varthabharthi


ವೈವಿಧ್ಯ

ಸಹಕಾರಿ ಬ್ಯಾಂಕ್‌ಗಳಲ್ಲಿ ಎದುರಾಗಿರುವ ಸಂಕಷ್ಟಗಳು

ವಾರ್ತಾ ಭಾರತಿ : 10 Oct, 2019
ವಸುಧಾ ರಾವ್

ಆರ್‌ಬಿಐಯಿಂದ ಕಠಿಣ ನಿರ್ಬಂಧಗಳು ಮತ್ತು ಠೇವಣಿದಾರರಿಂದ ವಿವೇಚನಾತ್ಮಕ ಕ್ರಮದಿಂದ ಅವರ ಹಣವನ್ನು ಉಳಿಸಬಹುದು. ಬಹುಶಃ, ಇನ್ನೊಂದು ನಿಯಂತ್ರಕ ಸಂಸ್ಥೆಯನ್ನು ಸಹಕಾರಿ ಬ್ಯಾಂಕ್‌ಗಳ ಪರಿಶೀಲನೆಗೆಂದೇ ರಚಿಸಬೇಕು ಮತ್ತು ಈ ಸಂಸ್ಥೆ ಆರ್‌ಬಿಐಗೆ ವರದಿ ಒಪ್ಪಿಸಬೇಕು. ಇದು ಆರ್‌ಬಿಐಯ ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಸಹಕಾರಿ ಬ್ಯಾಂಕ್‌ಗಳ ಪರಿಣಾಮಕಾರಿ ಮೇಲ್ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ.

ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ) ಮುಂದಿನ ಆರು ತಿಂಗಳ ಕಾಲ ವ್ಯವಹಾರ ನಡೆಸುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವಾರ ಆದೇಶಿಸಿತ್ತು. ಪಿಎಂಸಿ ಬ್ಯಾಂಕ್‌ನಿಂದ ಗ್ರಾಹಕರು ಪ್ರತಿ ಆರು ತಿಂಗಳಿಗೊಮ್ಮೆ ಒಂದು ಸಾವಿರ ರೂ. ಅಥವಾ ಅದಕ್ಕಿಂತ ಕಡಿಮೆ ನಗದು ಹಿಂಪಡೆಯಬಹುದು ಎಂದು ಆರ್‌ಬಿಐ ತಿಳಿಸಿತ್ತು.

ವಾಸ್ತವದಲ್ಲಿ, ಒಂದು ಲಕ್ಷ ರೂ.ವರೆಗಿನ ಠೇವಣಿ, ಡೆಪಾಸಿಟ್ ಇನ್ಶುರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕವರ್ (ಡಿಐಸಿಜಿಸಿ)ನ ರಕ್ಷಣೆ ಹೊಂದಿದೆ ಎನ್ನುವುದೇ ಸಾವಿರಾರು ಠೇವಣಿದಾರರಿಗೆ ಕೊಂಚ ಸಮಾಧಾನ.

ಈ ವಿಷಯದಲ್ಲಿ, ಸದ್ಯ ತಾನು ಎದುರಿಸುತ್ತಿರುವ ಸಂಕಷ್ಟದಿಂದ ಹೊರಬರಲು ತನ್ನ ಮೇಲೆ ನಿರ್ಬಂಧ ಹೇರುವಂತೆ ಆರ್‌ಬಿಐಯನ್ನು ಸ್ವತಹ ಪಿಎಂಸಿ ಬ್ಯಾಂಕ್ ಖುದ್ದಾಗಿ ಕೇಳಿಕೊಂಡಿತ್ತು. ಬ್ಯಾಂಕ್ ಅಥವಾ ಬ್ಯಾಂಕ್‌ಗಳು ವಂಚನೆಯಲ್ಲಿ ತೊಡಗಿವೆ ಎಂದು ಕಂಡುಬಂದಾಗ ಅವುಗಳ ಮೇಲೆ ಕ್ರಮ ಜರುಗಿಸುವುದು ಆರ್‌ಬಿಐ ಎಂಬುದನ್ನು ಗಣನೆಗೆ ತೆಗೆದುಕೊಂಡರೆ ಪಿಎಂಸಿ ಬ್ಯಾಂಕ್‌ನದ್ದು ಒಂಥರಾ ವಿಚಿತ್ರ ವಿದ್ಯಮಾನ.

ವದಂತಿಗಳ ಪ್ರಕಾರ, ಪಿಎಂಸಿ ಬ್ಯಾಂಕ್ ಸದ್ಯ ದಿವಾಳಿಯಾಗಿರುವ ರಿಯಲ್ ಎಸ್ಟೇಟ್ ಸಂಸ್ಥೆ ಎಚ್‌ಡಿಐಎಲ್‌ಗೆ ಕೋಟ್ಯಂತರ ರೂ. ಸಾಲ ನೀಡಿತ್ತು. ಪಿಎಂಸಿಯ ಮುಖ್ಯಸ್ಥ ವಿರಾಮ್ ಸಿಂಗ್ ಈ ಹಿಂದೆ ಎಚ್‌ಡಿಐಎಲ್‌ನ ಮಂಡಳಿಯಲ್ಲಿದ್ದರು. ಪಿಎಂಸಿ ಆರ್‌ಬಿಐಗೆ ಸಲ್ಲಿಸಿರುವ ದಾಖಲೆ ಮತ್ತು ತನ್ನ ಬಳಿಯಿಟ್ಟಿರುವ ದಾಖಲೆಯಲ್ಲಿ ವ್ಯತ್ಯಾಸವಿದೆ ಎಂದೂ ಹೇಳಲಾಗಿದೆ.

ಪಿಎಂಸಿ ಬ್ಯಾಂಕ್ ಎಚ್‌ಡಿಐಎಲ್‌ಗೆ 2,500 ಕೋಟಿ ರೂ. ಸಾಲ ನೀಡಿತ್ತು ಜೊತೆಗೆ ಎಚ್‌ಡಿಐಎಲ್ ಈ ಮೊತ್ತವನ್ನು ಮರುಪಾವತಿ ಮಾಡಲು ವಿಫಲವಾದ ನಂತರ ಅದರ ಮುಖ್ಯಸ್ಥರಿಗೆ 92.5 ಕೋಟಿ ರೂ. ವೈಯಕ್ತಿಕ ಸಾಲ ನೀಡಿತ್ತು.

ಆರ್‌ಬಿಐ ಈ ರೀತಿ ಆದೇಶ ಹೊರಡಿಸಿರುವ ಅನೇಕ ಸಹಕಾರಿ ಬ್ಯಾಂಕ್‌ಗಳಿವೆ. ಅವುಗಳಲ್ಲಿ ಕೆಲವೇ ಕೆಲವೆಂದರೆ, ವಸಂತ ದಾದ ನಗರಿ ಸಹಕಾರಿ ಬ್ಯಾಂಕ್, ಮಹಾರಾಷ್ಟ್ರ, ಪದ್ಮಶ್ರೀ ಡಾ. ವಿಠಲ್‌ರಾವ್ ವಿಖೆ ಪಾಟೀಲ್ ಸಹಕಾರಿ ಬ್ಯಾಂಕ್, ಮಹಾರಾಷ್ಟ್ರ, ಕರದ್ ಜಂತ ಸಹಕಾರಿ ಬ್ಯಾಂಕ್, ಮಹಾರಾಷ್ಟ್ರ, ಬೀದರ್ ಮಹಿಳಾ ನಗರ ಸಹಕಾರಿ ಬ್ಯಾಂಕ್ ಕರ್ನಾಟಕ. ವಾಸ್ತವದಲ್ಲಿ, ಇಂತಹ ಬ್ಯಾಂಕ್‌ಗಳಲ್ಲಿ ತಲೆದೋರಿರುವ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ ಎಂದು ಆರ್‌ಬಿಐ ಭಾವಿಸಿದರೆ ಆರಂಭದಲ್ಲಿ ಹೇರಿರುವ ಆರು ತಿಂಗಳ ನಿರ್ಬಂಧವನ್ನು ವಿಸ್ತರಿಸಲೂ ಸಾಧ್ಯವಿದೆ. ಮತ್ತು ಅನೇಕ ಸಂದರ್ಭಗಳಲ್ಲಿ ಆರ್‌ಬಿಐ ಹಾಗೆ ಮಾಡಿದೆ ಕೂಡಾ. ಅನೇಕ ಪ್ರಕರಣಗಳಲ್ಲಿ ಬ್ಯಾಂಕ್‌ಗಳು ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಶಾಶ್ವತವಾಗಿ ಬಾಗಿಲು ಮುಚ್ಚಿವೆ.

ರಾಜಕಾರಣಿಗಳು ಇಂತಹ ಬ್ಯಾಂಕ್‌ಗಳನ್ನು ತಮ್ಮ ಮನೆಯ ಖಜಾನೆಯಂತೆ ಬಳಸಿ ತಮ್ಮ ಗೆಳೆಯರ ಮತ್ತು ಸಂಬಂಧಿಕರ ಕಾರ್ಯಸಾಧುವಲ್ಲದ ಯೋಜನೆಗಳಿಗೆ ಸಾಲ ನೀಡುತ್ತಾರೆ. ಆ ಮೂಲಕ ಬ್ಯಾಂಕ್‌ಗಳು ಮತ್ತು ಗ್ರಾಹಕರನ್ನು ದೊಡ್ಡ ಅಪಾಯಕ್ಕೆ ಸಿಲುಕಿಸುತ್ತಾರೆ. ಬ್ಯಾಂಕ್‌ಗಳು ಈ ಹೊರೆಯನ್ನು ತಾಳಲಾರದೆ ನಿರ್ವಹಿಸಲು ವಿಫಲವಾಗಿ ಅಂತಿಮವಾಗಿ ಬಾಗಿಲು ಮುಚ್ಚುತ್ತವೆ.

ಪಿಎಂಸಿ ಬ್ಯಾಂಕ್‌ಗೆ ಆಡಳಿತ ಪಕ್ಷದ ನಾಯಕರ ಜೊತೆ ಸಂಪರ್ಕವಿತ್ತು ಎಂಬ ಮಾತುಗಳು ಕೇಳಿಬಂದಿದ್ದರೂ ಅದನ್ನು ಈಗಾಗಲೇ ನಿರಾಕರಿಸಲಾಗಿದೆ.

ಪಿಎಂಸಿ ಬ್ಯಾಂಕ್ ವಿಷಯದಲ್ಲಿ ಆರ್‌ಬಿಐ ಆದೇಶ ಬರೆದ ಶಾಯಿ ಒಣಗುವುದಕ್ಕೂ ಮೊದಲೇ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಸಮನ್ಸ್ ಜಾರಿ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ.

ಗೋವಾದಂತಹ ಸಣ್ಣ ರಾಜ್ಯದಲ್ಲಿರುವ 200ಕ್ಕೂ ಅಧಿಕ ಸಹಕಾರಿ ಬ್ಯಾಂಕ್‌ಗಳು ಮತ್ತು ಸಹಕಾರಿ ಸೊಸೈಟಿಗಳು ಸುಮಾರು 800 ಕೋಟಿ ರೂ. ನಷ್ಟ ಅನುಭವಿಸಿವೆ ಎಂಬ ಸುದ್ದಿಯೂ ಹೊರಬಿದ್ದಿದೆ. ಮುಂಬೈ, ಪುಣೆ ಮತ್ತು ಇತರ ಅನೇಕ ನಗರಗಳಲ್ಲಿ ಸಾಮಾನ್ಯವಾಗಿರುವ ಸಹಕಾರಿ ಹೌಸಿಂಗ್ ಸೊಸೈಟಿಗಳು ಮಾದರಿ ಬೈಲಾ(2014)ದ 113ನೇ ನಿಯಮದ ಪ್ರಕಾರ, ತಮ್ಮ ಸಮೀಪದ ಸಹಕಾರಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಲೇಬೇಕು. ಪಿಎಂಸಿ ಬ್ಯಾಂಕ್ ಇಂತಹ ಅನೇಕ ಸಹಕಾರಿ ಹೌಸಿಂಗ್ ಸೊಸೈಟಿಗಳ ಠೇವಣಿಯನ್ನು ಹೊಂದಿದೆ. ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಗಳೂ ಪಿಎಂಸಿ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂ. ಠೇವಣಿಯಿಟ್ಟಿವೆ. ಸದ್ಯ ಆರ್‌ಬಿಐ ಪಿಎಂಸಿ ಬ್ಯಾಂಕ್ ಮೇಲೆ ಹೇರಿರುವ ನಿರ್ಬಂಧದಿಂದ ಈ ಎಲ್ಲ ಠೇವಣಿಗಳನ್ನು ತೆಗೆಯದ ಪರಿಸ್ಥಿತಿ ಎದುರಾಗಿದೆ. ಇತರ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಹೊಂದಿರುವ ಅನೇಕ ಹೌಸಿಂಗ್ ಸೊಸೈಟಿಗಳಿವೆ.

ಕೋಆಪರೇಟಿವ್ ಹೌಸಿಂಗ್ ಸೊಸೈಟಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಸಮೀಪದಲ್ಲಿ ಯಾವುದೇ ಸಹಕಾರಿ ಬ್ಯಾಂಕ್ ಇಲ್ಲದಿರುವ ಕಾರಣ ಸಾರ್ವಜನಿಕ ವಲಯದ ಅಥವಾ ಖಾಸಗಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಅನುಮತಿ ನೀಡಬೇಕು ಎಂದು ನಿರ್ಣಯ ಜಾರಿ ಮಾಡಬಹುದು. ಈ ನಿರ್ಣಯವನ್ನು ಸೊಸೈಟಿಗಳ ರಿಜಿಸ್ಟ್ರಾರ್‌ಗೆ ಸಲ್ಲಿಸುವ ಮೂಲಕ ಸಾರ್ವಜನಿಕ ವಲಯದ ಅಥವಾ ಖಾಸಗಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಅನುಮತಿ ಪಡೆದುಕೊಳ್ಳಬಹುದು.

ಈಗ ಒಂದಿಷ್ಟು ಸಮಾಧಾನದ ಸುದ್ದಿಯೆಂದರೆ, ಪಿಎಂಸಿ ಬ್ಯಾಂಕ್‌ನ ಖಾತೆಯಿಂದ ಗ್ರಾಹಕರು ಗರಿಷ್ಠ 10,000ರೂ. ಹಿಂಪಡೆದುಕೊಳ್ಳಬಹುದು ಎಂದು ಆರ್‌ಬಿಐ ತಿಳಿಸಿದೆ.

ಸಹಕಾರಿ ಬ್ಯಾಂಕ್‌ಗಳು ಇತರ ಬ್ಯಾಂಕ್‌ಗಳ ನಿಯಮಗಳನ್ನೇ ಪಾಲಿಸಬೇಕಾಗುತ್ತದೆ ಮತ್ತು ಅವುಗಳೂ ಆರ್‌ಬಿಐ ಮೇಲ್ವಿಚಾರಣೆಯಡಿಯಲ್ಲೇ ಬರುತ್ತದೆ. ಸಹಕಾರಿ ಬ್ಯಾಂಕ್‌ಗಳೂ ಇತರ ಬ್ಯಾಂಕ್‌ಗಳಂತೆ ಶೇ.4 ನಗದು ಮೀಸಲು ಅನುಪಾತ (ಕ್ಯಾಶ್ ರಿಸರ್ವ್ ರೇಶೊ) ಹೊಂದಿರಬೇಕು. ಸಹಕಾರಿ ಬ್ಯಾಂಕ್‌ಗಳೂ ತಮ್ಮ ಠೇವಣಿಯ ಶೇ.18.75ನ್ನು ಸರಕಾರಿ ಸೆಕ್ಯುರಿಟಿಸ್‌ಗಳಲ್ಲಿ ಹೂಡಿಕೆ ಮಾಡಬೇಕು. ಇವುಗಳನ್ನು ಅಗತ್ಯದ ಸಮಯದಲ್ಲಿ ಹಣ ಪಡೆಯಲು ಸುಲಭವಾಗಿ ಮಾರಾಟ ಅಥವಾ ಅಡಮಾನ ಇಡಬಹುದಾಗಿದೆ.

ಸಹಕಾರಿ ಬ್ಯಾಂಕ್‌ಗಳು ವಿಫಲವಾಗಲು ಕಾರಣ ಸ್ಥಾನಿಕ ಆಡಳಿತದ ಗೈರು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅವು ತೋರಿಸುತ್ತಿರುವ ಉದಾಸೀನತೆ ಹಾಗೂ ಅವುಗಳನ್ನು ನಡೆಸುವಲ್ಲಿ ವೃತ್ತಿಪರತೆಯ ಕೊರತೆ.

ಠೇವಣಿ ಮೇಲೆ ಅತೀಹೆಚ್ಚು ಬಡ್ಡಿ ನೀಡುತ್ತೇವೆ ಎಂದು ಹೇಳುವ ಮೂಲಕ ಸಹಕಾರಿ ಬ್ಯಾಂಕ್‌ಗಳು ಜನರನ್ನು ಆಕರ್ಷಿಸುವ ಸಂದರ್ಭದಲ್ಲಿ ಕೆಲವೊಂದನ್ನು ಪರಿಶೀಲಿಸುವುದು ಬಹಳ ಮುಖ್ಯ. ಮೊದಲಿಗೆ ಬ್ಯಾಂಕ್‌ನ ಬಂಡವಾಳ. ಬ್ಯಾಂಕ್‌ನ ಬಂಡವಾಳ, ನಷ್ಟವನ್ನು ತಡೆಹಿಡಿಯುವ ಅದರ ಸಾಮರ್ಥ್ಯ. ಸಹಕಾರಿ ಬ್ಯಾಂಕ್‌ಗಳು ಠೇವಣಿಯನ್ನು ಪಾವತಿ ಮಾಡಬೇಕಾಗಿರುವ ಕಾರಣ ಸಾಕಷ್ಟು ಬಂಡವಾಳ ಇರಬೇಕಾದುದು ಅಗತ್ಯ. ಸಹಕಾರಿ ಬ್ಯಾಂಕ್‌ಗಳು ಕನಿಷ್ಠ ಶೇ.10.875 ಕ್ಯಾಪಿಟಲ್ ಅಡಿಕ್ವೆಸಿ ರೇಶೊ (ಸಿಆರ್‌ಎಆರ್) ಹೊಂದಿರಬೇಕು.

ಎರಡನೆಯದಾಗಿ, ಲಾಭದಾಯಕತೆಯನ್ನು ನಿರ್ಧರಿಸುವ ರಿಟರ್ನ್ ಆನ್ ಎಸೆಟ್ಸ್ (ಆರ್‌ಒಎ)ಅನ್ನೂ ಗಮನಿಸಬೇಕು. ಆರ್‌ಒಎ ಶೇ.1 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಮತ್ತು ಇತರ ಎಲ್ಲ ಮಾನದಂಡಗಳೂ ಉತ್ತಮವಾಗಿದ್ದರೆ ಆ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ ಎಂದು ಅರ್ಥ.

ಮೂರನೆಯದಾಗಿ, ಸಾಲಗಾರರು ಸಾಲ ಮರುಪಾವತಿ ಮಾಡಲಾಗದೆ ಉಂಟಾಗುವ ಕೆಟ್ಟಸಾಲಗಳು ಬ್ಯಾಂಕ್‌ನ ಆರ್ಥಿಕ ನಿರ್ವಹಣೆ ವಿಫಲವಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಬ್ಯಾಂಕ್‌ಗಳು ಈ ಕೆಟ್ಟ ಸಾಲಗಳನ್ನು ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ವರ್ಗೀಕರಿಸಬೇಕಾಗುತ್ತದೆ ಮತ್ತು ಇವುಗಳನ್ನು ನಿಭಾಯಿಸಲು ತಮ್ಮ ಗಳಿಕೆಯ ಒಂದು ಭಾಗವನ್ನು ಮೀಸಲಿಡಬೇಕಾಗುತ್ತದೆ. ಪಿಎಂಸಿ ಬ್ಯಾಂಕ್ ಪ್ರಕರಣದಲ್ಲಿ ಅದರ ಎನ್‌ಪಿಎಯಲ್ಲಿ ತೀವ್ರ ಏರಿಕೆಯಾಗಿ ಬ್ಯಾಂಕ್‌ನ ಲಾಭದಾಯಕತೆಯನ್ನು ಕಡಿಮೆಗೊಳಿಸಿತ್ತು ಮತ್ತು ಅದೇ ಬ್ಯಾಂಕ್‌ನ ಈ ಇಂದಿನ ದುಸ್ಥಿತಿಗೆ ಕಾರಣವಾಗಿದೆ.

ಆರ್‌ಬಿಐಯಿಂದ ಕಠಿಣ ನಿರ್ಬಂಧಗಳು ಮತ್ತು ಠೇವಣಿದಾರರಿಂದ ವಿವೇಚನಾತ್ಮಕ ಕ್ರಮದಿಂದ ಅವರ ಹಣವನ್ನು ಉಳಿಸಬಹುದು. ಬಹುಶಃ, ಇನ್ನೊಂದು ನಿಯಂತ್ರಕ ಸಂಸ್ಥೆಯನ್ನು ಸಹಕಾರಿ ಬ್ಯಾಂಕ್‌ಗಳ ಪರಿಶೀಲನೆಗೆಂದೇ ರಚಿಸಬೇಕು ಮತ್ತು ಈ ಸಂಸ್ಥೆ ಆರ್‌ಬಿಐಗೆ ವರದಿ ಒಪ್ಪಿಸಬೇಕು. ಇದು ಆರ್‌ಬಿಐಯ ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಸಹಕಾರಿ ಬ್ಯಾಂಕ್‌ಗಳ ಪರಿಣಾಮಕಾರಿ ಮೇಲ್ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ.

ಕೃಪೆ: countercurrents.org

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)