varthabharthi


ವೈವಿಧ್ಯ

ಮಾತು ಕತೆ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಗೆ ತರುವ ಕಾಳಜಿ ಸಿದ್ದರಾಮಯ್ಯನವರಿಗೆ ಇರಬೇಕಿತ್ತು -ಸಿ.ಎಸ್.ದ್ವಾರಕಾನಾಥ್

ವಾರ್ತಾ ಭಾರತಿ : 12 Oct, 2019
ಬಸವರಾಜು ಮೇಗಲಕೇರಿ

2015ರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಆರಂಭಿಸಿತು. ಈ ಸಮೀಕ್ಷೆ ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಕುರಿತು ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ಔದ್ಯೋಗಿಕ-ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಅಂಶಗಳ ಮೇಲೆ ನಿಖರವಾದ ಮಾಹಿತಿ ಸಂಗ್ರಹಿಸುವ ಮಹತ್ವದ ಕೆಲಸವಾಗಿತ್ತು. ಇದಕ್ಕಾಗಿ ಹಿಂದುಳಿದ ವರ್ಗಗಳ ಆಯೋಗ ಸಕಲ ಸಿದ್ಧತೆಯನ್ನು ಮಾಡಿಕೊಂಡಿತ್ತು. ರಾಜ್ಯದ ಸುಮಾರು 6.50 ಕೋಟಿ ಜನಸಂಖ್ಯೆಯಲ್ಲಿ ಒಟ್ಟು 1.31 ಕೋಟಿ ಕುಟುಂಬಗಳ ಮಾಹಿತಿ ಸಂಗ್ರಹಿಸಲು 1.33 ಲಕ್ಷ ಸಿಬ್ಬಂದಿಯನ್ನು ಗಣತಿದಾರರನ್ನಾಗಿ ನೇಮಿಸಿಕೊಂಡಿತ್ತು. ರಾಜ್ಯ ಸರಕಾರ ಉದಾರವಾಗಿಯೇ 175 ಕೋಟಿ ರೂ.ಯನ್ನು ಆಯೋಗಕ್ಕೆ ನೀಡಿ, ಇಂತಿಷ್ಟು ಅವಧಿಯೊಳಗೆ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚಿಸಿತ್ತು. ಕೆಲಸವಾಗಿ ಇಲ್ಲಿಗೆ ನಾಲ್ಕು ವರ್ಷಗಳು ಕಳೆದಿವೆ. ಮೂರು ಸರಕಾರಗಳು ಬದಲಾಗಿವೆ. ಆಯೋಗದ ಅಧ್ಯಕ್ಷರ ಅವಧಿಯೂ ಮುಗಿದು, ಹೊಸ ಅಧ್ಯಕ್ಷರನ್ನು ನೇಮಿಸದೆ ಖಾಲಿ ಇದೆ. ಸಮೀಕ್ಷೆಯ ವರದಿ ಮಾತ್ರ ಸಾರ್ವಜನಿಕರ ಅವಗಾಹನೆಗೆ ಸಿಕ್ಕಿಲ್ಲ. ವರದಿಯನ್ನು ಸರಕಾರ ಸ್ವೀಕರಿಸಿದ ಸುದ್ದಿಯೂ ಇಲ್ಲ. ಈತನ್ಮಧ್ಯೆ ಬಿ.ಎಸ್.ಯಡಿಯೂರಪ್ಪನೇತೃತ್ವದ ಸರಕಾರದ ಭಾಗವಾದ ಸಚಿವರು, ‘‘ರಾಜಕೀಯ ಪ್ರೇರಿತ ವರದಿ, ಒಪ್ಪಿಕೊಳ್ಳಲು ಸಾಧ್ಯವಿಲ್ಲ’’ ಎಂದು ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಎಲ್ಲ ಗೊಂದಲಗಳ ನಡುವೆಯೇ ವಾರ್ತಾಭಾರತಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್‌ರನ್ನು ಭೇಟಿ ಮಾಡಿ, ಮಹತ್ವದ ಮಾಹಿತಿ ಸಂಗ್ರಹ, ವರದಿ ಮಂಡನೆ, ಜಾರಿಗೆ ತರುವಲ್ಲಿ ರಾಜಕೀಯ ನಾಯಕರ ಪರ-ವಿರೋಧ ನಿಲುವು, ಸರಕಾರಗಳ ಸಹಕಾರದ ಸುತ್ತ ಮಾತನಾಡಿದ್ದು ಇಲ್ಲಿದೆ.

 ವಾ.ಭಾ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಗತ್ಯ ಎನಿಸಿದ್ದು, ಶುರುವಾಗಿದ್ದು ಯಾವಾಗ?

ದ್ವಾರಕಾನಾಥ್: ಅದು 2005-06ರಲ್ಲಿ, ಮುಖ್ಯಮಂತ್ರಿ ಧರಂಸಿಂಗ್ ಮತ್ತು ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈತ್ರಿ ಸರಕಾರವಿದ್ದಾಗ, ಮೊದಲ ಬಾರಿಗೆ ಇಂತಹದ್ದೊಂದು ಕಾರ್ಯಕ್ಕೆ ಕೈಹಾಕಲಾಯಿತು. ಇದಕ್ಕೆ ಪೂರಕವಾಗಿ ಅಂದಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸಿದ್ದಗಂಗಯ್ಯನವರು ಮುಂದಡಿ ಇಟ್ಟರು. ಸಭೆ ನಡೆಸಿ, ಕೇಂದ್ರಕ್ಕೆ ನಿಯೋಗ ತೆರಳಿ, ಕೈಗೊಳ್ಳಲಿರುವ ಜಾತಿವಾರು ಸಮೀಕ್ಷೆ ಕುರಿತು ವಿವರಿಸಿದರು. ಕೇಂದ್ರ ಸರಕಾರದ ಉನ್ನತ ಅಧಿಕಾರಿಗಳು, ‘ಇಂತಹ ಕಾರ್ಯದಲ್ಲಿ ಕರ್ನಾಟಕ ಸದಾ ಮುಂದು, ಅದಕ್ಕೆ ಮಿಲ್ಲರ್, ಹಾವನೂರು ವರದಿಗಳೇ ಸಾಕ್ಷಿ. ಉತ್ತಮ ಕೆಲಸ ಮಾಡಿ’ ಎಂದು ಹೇಳಿದ್ದಲ್ಲದೆ, 21.5 ಕೋಟಿ ರೂ. ಕೊಟ್ಟು ಪ್ರೋತ್ಸಾಹಿಸಿದರು. ಈ ಮೊತ್ತಕ್ಕೆ ರಾಜ್ಯ ಸರಕಾರ ಕೂಡ 1 ಕೋಟಿ ರೂ. ನೀಡಿ ಸಹಕರಿಸಿತು. ಅಷ್ಟರಲ್ಲಿ ಸಿದ್ದಗಂಗಯ್ಯನವರ ಅಧಿಕಾರಾವಧಿ ಮುಗಿದಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಹೊಸ ಸರಕಾರವೂ ರಚನೆಯಾಗಿತ್ತು. ಹೊಸ ಸರಕಾರದಲ್ಲಿ ನಾನು ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷನಾಗಿ ನೇಮಕಗೊಂಡೆ.

 ವಾ.ಭಾ: ಸಮೀಕ್ಷೆಗೆ ಸಂಬಂಧಿಸಿದಂತೆ ನಿಮ್ಮ ಅವಧಿಯಲ್ಲಾದ ಕೆಲಸಗಳೇನು?

ದ್ವಾರಕಾನಾಥ್: ನಾನು ಅಧಿಕಾರಕ್ಕೇರುತ್ತಿದ್ದಂತೆ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳತೊಡಗಿದೆ. ನನಗೆ ಈ ಸಮೀಕ್ಷೆಯ ಮಹತ್ವ ತಿಳಿದಿತ್ತು. ಏಕೆಂದರೆ, 1931ರಲ್ಲಿ ನಡೆದ ಜಾತಿಗಣತಿಯ ನಂತರ, ದೇಶದಲ್ಲಿ ಮತ್ತೊಂದು ಜಾತಿಗಣತಿ ನಡೆದಿರಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ, ಹಿಂದುಳಿದ ವರ್ಗಗಳಿಗೆ ಸಂವಿಧಾನದತ್ತವಾಗಿ ಸಿಗಬೇಕಾದ ಸೌಲಭ್ಯ, ಸವಲತ್ತು ಸಿಗದೆ, ಅನ್ಯಾಯವಾಗಿತ್ತು. ಈ ನಿಟ್ಟಿನಲ್ಲಿ ನಾನು ನನ್ನ ಸದಸ್ಯರೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಸಮೀಕ್ಷೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳತೊಡಗಿದೆ. ಅದೇ ಸಮಯಕ್ಕೆ ಸರಿಯಾಗಿ ಎಸ್ಸಿ ಎಸ್ಟಿಗಳ ಒಳಮೀಸಲಾತಿಗೆ ಸಂಬಂಧಿಸಿದ ನ್ಯಾ.ಎ.ಜೆ.ಸದಾಶಿವರ ಆಯೋಗವು, ಆ ನಿಟ್ಟಿನಲ್ಲಿ ಕಾರ್ಯಮಗ್ನವಾಗಿತ್ತು. ಕ್ಷೇತ್ರಕಾರ್ಯ ಶುರುವಾಗಿತ್ತು. ನಮ್ಮ ಹಿಂದುಳಿದ ಆಯೋಗ ಮತ್ತು ಸದಾಶಿವ ಆಯೋಗ ಸೇರಿ ಜಂಟಿ ಸಭೆಗಳನ್ನು ಏರ್ಪಡಿಸಿ, 2 ವರ್ಷಗಳ ಕಾಲ ಸಮೀಕ್ಷೆಗೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲಾಯಿತು. ಹಾಗೆಯೇ ನಾವು ಮಾಡಿಕೊಂಡ ಸಿದ್ಧತೆಗಳನ್ನು ಕೇಂದ್ರದ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಯಿತು. ಅವರು ಇದು ಇಂಡಿಯಾದಲ್ಲಿಯೇ ಮೊದಲು ಎಂದು ಪ್ರೋತ್ಸಾಹಿಸಿದರು. ಆದರೆ ನಮ್ಮ ಆಯೋಗಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜ್ಯ ಸರಕಾರದ ಸಹಕಾರ ಸಿಗಲಿಲ್ಲ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ‘ಇದು ನಿಮ್ಮ ಕಾಲದ ಮಹತ್ವದ ಯೋಜನೆ, ಅಸೆಂಬ್ಲಿಯಲ್ಲಿ ವಿಷಯ ಪ್ರಸ್ತಾಪಿಸಿ, ಸಮೀಕ್ಷೆಗೆ ಚಾಲು ಸಿಗುತ್ತದೆ’ ಎಂದು ಮನವಿ ಮಾಡಿಕೊಂಡೆ. ಆದರೆ ಅವರು ಉತ್ಸಾಹ ತೋರಲಿಲ್ಲ. ಜೊತೆಗೆ ನನ್ನ ಅಧಿಕಾರಾವಧಿಯೂ ಮುಗಿದಿತ್ತು. ನಂತರ ಆಯೋಗದ ಅಧ್ಯಕ್ಷರಾದ ಶಂಕರಪ್ಪರ ಅವಧಿಯಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವ ಚಟುವಟಿಕೆಗಳೂ ನಡೆಯಲಿಲ್ಲ.

 ವಾ.ಭಾ: ಮತ್ತೆ ಸಮೀಕ್ಷೆಗೆ ಚಾಲನೆ ದೊರೆತದ್ದು ಯಾವಾಗ, ಏನೇನು ನಡೆಯಿತು?

ದ್ವಾರಕಾನಾಥ್: 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಹಿಂದುಳಿದ ವರ್ಗಗಳ ನಾಯಕರೆನಿಸಿಕೊಂಡ ಸಿದ್ದರಾಮಯ್ಯನವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ತಮ್ಮ ಸರಕಾರದ ಆದ್ಯತೆಗಳಲ್ಲೊಂದು ಎಂದು 2015ರಲ್ಲಿ ಸಮೀಕ್ಷೆಗೆ ಮುಂದಾದರು. ಆಗ ಅವರದೇ ಜಾತಿಯ ಕಾಂತರಾಜು ಎಂಬವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿಸಿದರು. ಸಮೀಕ್ಷೆಗೆ ಬೇಕಾದ 175 ಕೋಟಿ ಹಣವನ್ನು ಬಿಡುಗಡೆ ಮಾಡಿದರು. ದೇಶಾದ್ಯಂತ ಸುದ್ದಿ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿ, ಸಾಮಾಜಿಕ ನ್ಯಾಯದ ಹರಿಕಾರ ಇವರೊಬ್ಬರೇ ಎಂದು ಪ್ರಚಾರ ಪಡೆದರು.

ಮತ್ತೊಂದು ಕಡೆ ಆಯೋಗದ ಅಧ್ಯಕ್ಷರಾದ ಕಾಂತರಾಜು, ರಾಜ್ಯದ 6.50 ಕೋಟಿ ಜನರ ಪೈಕಿ 1.31 ಕೋಟಿ ಕುಟುಂಬಗಳ ಸಮೀಕ್ಷೆಗೆ, 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು, 10 ಮಹಾನಗರಪಾಲಿಕೆ ಆಯುಕ್ತರು, 76 ಉಪವಿಭಾಗಾಧಿಕಾರಿಗಳು, 176 ತಹಶೀಲ್ದಾರರು, 8 ವಲಯಗಳ ಜಂಟಿ ಆಯುಕ್ತರು, 551 ನಗರಸಭೆ, ಪುರಸಭೆ, ಪಪಂಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ 1.33 ಲಕ್ಷ ಗಣತಿದಾರರನ್ನು ನಿಯೋಜಿಸಿ, 20 ದಿನಗಳ ಗಡುವು ನೀಡಿ ವರದಿ ತಯಾರಿಸುವಲ್ಲಿ ಮಗ್ನರಾದರು. ರಾಜ್ಯದ ಜನತೆ ಸ್ಪಂದಿಸಿದರು. ಸಮೀಕ್ಷೆಯೂ ಮುಗಿಯಿತು.

 ವಾ.ಭಾ: ಆದರೆ ವರದಿ ಬಿಡುಗಡೆಯಾಗಲಿಲ್ಲ, ಸಾರ್ವಜನಿಕರ ಅವಗಾಹನೆಗೂ ಒಳಗಾಗಲಿಲ್ಲವಲ್ಲ?

ದ್ವಾರಕಾನಾಥ್: ಸಾಮಾಜಿಕ ನ್ಯಾಯದ ಹರಿಕಾರರೆಂದು ಹೆಸರು ಪಡೆದಿದ್ದ ಸಿದ್ದರಾಮಯ್ಯನವರೇ, ಅವರ ಅಧಿಕಾರಾವಧಿಯಲ್ಲಿ ವರದಿಯನ್ನು ಸ್ವೀಕರಿಸಿ, ಸಾರ್ವಜನಿಕರ ಅವಗಾಹನೆಗೆ, ಚರ್ಚೆಗೆ ಅವಕಾಶ ಮಾಡಿಕೊಡಬಹುದಿತ್ತು. ಆದರೆ ಆಯೋಗದಿಂದ ವರದಿಯ ಬಗ್ಗೆ ವಿಚಾರಿಸಲೇ ಇಲ್ಲ. ಬದಲಿಗೆ ಆಯೋಗದ ಅಧ್ಯಕ್ಷರ ಅವಧಿ ಮುಗಿದರೂ, 6 ತಿಂಗಳುಗಳ ಕಾಲ ಮುಂದುವರಿಸಿದರು. ಅದೂ ಸಾಲದೆಂದು ಮುಂದಿನ ಆದೇಶದವರೆಗೂ ಎಂದು ಮತ್ತೆ ಮುಂದುವರಿಸಿದರು. ಅಹಿಂದ ಪರ, ಹಿಂದುಳಿದವರ ಪರ, ಶೋಷಿತ ಸಮುದಾಯಗಳ ಪರ ಎಂದು ಹೆಸರು ಪಡೆದಿದ್ದ ಕಾಂಗ್ರೆಸ್ ಸರಕಾರ, ತನ್ನ ಅವಧಿಯುದ್ದಕ್ಕೂ ವರದಿ ಬಗ್ಗೆ ವಿಚಾರಿಸಲೂ ಇಲ್ಲ, ಸ್ವೀಕರಿಸಲೂ ಇಲ್ಲ. ಆಯೋಗವೂ ಕೂಡ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿಗೆ ನೀಡುವ ಬಗ್ಗೆ ಮನಸ್ಸು ಮಾಡಲಿಲ್ಲ. ಇದು ಆಯೋಗ ಮತ್ತು ಸರಕಾರದ ಬಹುದೊಡ್ಡ ಲೋಪ.

 ವಾ.ಭಾ: ಸಮೀಕ್ಷೆಯ ವರದಿ ಲೀಕ್ ಆಗಿ ಸುದ್ದಿಯಾಯಿತಲ್ಲವೇ?

ದ್ವಾರಕಾನಾಥ್: ಕೆಲ ಸುದ್ದಿ ಮಾಧ್ಯಮಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಲೀಕ್ ಆಗಿ ಸುದ್ದಿಯಾಗಿದ್ದು ನಿಜ. ಇದು ಜಾತಿ ಜನಗಣತಿ ವರದಿಯಲ್ಲಿರುವ ಅಂಶವೇ, ಅಲ್ಲವೇ ಎನ್ನುವುದನ್ನು ಆಯೋಗ ಸ್ಪಷ್ಟೀಕರಣ ನೀಡಬೇಕಾಗಿತ್ತು. ಜವಾಬ್ದಾರಿಯತ ಸ್ಥಾನದಲ್ಲಿದ್ದ ಆಯೋಗದ ಅಧ್ಯಕ್ಷರು ಈ ಬಗ್ಗೆ ಸಾರ್ವಜನಿಕವಾಗಿ ಸಮಜಾಯಿಷಿ ನೀಡಬೇಕಿತ್ತು. ನಿರ್ಲಕ್ಷಿಸಿದರು. ಕೊನೆಗೆ ಏನಾಯಿತು, ಸುದ್ದಿ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನೇ ಸತ್ಯವೆಂದು ಭಾವಿಸಿ, ಭ್ರಮಿಸಿ, ವರದಿಯ ಪ್ರಕಾರ ಪರಿಶಿಷ್ಟ ಜಾತಿಯ ಜನಸಂಖ್ಯೆ ಜಾಸ್ತಿ ಇದೆ, ಮುಸ್ಲಿಂ ಸಮುದಾಯ ಅದಕ್ಕಿಂತಲೂ ಹೆಚ್ಚಾಗಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡಲು, ಸಮೀಕ್ಷೆ ಬಗ್ಗೆ ಇಲ್ಲಸಲ್ಲದ ಗುಮಾನಿ ಹುಟ್ಟಲು ಕಾರಣವಾಯಿತು. ಇದು ಸಹಜವಾಗಿಯೇ, ಬಲಿಷ್ಠ ಜಾತಿಗಳಲ್ಲಿ ಅನುಮಾನ ಮತ್ತು ಅಸಮಾಧಾನಗಳಿಗೆ ಎಡೆಮಾಡಿಕೊಟ್ಟಿತು.

 ವಾ.ಭಾ: ಇಷ್ಟೆಲ್ಲ ಅವಾಂತರಗಳಾದ ಮೇಲೆ ಆಯೋಗದ ಅಧ್ಯಕ್ಷರು ತರಾತುರಿಯಲ್ಲಿ ವರದಿ ಒಪ್ಪಿಸಿದ್ದೇಕೆ?

ದ್ವಾರಕಾನಾಥ್: ಹಿಂದುಳಿದ ಆಯೋಗದ ಅಧ್ಯಕ್ಷರು ಸುಮಾರು ನಾಲ್ಕೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಸಮೀಕ್ಷೆ ಶುರುಮಾಡಿದ್ದ ಸಿದ್ದರಾಮಯ್ಯನವರ ಕಾಲದಲ್ಲಿಯೇ ವರದಿ ಸಿದ್ಧ ಮಾಡಿ, ಸರಕಾರಕ್ಕೆ ಒಪ್ಪಿಸಬಹುದಿತ್ತು. ನಂತರ ಬಂದ ಮೈತ್ರಿ ಸರಕಾರದಲ್ಲಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಒಪ್ಪಿಸಬಹುದಿತ್ತು. ಆಗಲೂ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳದೆ ಕಾಲಹರಣ ಮಾಡಿದ ಆಯೋಗದ ಅಧ್ಯಕ್ಷರನ್ನು, ಬಿಜೆಪಿಯ ಬಿ.ಎಸ್.ಯಡಿಯೂರಪ್ಪನವರ ಸರಕಾರ ನೋಟಿಸ್ ನೀಡಿ, ಕೆಳಗಿಳಿಸಿತು. ಆಗ ಆಯೋಗದ ಅಧ್ಯಕ್ಷರು ಆತುರಾತುರವಾಗಿ, ಮೆಂಬರ್ ಸೆಕ್ರಟರಿಯವರ ಕೈಗೆ ವರದಿ ಒಪ್ಪಿಸಿ, ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದರು.

ಯಾವುದೇ ಆಯೋಗವಾದರೂ, ವರದಿ ಒಪ್ಪಿಸುವಾಗ ಒಂದು ಪರಿಪಾಠವಿದೆ. ಮೊದಲು ಮುಖ್ಯಮಂತ್ರಿಯವರ ಭೇಟಿಗೆ ದಿನಾಂಕ ಗೊತ್ತುಮಾಡಿಕೊಳ್ಳುವುದು, ನಂತರ ಅದನ್ನು ಸುದ್ದಿಮಾಧ್ಯಮಗಳಿಗೆ ತಿಳಿಸಿ, ಅವರೊಂದಿಗೆ ಹೋಗಿ, ವರದಿಯನ್ನು ಮುಖ್ಯಮಂತ್ರಿಗಳ ಕೈಗೆ ಒಪ್ಪಿಸುವುದು. ಅದನ್ನು ಅವರು ಸಾರ್ವಜನಿಕರ ಅವಗಾಹನೆಗೆ ತರುವುದು, ಚರ್ಚೆಗೆ ಅವಕಾಶ ಮಾಡಿಕೊಡುವುದು. ನಂತರ ಕ್ರಮ ಕೈಗೊಳ್ಳುವುದು, ಬಿಡುವುದು, ಆಯಾಯ ಸರಕಾರಗಳಿಗೆ ಬಿಟ್ಟ ವಿಚಾರ. ಅದರಲ್ಲೂ ಇದು ಶೋಷಿತ ಸಮುದಾಯಗಳ ನಿಜವಾದ ಸಂಖ್ಯೆಯನ್ನು, ಅವುಗಳ ಸ್ಥಿತಿಗತಿಯನ್ನು ತಿಳಿಯಲೋಸುಗ ಮಾಡಿದ ಸಮೀಕ್ಷೆ, ವಿಶೇಷವಾದ ವರದಿ. ಇದನ್ನು ಸರಕಾರಕ್ಕೆ ಒಪ್ಪಿಸುವಾಗ ಏಕೆ ಈ ಹಿಂದಿನ ಪರಿಪಾಠವನ್ನು ಪಾಲಿಸಲಿಲ್ಲ ಎನ್ನುವುದನ್ನು ಅಧ್ಯಕ್ಷರು ನಾಡಿನ ಜನತೆಗೆ ತಿಳಿಸಲೇಬೇಕು. ಏಕೆಂದರೆ 175 ಕೋಟಿ ಜನರ ಹಣ. ಅದಕ್ಕಾಗಿ ವಿನಿಯೋಗವಾಗಿರುವ ಸರಕಾರಿ ನೌಕರರ ಶ್ರಮ ಮತ್ತು ಸಮಯ ಅತ್ಯಮೂಲ್ಯವಾದುದು.

 ವಾ.ಭಾ: ಈ ಸಮೀಕ್ಷೆಯಲ್ಲಿ ವಿವಿಧ ಸಮುದಾಯಗಳ ಭವಿಷ್ಯ ಅಡಗಿದೆ ಎಂದವರು, ಈಗೇಕೆ ಸುಮ್ಮನಿದ್ದಾರೆ?

ದ್ವಾರಕಾನಾಥ್: ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ- ಇವರಾರಿಗೂ ಈ ವರದಿ ಬೇಕಾಗಿಲ್ಲ. ಅದಕ್ಕಿಂತ ಹೆಚ್ಚಾಗಿ ಇದರಲ್ಲೇನಿದೆ ಎಂಬುದನ್ನು ತಿಳಿಯುವ ವ್ಯವಧಾನವೂ ಇಲ್ಲ. ಪ್ರಜ್ಞಾವಂತ ನಾಗರಿಕರು ಈಗ ಎಚ್ಚೆತ್ತುಕೊಳ್ಳಬೇಕಾಗಿದೆ. ಮಾಧ್ಯಮಗಳು ಪ್ರಶ್ನಿಸಬೇಕಾಗಿದೆ. ಇಲ್ಲದಿದ್ದರೆ, ಎಲ್ಲ ವರದಿಗಳಂತೆ ಇದು ಕೂಡ ಕಸದ ಬುಟ್ಟಿ ಸೇರಲಿದೆ.

 ವಾ.ಭಾ: ಅಷ್ಟಕ್ಕೂ ಈ ವರದಿಯಿಂದ ಯಾವ್ಯಾವ ಸಮುದಾಯಕ್ಕೆ ಒಳಿತಾಗಬಹುದು?

ದ್ವಾರಕಾನಾಥ್: ಇದು ಹೇಳಿಕೇಳಿ ಜಾತಿ ಜನಗಣತಿ. ಆದರೆ ಸರಕಾರ ಇದನ್ನು ಹಾಗೆ ಹೇಳಲಾಗುವುದಿಲ್ಲ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎನ್ನುತ್ತದೆ. 1931ರಲ್ಲಿ ನಡೆದ ಜಾತಿಗಣತಿ ಬಿಟ್ಟರೆ ಇಲ್ಲಿಯವರೆಗೆ ಯಾವ ರಾಜ್ಯದಲ್ಲೂ ಜಾತಿ ಜನಗಣತಿ ನಡೆದಿಲ್ಲ. ಏಕೆಂದರೆ ಜಾತಿಗಳ ಸಂಖ್ಯಾವಾರು ಮಾಹಿತಿ ಸಂಗ್ರಹಿಸುವುದು, ಪ್ರಕಟಿಸುವುದು, ಅವುಗಳಿಗೆ ಸಿಗಬೇಕಾದ ಸರಕಾರಿ ಸವಲತ್ತು, ಸೌಲಭ್ಯಗಳನ್ನು ನೀಡುವುದು ಹುತ್ತಕ್ಕೆ ಕೈಹಾಕಿದಂತೆ. ಅದು ಯಾರಿಗೂ ಬೇಕಾಗಿಲ್ಲ.

ನಾನು ಹಿಂದುಳಿದ ಆಯೋಗದ ಅಧ್ಯಕ್ಷನಾಗಿದ್ದವನು. ರಾಜ್ಯದ ಸಣ್ಣಪುಟ್ಟ ಸಮುದಾಯಗಳ ಮತ್ತು ಜಾತಿಗಳ ಸ್ಥಿತಿಗತಿಯನ್ನು ಬಹಳ ಹತ್ತಿರದಿಂದ ಬಲ್ಲವನು. ಅವುಗಳಿಗೆ ಆಗುತ್ತಿರುವ ಅನ್ಯಾಯವನ್ನು ಖುದ್ದು ಕಂಡವನು. ನಿಮಗೆ ಒಂದು ಉದಾಹರಣೆ ಕೊಡುತ್ತೇನೆ, ಈಗ ಪ್ರವರ್ಗ 1ರಲ್ಲಿ ದನಗಾರ್, ಗೌಳಿ ಎಂಬ ಸಮುದಾಯಗಳಿವೆ. ಇವುಗಳಿಗೆ ಶೇ. 4 ಮೀಸಲಾತಿ ಇದೆ. 2ಎನಲ್ಲಿ ಕುರುಬ, ಕುರುಂಬಿ, ಹಾಲಮತಸ್ಥ ಎಂಬ ಜಾತಿಗಳಿಗೆ, ಇವುಗಳಿಗೆ ಶೇ. 15 ಮೀಸಲಾತಿ ಇದೆ. 3ಬಿನಲ್ಲಿ ವೀರಶೈವ ಕುರುಬ ಜಾತಿ ಇದೆ. ಇದಕ್ಕೆ ಶೇ. 5 ಮೀಸಲಾತಿ ಇದೆ. ಇದಲ್ಲದೆ ಪರಿಶಿಷ್ಟ ಪಂಗಡದಲ್ಲಿ ಕಾಡುಕುರುಬ, ಜೇನುಕುರುಬ, ಗೊಂಡ-ರಾಜಗೊಂಡ ಅಂತ ಇವೆ. ಇವುಗಳಿಗೆ ಶೇ. 3 ಮೀಸಲಾತಿ ಇದೆ. ಇವೆಲ್ಲವೂ ನೇರವಾಗಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 6.5 ಇರುವ ಕುರುಬ ಜನಾಂಗಕ್ಕೆ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಸೇರುವ ಜಾತಿಗಳು. ಇವುಗಳಿಗೆ ಸಿಗುತ್ತಿರುವ ಒಟ್ಟು ಮೀಸಲಾತಿ ಶೇ. 27 ಎಂದು ಕಾಂತರಾಜು ಆಯೋಗದಲ್ಲಿದ್ದ ಸದಸ್ಯರೇ ತಿಳಿಸಿದರು. ಈಗ ಜಾತಿ ಜನಗಣತಿ ವರದಿ ಹೊರಬಿದ್ದರೆ, ಯಾವ್ಯಾವ ಜಾತಿ ಎಷ್ಟೆಷ್ಟು ಜನಸಂಖ್ಯೆ ಇದೆ, ಯಾರಿಗೆಲ್ಲ ಅನ್ಯಾಯವಾಗಿದೆ ಎಂಬುದೆಲ್ಲ ಬಹಿರಂಗವಾಗುತ್ತದೆ. ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿಯ ಲಾಭ ಪಡೆಯುತ್ತಿರುವುದು ಜಗಜ್ಜಾಹೀರಾಗುತ್ತದೆ. ಹೀಗಾಗಿ ಈ ಸಮೀಕ್ಷೆ ವರದಿ ಯಾರಿಗೂ ಬೇಕಾಗಿಲ್ಲ.

ಸಾಮಾಜಿಕ ನ್ಯಾಯದ ಹರಿಕಾರರೆಂದು ಹೆಸರು ಪಡೆದಿದ್ದ ಸಿದ್ದರಾಮಯ್ಯನವರೇ, ಅವರ ಅಧಿಕಾರಾವಧಿಯಲ್ಲಿ ವರದಿಯನ್ನು ಸ್ವೀಕರಿಸಿ, ಸಾರ್ವಜನಿಕರ ಅವಗಾಹನೆಗೆ, ಚರ್ಚೆಗೆ ಅವಕಾಶ ಮಾಡಿಕೊಡಬಹುದಿತ್ತು. ಆದರೆ ಆಯೋಗದಿಂದ ವರದಿಯ ಬಗ್ಗೆ ವಿಚಾರಿಸಲೇ ಇಲ್ಲ. ಬದಲಿಗೆ ಆಯೋಗದ ಅಧ್ಯಕ್ಷರ ಅವಧಿ ಮುಗಿದರೂ, 6 ತಿಂಗಳುಗಳ ಕಾಲ ಮುಂದುವರಿಸಿದರು. ಅದೂ ಸಾಲದೆಂದು ಮುಂದಿನ ಆದೇಶದವರೆಗೂ ಎಂದು ಮತ್ತೆ ಮುಂದುವರಿಸಿದರು. ಅಹಿಂದ ಪರ, ಹಿಂದುಳಿದವರ ಪರ, ಶೋಷಿತ ಸಮುದಾಯಗಳ ಪರ ಎಂದು ಹೆಸರು ಪಡೆದಿದ್ದ ಕಾಂಗ್ರೆಸ್ ಸರಕಾರ, ತನ್ನ ಅವಧಿಯುದ್ದಕ್ಕೂ ವರದಿ ಬಗ್ಗೆ ವಿಚಾರಿಸಲೂ ಇಲ್ಲ, ಸ್ವೀಕರಿಸಲೂ ಇಲ್ಲ. ಆಯೋಗವೂ ಕೂಡ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿಗೆ ನೀಡುವ ಬಗ್ಗೆ ಮನಸ್ಸು ಮಾಡಲಿಲ್ಲ. ಇದು ಆಯೋಗ ಮತ್ತು ಸರಕಾರದ ಬಹುದೊಡ್ಡ ಲೋಪ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)