varthabharthi

ಕರಾವಳಿ

ಕೆಐಒಸಿಎಲ್‌ನಿಂದ ಬೈಕಂಪಾಡಿಯಲ್ಲಿ ನೂತನ ಘಟಕಗಳ ಪ್ರಸ್ತಾವನೆ: ಪರಿಸರ ಸಾರ್ವಜನಿಕ ಸಭೆಯಲ್ಲಿ ಅಸಮಾಧಾನ

ವಾರ್ತಾ ಭಾರತಿ : 10 Oct, 2019

ಸಮಗ್ರ ಪರಿಸರ ಅಧ್ಯಯನ, ಸ್ಥಳೀಯರಿಗೆ ಉದ್ಯೋಗಾವಕಾಶದ ಬೇಡಿಕೆ

ಮಂಗಳೂರು, ಅ.10: ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿ ಕೆಐಓಸಿಎಲ್‌ನಿಂದ ಸ್ಥಾಪಿಸಲು ಉದ್ದೇಶಿಸಿರುವ ನೂತನ ಘಟಕಗಳಿಗೆ ಸಂಬಂಧಿಸಿ ಇಂದು ನಡೆದ ಪರಿಸರ ಸಾರ್ವಜನಿಕ ಸಭೆಯಲ್ಲಿ ಸ್ಥಳೀಯರಿಂದ ವಿರೋಧದ ಧ್ವನಿಗಳೇ ಅಧಿಕವಾಗಿತ್ತು. ಈಗಾಗಲೇ ನಗರದಲ್ಲಿ ಕೆಐಓಸಿಎಲ್ ಸೇರಿದಂತೆ ಕೈಗಾರಿಕೆಗಳಿಂದಾಗಿ ಸಂತ್ರಸ್ತರಾದವರು, ಸ್ಥಳೀಯರು ಈಗಾಗಲೇ ಅನುಭವಿಸುತ್ತಿರುವ ಸಂಕಟಗಳನ್ನು ಸಭೆಯಲ್ಲಿ ಬಿಚ್ಚಿಡುವ ಮೂಲಕ ನೂತನ ಘಟಕಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದರು.

ಇದೇ ವೇಳೆ ಘಟಕಗಳ ಸ್ಥಾಪನೆಯಾಗುವುದಾರೂ ಸ್ಥಳೀಯರ ಬೇಡಿಕೆಗಳ ಜತೆಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಮಗ್ರ ಪರಿಸರ ಮಾಲಿನ್ಯ ನಿಯಂತ್ರಣವನ್ನು ಖಾತರಿಪಡಿಸಬೇಕೆಂಬ ಆಗ್ರವೂ ಸ್ಥಳೀಯರಿಂದ ವ್ಯಕ್ತವಾಯಿತು.

ದ.ಕ. ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ವಿಭಾಗದ ಜಿಲ್ಲಾ ಅಧಿಕಾರಿ ಪುರಾಣಿಕ್‌ರವರು ಉಪಸ್ಥಿತರಿದ್ದು ಸಾರ್ವಜನಿಕರ ಅಹವಾಲು, ಬೇಡಿಕೆ, ಆಗ್ರಹಗಳನ್ನು ಆಲಿಸಿದರು.

ವೈದ್ಯಕೀಯ ವಿಮಾ ಯೋಜನೆ ಜಾರಿಯಾಗಲಿ
ಪಡುಕೋಡಿ, ಬಂಗ್ರಕೂಳೂರು ಜನರ ಪರವಾಗಿ ಅಭಿಪ್ರಾಯ ಮಂಡಿಸಿದ ಡ್ಯಾನಿ ಡಿಸೋಜಾ, ಈಗಾಗಲೇ ಎನ್‌ಎಂಪಿಟಿ, ಎಂಆರ್‌ಪಿಎಲ್‌ಗಾಗಿ ಸಂತ್ರಸ್ತರಾಗಿರುವವರು ಪರಿಸರ ಮಾಲಿನ್ಯ ಸಮಸ್ಯೆಗಳಿಂದ ಹೊರ ಬಂದಿಲ್ಲ. ಈಗಾಗಲೇ ಎನ್‌ಎಂಪಿಟಿಯ ಕಪ್ಪು ಧೂಳಿನ ಸಮಸ್ಯೆಯಿಂದಾಗಿ ಸ್ಥಳೀಯರು ದಿನನಿತ್ಯ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅಮೋನಿಯಾ ಗ್ಯಾಸ್ ಸಮೀಪದ ಎಂಸಿಎಫ್ ಕೈಗಾರಿಕೆಯಿಂದ ಹೊರಸೂಸುತ್ತಿರುತ್ತದೆ. ಜೋಕಟ್ಟೆ, ಪೆರ್ಮುದೆ ಗ್ರಾಮಸ್ಥರು ಎಂಆರ್‌ಪಿಎಲ್‌ನ ಕೋಕ್ ಘಟಕದಿಂದ ಈಗಾಗಲೇ ಹೈರಾಣಾಗಿದ್ದಾರೆ. ಸ್ಥಳೀಯರ ಹೋರಾಟ, ಮನವಿಗಳ ಹಿನ್ನೆಲೆಯಲ್ಲಿ ಈ ಕೈಗಾರಿಕೆಗಳಿಂದ ಕೆಲವೊಂದು ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆಯಾದರೂ ಸಂಪೂರ್ಣವಾಗಿ ನಿಯಂತ್ರಿಸಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರ ಆರೋಗ್ಯ ಸಮಸ್ಯೆ ಜತೆಗೆ ಇಲ್ಲಿನ ನೀರಿನ ಪ್ರಮುಖ ಆಸರೆಯಾಗಿರುವ ಫಲ್ಗುಣಿ ನದಿ ಇನ್ನಷ್ಟು ಕಲುಷಿತವಾಗುವ ಆತಂಕವಿದೆ. ಒಂದು ವೇಳೆ ಈ ಘಟಕಗಳನ್ನು ಸ್ಥಾಪಿಸುವುದಾದರೂ ಸ್ಥಳೀಯರಿಗೆ ವೈದ್ಯಕೀಯ ವಿಮಾ ಯೋಜನೆಯನ್ನು ಖಾತರಿಪಡಿಸಬೇಕು. ಈ ಘಟಕಗಳ ಮಾಲಿನ್ಯದಿಂದ ಜೀವಹಾನಿಗೆ 25 ಲಕ್ಷ ರೂ.ಗಳ ಪರಿಹಾರ ಜತೆಗೆ ಶೇ. 60ರಷ್ಟು ಸ್ಥಳೀಯರಿಗೆ ಉದ್ಯೋಗಾವಕಾ ನೀಡಬೇಕು ಎಂದು ಆಗ್ರಹಿಸಿದರು.

ಸ್ಥಳೀಯರಿಗೆ ಉದ್ಯೋಗದ ಮುಚ್ಚಳಿಕೆ ಬರೆದುಕೊಡಿ
ಕೂಳೂರು, ಪಡುಕೋಡಿಯ ರೆನ್ನಿ ಡಿಸೋಜಾ ಅಭಿಪ್ರಾಯಿಸಿ, ನಾನು ಎನ್‌ಎಂಪಿಟಿಗೆ ಜಾಗ ನೀಡಿ ನಿರ್ವಸಿತನಾದವ. ನನ್ನ ವಯಸ್ಸು 60 ದಾಟಿದೆ. ಕೆಐಒಸಿಎಲ್, ಎಂಸಿಎಫ್, ಎನ್‌ಎಂಪಿಟಿಯಲ್ಲಿ ಕೆಲಸ ಸಿಗಬಹುದೆಂಬ ನಿರೀಕ್ಷೆಯಲ್ಲೇ ಕಾಲ ಕಳೆದಿದ್ದೇನೆ. ಈಗಾಗಲೇ ಇಲ್ಲಿರುವ ಕೈಗಾರಿಕೆಗಳಿಂದ ಶುದ್ಧ ನೀರು, ಗಾಳಿ ಇಲ್ಲವಾಗಿದೆ. ಅಸ್ತಮಾ, ಲಿವರ್ ಸಮಸ್ಯೆ, ಕ್ಯಾನ್ಸರ್‌ನಂತಹ ರೋಗಗಳಿಂದ ಸ್ಥಳೀಯರು ನರಳುತ್ತಿರುವ ಬಗ್ಗೆ ನಮ್ಮಲ್ಲಿ ದಾಖಲೆ ಇದೆ. ಸ್ವಚ್ಛತೆ ಬಗ್ಗೆ ಮಾತನಾಡಲಾಗುತ್ತದೆ. ಆದರೆ ಇಂತಹ ಸ್ಥಾವರಗಳನ್ನು ಸ್ಥಾಪಿಸುವಾಗ ಅಲ್ಲಿ ಪರಿಸರ, ಸ್ವಚ್ಛತೆ ಹಾಗೂ ಜನಪರ ಕಾಳಜಿ ಯಾಕಿಲ್ಲ. ಈಗಾಗಲೇ ಸ್ಥಾಪಿಸಲಾಗಿರುವ ಕೈಗಾರಿಕೆಗಳಲ್ಲಿ ಎಷ್ಟು ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ ಎಂಬುದನ್ನು ತಿಳಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೆ ಹೊಸ ಘಟಕಗಳನ್ನು ಸ್ಥಾಪಿಸುವುದಾದರೆ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ, ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ ಎಂಬ ಮುಚ್ಚಳಿಕೆ ಬರೆದು ಕೊಡಿ ಎಂದು ಅವರು ಆಗ್ರಹಿಸಿದರು.

ಜನರಿಗೆ ಸಮಗ್ರ ವಿರಣೆಯ ಬಳಿಕವೇ ಆರಂಭಿಸಬೇಕು
ಎಂಆರ್‌ಪಿಎಲ್‌ನ ಕೋಕ್ ಘಟಕದಿಂದ ನಿರ್ಮುಂಜೆ ಹಾಗೂ ಪಂಚಾಯತ್‌ಗುಡ್ಡೆ ಜನರು ಮನೆಗಳನ್ನು ತೊರೆದು ಬೇರೆಡೆ ನೆಲೆಸುವಂತಾಗಿದೆ. ಕೆಐಒಸಿಎಲ್‌ನಿಂದ ಸಾಮಾಜಿಕ ಕಾರ್ಪೊರೇಟ್ ನಿಧಿಯಡಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳಿದ್ದಾರೆ. ಕೆಐಓಸಿಎಲ್‌ನಿಂದ ಸ್ಥಾಪಿಸಲುದ್ದೇಶಿಸಲಾಗಿರುವ ಘಟಕದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿರುವ ಗ್ರಾಮಕ್ಕೆ ಒಂದು ರೂಪಾಯಿ ಕೂಡಾ ಅನುದಾನ ನೀಡಿಲ್ಲ. ಹಾಗಿರುವಾಗ ಮತ್ತೆ ಸಂಸ್ಥೆಯವರು ಹೇಳುತ್ತಿರುವ ಪರಿಸರ ಸಹ್ಯ ಯೋಜನೆಯನ್ನು ಹೇಗೆ ಒಪ್ಪಿಗೆ ನೀಡಲು ಸಾಧ್ಯ. ಜನರಿಗೆ ಕೈಗಾರಿಕೆಯ ಕುರಿತಂತೆ ಸಮಗ್ರ ಮಾಹಿತಿಯನ್ನು ವಿವರಿಸಿದ ಬಳಿಕವೇ ಘಟಕ ಸ್ಥಾಪನೆಗೆ ಮುಂದಾಗಬೇಕು ಎಂದು 62ನೆ ತೋಕೂರು ಗ್ರಾಮದ ನಿವಾಸಿಯೊಬ್ಬರು ಒತ್ತಾಯಿಸಿದರು.

ಸ್ಥಾವರ ಸ್ಥಾಪನೆಯಾಗದಿದ್ದರೆ ಮುಂದಿನ ಜನಾಂಗಕ್ಕೆ ಹಿತ
ಸಭೆಯಲ್ಲಿದ್ದ ಯುವಕ ಮಣಿಕಂಠ ಎಂಬವರು ಮಾತನಾಡಿ, ಯುವ ಜನತೆ ಭವಿಷ್ಯದಲ್ಲಿ ಈ ಕೈಗಾರಿಕೆಗಳ ಸಮಸ್ಯೆಗಳನ್ನು ಎದುರಿಸಬೇಕಾಗಿರುವುದರಿಂದ ಇಂತಹ ಸ್ಥಾವರಗಳು ಸ್ಥಾಪನೆಯಾಗದಿದ್ದರೆ ಹಿತ ಎಂದರು.

ಪರಿಸರವನ್ನು ಒತ್ತೆ ಇರಿಸಿ ಕೈಗಾರಿಕೆ ಬೇಡ
ಪರಿಸರ ಮಾಲಿನ್ಯವನ್ನು ವೈಜ್ಞಾನಿಕ ತಂತ್ರಜ್ಞಾನದ ಮೂಲಕ ನಿವಾರಿಸಲು ಸಾಧ್ಯವಾದರೆ ಮಾತ್ರ ಇಂತಹ ಉದ್ದಿಮೆಗಳಿಗೆ ಅವಕಾಶ ನೀಡಬೇಕು. ಪರಿಸರವನ್ನು ಒತ್ತೆ ಇಟ್ಟು ಕೈಗಾರಿಕೆಗಳು ಬೇಡ. ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂಬ ಬಗ್ಗೆ ಮತ್ತೊಂದು ಸಮಗ್ರ ಸಭೆ ನಡೆಯಲಿ ಎಂದು ಸ್ಥಳೀಯ ಮಾಜಿ ಕಾರ್ಪೊರೇಟ್ ದಯಾನಂದ ಶೆಟ್ಟಿ ಅಭಿಪ್ರಾಯಿಸಿದರು.

ನಮ್ಮ ಭೂಮಿಯಲ್ಲಿ ಮತ್ತೊಂದು ಅಪಾಯಕಾರಿ ಕೈಗಾರಿಕೆ ಬೇಡ
ಕಲ್ಲಿದ್ದಲು ಹಾರುವ ಬೂದಿ ಎಷ್ಟು ಅಪಾಯಕಾರಿ ಎಂಬುದು ಇಲ್ಲಿನ ಸ್ಥಳೀಯರು, ಸಂತ್ರಸ್ತರು ಅನುಭವಿಸಿದ್ದೇವೆ. ಉದ್ದಿಮೆಗಾಗಿ ಭೂಮಿ ನೀಡಿ ನಿರ್ವಸಿತರಾದ ನಮಗೆ ಇನ್ನೂ ಯಾವುದೇ ಉದ್ಯೋಗ ದೊರಕಿಲ್ಲ. ಹಾಗಾಗಿ ನಮ್ಮ ಮಕ್ಕಳಿಗೆ ಉದ್ಯೋಗ ದೊರಕುವ ಭರವಸೆ ಉಳಿದಿಲ್ಲ. ಹಾಗಾಗಿ ನಮ್ಮ ಭೂಮಿಯಲ್ಲಿ ಮತ್ತೊಂದು ಕೈಗಾರಿಕೆ ಬೇಡ. ನಮ್ಮನ್ನು ಬದುಕಲು ಬಿಡಲಿಲ್ಲ. ನಮ್ಮ ಮುಂದಿನ ಸಮಾಜವಾದರೂ ಇಲ್ಲಿ ದೈವ ದೇವರ ಆರಾಧಾನೆಯೊಂದಿಗೆ ಜೀವಿಸಲು ಅವಕಾಶ ನೀಡಿ ಎಂದು ಕೆಐಒಸಿಎಲ್‌ಗೆ ಭೂಮಿ ನೀಡಿ ನಿರ್ವಸಿತಾದ ವಿಲ್ಮಾ ಎಂಬವರು ಬೇಸರಿಸಿದರು.

ಪರಿಸರ ಸಹ್ಯವಾಗಿ ಯೋಜನೆ ಆರಂಭವಾಗಲಿ
ನಾನು ಕಾರ್ಪೊರೇಟರ್ ಆಗಿದ್ದ ವೇಳೆ ಸಾಕಷ್ಟು ಪ್ರಯೋಜನಗಳು ಕೆಐಒಸಿಎಲ್‌ನಿಂದ ದೊರಕಿದೆ. ಕೆಲವರಿಗೆ ಉದ್ಯೋಗವೂ ಕೊಡಿಸಲಾಗಿದೆ. ಹಾಗಾಗಿ ಪರಿಸರ ಸಹ್ಯವಾಗಿ ಯೋಜನೆ ಆರಂಭಿಸುವುದಾದರೆ ಅವಕಾಶ ನೀಡಬೇಕು ಎಂದು ಸ್ಥಳೀುರಾದ ಶಾಂತಾ ಆರ್. ಅಭಿಪ್ರಾಯಿಸಿದರು.

ಸ್ಥಳೀಯರಿಗೆ ಉದ್ಯೋಗ ಎಂಬುದು ಮೂರ್ಖತನ
ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಯ ಈ ಸಂದರ್ಭದಲ್ಲಿ ಮತ್ತೆ ನಮ್ಮಲ್ಲಿ ಕೈಗಾರಿಕೆಗಳು ಬೇಕಾಗಿಲ್ಲ. ಈ ಯೋಜನೆಯ ಮೂಲಕ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂಬುದು ಮೂರ್ಖತನ ಎಂದು ನಾಗರಿಕ ಸೇವಾ ಸಮಿತಿಯ ಸದಸ್ಯ ರಫೀಕ್ ಕೂಳೂರು ಅಭಿಪ್ರಾಯಿಸಿದರು.
ಕೂಳೂರು ಚರ್ಚ್‌ನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕಿ ಕೂಡಾ ಈಗಾಗಲೇ ಸ್ಥಳೀಯ ಕಾರ್ಖಾನೆಗಳಿಂದಾಗಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಿರುವ ಕುರಿತು ಲಿಖಿತ ಮವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು, ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಸಿಂಧು ರೂಪೇಶ್, ಕೆಐಓಸಿಎಲ್‌ನ ಅಧಿಕಾರಿಗಳು ಮತ್ತೆ ಸ್ಥಳೀಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸುವಂತೆ ಸೂಚಿಸಿದರು.

ಕೆಐಓಸಿಎಲ್‌ನಿಂದ ಸ್ಥಾಪಿಸಲುದ್ದೇಶಿಸಿರುವ ಯೋಜನೆಗಳು
'1.8 ಲಕ್ಷ ಟನ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ನಾನ್ ರಿಕವರಿ ಕೋಕ್ ಓವನ್ ಸ್ಥಾವರ, 10 ಮೆಗಾವ್ಯಾಟ್ ಕೋಜೆನ್ ಕ್ಯಾಪ್ಟಿವ್ ವಿದ್ಯುತ್ ಉತ್ಪಾದನಾ ಸ್ಥಾವರ ಮತ್ತು 2 ಲಕ್ಷ ಟನ್ ಮೆದುಕಬ್ಬಿಣದ ಪೈಪ್ (ಡಿಐಎಸ್‌ಪಿ)ಗಳನ್ನು ಉತ್ಪಾದಿಸುವ ಸ್ಥಾವರ.

ಸ್ಥಳ: ಬೈಕಂಪಾಡಿ ಕೈಗಾರಿಕಾ ಪ್ರದೇಶ.

ಒಟ್ಟು ಪ್ರದೇಶ: 166.16 ಎಕರೆ ಕೆಐಒಸಿಎಲ್ ಅಧೀನದ ಜಾಗ.

836.9 ಕೋಟಿ ರೂ. ಅಂದಾಜು ವೆಚ್ಚ.

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಮಾಡುವ ವೆಚ್ಚ 40.5 ಕೋಟಿ ರೂ.

ಶಾಸನ ಬದ್ಧ ಅನುಮತಿ ದೊರಕಿದ್ದಲ್ಲಿ 2019-20ನೆ ಆರ್ಥಿಕ ವರ್ಷದಿಂದ ಸ್ಥಾವರಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಪ್ರಾಸ್ತಾವಿಕವಾಗಿ ಯೋಜನೆ ಬಗ್ಗೆ ಕೆಐಓಸಿಎಲ್‌ನ ಅಧಿಕಾರಿ ವಿವರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)