varthabharthi

ಕ್ರೀಡೆ

ಜಮುನಾ, ಲವ್ಲಿನಾ ಕ್ವಾರ್ಟರ್ ಫೈನಲ್‌ಗೆ

ವಾರ್ತಾ ಭಾರತಿ : 10 Oct, 2019

ಮಾಸ್ಕೊ, ಅ.9: ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್(69ಕೆಜಿ) ಹಾಗೂ ಮೊದಲ ಬಾರಿ ಸ್ಪರ್ಧಿಸುತ್ತಿರುವ ಜಮುನಾ ಬೊರೊ(54ಕೆಜಿ)ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

 ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬೊರೊ ಅಲ್ಜೀರಿಯದ ಐದನೇ ಶ್ರೇಯಾಂಕದ ಕ್ವಿಡಾಡ್ ಫೌರನ್ನು ಒಮ್ಮತದ ತೀರ್ಪಿನಲ್ಲಿ ಮಣಿಸಿದರು. ಮೂರನೇ ಶ್ರೇಯಾಂಕದ ಲವ್ಲಿನಾ ಮೊರಾಕ್ಕೊದ ಎದುರಾಳಿ ಖಮೈಮಾ ಬೆಲ್ ಅಹ್‌ಬಿಬ್‌ರನ್ನು 5-0 ಅಂತರದಿಂದ ಮಣಿಸಿದರು.

ಬೊರೊ ಮುಂದಿನ ಸುತ್ತಿನಲ್ಲಿ ಬೆಲಾರಸ್‌ನ ಯುಲಿಯಾ ಅಪನಾಸೋ ವಿಚ್‌ರನ್ನು ಎದುರಿಸಲಿದ್ದಾರೆ. ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಅಪನಾಸೋವಿಚ್ ಪ್ರಿ-ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಜರ್ಮನಿಯ ಉರ್ಸುಲಾ ಗೊಟ್ಟಲೊಬ್‌ರನ್ನು ಮುಖಾಮುಖಿಯಾಗಲಿದ್ದಾರೆ.

  ಲವ್ಲಿನಾ ಬೊರ್ಗೊಹೈನ್ ಆರನೇ ಶ್ರೇಯಾಂಕದ ಕರೊಲಿನಾ ಕೊಸ್ಝೆವ್‌ಸ್ಕರನ್ನು ಎದುರಿಸಲಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಐವರು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆರು ಬಾರಿಯ ಚಾಂಪಿಯನ್ ಹಾಗೂ ಮೂರನೇ ಶ್ರೇಯಾಂಕದ ಎಂಸಿ ಮೇರಿಕೋಮ್(51ಕೆಜಿ), ಮಂಜು ರಾಣಿ(48ಕೆಜಿ) ಹಾಗೂ ಕವಿತಾ ಚಹಾಲ್(+81ಕೆಜಿ)ಅಂತಿಮ-8ರ ಸುತ್ತು ತಲುಪಿದ್ದಾರೆ.

 ಚಹಾಲ್ ನೇರವಾಗಿ ಕ್ವಾರ್ಟರ್ ಫೈನಲ್ ತಲುಪಿದ ಕಾರಣ ಟೂರ್ನಿಯಲ್ಲಿ ಇನ್ನಷ್ಟೇ ತನ್ನ ಸಾಮರ್ಥ್ಯ ತೋರಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)