varthabharthi

ನಿಮ್ಮ ಅಂಕಣ

ಈ ಪದವಿಗೆ ನ್ಯಾಯ ಸಿಗುವುದೇ?

ವಾರ್ತಾ ಭಾರತಿ : 12 Oct, 2019
-ಲಕ್ಷ್ಮೀಕಾಂತ ಗೋಡಬೋಲೆ, ವಾಡಿ (ಜಂ)

ಮಾನ್ಯರೇ,

ಹಿಂದಿನ ಸಮ್ಮಿಶ್ರ ಸರಕಾರವಿದ್ದಾಗ ಉನ್ನತ ಶಿಕ್ಷಣ ಸಚಿವರು ಸರಕಾರಿ ಪದವಿ ಕಾಲೇಜುಗಳಲ್ಲಿ ಹೊಸದಾಗಿ 3,800 ಬೋಧಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವುದರ ಬಗ್ಗೆ ಘೋಷಿಸಿದ್ದರು, ಈಗಿನ ಸರಕಾರವೂ ಈ ಪ್ರಕ್ರಿಯೆಯನ್ನು ಮುಂದುವರಿಸುವುದೆಂಬ ನಿರೀಕ್ಷೆಯಲ್ಲಿ ಉದ್ಯೋಗಾಕಾಂಕ್ಷಿಗಳು ಕಾಯುತ್ತಿರುವರು. ಸಮಾಜ ವಿಜ್ಞಾನಗಳಲ್ಲಿನ ಇತರ ವಿಷಯಗಳಂತೆ ಸಮಾಜಕಾರ್ಯ (ಸೋಶಿಯಲ್ ವರ್ಕ್) ವಿಷಯವೂ ತನ್ನದೇ ಆದ ಮಹತ್ವ ಹೊಂದಿದೆ. ಸಮಾಜಕಾರ್ಯ ವಿಷಯದಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿ ಪಡೆದವರು ಸರಕಾರೇತರ ಹಾಗೂ ಸರಕಾರಿ ಇಲಾಖೆಗಳಲ್ಲಿ ಉದ್ಯೋಗ ಪಡೆಯುತ್ತಿದ್ದರೂ ಮುಖ್ಯವಾಗಿ 412 ಸರಕಾರಿ ಪದವಿ ಕಾಲೇಜುಗಳಲ್ಲಿ (ಕಲ್ಯಾಣ ಕರ್ನಾಟಕ ಭಾಗವೂ ಸೇರಿ) ಈ ವಿಷಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭಿಸಿಲ್ಲ.

ಸಮಾಜ ವಿಜ್ಞಾನಗಳಲ್ಲಿಯೇ ವಿಶೇಷವಾಗಿರುವ ಸಮಾಜಕಾರ್ಯವು ಅನೇಕ ಕ್ಷೇತ್ರಗಳಲ್ಲಿ ಅವಶ್ಯಕತೆ ಹೊಂದುತ್ತಿರುವ ಈಗಿನ ಯುಗದಲ್ಲಿ ಇದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸುವುದು, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಗೂ ಸರಕಾರಿ ಪದವಿ ಕಾಲೇಜುಗಳಲ್ಲಿ ಈ ವಿಷಯಕ್ಕೆ ಒತ್ತು ನೀಡಲು ಕಾಲೇಜುಗಳು ಮತ್ತು ಸರಕಾರವು ಗಮನ ಹರಿಸಬೇಕು. ಸಮಾಜಕಾರ್ಯ (ಸೋಶಿಯಲ್ ವರ್ಕ್) ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ, ಎಂ.ಫಿಲ್ ಪಡೆದು ಜೊತೆಗೆ ಕೆಸೆಟ್, ನೆಟ್ ಕೂಡ ಪಾಸಾಗುವವರ ಸಂಖ್ಯೆ ಪ್ರತೀ ವರ್ಷ ಹೆಚ್ಚುತ್ತಲಿದೆ. ಹೀಗೆ ಅರ್ಹತೆ ಹಾಗೂ ಬೋಧನಾ ಆಸಕ್ತಿವುಳ್ಳ ಇವರೆಲ್ಲಾ ಪ್ರಾಧ್ಯಾಪಕ ವೃತ್ತಿಯಿಂದ ವಂಚಿತರಾದಂತಾಗುತ್ತದೆ. ಆದ್ದರಿಂದ ಮಾನ್ಯ ಉನ್ನತ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿ ಕಾಲೇಜುಗಳ ಪ್ರಾಂಶುಪಾಲರು ಸಮಾಜಕಾರ್ಯ ವಿಷಯವನ್ನು ತಮ್ಮ ತಮ್ಮ ಕಾಲೇಜುಗಳಲ್ಲಿ ಪ್ರಾರಂಭಿಸುವ ಮೂಲಕ ಈ ವಿಷಯದ ಉದ್ಯೋಗಾಕಾಂಕ್ಷಿಗಳ ಬದುಕು ರೂಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

-ಲಕ್ಷ್ಮೀಕಾಂತ ಗೋಡಬೋಲೆ, ವಾಡಿ (ಜಂ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)