varthabharthi


ಸುಗ್ಗಿ

ಅಧ್ಯಯನ ಮತ್ತು ಅರಿವು - ಭಾಗ - 2

ಹೈಪರ್ ಆ್ಯಕ್ಟೀವ್ ಮಕ್ಕಳು

ವಾರ್ತಾ ಭಾರತಿ : 13 Oct, 2019
ಯೋಗೇಶ್ ಮಾಸ್ಟರ್

ಬೋರ್ ಬೋರ್

ಈ ತೀವ್ರಗಾಮಿ ಚಟುವಟಿಕೆಯ ಮಕ್ಕಳು ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ತಮ್ಮ ಕೆಲಸಗಳಲ್ಲಿ ಗಮನ ನೀಡಲಾಗದೇ ಚಡಪಡಿಸುವರು. ಸ್ವನಿಯಂತ್ರಣ ಸಾಧಿಸದ, ಶಾಂತವಾಗಿ ಒಂದೆಡೆ ಇರಲಾಗದ ಆ ಚಡಪಡಿಕೆಯು ಸ್ನೇಹಿತರ ಜೊತೆಯಲ್ಲಿ, ಆಟಗಳಲ್ಲಿಯೂ ಕೂಡಾ ಸ್ಪಷ್ಟವಾಗಿ ಕಾಣುವುದು. ಜೊತೆಗೆ ಯಾವುದೊಂದು ಕೆಲಸದಲ್ಲಿಯೂ ಗಮನ ಸಾಧಿಸದ ಅವರು ಇದು ಬೋರಿಂಗ್ ಎನ್ನುವ ಕಾರಣ ಕೊಡುತ್ತಾ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಯಾವುದೋ ಒಂದು ವಿಷಯದಲ್ಲಿ ಬೋರ್ ಎನ್ನಿಸಬಹುದು ಅಥವಾ ಕೆಲಸದ ಏಕತಾನತೆಯಿಂದಾಗಿ, ಯಾಂತ್ರಿಕತೆಯಿಂದಾಗಿ ಬೇಸರ ಎನಿಸಬಹುದು. ಆದರೆ ಯಾವುದೊಂದು ಕತೆಯನ್ನಾಗಲಿ, ಸಂಗತಿಯನ್ನಾಗಲಿ, ಅದರೊಳಗೆ ಒಂದಿಷ್ಟೂ ಹಾಸುಹೊಕ್ಕಿ ನೋಡದೇ ಪ್ರಾರಂಭದಲ್ಲಿಯೇ ಬೋರ್ ಬೋರ್ ಎಂದು ಗೊಣಗಾಡುವ ಅಥವಾ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆಂದರೂ ಅಟೆಂಶನ್ ಡಿಫಿಸಿಟ್ ಹೈಪರಾಕ್ಟಿವಿಟಿ (ಎಡಿಎಚ್‌ಡಿ) ಇರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಬೋರ್ ಎಂದು ಗೊಣಗಾಡುವವರ ದೌರ್ಬಲ್ಯವೇನೆಂದರೆ ಸಮಾಧಾನದಿಂದ, ವ್ಯವಧಾನದಿಂದ ವಿಷಯವನ್ನು ಗಮನಿಸಲು ಸಾಧ್ಯವಿಲ್ಲದಿರುವುದು. ಏಕಾಗ್ರತೆಯನ್ನು ಹೊಂದಲಾಗದಿರುವುದು. ಬೇರೆಯವರ ಮನೆಗೆ ಹೋಗುವ ಎಡಿಎಚ್‌ಡಿ ಸಮಸ್ಯೆ ಇರುವ ಮಕ್ಕಳು, ಆ ಮನೆಯ ಅಥವಾ ಬೇರೆ ಮಕ್ಕಳ ಕೈಯಲ್ಲಿರುವುದನ್ನು ಕಿತ್ತುಕೊಳ್ಳುವುದು, ಸ್ಥಳದಲ್ಲಿ ಅನುಮತಿಯಿಲ್ಲದೆ ವಸ್ತುಗಳನ್ನು ತೆಗೆದುಕೊಳ್ಳುವುದು, ಅಷ್ಟೇ ಅಲ್ಲದೇ ಅವನ್ನು ಎತ್ತಿಟ್ಟುಕೊಳ್ಳುವುದನ್ನೂ ಮಾಡುತ್ತಾರೆ. ಪಾಲಕರು ಆ ಮಗುವಿನ ಕೈಯಿಂದ ವಸ್ತುವನ್ನು ಹಿಂದಕ್ಕೆ ಪಡೆದು, ನಿನಗೆ ಇದೇ ತರಹದ್ದು ಇನ್ನೊಂದು ಕೊಡಿಸುತ್ತೇನೆ, ಇದು ಬೇಡ, ಕೊಟ್ಟು ಬಿಡೋಣ ಎಂದರೂ, ಅದು ತಮ್ಮದಲ್ಲ ಎಂದು ಗೊತ್ತಿದ್ದರೂ ಜೋರು ಗಲಾಟೆ ಮಾಡುವುದು, ಅಳುವುದು, ಹಟ ಮಾಡುವುದು; ಇತ್ಯಾದಿಯಾಗಿ ಭಾವೋದ್ರೇಕದಿಂದ ವರ್ತಿಸುತ್ತಾರೆ. ಮೆದುಳಿನ ಬೆಳವಣಿಗೆಯಲ್ಲಿ ವ್ಯತ್ಯಾಸವಾಗುವ ಈ ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗುರುತಿಸಬೇಕು ಮತ್ತು ಚಿಕಿತ್ಸೆಯನ್ನು ನೀಡಬೇಕು. ಆದರೆ ಬಹಳಷ್ಟು ಪಾಲಕರು ಮತ್ತು ಶಿಕ್ಷಕರು ಇವನ್ನು ಮಕ್ಕಳಲ್ಲಿ ಸರ್ವೇ ಸಾಮಾನ್ಯವಾದ ನಡವಳಿಕೆ ಎಂದು ಕಡೆಗಣಿಸಿ ಬಿಡುತ್ತಾರೆ. ಆದರೆ ತಾವು ಕಾಣುತ್ತಿರುವ ಆ ಮಕ್ಕಳಲ್ಲಿ ಆ ಚಟುವಟಿಕೆಗಳು ಸಾಮಾನ್ಯವಾಗಿದೆಯೋ, ತೀವ್ರವಾಗಿದೆಯೋ, ಯಾವುದೋ ಕೆಲವು ವಸ್ತುಗಳಲ್ಲಿವೆಯೋ ಅಥವಾ ಎಲ್ಲಾ ವಿಷಯಗಳಲ್ಲಿರುತ್ತವೋ, ಅವರಿಗೆ ಇಷ್ಟವಾದ ವಸ್ತುಗಳ ಬಗ್ಗೆ ಹಾಗೆ ಮಾಡುತ್ತಾರೋ, ಅಥವಾ ತನಗಿಷ್ಟ ಇರಲಿ, ಇಲ್ಲದಿರಲಿ ಹಾಗೆ ವರ್ತಿಸುತ್ತಿದ್ದಾರೋ ಎಂಬುದರ ತೀವ್ರತೆಯನ್ನು ಗಮನಿಸಿಕೊಂಡು, ಅಟೆಂಶನ್ ಡಿಫಿಸಿಟ್ ಹೈಪರಾಕ್ಟಿವಿಟಿ ಡಿಸಾರ್ಡರ್ ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.

ತಪಾಸಣೆ

ಪ್ರಾರಂಭಿಕವಾಗಿ ಅಥವಾ ಸಾಮಾನ್ಯ ಲಕ್ಷಣಗಳನ್ನು ಕಂಡಿದ್ದೇ ಆದರೆ ಮಕ್ಕಳ ಮನಶಾಸ್ತ್ರಜ್ಞರ ಬಳಿಗೆ ಮಗುವನ್ನು ಒಯ್ಯಬೇಕು. ಅಟೆಂಶನ್ ಡಿಫಿಸಿಟ್ ಹೈಪರಾಕ್ಟಿವಿಟಿ ಇದೆಯೇ ಇಲ್ಲವೇ ಎಂದು ಕಂಡುಕೊಳ್ಳಲು ಕೆಲವು ಪ್ರಯೋಗಗಳನ್ನು ಮಾಡಬೇಕು. ಮಗುವನ್ನು ಕರೆದು ಕೂರಿಸಿಕೊಂಡು ಏನಾದರೂ ಹೇಳಲು ಹೋದಾಗ ಒಂದೆರಡು ನಿಮಿಷವೂ ಕೂರದೇ, ಕೇಳದೇ, ತೋರಿಸುವುದನ್ನು ನೋಡದೇ ಅಲ್ಲಿ ಇಲ್ಲಿ ನೋಡಿಕೊಂಡು ಮೇಲೆದ್ದು ಹೋಗಲು ಪ್ರಯತ್ನಿಸುತ್ತಿದ್ದೆಯೋ ಎಂಬುದನ್ನು ಗಮನಿಸಿ. ಹೇಳುತ್ತಿರುವುದರ ಬಗ್ಗೆ ಗಮನ ನೀಡದೇ ತಾವೇನೋ ತಮಗಿಷ್ಟ ಬಂದಿರುವ ಕೆಲಸವನ್ನು ಮಾಡುತ್ತಿದ್ದಾರಾ ಎಂಬುದನ್ನೂ ಅವಲೋಕಿಸಿ. ಮಕ್ಕಳ ಮನೋವೈದ್ಯರು ಎಷ್ಟರ ಮಟ್ಟಿಗೆ ಮಗುವಿನ ಗಮನವು ಪಲ್ಲಟವಾಗುತ್ತದೆ, ತೀವ್ರತರವಾದ ಚಟುವಟಿಕೆಯಿಂದ ಕೂಡಿರುತ್ತದೆ, ಹೇಗೆ ಚಡಪಡಿಸುತ್ತದೆ ಎಂಬುದನ್ನು ಅದರ ವಯಸ್ಸಿನ ಅನುಸಾರವಾಗಿ ತಿಳಿಯುತ್ತಾರೆ. ಮಗುವು ಯಾವ ವಯಸ್ಸಿನಿಂದ ಈ ರೀತಿಯಲ್ಲಿ ವರ್ತಿಸುತ್ತಿದೆ ಎಂಬುದರ ಮಾಹಿತಿಯನ್ನು ಪಾಲಕರು ಮನೋವೈದ್ಯರಿಗೆ ಕೊಡಬೇಕು.

ಯಾವುದಾದರೂ ತಾತ್ಕಾಲಿಕ ದೈಹಿಕ ಸಮಸ್ಯೆಯಿಂದೇನಾದರೂ ಹೀಗಾಗಿದೆಯೋ ಏನೋ ಎಂಬುದನ್ನು ಕೂಡಾ ಗಮನಿಸಲು ವೈದ್ಯಕೀಯ ತಪಾಸಣೆ ಮಾಡಬೇಕು. ಕೆಲವೊಮ್ಮೆ ಯಾವುದಾದರೂ ದೈಹಿಕ ಸಮಸ್ಯೆಯಿಂದಲೂ ಈ ರೀತಿಯ ಚಡಪಡಿಕೆ ಮತ್ತು ವರ್ತನೆಗಳಲ್ಲಿ ತೀವ್ರಗಾಮಿತನವು ತಲೆದೋರುವುದು. ಮತ್ತೂ ಕೆಲಮೊಮ್ಮೆ ಬೇರೆ ಯಾವುದಾದರೂ ದೈಹಿಕ ಸಮಸ್ಯೆಗಳಿಗೆ ತೆಗೆದುಕೊಳ್ಳುವ ಔಷಧಿಯ ಅಡ್ಡ ಪರಿಣಾಮದಿಂದಲೂ (ಸೈಡ್-ಎಪೆಕ್ಟ್) ಈ ರೀತಿಯ ಮಾನಸಿಕ ಅಸ್ತವ್ಯಸ್ಥತೆ ಮತ್ತು ಚಡಪಡಿಕೆಯ ಲಕ್ಷಣಗಳನ್ನು ತೋರಬಹುದು. ಹಾಗಾಗಿ ಅಟೆಂಶನ್ ಡಿಫಿಸಿಟ್ ಹೈಪರಾಕ್ಟಿವಿಟಿಯೇ ನಮ್ಮ ಮಗುವಿಗೆ ಇರುವುದು ಎಂಬುದನ್ನು ಸ್ಪಷ್ಟಪಡಿಸಿಕೊಂಡು ಚಿಕಿತ್ಸೆಗಳನ್ನು ನೀಡಬೇಕು.

ಚಿಕಿತ್ಸೆ

ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಗಳನ್ನು ನಿಯಂತ್ರಿಸುತ್ತಾ ಗಮನ ನೀಡುವಂತಹ, ಚಟುವಟಿಕೆಗಳನ್ನು ತಹಬಂದಿಗೆ ತರುವಂತಹ, ಮಕ್ಕಳ ತೀವ್ರಗಾಮಿತನವನ್ನು ಮಂದಗೊಳಿಸುವಂತಹ ಮತ್ತು ಸ್ವನಿಯಂತ್ರಣ ಹೊಂದುವಂತಹ ಔಷಧಿಗಳೇನೋ ಇವೆ. ಆದರೆ ಅವುಗಳನ್ನು ನುರಿತ ವೈದ್ಯರ ತಪಾಸಣೆ ಮತ್ತು ಸಲಹೆಯಿಂದಲೇ ತೆಗೆದುಕೊಳ್ಳಬೇಕು. ಅದರಿಂದ ಇತರ ಅಡ್ಡಪರಿಣಾಮಗಳು ಆಗುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ನಾನು ವರ್ತನಾಕ್ರಮಗಳ ಮೂಲಕ ಚಿಕಿತ್ಸೆಯನ್ನು ನೀಡುವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತೇನೆ. ಮಗುವಿನ ವರ್ತನೆಗಳನ್ನು ಗಮನಿಸಿ, ಪಟ್ಟಿ ಹಾಕಿಕೊಂಡು, ಸಾಮಾಜಿಕವಾಗಿ, ಭಾವನಾತ್ಮಕವಾಗಿ ಮತ್ತು ಇತರ ವಿಚಾರಗಳಲ್ಲಿ ಮಗುವು ಹೇಗೆ ವರ್ತಿಸುತ್ತದೆ ಎಂಬುದನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಆ ಒಂದು ಮಗುವಿಗೆ ಪ್ರತಿವರ್ತನೆಗಳ ಯೋಜನೆಗಳನ್ನು ರೂಪಿಸುವಂತಹ ಚಿಕಿತ್ಸಾಕ್ರಮ ಇದೆ.

ಏಕೆಂದರೆ, ಮಗುವು ಸಲಹೆ, ಸೂಚನೆ ಮತ್ತು ಇತರ ವೌಖಿಕ ನಿರ್ದೇಶನಗಳನ್ನು ಕೊಡುವಾಗ ಸಂಯಮದಿಂದ ಮತ್ತು ವೌನದಿಂದ ಕುಳಿತುಕೊಳ್ಳುವುದು ಎಷ್ಟು ಮುಖ್ಯವೋ, ಅದರ ನಂತರ ಕೆಲಸಕ್ಕೆ ತೊಡಗಿದಾಗ ನಿರ್ದೇಶನಗಳನ್ನು ಪಾಲಿಸಲು ಮಗುವು ಅಷ್ಟೇ ಚುರುಕಾಗಿ ಕೆಲಸ ಮಾಡಬೇಕಾಗುತ್ತದೆ.

ಪಾಲಕರಿಗೆ ಸಮಾಲೋಚನೆ

ಮಗುವಿನ ಪಾಲಕರಿಗೆ ಸಮಾಲೋಚನೆಯ ಅಗತ್ಯವಿರುತ್ತದೆ. ಆ ಮಗುವಿನ ಜೊತೆಗೆ ಹೇಗೆ ವರ್ತಿಸಬೇಕು? ಹೇಗೆ ಮಾತಾಡಬೇಕು? ಎಂತಹ ಮಾತುಗಳನ್ನು ಬಳಕೆ ಮಾಡ ಬೇಕು? ಮಗುವಿನ ವರ್ತನೆಯ ಸಮಸ್ಯೆಯೊಂದಿಗೆ ಹೇಗೆ ಸಂಭಾಳಿಸಬೇಕು ಎಂಬುದರ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ಕೊಡಬೇಕಾಗುತ್ತದೆ. ಅದೇ ರೀತಿಯಲ್ಲಿ ಶಾಲೆಯಲ್ಲಿ ಶಿಕ್ಷಕರೂ ಕೂಡಾ ಇದರ ಬಗ್ಗೆ ಅರಿವಿದ್ದು, ಅಂತಹ ಮಕ್ಕಳನ್ನು ಗಮನಿಸಿ ಅವರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕಾಗುತ್ತದೆ. ಎಲ್ಲಾ ಮಕ್ಕಳಿಗೂ ಒಂದೇ ಸಮನೆಯ ಉಪಚಾರ ಮಾಡಲಾಗುವುದಿಲ್ಲ. ಮುಖ್ಯವಾಗಿ ಮಕ್ಕಳು ಒಂದು ಹಂತಕ್ಕೆ ಬೆಳೆದಾಗ ಅವರಿಗೆ ಈ ವಿಷಯದ ಬಗ್ಗೆ ಅರಿವು ಮೂಡಿ ತಾವೇ ತಮ್ಮ ಸ್ವನಿಯಂತ್ರಣ ಸಾಧಿಸುವುದು ಹೇಗೆ? ಏಕಾಗ್ರತೆ ಸಾಧಿಸುವುದು ಹೇಗೆ? ಸಂಯಮ, ಸಮಾಧಾನದಿಂದ ಕೆಲಸಗಳನ್ನು ಮಾಡುವುದು ಹೇಗೆ? ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಂಡು ತಾವೇ ಆ ಗುರಿ ಸಾಧಿಸಲು ಕೆಲಸ ಮಾಡುವವರೆಗೂ ಪಾಲಕರು ಮತ್ತು ಶಿಕ್ಷಕರು ಸಂಯಮ ಮತ್ತು ಸಮಾಧಾನದಿಂದ ಮಗುವಿನ ಮನಸ್ಥಿತಿಯನ್ನು ಮತ್ತು ಮಗುವಿಗೆ ಪೂರಕವಾಗಿರುವಂತಹ ಮನೆಯ ಅಥವಾ ಶೈಕ್ಷಣಿಕ ವಾತಾವರಣದ ಪರಿಸ್ಥಿತಿಯನ್ನು ಕಾಪಾಡಲೇಬೇಕು. ಇಲ್ಲವಾದರೆ ಅಂತಹ ಮಕ್ಕಳು ಮುಂದೆ ತಮ್ಮ ಕೆಲಸಗಳಲ್ಲಿ ಯಶಸ್ವಿಯಾಗುವುದು ಕಷ್ಟವಾಗುತ್ತದೆ. ಯಾವ ಕೆಲಸವನ್ನೂ ಪೂರ್ಣವಾಗಿ ಮಾಡುವುದರಲ್ಲಿ ವಿಫಲರಾಗುತ್ತಾರೆ. ಜೊತೆಗೆ ಕನಿಷ್ಠ ಮಟ್ಟದ ಆತ್ಮಾಭಿಮಾನ ಅಥವಾ ಕೀಳರಿಮೆ, ಸ್ವಾವಲಂಬನೆ ಇಲ್ಲದೇ ಹೋಗುವುದು, ಖಿನ್ನತೆ, ಶೈಕ್ಷಣಿಕ ವೈಫಲ್ಯತೆ, ಅಪಾಯಗಳಿಗೆ ಒಡ್ಡಿಕೊಳ್ಳುವಿಕೆ, ದುರ್ಬಲ ಸಂಬಂಧಗಳು, ಕೌಟುಂಬಿಕ ಕಲಹ, ಸ್ನೇಹಿತರಲ್ಲಿ ಜಗಳ, ಪ್ರೇಮಿಗಳಲ್ಲಿ ವಿರಸ, ಸಾಮಾಜಿಕ ಸಂಬಂಧಗಳಲ್ಲಿ ಸಂಘರ್ಷ ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆ. ಕ್ಷುಲ್ಲಕ ಕಾರಣಗಳಿಗೆ ಭಾವನಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಶಾಲೆಯಲ್ಲಿ ನಮ್ಮ ಮಗುವಿನ ಬಗ್ಗೆ ಶಿಕ್ಷಕರು ಅಷ್ಟು ಸೂಕ್ಷ್ಮವಾದಂತಹ ಎಚ್ಚರಿಕೆ ಮತ್ತು ಗಮನ ತೆಗೆದುಕೊಳ್ಳುತ್ತಾರೋ ಇಲ್ಲವೋ, ಆದರೆ ಸಮಸ್ಯೆಯನ್ನು ಗುರುತಿಸಿರುವ ಪಾಲಕರಂತೂ ತಾವೇ ತಮ್ಮ ಮಗುವಿನ ಬಗ್ಗೆ ಶಿಕ್ಷಕರ ಜೊತೆಗೆ ಮಾತಾಡಬೇಕು. ಅವರಿಗೆ ತಮ್ಮ ಮಕ್ಕಳ ಬಗ್ಗೆ ತಿಳುವಳಿಕೆ ಕೊಡಬೇಕು. ಅವನ ದೌರ್ಬಲ್ಯ ಮತ್ತು ಸಾಮರ್ಥ್ಯಗಳನ್ನು ಪತ್ತೆ ಹಚ್ಚಿ, ಅವುಗಳಿಗೆ ಅನುಗುಣವಾಗಿ ಶಾಲೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಅನವಶ್ಯಕವಾಗಿ ತಮ್ಮೆಲ್ಲಾ ಬಯಕೆಗಳನ್ನೂ ಮಗುವಿನ ಮೂಲಕ ಈಡೇರಿಸಿಕೊಳ್ಳಲು ಯತ್ನಿಸಬಾರದು. ಶಿಸ್ತಿನ ನೆಪದಲ್ಲಿ ಮಗುವಿನ ಬದುಕನ್ನು ಹತ್ತಿಕ್ಕಬಾರದು. ನಮ್ಮ ದೇಶದಲ್ಲಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಒಂದೋ ಮುಚ್ಚಿಟ್ಟುಕೊಳ್ಳುತ್ತಾರೆ ಅಥವಾ ಅನುಕಂಪಗಿಟ್ಟಿಸಲು ಇರುವುದಕ್ಕಿಂತ ಹೆಚ್ಚಾಗಿ ಪ್ರದರ್ಶಿಸುವಂತಹ ಉದಾಹರಣೆಗಳನ್ನು ನೋಡಿದ್ದೇನೆ. ಆದರೆ, ವ್ಯಕ್ತಿಯ ವಿಕಸನಕ್ಕೆ ಪೂರಕವಾಗುವಂತೆ ಪ್ರಾಮಾಣಿಕವಾಗಿ ಯಾವುದೇ ಸಮಸ್ಯೆಯನ್ನು ಪತ್ತೆ ಹಚ್ಚಬೇಕು ಮತ್ತು ಚಿಕಿತ್ಸೆ ನೀಡಬೇಕು. ಎಡಿಎಚ್‌ಡಿ ನಮ್ಮ ಮಗುವಿಗೆ ಇದೆ ಎಂದು ಗಾಬರಿಯಾಗಿ, ಅದನ್ನು ಮುಚ್ಚಿಟ್ಟುಕೊಳ್ಳುವ ಅಗತ್ಯವಿಲ್ಲ. ಆಲ್ಬರ್ಟ್ ಐನ್‌ಸ್ಟೀನ್, ಬಿಲ್‌ಗೇಟ್ಸ್, ಜಾನ್ ಎಫ್ ಕೆನಡಿಯಂತಹ ಅನೇಕ ಖ್ಯಾತ ನಾಮರಿಗೂ ಈ ಸಮಸ್ಯೆ ಇತ್ತು. ಅನೇಕ ಒಲಿಂಪಿಕ್ ಪದಕ ವಿಜೇತರಿಗೂ ಈ ಸಮಸ್ಯೆ ಇತ್ತು. ಅದನ್ನರಿತು ದಾಟಿ ಸಾಧಿಸಿ ಅವರು ಖ್ಯಾತನಾಮರಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)