varthabharthiವಿಶೇಷ-ವರದಿಗಳು

ಪ್ರತಿಯೊಬ್ಬ ಗ್ರಾಹಕ ತಿಳಿದುಕೊಳ್ಳಬೇಕಾದ ಮಾಹಿತಿಯಿದು…

ನಿಮ್ಮ ಹಣ ಜಮೆಯಾಗಿರುವ ಬ್ಯಾಂಕ್ ಮುಳುಗಿದರೆ ಏನಾಗುತ್ತದೆ.....?

ವಾರ್ತಾ ಭಾರತಿ : 10 Oct, 2019

ವಿಜಯ ಮಲ್ಯ,ನೀರವ್ ಮೋದಿಯಂತಹ ಉದ್ಯಮಿಗಳು ಭಾರತೀಯ ಬ್ಯಾಂಕುಗಳಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ದೇಶದಿಂದಲೇ ಪರಾರಿಯಾಗಿದ್ದಾರೆ. ಅವರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಗೊಂಡಿದೆ,ನಿಜ. ಆದರೆ ಅದು ಪೂರ್ಣಗೊಳ್ಳುವುದು ಯಾವ ಕಾಲಕ್ಕೋ?, ಅಷ್ಟಕ್ಕೂ ಕಾನೂನು ಪ್ರಕ್ರಿಯೆ ಪೂಣಗೊಂಡರೂ ಬ್ಯಾಂಕುಗಳು ಕಳೆದುಕೊಂಡಿರುವ ಸಾವಿರಾರು ಕೋಟಿ ರೂ. ಮರಳಿ ಕೈಸೇರುತ್ತದೆ ಎನ್ನುವ ಯಾವುದೇ ಭರವಸೆಯಿಲ್ಲ.

ಹೆಚ್ಚಿನ ಜನಸಾಮಾನ್ಯರು ತಮ್ಮ ಮತ್ತು ಕುಟುಂಬದ ಭವಿಷ್ಯಕ್ಕಾಗಿ,ಮಕ್ಕಳ ಶಿಕ್ಷಣ ಮತ್ತು ಮದುವೆ ಇತ್ಯಾದಿಗಳಿಗಾಗಿ ಕಷ್ಟಪಟ್ಟು ದುಡಿದು ಉಳಿಸಿದ ಹಣವನ್ನು ಬ್ಯಾಂಕುಗಳಲ್ಲಿಡುತ್ತಾರೆ. ದೇಶವು ಸದ್ಯ ಆರ್ಥಿಕ ಹಿಂಜರಿತ ಅನುಭವಿಸುತ್ತಿದ್ದು,ಬ್ಯಾಂಕುಗಳು ಹಿನ್ನಡೆಯನ್ನು ಅನುಭವಿಸುತ್ತಿವೆ. ಇಂತಹ ಸ್ಥಿತಿಯಲ್ಲಿ ತಾವು ಹಣವಿಟ್ಟ ಬ್ಯಾಂಕುಗಳಿಗೆ ಏನಾದರೂ ಆದರೆ ತಮ್ಮ ದುಡ್ಡು ವಾಪಸ್ ಸಿಗುವುದೇ ಎಂಬ ಆತಂಕ ಜನರನ್ನು ಕಾಡುತ್ತಿದ್ದರೆ ಅದು ಸಹಜವೇ ಆಗಿದೆ.

 ಎರಡು ವರ್ಷಗಳ ಹಿಂದೆ ಸರಕಾರವು ವಿವಾದಾತ್ಮಕ ಫೈನಾನ್ಶಿಯಲ್ ರೆಸೊಲ್ಯೂಷನ್ ಆ್ಯಂಡ್ ಡಿಪಾಸಿಟ್ ಇನ್ಶೂರನ್ಸ್ (ಎಫ್‌ಆರ್‌ಡಿಐ) ಮಸೂದೆಯನ್ನು ತರಲು ಹವಣಿಕೆಯಲ್ಲಿದ್ದಾಗ ಗರಿಗೆದರಿದ್ದ ಕಳವಳ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.

 ಮಸೂದೆಯನ್ನು ಮಂಡಿಸುವಾಗ ಬ್ಯಾಂಕ್ ಠೇವಣಿದಾರರ ರಕ್ಷಣೆಯ ಕುರಿತು ಭಾರೀ ಚರ್ಚೆಗಳು ನಡೆದಿದ್ದವಾದರೂ ತೀವ್ರ ಪ್ರತಿಭಟನೆಯಿಂದಾಗಿ ಸರಕಾರವು ಮಸೂದೆಯನ್ನು ಕೈಬಿಟ್ಟ ಬಳಿಕ ಈ ಚರ್ಚೆಗಳು ನೇಪಥ್ಯಕ್ಕೆ ಸರಿದಿದ್ದವು. ಆದರೆ ಈಗ ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕಿನ ವೈಫಲ್ಯ ಮತ್ತು ಕೆಲವು ಖಾಸಗಿ ಬ್ಯಾಂಕುಗಳು ಆರ್‌ಬಿಐದ ತೀವ್ರ ನಿಗಾದಲ್ಲಿರುವುದರಿಂದಾಗಿ ತಲ್ಲಣಗೊಂಡಿರುವ ಠೇವಣಿದಾರರ ಎದೆಗಳಲ್ಲಿ ಅವಲಕ್ಕಿ ಕುಟ್ಟಲು ಆರಂಭಗೊಂಡಿದೆ.

 ಎರಡು ವರ್ಷಗಳ ಹಿಂದೆ ಮಂಡನೆ ಮಸೂದೆ ಸಂದರ್ಭದಲ್ಲಿ ವ್ಯಕ್ತಗೊಂಡಿದ್ದ ಕಳವಳ ಹೆಚ್ಚಿನ ಬ್ಯಾಂಕ್ ಗ್ರಾಹಕರಿಗೆ ಗೊತ್ತಿಲ್ಲದ ವಿಷಯಕ್ಕೆ ಸಂಬಂಧಿಸಿದೆ,ಬ್ಯಾಂಕು ಗಳು ಮುಳುಗಿದಾಗ ಠೇವಣಿದಾರರಿಗೆ ಅತ್ಯಂತ ಕಡಿಮೆ ರಕ್ಷಣೆಯನ್ನು ಒದಗಿಸುವ ದೇಶಗಳ ಪೈಕಿ ಭಾರತವೂ ಒಂದಾಗಿದೆ. ಇಲ್ಲಿ ಠೇವಣಿಗಳಿಗೆ ವಿಮಾ ರಕ್ಷಣೆ ಇದೆಯಾದರೂ ಅದು ಪ್ರತಿ ಬ್ಯಾಂಕ್ ಖಾತೆಗೆ ಕೇವಲ ಒಂದು ಲಕ್ಷ ರೂ.ಗೆ ಸೀಮಿತವಾಗಿದೆ. ಅಂದರೆ ನೀವು ಬ್ಯಾಂಕಿನಲ್ಲೊ ಕೋಟ್ಯಂತರ ರೂ.ಗಳನ್ನು ಇಟ್ಟಿದ್ದರೂ,ಬ್ಯಾಂಕು ಮುಳುಗಿದರೆ ನಿಮಗೆ ಸಿಗುವುದು ಒಂದು ಲ.ರೂ.ಮಾತ್ರ ! ಶ್ರೀಮಂತ ರಾಷ್ಟ್ರಗಳು ಮತ್ತು ಭಾರತಕ್ಕೆ ಸಮಾನ ಪ್ರಗತಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಇದು ತೀರ ಕಡಿಮೆ ಮೊತ್ತವಾಗಿದೆ.

 ಅಂಕಿಅಂಶಗಳಂತೆ ಭಾರತದ ಠೇವಣಿ ವಿಮೆ ಯೋಜನೆಯು ಶೇ.70ರಷ್ಟು ಬ್ಯಾಂಕ್ ಠೇವಣಿದಾರರನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಂಡಿದೆ. ಆದರೆ ಇಲ್ಲೊಂದು ವಿಷಯವಿದೆ. ಒಂದು ಲಕ್ಷಕ್ಕೂ ಕಡಿಮೆ ಹಣವಿರುವ ಖಾತೆಗಳ ಸಂಖ್ಯೆ ಒಟ್ಟು ಬ್ಯಾಂಕ್ ಖಾತೆಗಳ ಕೇವಲ ಶೇ.8ರಷ್ಟಿದೆ. ಶೇ.92ರಷ್ಟು ಖಾತೆಗಳು ‘ಸುರಕ್ಷಿತ ’ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಹೊಂದಿವೆ ಎನ್ನುವುದನ್ನು ಇದು ಸೂಚಿಸುತ್ತದೆ. ಇದರರ್ಥ ಬ್ಯಾಂಕೊಂದು ಮುಳುಗಿದಾಗ ಅದು ಅನಿರೀಕ್ಷಿತ ಮಹಾದುರಂತವೇ ಆಗಿರುತ್ತದೆ. ಏಕೆಂದರೆ ತಮ್ಮ ಇಡೀ ಜೀವಮಾನದ ಉಳಿತಾಯವನ್ನು,ಸಾಮಾನ್ಯವಾಗಿ ಲಕ್ಷಗಳ ಲೆಕ್ಕದಲ್ಲಿ ಬ್ಯಾಂಕ್‌ನಲ್ಲಿರಿಸಿರುವ ಠೇವಣಿದಾರನಿಗೆ ಸಿಗುವುದು ಒಂದು ಲ.ರೂ.ಮಾತ್ರ ಮತ್ತು ಉಳಿದ ಹಣಕ್ಕೆ ಆತ ಎಳ್ಳುನೀರು ಬಿಡಬೇಕಾಗುತ್ತದೆ.

ಎಫ್‌ಆರ್‌ಡಿಐ ಮಸೂದೆ ದೇಶದಲ್ಲಿ ಕಳವಳವನ್ನು ಸೃಷ್ಟಿಸಿದ್ದು ಇದೇ ಕಾರಣಕ್ಕೆ. ಅದರಲ್ಲಿರುವ ಉಪ ನಿಯಮವೊಂದು ಬ್ಯಾಂಕೊಂದು ವಿಫಲಗೊಂಡಾಗ ಅದರ ಸಮಾಪನ ವೆಚ್ಚವನ್ನು ಭಾಗಶಃ ಠೇವಣಿದಾರರು ಭರಿಸಬೇಕು ಎಂದು ಹೇಳಿತ್ತು.

ಭಾರತವೂ ಒಂದಾಗಿರುವ ಬ್ರಿಕ್ಸ್ ಗುಂಪಿನ ಇತರ ದೇಶಗಳಲ್ಲಿ ವಿಮೆ ರಕ್ಷಣೆಯನ್ನು ಹೊಂದಿರುವ ಠೇವಣಿ ಮೊತ್ತವು ಸಾಕಷ್ಟು ದೊಡ್ಡದೇ ಆಗಿದೆ. ಬ್ರೆಝಿಲ್ ಮತ್ತು ರಷ್ಯಾದಂತಹ ಬ್ರಿಕ್ಸ್ ರಾಷ್ಟ್ರಗಳಲ್ಲಿ ಠೇವಣಿ ವಿಮೆ ರಕ್ಷಣೆ ಅನುಕ್ರಮವಾಗಿ 42 ಲ. ಮತ್ತು 12 ಲ.ರೂ.ಆಗಿವೆ.

  ಭಾರತದಲ್ಲಿಯ ಠೇವಣಿ ವಿಮೆ ರಕ್ಷಣೆ ಮೊತ್ತವನ್ನು ಇಷ್ಟೇ ತಲಾದಾಯ ಹೊಂದಿರುವ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಕೆಲವು ರಾಷ್ಟ್ರಗಳಲ್ಲಿ ಯಾವುದೇ ಮಿತಿಯಿಲ್ಲದೆ ರಕ್ಷಣೆಯನ್ನು ಒದಗಿಸಲಾಗಿದೆ ಎನ್ನುತ್ತಾರೆ ಸರಕಾರಿ ಸ್ವಾಮ್ಯದ ಬ್ಯಾಂಕೊಂದರ ಹಿರಿಯ ಅಧಿಕಾರಿಯೋರ್ವರು.

ವಿಮೆಗೊಳಪಟ್ಟ ಠೇವಣಿ ಮೊತ್ತವನ್ನು ತಲಾದಾಯದ ಶೇಕಡಾವಾರು ಲೆಕ್ಕದಲ್ಲಿ ನೋಡಿದರೂ ಭಾರತದ ಪ್ರದರ್ಶನ ತೀರ ಕಳಪೆಯಾಗಿದೆ. ಭಾರತದಲ್ಲಿ ಅದು ಜುಜುಬಿ ಶೇ.0.7ರಷ್ಟಿದ್ದರೆ ಆಸ್ಟ್ರೇಲಿಯಾದಲ್ಲಿ ಶೇ.3.7,ಅಮೆರಿಕದಲ್ಲಿ ಶೇ.4.4 ಮತ್ತು ಬ್ರೆಝಿಲ್‌ನಲ್ಲಿ ಶೇ.7.4ರಷ್ಟಿದೆ.

 ಆದರೆ ಭಾರತವು ಇತರರು ಹೇಳಿಕೊಳ್ಳಲು ಸಾಧ್ಯವಿಲ್ಲದ ಒಂದು ದಾಖಲೆಯ ಬಗ್ಗೆ ಸಾಕಷ್ಟು ಕೊಚ್ಚಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಇತರ ರಾಷ್ಟ್ರಗಳ ನಡುವೆ ಗಣನೀಯ ವ್ಯತ್ಯಾಸವಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಒಂದೇ ಒಂದು ಶೆಡ್ಯೂಲ್ಡ್ ವಾಣಿಜ್ಯಿಕ ಬ್ಯಾಂಕ್ ಮುಳುಗಿಲ್ಲ. ಆರ್‌ಬಿಐ ಮತ್ತು ಸರಕಾರ ಬಲಗುಂದಿರುವ ಬ್ಯಾಂಕೊಂದು ಮುಳುಗುವ ಮುನ್ನವೇ ಅದನ್ನು ಇನ್ನೊಂದು ಶಕ್ತ ಬ್ಯಾಂಕ್ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಮಾಡುತ್ತಲೇ ಬಂದಿವೆ.

 ಇಲ್ಲಿ ಸಹಕಾರಿ ಬ್ಯಾಂಕುಗಳು ಮಾತ್ರ ವಿಫಲಗೊಂಡಿವೆ. ಡಿಪಾಸಿಟ್ ಇನ್ಶೂರನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ)ನ ಅಂಕಿಅಂಶಗಳಂತೆ ಇಂತಹ ಸುಮಾರು 350 ಬ್ಯಾಂಕುಗಳ ಪ್ರಕರಣಗಳನ್ನು ಈವರೆಗೆ ಇತ್ಯರ್ಥಗೊಳಿಸಲಾಗಿದ್ದು,ಠೇವಣಿದಾರರಿಗೆ 4,822 ಕೋ.ರೂ.ಗಳನ್ನು ಮರುಪಾವತಿಸಲಾಗಿದೆ. ಡಿಐಸಿಜಿಸಿ ದೇಶದಲ್ಲಿ ಠೇವಣಿಗಳಿಗೆ ವಿಮೆ ರಕ್ಷಣೆಯನ್ನು ಒದಗಿಸುವ ಪ್ರಾಧಿಕಾರವಾಗಿದೆ.

 ಈಗಿನ ಠೇವಣಿ ವಿಮೆ ಮಿತಿಯನ್ನು ಹೆಚ್ಚಿಸಬೇಕು,ಈ ಮಿತಿಯು ಈಗ ಪ್ರಸ್ತುತವಾಗುಳಿದಿಲ್ಲ. ಡಿಐಸಿಜಿಸಿ ವಿಮೆ ರಕ್ಷಣೆಯನ್ನು ಪರಿಷ್ಕರಿಸಬೇಕು ಮತ್ತು ಅದನ್ನು ಎರಡು ವರ್ಗಗಳಲ್ಲಿ ವಿಭಜಿಸಬೇಕು. ಮೊದಲನೆಯದು,ಉಳಿತಾಯ ಖಾತೆಗೆ ಕನಿಷ್ಠ ಒಂದು ಲಕ್ಷ ರೂ.ನೊಂದಿಗೆ ಇಂತಹ ಒಟ್ಟು ಖಾತೆಗಳ ಶೇ.90ರಷ್ಟು ಮೊತ್ತ ಹಾಗೂ ಕನಿಷ್ಠ ಎರಡು ಲ.ರೂ.ಗಳೊಂದಿಗೆ ಒಟ್ಟು ನಿರಖು ಠೇವಣಿಗಳ ಶೇ.70ರಷ್ಟು ಮೊತ್ತವನ್ನು ವಿಮೆ ಯೋಜನೆಗೆ ಒಳಪಡಿಸಬೇಕು ಎನ್ನುತ್ತಾರೆ ಬ್ಯಾಂಕಿಂಗ್ ತಜ್ಞರು.

 ಠೇವಣಿದಾರರು ತಮ್ಮ ಸಂಪೂರ್ಣ ಹಣಕ್ಕೆ ವಿಮೆಯನ್ನು ಏಕೆ ಪಡೆಯಬಾರದು ಎನ್ನುವುದು ಹಲವರ ಪ್ರಶ್ನೆಯಾಗಿದೆ. ಎಲ್‌ಐಸಿಯ ಗ್ರಾಹಕರಿಗೆ ಪೂರ್ಣ ಹಣದ ಭರವಸೆ ನೀಡುವಂತೆ ಸರಕಾರವು ಬ್ಯಾಂಕ್ ಠೇವಣಿದಾರರಿಗೂ ಭರವಸೆ ನೀಡಬೇಕು ಎನ್ನುತ್ತಾರೆ ಅವರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)