varthabharthi


ಕರ್ನಾಟಕ

ರೈತ ಸಂಘದ ಜಾಥಾಗೆ ಮಂಡ್ಯದಲ್ಲಿ ಭವ್ಯ ಸ್ವಾಗತ: ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ

ವಾರ್ತಾ ಭಾರತಿ : 13 Oct, 2019

ಮಂಡ್ಯ, ಅ.13: ಪ್ರವಾಹ ಪೀಡಿತ ಹಾಗೂ ಬರ ನಿರ್ವಹಣೆಗೆ ನೆರವು ನೀಡಲು ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಆರೋಪಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಗಮನ ಸೆಳೆಯಲು ಕರ್ನಾಟಕ ರಾಜ್ಯ ರೈತಸಂಘ ಹಾಗು ಹಸಿರು ಸೇನೆ ತಲಕಾವೇರಿಯಿಂದ ಬೆಂಗಳೂರಿಗೆ ಆಯೋಜಿಸಿರುವ ಜಾಥಾ ರವಿವಾರ ನಗರಕ್ಕೆ ಆಗಮಿಸಿತು.

ಜಾಥಾಗೆ ಸ್ವಾಗತ ಕೋರಿದ ರೈತಸಂಘ, ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಹಾಗು ಹುರುಗಲವಾಡಿ ರಾಮಯ್ಯ ನೇತೃತ್ವದ ಕಲಾತಂಡ, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಉತ್ತರ ಕರ್ನಾಟಕ, ಕೊಡಗು ಜಿಲ್ಲೆಗಳಲ್ಲಿ ಪ್ರವಾಹದಿಂದ ಸಾವು-ನೋವುಗಳು ಉಂಟಾಗಿವೆ. ಮನೆ ಮತ್ತು ಬೆಳೆ ಹಾಳಾಗಿದೆ. ಆದರೆ, ಕೇಂದ್ರ ಸರಕಾರ ನೆರೆ ಸಂತ್ರಸ್ತರಿಗೆ ನೆರವಿಗೆ ಮುಂದಾಗಿಲ್ಲ ಎಂದು ಕಿಡಿಕಾರಿದರು.

ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳು ಖಾಯಂ ಬರಗಾಲ ಪ್ರದೇಶಗಳಾಗಿದ್ದು, ಸುಮಾರು ನಾಲ್ಕು ಲಕ್ಷ ತೆಂಗಿನ ಮರಗಳು ಒಣಗಿ ಹೋಗಿವೆ. ಅಡಿಕೆ ಫಸಲು ಸೊರಗಿದೆ. ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹಲವು ಕಡೆ ನದಿಗಳು ಉಕ್ಕಿ ಹರಿದರೂ ಕೆರೆಕಟ್ಟೆಗಳಿಗೆ ನೀರು ತುಂಬಿಸಿಲ್ಲ. ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ಕಬ್ಬಿನ ಕಾರ್ಖಾನೆಗಳ ಬಾಕಿ ಹಣ ಪಾವತಿಯಾಗಿಲ್ಲ. ಮಂಡ್ಯದ ಮೈಷುಗರ್, ಪಿಎಸ್‍ಎಸ್‍ಕೆ ಕಾರ್ಖಾನೆ ನಿಂತು ಹೋಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ ಎಂದು ಅವರು ಸರಕಾರಗಳನ್ನು ತರಾಟೆಗೆ ತೆಗೆದುಕೊಂಡರು.

ರೈತಸಂಘದ ತಂಡ ಅತಿವೃಷ್ಟಿ ಮತ್ತು ಬರ ಪ್ರದೇಶದಲ್ಲಿ ಪ್ರವಾಸ ಮಾಡಿ ಸಮಗ್ರ ಸಮಸ್ಯೆಯನ್ನು ಅರಿತಿದೆ. ಈ ಬಗ್ಗೆ ಸರಕಾರಗಳ ಗಮನ ಸೆಳೆಯಲು ಜಾಥಾ ಆಯೋಜಿಸಿದ್ದು, ಅ.14ರಂದು ಮಧ್ಯಾಹ್ನ 2ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವದಲ್ಲಿ ಸಮಾವೇಶಗೊಳ್ಳಲಿದೆ. ರೈತರು, ಸಂಘಸಂಸ್ಥೆಗಳ ಸದಸ್ಯರು ಹಾಗು ಸಾರ್ವಜನಿಕರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ನೆರೆ ಸಂತ್ರಸ್ತರು, ಬರಪೀಡಿತರ ನೆರವಿಗೆ ಹೆಚ್ಚಿನ ಪರಿಹಾರ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಧಾವಿಸಬೇಕು. ಮಂಡ್ಯದ ಮೈಷುಗರ್ ಮತ್ತು ಪಿಎಸ್‍ಎಸ್‍ಕೆ ಕಾರ್ಖಾನೆಗಳನ್ನು ಆರಂಭಿಸಬೇಕು. ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಇತರೆ ಕಾರ್ಖಾನೆಗಳಿಗೆ ಸಾಗಿಸಬೇಕು ಎಂದು ಆಗ್ರಹಿಸಿದರು.

ಪ್ರೊ.ಹುಲ್ಕೆರೆ ಮಹಾದೇವ, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎಸ್.ಸುರೇಶ್, ರಾಮಕೃಷ್ಣಯ್ಯ, ಲತಾ ಶಂಕರ್, ಬಿ.ಬೊಮ್ಮೇಗೌಡ, ಕೀಲಾರ ಸೋಮಶೇಖರ್, ಎ.ಎಲ್.ಕೆಂಪೂಗೌಡ, ಹೊಸೂರು ಕುಮಾರ್, ದಯಾನಂದ್, ಪಿ.ಕೆ.ನಾಗಣ್ಣ, ಲಿಂಗಪ್ಪಾಜಿ, ಇತರ ಮುಖಂಡರು ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)