್ವಂತ ಆಸ್ತಿ-ಒಳ್ಳೆಯ ಉದ್ಯೋಗ ತಿರಸ್ಕರಿಸಿ, ಮನೆಯಿಂದ ಹೊರನಡೆದು, ಮದುವೆಯನ್ನೂ ಮಾಡಿಕೊಳ್ಳದೆ ಬಹುಜನರಿಗಾಗಿ ಜೀವನವನ್ನೆ ತೇಯ್ದ ಮಹಾಪುರುಷ ಕಾನ್ಷಿರಾಮ್.  ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರದಿಂದ ಪ್ರೇರೇಪಿತರಾಗಿ 6ವರ್ಷಗಳಕಾಲ ಆಳ ಅಧ್ಯಯನ ನಡೆಸಿ ಸಂಘಟನೆಯಿಂದ ಶೋಷಿತರ ಮುಕ್ತಿಸಾಧ್ಯವೆಂದು ಸಾರಿದವರು.  ಜಾತಿಗಳನ್ನು ಒಗ್ಗೂಡಿಸಿ ಅಧಿಕಾರ ಹಿಡಿಯುವ ಸೂತ್ರವನ್ನು ಮುಂದಿಟ್ಟವರು.  2ಲಕ್ಷ ಇಂಜಿನಿಯರ್, ಲಾಯರ್ ಸೇರಿದಂತೆ  ಶೋಷಿತವರ್ಗದ ಸ್ವಲ್ಪ ಸ್ಥಿತಿವಂತರನ್ನು ಸಂಘಟಿಸಿ ಅವರ ಕುಟುಂಬದವರನ್ನು ಚಳುವಳಿಗೆ ಇಳಿಸಿದವರೆಂದರು.

'ಓಟು ನಮ್ಮದು, ರಾಜ್ಯವೂ ನಮ್ಮದು' ಜನಸಂಖ್ಯೆ ಆಧರಿಸಿ ಆಸ್ತಿ ಮತ್ತು ಅಧಿಕಾರ ಹಂಚಿಕೆಯಾಗಬೇಕೆಂದು ಪ್ರಬಲವಾಗಿ ಪ್ರತಿಪಾದಿಸಿದವರು.  ರಾಜಕೀಯ ಅಧಿಕಾರಕ್ಕಾಗಿ ಒಡೆದಿರುವ ಜಾತಿಗಳನ್ನು ಒಗ್ಗೂಡಿಸಬೇಕು.  ಬಹುಜನರೆಲ್ಲ ಪಾರ್ಟ್‍ಟೈಂ ಪೊಲಿಟಿಕ್ಸ್ ಮಾಡಬೇಕು.  ಬಹುಜನ ಸಮಾಜ ರಾಜಕೀಯ ಸಮಾಜವಾಗಬೇಕು. ದೇಶದ ಸಾಂಸ್ಕೃತಿಕ ಬದಲಾವಣೆ ಮತ್ತು ನಿರ್ವಹಣೆಯ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂಬುದು ಕಾನ್ಷಿರಾಮ್ ಆಶಯವಾಗಿತ್ತೆಂದ ವೇಲಾಯುಧನ್, ಬಿಎಸ್ಪಿಯನ್ನು ದೇಶದ 3ನೇ ಅತಿದೊಡ್ಡ ರಾಜಕೀಯ ಪಕ್ಷವಾಗಿ ರೂಪಿಸಿದವರೆಂದರು.

ಬಿಎಸ್ಪಿ ವಿಭಾಗೀಯಪ್ರಭಾರಿ ಪರಮೇಶ್ ಮಾತನಾಡಿ, ತಾಳ್ಮೆ ಮತ್ತು ಸಹನೆ ಬಹುಜನರಿಗೆ ಬೋಧಿಸಿದ ಕಾನ್ಷಿರಾಮ್, ಲಕ್ಷಾಂತರ ಕಿ.ಮೀ.ದೂರವನ್ನು ಬೈಸಿಕಲ್‍ನಲ್ಲಿ ಕ್ರಮಿಸಿ ಮೈಕ್‍ಕಟ್ಟಿಕೊಂಡು ವಾಸ್ತವಸ್ಥಿತಿಯ ಅರಿವು ಮೂಡಿಸಲು ಪ್ರಯತ್ನಿಸಿದವರು.  ಬಿಎಸ್‍ಪಿಯ ನಡಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಜೊತೆಗೆಂದು ಸಾರಿದರು ಎಂದರು.

ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ, ಮತದಾನದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟ ಕಾನ್ಷಿರಾಮ್ ಉತ್ತರಪ್ರದೇಶದಲ್ಲಿ ಸಾರಾಯಿನಿಷೇಧ ಚಳುವಳಿಯನ್ನು ಪ್ರಾರಂಭಿಸಿದವರು. ಸ್ತ್ರೀಸ್ವಾತಂತ್ರ್ಯದ ಬಗ್ಗೆ ಅಪಾರಕಾಳಜಿ ಹೊಂದಿದ್ದರು ಎಂದರು.
ಬಿಎಸ್ಪಿ ಕಚೇರಿ ಕಾರ್ಯದರ್ಶಿ ಗಂಗಾಧರ್, ಜಿಲ್ಲಾಉಪಾಧ್ಯಕ್ಷ ಶಂಕರ್, ತಾಲೂಕು ಕಾರ್ಯದರ್ಶಿ ರೇಖಾ, ಮುಖಂಡರಾದ ಯು.ಡಿ.ಮಂಜಯ್ಯ,

ಗಿರೀಶ್, ಸವಿತಾ ಬ್ಯಾಪಿಸ್ಟಾ ಮತ್ತಿತರರು ಕಾನ್ಷಿರಾಮ್‍ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಬಕ್ಕಿಮಂಜುನಾಥ್ ಸ್ವಾಗತಿಸಿ, ಶಂಕರಪುರದ ಹರೀಶ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)