varthabharthiಸುಗ್ಗಿ

ಅ.14 ಡಾ. ಬಿ.ಆರ್. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನ

ಬುದ್ಧಂ ಶರಣಂ ಗಚ್ಛಾಮಿ

ವಾರ್ತಾ ಭಾರತಿ : 12 Oct, 2019
ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ

ಭಾರತದ ಇತಿಹಾಸದಲ್ಲಿ ಬೌದ್ಧ ಧರ್ಮವು ಪ್ರಾಚೀನ ಕಾಲದಿಂದಲೂ ವೈಜ್ಞಾನಿಕ ಮತು ವೈಚಾರಿಕ ಹಾದಿಯಲ್ಲಿ ಸಾಗುತ್ತಾ, ಸರ್ವಾಕಾಲಿಕ ಬೆಳಕಾಗಿ ವಿಶ್ವದಲ್ಲಿ ಪ್ರಜ್ವಲಿಸುತ್ತಿದೆ. ಸರ್ವರಿಗೂ ಸಮಾನತೆಯ ಬೆಳಕು ನೀಡುವ ಈ ಧರ್ಮದ ಹಾದಿಯಲ್ಲಿ ಕ್ರಿ.ಪೂರ್ವದ ಬುದ್ಧ, ಬಿಂಬಸಾರ, ಚಂದ್ರಗುಪ್ತ ವೌರ್ಯ, ಕಾಲಾಶೋಕ, ಸಾಮ್ರಾಟ್ ಅಶೋಕನ ನಂತರ ಕ್ರಿ.ಶಕದ 20ನೇ ಶತಮಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ನೆಲೆಯಲ್ಲಿ ಬೌದ್ಧ ಧರ್ಮವನ್ನು ಪುನರ್ ಸ್ಥಾಪಿಸಿದರು. ಕ್ರಿ.ಪೂ. 563ರಲ್ಲಿ ಜನಿಸಿದ ಸಿದ್ಧಾರ್ಥ ಗೌತಮ ಜ್ಞಾನಾರ್ಜನೆ ಹೊಂದಿದ ಮೇಲೆ ನುಡಿದಂತೆ ನಡೆದು ತಥಾಗತ ಬುದ್ಧನಾದನು. ಬುದ್ಧರು ಜೀವಿಸಿದ ಕಾಲದಲ್ಲಿ ಅವರ ನಡೆನುಡಿಗಳ ಮಾರ್ಗಗಳಿಂದ ಸ್ಥಾಪಿತವಾದ ತತ್ವಗಳು ಅವರು ನಿಬ್ಬಾಣ ಹೊಂದಿದ ನಂತರ ಧರ್ಮ(ದಮ್ಮ)ವಾಯಿತು. ಕ್ರಿ.ಪೂ. 324ರಲ್ಲಿ ಜನಿಸಿದ ಚಂದ್ರಗುಪ್ತ ವೌರ್ಯ, ಮುಂದೆ, ಅವನ ಮಗ ಬಿಂಬಸಾರ ಕ್ರಿ.ಪೂ 545-492ರ ವರೆಗೆ ಆಡಳಿತ ನಡೆಸಿ ಬೌದ್ಧ ಧರ್ಮವನ್ನು ಮುಂದುವರಿಸಿದನು. ನಂತರ ಅಜಾತ ಶತ್ರು ಕ್ರಿ.ಪೂ. 490 ರಿಂದ ಆಡಳಿತ ನಡೆಸಿ ಬುದ್ಧರ ತತ್ವಗಳಿಗೆ ಮಾರುಹೋಗಿ ಬುದ್ಧರಿಗೆ ಶರಣಾದನು.

ಅಜಾತ ಶತ್ರುವಿನ ನಂತರ ಕಾಲಾಶೋಕನ ಕಾಲದಲ್ಲಿ ವೈಶಾಲಿಯಲ್ಲಿ ಎರಡನೇ ಬುದ್ಧರ ಸಮ್ಮೇಳನ ನಡೆಯಿತು. ನಂತರ ಭಾರತದ ಪ್ರಖ್ಯಾತ ದೊರೆ ಅಶೋಕನು ಕ್ರಿ.ಪೂ 273ರ ನಂತರ ತನ್ನ ಆಡಳಿತದಲ್ಲಿ ಬೌದ್ಧ ಧರ್ಮವನ್ನು ಭಾರತದ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಿದನು. ಅಶೋಕನು ಬೌದ್ಧ ಧರ್ಮದ ವೃದ್ಧಿಗಾಗಿ ಪಾಟಲೀಪುತ್ರದಲ್ಲಿ ಹಿರಿಯ ಬೌದ್ಧ ಭಿಕ್ಷು ಮೊಗ್ಗಲಿಪುತ್ತಚಿಸ್ಸುವಿನ ನೇತೃತ್ವದಲ್ಲಿ ಮೂರನೇ ಬೌದ್ಧ ಸಮ್ಮೇಳನ ನಡೆಸಿ ಬುದ್ಧರ ಶಾಂತಿ ಮತ್ತು ಅಹಿಂಸಾ ತತ್ವವು ವಿಶ್ವಮಟ್ಟದಲ್ಲಿ ಜನಮನ್ನಣೆ ಗಳಿಸುವಂತೆ ಮಾಡಿದನು. ಹೀಗಾಗಿ, ಭಾರತ ವಿಶ್ವದಲ್ಲಿ ಶಾಂತಿ ರಾಷ್ಟ್ರವಾಗಿ ಹೊರಹೊಮ್ಮಿತು. ಮುಂದುವರಿದು, ಬುದ್ಧರ ತತ್ವಗಳನ್ನು ಮತ್ತು ಧರ್ಮವನ್ನು ವಿಶ್ವ ಮಟ್ಟದಲ್ಲಿ ಸ್ಥಾಪಿಸಲು ಅಶೋಕನು ತನ್ನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರರನ್ನು ಭಾರತದ ನೆರೆ ಹೊರೆ ದೇಶಗಳಿಗೆ ಕಳುಹಿಸಿದನು. ಇದೇ ಸಂದರ್ಭದಲ್ಲಿ ಭಾರತದ ಪೂರ್ವ-ಪಶ್ಚಿಮ, ದಕ್ಷಿಣೋತ್ತರ ಎಲ್ಲ ಕಡೆಗಡೆಗಳಿಗೂ ಬೌದ್ಧ ಭಿಕ್ಷುಗಳನ್ನು ಕಳುಹಿಸಿ ಭಾರತದಲ್ಲಿ ಬೌದ್ಧ ಧರ್ಮ ಪ್ರಕಾಶಿಸುವಂತೆ ಮಾಡಿದನು.

ಕ್ರಿ.ಪೂರ್ವದ ಬುದ್ಧ, ಬಿಂಬಸಾರ, ಚಂದ್ರಗುಪ್ತ ವೌರ್ಯ, ಕಾಲಾಶೋಕ, ಸಾಮ್ರಾಟ್ ಅಶೋಕನ ನಂತರ ಕ್ರಿ.ಶಕದ 20ನೇ ಶತಮಾನದಲ್ಲಿ ಡಾ: ಬಿ.ಆರ್. ಅಂಬೇಡ್ಕರ್ ಈ ದೇಶದ ಮೂಲ ನಿವಾಸಿಗಳ ವಿಮೋಚನೆಗಾಗಿ ಅನೇಕ ಸಾಮಾಜಿಕ ಹೋರಾಟಗಳನ್ನು ಮಾಡಿದರು. 1933ರಲ್ಲಿ ಲಂಡನ್‌ನಲ್ಲಿ ಅವರು ಗ.ಆ.ಗವಾಯಿಯವರೊಡನೆ ಮಾತನಾಡುತ್ತಾ, ನನ್ನ ಒಲವು ಬೌದ್ಧ ಧರ್ಮದ ಕಡೆಗೆ ಎಂದು ಉಚ್ಚರಿಸಿದರು. 1935ರ ಅಕ್ಟೋಬರ್ 13ರಂದು ಯೇವಲಾ ನಗರದಲ್ಲಿ ಹಿಂದೂ ಧರ್ಮದ ಹೀನಾಯ ಪರಿಸ್ಥಿತಿಗಳ ಕುರಿತು ಮತನಾಡುತ್ತಾ, ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ ಹಿಂದೂ ಧರ್ಮದಲ್ಲಿ ಸಾಯಲಾರೆ ಎಂದು ಹಿಂದೂ ಧರ್ಮದಲ್ಲಿರುವ ತಾರತಮ್ಯಗಳ ವಿರುದ್ಧ ಕೆಂಡಕಾರಿದರು. 1940 ಫೆಬ್ರವರಿಯಲ್ಲಿ ಮುಂಬ್ಯೆ ಪತ್ರಕರ್ತರಿಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಭಾರತೀಯರ ನಿಜವಾದ ಧರ್ಮ ಬೌದ್ಧ ಧರ್ಮ ಎಂದು ಒತ್ತಿ ಹೇಳಿದರು. ಹೀಗೆ, ಬೌದ್ಧ ಧರ್ಮದ ಬಗ್ಗೆ ತಮ್ಮ ಒಲವು ವ್ಯಕ್ತಪಡಿಸುತ್ತಾ, ಹಿಂದೂ ಧರ್ಮ ಬಿಡುವ ಸುಳಿವು ನೀಡಿದ್ದರು.

ಮುಂದೆ, 1944 ಸೆಪ್ಟಂಬರ್ 4ರಲ್ಲಿ ಮದ್ರಾಸ್‌ನಲ್ಲಿ ಮತ್ತು ಜೂನ್ 1 ಕಲ್ಕತ್ತಾದಲ್ಲಿ ಬೌದ್ಧ ಧರ್ಮದ ಬಗ್ಗೆ ಉಪನ್ಯಾಸ ಗಳನ್ನು ನೀಡಿ ಸಭೆ-ಸಮ್ಮೇಳನಗಳನ್ನು ನಡೆಸಿದ್ದರು. ನಂತರ 1950 ಮೇ-25ರಂದು ಶ್ರೀಲಂಕಾದಲ್ಲಿ ಮತ್ತು ದಿಲ್ಲಿಯ ಬುದ್ಧ ವಿಹಾರದಲ್ಲಿ ಮಾತನಾಡುತ್ತಾ, ಭಾರತದಲ್ಲಿ ಬೌದ್ಧ ಧರ್ಮದ ಪುನರುತ್ಥಾನಕ್ಕಾಗಿ ನನ್ನ ದೇಹವು ಮೀಸಲೆಂದು ಹೇಳಿದರು. ಈ ನಿಟ್ಟಿನಲ್ಲಿ 1951 ಜುಲೈನಲ್ಲಿ ಇಂಡಿಯನ್ ಬುದ್ಧಿಸ್ಟ್ ಸೊಸೈಟಿ ಸ್ಥಾಪಿಸಿದರು. 1953ರಲ್ಲಿ ಬುದ್ಧರ ಮಹಾ ಪರಿನಿಬ್ಬಾಣ ದಿನದಲ್ಲಿ ಐವತ್ತು ಲಕ್ಷ ಜನರನ್ನು ಸೇರಿಸಿ ಭಾರತದಲ್ಲಿ ಬೌದ್ಧ ಧರ್ಮ ಮರು ಸ್ಥಾಪನೆಗಾಗಿ ಅಡಿಗಲ್ಲನ್ನಿಟ್ಟರು. ಮುಂದೆ, 1956 ಮೇ ನಲ್ಲಿ BBCಯಲ್ಲಿ ಭಾಷಣ ಮಾಡುತ್ತಾ, ಬುದ್ಧನ ತತ್ವಗಳು ಪ್ರಜ್ಞೆ, ಕರುಣೆ, ಶಾಂತಿ, ಮ್ಯೆತ್ರಿ, ಸಮಾನತೆ, ಸೋದರತೆಯಿಂದ ಕೂಡಿದ್ದು ರಕ್ತರಹಿತ ಕ್ರಾಂತಿ ಮಾಡಬಲ್ಲ ಶಾಂತಿ ಸ್ಥಾಪನೆ ಮಾರ್ಗವಾಗಿದೆ ಎಂದು ಕರೆಯುತ್ತಲೇ, ಬುದ್ಧರ ವಿಚಾರಗಳನ್ನು ಡಾ. ಅಂಬೇಡ್ಕರ್ ದೇಶ ಮತ್ತು ವಿದೇಶಗಳಲ್ಲಿ ಪ್ರಚಾರ ಪಡಿಸುತ್ತಾರೆ.

 ಮಹಾರಾಷ್ಟ್ರದ ನಾಗಪುರದಲ್ಲಿ 1956 ಅಕ್ಟೋಬರ್ 14 ರಂದು ವಿಜಯದಶಮಿ ದಿನ ಹಿರಿಯ ಬೌದ್ಧ ಭಿಕ್ಕು ಮಹಾಸ್ಥಾವೀರ ಚಂದ್ರಮಣಿಯವರಿಂದ ಬೌದ್ಧ ದಮ್ಮ ದೀಕ್ಷೆ ಪಡೆದರು. ಈ ಸಂದರ್ಭದಲ್ಲಿ ಅವರು ಈ ದೇಶದ ಮೂಲನಿವಾಸಿಗಳಾದ ದಲಿತ ಸಮುದಾಯ ಕುರಿತು ಬೌದ್ಧ ದಮ್ಮ ಭಾರತದ ಮೊದಲ ಧರ್ಮ. ಈ ದಮ್ಮ ಸ್ವೀಕರಿಸುವ ಮೂಲಕ ನಾವು ಮರಳಿ ನಮ್ಮ ಮಾತೃ ದಮ್ಮಕ್ಕೆ ಸಾಗುತ್ತಿದ್ದೇವೆ. ಭಾರತದ ಮಹಾಜನತೆ ಮತ್ತು ಶೋಷಿತ ಜನರು ಈ ಮಾನವೀಯ ತತ್ವಗಳ ಧರ್ಮದಲ್ಲಿ ಸೇರಿ ಜಾತಿ ಮತ್ತು ಅಸ್ಪಶ್ಯತೆಯಿಂದ ಹೊರ ಬಂದು ಬುದ್ಧನ ಮಾರ್ಗದಲ್ಲಿ ನಡೆಯಬೇಕು ಎಂದು 22 ಪ್ರತಿಜ್ಞೆಗಳನ್ನು ಸಮ್ಮೇಳನದಲ್ಲಿ ಓದಿ, ನೆರೆದಿದ್ದ ಅಪಾರ ಬೌದ್ಧ ಅನುಯಾಯಿಗಳಿಂದ ಅವುಗಳನ್ನು ಪುನರುಚ್ಚರಿಸಿ ಸುಮಾರು ಆರು ಲಕ್ಷಕ್ಕೂ ಮಿಗಿಲಾದ ಜನಸ್ತೋಮದ ನಡುವೆ ಡಾ. ಅಂಬೇಡ್ಕರ್, ಸವಿತಾ ಅಂಬೇಡ್ಕರ್ ಮುಂತಾದವರು ಬುದ್ಧನಿಗೆ ಶರಣಾದರು. ಇದೊಂದು ಕ್ರಿ.ಪೂ.ದ ಬುದ್ಧ, ಬಿಂಬಸಾರ, ಚಂದ್ರಗುಪ್ತ ವೌರ್ಯ, ಕಾಲಾಶೋಕ, ಸಾಮ್ರಾಟ್ ಅಶೋಕನ ನಂತರ ಕ್ರಿ.ಶಕ 19ನೇ ಶತಮಾನದ ನಂತರ ಆಧುನಿಕ ಕಾಲದಲ್ಲಿ ಭಾರತದಲ್ಲಿ ನಡೆದ ಮಹಾ ಶಾಂತಿ ಸ್ಥಾಪನೆಯ ವೈಚಾರಿಕ ಮತ್ತು ವೈಜ್ಞಾನಿಕ ದಮ್ಮ ಕ್ರಾಂತಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)