varthabharthiಕರ್ನಾಟಕ

ಗಾಂಧೀಜಿಯನ್ನೇ ಕೊಂದ ದೇಶದಲ್ಲಿ ಸಭಾಧ್ಯಕ್ಷನಾಗಿದ್ದ ನನ್ನನ್ನು ಬಿಡ್ತಾರಾ?: ರಮೇಶ್ ಕುಮಾರ್

ವಾರ್ತಾ ಭಾರತಿ : 13 Oct, 2019

ಬಾಗಲಕೋಟೆ, ಅ.13: ವಿಧಾನಸಭೆಯ ಅಧಿವೇಶನದ ಕಲಾಪದ ಸಂದರ್ಭದಲ್ಲಿ ಖಾಸಗಿ ಸುದ್ದಿವಾಹಿನಿಗಳನ್ನು ಹೊರಗಿಟ್ಟಿದ್ದು ದುರಾದೃಷ್ಟಕರ. ರಾಜ್ಯ ಸರಕಾರ ಮಾಧ್ಯಮಗಳ ಕತ್ತು ಹಿಸುಕುವ ಕೆಲಸ ನಡೆಸುತ್ತಿದೆ ಎಂದು ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಆರೋಪಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಕೇಂದ್ರ ಸರಕಾರ ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರವನ್ನು ಕೊಲ್ಲಲಾಗಿದೆ. ಅದೇ ರೀತಿಯಲ್ಲಿಯೇ, ಅದರ ಪ್ರತಿಬಿಂಬವೇ ಕರ್ನಾಟಕದ ವಿಧಾನಸಭೆಯಲ್ಲಿ ಪ್ರದರ್ಶಿಸಲಾಗಿದೆ ಎಂದು ದೂರಿದರು.

ಪ್ರೇಮ ವ್ಯವಹಾರ ಖಾಸಗಿಯಾಗಿ ಮಾಡಬೇಕು. ಆದರೆ ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಳಗೆ ಗುಟ್ಟಾಗಿ ಮಾಡಬಾರದು ಎಂದು ಚಕ್ರವರ್ತಿ ನೆಪೋಲಿಯನ್ ಹೇಳಿದ್ದರು. ಆದರೆ ಈಗ ಅಧಿವೇಶನಕ್ಕೆ ಕ್ಯಾಮೆರಾ ತರಬಾರದು ಅನ್ನೋದು ದುಖಃಕರ ಸಂಗತಿ ಎಂದು ನುಡಿದರು. ಕಾಂಗ್ರೆಸ್ ಪಕ್ಷದಲ್ಲಿ ಮೂಲ ನಿವಾಸಿಗಳು, ವಲಸಿಗರು ಎಂಬ ಬೇಧವಿಲ್ಲ. ಒಂದು ಸಾರಿ ಪಕ್ಷದೊಳಗೆ ಕಾಲಿಟ್ಟ ಮೇಲೆ ಎಲ್ಲರೂ ಕಾಂಗ್ರೆಸ್‌ನವರೇ ಆಗಿರುತ್ತಾರೆ. ಇಲ್ಲಿ ಹಳೆಯದೂ ಇಲ್ಲ, ಹೊಸದೂ ಇಲ್ಲ. ಯಾರೂ ಸಿದ್ದರಾಮಯ್ಯ ಕೈ ಕಟ್ಟಿ ಹಾಕಿಯೂ ಇಲ್ಲ. ಅವೆಲ್ಲಾ ಭ್ರಮೆಗಳಷ್ಟೇ ಎಂದು ಪ್ರಶ್ನೆಯೊಂದಕ್ಕೆ ರಮೇಶ್ ಕುಮಾರ್ ಉತ್ತರಿಸಿದರು.

ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಸಭಾಧ್ಯಕ್ಷನಾಗಿ ನಾನು ನನ್ನ ಕೆಲಸವನ್ನು ಸಂವಿಧಾನದ ಅಡಿಯಲ್ಲಿಯೇ ನಿರ್ವಹಿಸಿದ್ದೇನೆ. ಅದರಿಂದ ಯಾರಿಗೆ ಅರ್ಹತೆ ಇಲ್ಲವೇ ಅನರ್ಹತೆ ಬಂದಿದೆಯೋ ನನಗೆ ಗೊತ್ತಿಲ್ಲ. ನಮ್ಮ ದೇಶದಲ್ಲಿ ಗಾಂಧೀಜಿ ಅವರನ್ನೇ ಕೊಂದಿದ್ದೇವೆ. ಇನ್ನು, ಸಭಾಧ್ಯಕ್ಷನಾಗಿದ್ದ ಈ ರಮೇಶ್ ಕುಮಾರ್ ಯಾವ ದೊಡ್ಡ ಮನುಷ್ಯ. ಅವರನ್ನೇ ಬಿಟ್ಟಿಲ್ಲ, ಇನ್ನು ನನ್ನನ್ನು ಬಿಡ್ತಾರಾ ಎಂದು ಮಾರ್ಮಿಕವಾಗಿ ನುಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)