varthabharthi

ಬೆಂಗಳೂರು

ಬಿಗ್‌ ಬಾಸ್ 7 ನೇ ಆವೃತ್ತಿ ಅ.13 ರಿಂದ ಆರಂಭ

ಈ ಬಾರಿಯ ಬಿಗ್‌ಬಾಸ್‌ ನಲ್ಲಿ ಜನಸಾಮಾನ್ಯರು ಇರಲಿದ್ದಾರೆಯೇ ?: ಸುದೀಪ್ ಉತ್ತರಿಸಿದ್ದು ಹೀಗೆ...

ವಾರ್ತಾ ಭಾರತಿ : 10 Oct, 2019

ಬೆಂಗಳೂರು, ಅ.10: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ರಿಯಾಲಿಟಿ ಶೋ ತನ್ನ ಏಳನೇ ಆವೃತ್ತಿಯು ಅ.13 ರವಿವಾರದಿಂದ ಪ್ರಾರಂಭವಾಗಲಿದ್ದು, ಅಂದು ರಾತ್ರಿ 6 ಗಂಟೆಗೆ ಬಿಗ್‌ಬಾಸ್-7 ಗ್ರಾಂಡ್ ಓಪನಿಂಗ್ ಆಗಲಿದೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಗ್‌ಬಾಸ್ ನಿರೂಪಕ ಹಾಗೂ ನಟ ಕಿಚ್ಚ ಸುದೀಪ್, ಅತಿಹೆಚ್ಚು ಜನರನ್ನು ಸೆಳೆದಿರುವ ರಿಯಾಲಿಟಿ ಶೋ ಬಿಗ್‌ಬಾಸ್ ಮತ್ತೊಂದು ಆವೃತ್ತಿಯನ್ನು ಪ್ರಾರಂಭ ಮಾಡುತ್ತಿದೆ. ಇದರಲ್ಲಿ 15-17 ಜನರು ಪರಸ್ಪರ ಪೈಪೋಟಿ ನಡೆಸಲಿದ್ದಾರೆ ಎಂದರು.

ಈ ವರ್ಷದ ಬಿಗ್‌ಬಾಸ್‌ನಲ್ಲಿ ಎಲ್ಲರೂ ಸೆಲೆಬ್ರಿಟಿಗಳೇ ಆಗಿರಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಗಳಿಸಿರುವ 15-17 ಮಂದಿ ನೂರು ದಿನಗಳ ಕಾಲ ಮನೆಯೊಳಗೆ ಹೊರ ಪ್ರಪಂಚದ ಸುಳಿವೇ ಇಲ್ಲದಂತೆ ಕಾಲ ಕಳೆಯಲಿದ್ದಾರೆ. ಇಷ್ಟು ಜನರು ತಮ್ಮ ಉಳಿವಿಗಾಗಿ ಪರಸ್ಪರ ಸೆಣಸಾಡಲಿದ್ದು, ಈ ಸೆಣಸಾಟದ ಮೂಲಕ ನೋವು, ನಲಿವು, ಬೇಸರ, ಕೋಪ, ತಾಪ ಹೀಗೆ ಎಲ್ಲ ರೀತಿಯ ಭಾವನೆಗಳು ಹೊರಬೀಳಲಿವೆ ಎಂದು ಹೇಳಿದರು.

ಈ ಶೋನಲ್ಲಿ ಪಾಲ್ಗೊಳ್ಳುವವರು ನಮಗಿಂತ ಹೆಚ್ಚಿನ ಎತ್ತರಕ್ಕೆ ಬೆಳೆದವರೂ ಇದ್ದಾರೆ, ಬೆಳೆಯದವರೂ ಇದ್ದಾರೆ. ಇಲ್ಲಿ ಪಾಲ್ಗೊಳ್ಳುವವರಿಗೆ ಹಣವಷ್ಟೇ ಅಲ್ಲದೆ, ಅವರಿಗೆ ಅವಕಾಶಗಳನ್ನು ಕಲ್ಪಿಸುವ ದಾರಿಗಳನ್ನು ಬಿಗ್‌ಬಾಸ್ ತೆರೆದಿಡಲಿದೆ. ಬಿಗ್‌ಬಾಸ್‌ನಲ್ಲಿ ಅಂತಿಮದಲ್ಲಿ ವಿಜೇತರಾದವರಿಗೆ 50 ಲಕ್ಷ ಅಥವಾ ಅದಕ್ಕಿಂತ ಅಧಿಕ ಹಣವೂ ಸಿಗುವ ನಿರೀಕ್ಷೆಯಿದೆ ಎಂದು ನುಡಿದರು.

ವಯಾಕಾಂ 18 ನ ಕನ್ನಡ ಮನರಂಜನೆ ವಿಭಾಗದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಮಾತನಾಡಿ, ಬಿಗ್‌ಬಾಸ್ ಮನರಂಜನೆ ಹಾಗೂ ಭಾವನೆಗಳ ಹದವಾದ ಮಿಶ್ರಣವಾಗಿದೆ. ಇಂತಹ ಕಾರ್ಯಕ್ರಮ ಮಾಡುವುದು ಸುಲಭ, ಆದರೆ, ಮಿಶ್ರಣವಾದ ಹದ ಕಾಪಾಡಿಕೊಳ್ಳುವುದು ಕಷ್ಟ. ಅದಕ್ಕಾಗಿ ಸುದೀಪ್ ಇಡೀ ಕಾರ್ಯಕ್ರಮ ನಿರೂಪಿಸಲಿದ್ದು, ನಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು.

ಮನೆಯೊಳಗೆ ಪ್ರವೇಶಿಸುವ ಎಲ್ಲರಿಗೂ ನಿರೂಪಕ ಕಿಚ್ಚ ಸುದೀಪ್ ಹೊರ ಪ್ರಪಂಚದ ಕೊಂಡಿಯಾಗಿದ್ದಾರೆ. ಅವರ ನೋವು, ನಲಿವುಗಳಿಗೆ ಕಿವಿಗೊಡುವ, ಅವರನ್ನು ಸಮಾಧಾನಪಡಿಸುವ, ಕಿವಿ ಹಿಂಡಿ ಬುದ್ಧಿ ಹೇಳುವ, ಕೆಲವೊಮ್ಮೆ ಗದರುವ, ಪ್ರೀತಿಯಿಂದ ಬೆನ್ನು ಸವರುವ ಸುದೀಪ್ ಸ್ಪರ್ಧಾರ್ಥಿಗಳ ಜತೆಗೆ ಇರಲಿದ್ದಾರೆ ಎಂದು ಹೇಳಿದರು.

ಸ್ಪರ್ಧಾರ್ಥಿಗಳು ನಿಗೂಢ: ಬಿಗ್‌ಬಾಸ್ ಸೀಸನ್ 7 ರಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎಂಬುದು ನಿಗೂಢವಾಗಿಡಲಾಗಿದೆ. 25-30 ಜನರು ಪಾಲ್ಗೊಳ್ಳಲು ತಯಾರಿ ಮಾಡಿಕೊಂಡಿರುತ್ತಾರೆ. ಆದರೆ, ಅಲ್ಲಿ ಬೇಕಿರುವುದು ಕೇವಲ 15-17 ಜನರಷ್ಟೇ. ಹೀಗಾಗಿ, ಯಾರೆಲ್ಲಾ ಇರಲಿದ್ದಾರೆ ಎಂಬುದು ನನಗೂ ಶೂಟಿಂಗ್ ದಿನವೇ ತಿಳಿಯಲಿದೆ ಎಂದು ನಟ ಸುದೀಪ್ ಪ್ರಕ್ರಿಯಿಸಿದರು.

ಆಯ್ಕೆ ಮಾನದಂಡ: ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವವರು 100 ದಿನಗಳವರೆಗೆ ತಮ್ಮ ಪಾತ್ರವನ್ನು ಕಾಪಾಡಿಟ್ಟುಕೊಳ್ಳಬೇಕು. ರಾಜ್ಯದ ಬೇರೆ ಬೇರೆ ಭೌಗೋಳಿಕ ಹಿನ್ನೆಲೆ, ತಮ್ಮ ಕ್ಷೇತ್ರದ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪರಮೇಶ್ವರ್ ಗುಂಡ್ಕಲ್ ತಿಳಿಸಿದರು.

ರಾಜ್ಯದ ಹಲವೆಡೆ ನೇರಪ್ರಸಾರ: ಅ.13 ರಂದು ರಾತ್ರಿ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಬಿಗ್‌ಬಾಸ್-7 ರ ಗ್ರಾಂಡ್ ಓಪನಿಂಗ್ ಆರಂಭವಾಗಲಿದ್ದು, ಚಾನಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಅದರ ಜತೆಗೆ ಬೆಂಗಳೂರಿನಲ್ಲಿ ಮೂರು ಮೈಸೂರು, ಮಣಿಪಾಲ್, ಉಡುಪಿಯಲ್ಲಿ ತಲಾ ಒಂದು ಮಲ್ಟಿಫ್ಲೆಕ್ಸ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಆಸಕ್ತರು, ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)