varthabharthi


ಆರೋಗ್ಯ

ಮಧುಮೇಹ, ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಲ್ಲ ಸ್ಲೀಪ್ ಆಪ್ನಿಯಾ

ವಾರ್ತಾ ಭಾರತಿ : 10 Oct, 2019

ವ್ಯಕ್ತಿಯೋರ್ವ ನಿದ್ರೆಯಲ್ಲಿದ್ದಾಗ ಶ್ವಾಸನಾಳದ ಸ್ನಾಯುಗಳು ಕುಸಿದು,ಶ್ವಾಸನಾಳವು ಸಂಕುಚಿತಗೊಂಡಿರುವ ಸ್ಥಿತಿಯನ್ನು ಸ್ಲೀಪ್ ಆಪ್ನಿಯಾ ಅಥವಾ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಎಂದು ಕರೆಯಲಾಗುತ್ತದೆ. ಇದರಿಂದಾಗಿ ವ್ಯಕ್ತಿಯು ನಿದ್ರೆಯಲ್ಲಿ ಉಸಿರಾಟದ ತೊಂದರೆಯನ್ನು ಎದುರಿಸುತ್ತಾನೆ.

40-50 ಸೆಕೆಂಡ್‌ಗಳ ಕಾಲ ಉಸಿರಾಟ ಸ್ಥಗಿತಗೊಂಡು ಮತ್ತೆ ಆರಂಭಗೊಳ್ಳುತ್ತದೆ. ಆದರೆ ನಿದ್ರೆಯಲ್ಲಿರುವ ವ್ಯಕ್ತಿಗೆ ಇದು ಗೊತ್ತಾಗುವುದಿಲ್ಲ. ಇಂದು ಸ್ಲೀಪ್ ಆಪ್ನಿಯಾ ಅಧಿಕ ರಕ್ತದೊತ್ತಡ,ಮಧುಮೇಹ ಮತ್ತು ಹೃದ್ರೋಗಗಳಂತೆ ಸಾಮಾನ್ಯವಾಗಿಬಿಟ್ಟಿದೆ. ಸಕಾಲದಲ್ಲಿ ಸ್ಲೀಪ್ ಆಪ್ನಿಯಾಕ್ಕೆ ಚಿಕಿತ್ಸೆ ಪಡೆಯದಿದ್ದರೆ ಇವೆಲ್ಲ ಕಾಯಿಲೆಗಳಿಗೂ ಅದು ಕಾರಣವಾಗಬಲ್ಲದು ಎನ್ನುತ್ತಾರೆ ತಜ್ಞರು.

ಸ್ಲೀಪ್ ಆಪ್ನಿಯಾ ಹೊಂದಿರುವರೆಂದು ಶಂಕಿಸಲಾದ ಸುಮಾರು ಶೇ.53ರಷ್ಟು ಜನರು ಅದಾಗಲೇ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಂದ ನರಳುತ್ತಿರುವುದನ್ನು ಇತ್ತೀಚಿನ ಕೆಲವು ಅಧ್ಯಯನಗಳು ತೋರಿಸಿವೆ. ಆದರೆ ಈ ಜನರಿಗೆ ತಾವು ಸ್ಲೀಪ್ ಆಪ್ನಿಯಾದಿಂದ ನರಳುತ್ತಿದ್ದೇವೆ ಎನ್ನುವುದು ಗೊತ್ತಿಲ್ಲ. ಹೀಗಾಗಿ ಇದಕ್ಕೆ ಉತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸೆಯ ಅಗತ್ಯವಿದೆ.

 30ರಿಂದ 40 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯೋಮಾನದ ಜನರನ್ನು ಸ್ಲೀಪ್ ಆಪ್ನಿಯಾ ಕಾಡುತ್ತದೆ ಎನ್ನುತ್ತಾರೆ ತಜ್ಞರು. ಇದರಿಂದ ನಿದ್ರೆಯಲ್ಲಿ ಉಂಟಾಗುವ ವ್ಯತ್ಯಯಗಳಿಗೆ ಶರೀರದ ಪ್ರತಿವರ್ತನೆಯು ಬೊಜ್ಜು ಮತ್ತು ಅಧಿಕ ರಕ್ತದೊತ್ತಡಗಳಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಪ್ರತಿವರ್ತನೆಯು ಇನ್ಸುಲಿನ್ ಪ್ರತಿರೋಧದಂತಿದ್ದು, ನಿಧಾನವಾಗಿ ಮಧುಮೇಹವನ್ನು ಉಂಟು ಮಾಡುತ್ತದೆ.

 ಮಕ್ಕಳಿಗೆ ನಾಲ್ಕು ವರ್ಷ ಪ್ರಾಯವಾದಾಗ ಸ್ಲೀಪ್ ಆಪ್ನಿಯಾ ಅವರನ್ನೂ ಕಾಡತೊಡಗುತ್ತದೆ. ಅದು ಬೊಜ್ಜು,ಗೊರಕೆ ಮತ್ತು ಟಾನ್ಸಿಲ್ ಅಥವಾ ಗಲಗ್ರಂಥಿಗಳ ದೊಡ್ಡದಾಗುವಿಕೆಗೆ ಕಾರಣವಾಗುತ್ತದೆ. ಇವೆಲ್ಲ ಸ್ಥಿತಿಗಳು ಮಕ್ಕಳಲ್ಲಿ ಮಧುಮೇಹವನ್ನುಂಟು ಮಾಡುವ ಅಪಾಯದ ಅಂಶಗಳಾಗಿವೆ.

ಮಧುಮೇಹವು ಹೃದಯ,ಮೂತ್ರಪಿಂಡ ಮತ್ತು ಶ್ವಾಸನಾಳ ಕಾಯಿಲೆಗಳಿಗೆ ಕಾರಣವಾಗಬಲ್ಲದು. ನಿದ್ರೆಯ ಕೊರತೆಯು ಭಾವನಾತ್ಮಕ ಅನಾರೋಗ್ಯ,ಹೆಚ್ಚಿನ ತಲೆಸುತ್ತುವಿಕೆ,ಏಕಾಗ್ರತೆಯ ನಷ್ಟ,ಒತ್ತಡ,ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ. ದೀರ್ಘಾವಧಿಯಲ್ಲಿ ಅದು ಸಾವನ್ನೂ ಉಂಟು ಮಾಡುತ್ತದೆ.

ಸ್ಲೀಪ್ ಆಪ್ನಿಯಾದಿಂದ ಬಳಲುತ್ತಿರುವವರು ಹೆಚ್ಚಿನ ಆಹಾರ ತಿನ್ನುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ನಿದ್ರೆಯ ಕೊರತೆಯು ಅವರನ್ನು ಶಕ್ತಿಯಿಂದ ವಂಚಿತರನ್ನಾಗಿಸುತ್ತದೆ. ಹೀಗಾಗಿ ಅವರು ಸಕ್ಕರೆಯನ್ನೊಳಗೊಂಡಿರುವ ಆಹಾರ ಮತ್ತು ಇತರ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಾರೆ ಮತ್ತು ಇದರಿಂದಾಗಿ ಅವರ ರಕ್ತದಲ್ಲಿಯ ಸಕ್ಕರೆಯ ಮಟ್ಟ ಗಣನೀಯವಾಗಿ ಹೆಚ್ಚುತ್ತದೆ.

ಸ್ಲೀಪ್ ಆಪ್ನ್ನಿಯಾದಿಂದ ಬಳುತ್ತಿರುವ ಹೆಚ್ಚಿನವರಿಗೆ ಅದರ ಬಗ್ಗೆ ಗೊತ್ತೇ ಇರುವುದಿಲ್ಲ ಎನ್ನುತ್ತಾರೆ ವೈದ್ಯರು. ಆದರೆ ಕಳೆದ 15 ವರ್ಷಗಳಲ್ಲಿ ಸ್ಲೀಪ್ ಆಪ್ನಿಯಾ ಪಿಡುಗು ಹೆಚ್ಚುತ್ತಿದೆ. ಧೂಮ್ರಪಾನ ಮತ್ತು ಮದ್ಯಪಾನ ವರ್ಜನೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವುದು ಸ್ಲೀಪ್ ಆಪ್ನಿಯಾವನ್ನು ತಡೆಯಲು ನೆರವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)