varthabharthi


ಆರೋಗ್ಯ

ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವನ್ನು ತಡೆಯಲು ಈ ಆಹಾರಗಳನ್ನು ಸೇವಿಸಿ

ವಾರ್ತಾ ಭಾರತಿ : 14 Oct, 2019

ಕೊಲೆಸ್ಟ್ರಾಲ್ ನಮ್ಮ ರಕ್ತದಲ್ಲಿರುವ ಒಂದು ವಿಧದ ಕೊಬ್ಬು ಆಗಿದ್ದು,ಅಪಧಮನಿಗಳಲ್ಲಿ ಸಂಗ್ರಹಗೊಳ್ಳುವ ಮೂಲಕ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಹೃದಯಾಘಾತ ಇಂದು ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ. ಜಗತ್ತಿನ ಪ್ರತಿ ಐವರಲ್ಲಿ ಓರ್ವ ವ್ಯಕ್ತಿ ಒಂದಲ್ಲ ಒಂದು ವಿಧದ ಹೃದ್ರೋಗದಿಂದ ಸಾವನ್ನಪ್ಪುತ್ತಾನೆ.

ಪೋಷಕಾಂಶಗಳ ಕೊರತೆಯಿಂದ ಕೂಡಿದ ಅನಾರೋಗ್ಯಕರ ಆಹಾರ ಶರೀರದಲ್ಲಿ ಕೊಲೆಸ್ಟ್ರಾಲ್ ಹೆಚ್ಚಲು ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಕೊಲೆಸ್ಟ್ರಾಲ್,ಕ್ಯಾಲ್ಸಿಯಂ ಮತ್ತು ಫ್ಯಾಟಿ ಆ್ಯಸಿಡ್‌ಗಳು ಅಪಧಮನಿಗಳಲ್ಲಿ ಸಂಗ್ರಹಗೊಳ್ಳುತ್ತವೆ. ಇದರಿಂದಾಗಿ ಅಪಧಮನಿಗಳು ಸಂಕುಚಿತಗೊಂಡು ಹೃದಯಕ್ಕೆ ರಕ್ತಪೂರೈಕೆಗೆ ವ್ಯತ್ಯಯವುಂಟಾಗುತ್ತದೆ ಮತ್ತು ಇದು ಹೃದ್ರೋಗಗಳು ಹಾಗೂ ಹೃದಯಾಘಾತಕ್ಕೆ ಕಾರಣವಾಗುತ್ತದೆ.

 ಅಪಧಮನಿಗಳಲ್ಲಿ ಉಂಟಾಗಿರುವ ತಡೆಗಳನ್ನು ಸಂಪೂರ್ಣವಾಗಿ ನಿವಾರಿಸುವ ಯಾವುದೇ ಜಾದೂ ಆಹಾರವಿಲ್ಲ. ಆದರೆ ಕೆಲವು ಆಹಾರಗಳು ಅವುಗಳನ್ನು ಕ್ರಮೇಣ ಕಡಿಮೆ ಮಾಡುತ್ತವೆ. ಇದರ ಜೊತೆಗೆ ದೈನಂದಿನ ವ್ಯಾಯಾಮ ಮತ್ತು ಶರೀರದ ತೂಕ ಇಳಿಸಿಕೊಳ್ಳುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿಕೊಳ್ಳಬಹುದು. ಇಂತಹ ಕೆಲವು ಆಹಾರಗಳ ಕುರಿತು ಮಾಹಿತಿಯಿಲ್ಲಿದೆ......

►ಓಟ್ಸ್

  ಓಟ್ಸ್ ಅಥವಾ ತೋಕೆಗೋದಿ ಹೃದಯಕ್ಕೆ ಲಾಭಗಳನ್ನು ನೀಡುವ ಆಹಾರಗಳಲ್ಲಿ ಒಂದಾಗಿದ್ದು,ಇದೇ ಕಾರಣದಿಂದ ವಿಶ್ವಾದ್ಯಂತ ಜನಪ್ರಿಯವಾಗಿದೆ. ತನ್ನಲ್ಲಿರುವ ಸಮೃದ್ಧ ನಾರಿನಿಂದಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಮತ್ತು ಅಪಧಮನಿಗಳಲ್ಲಿಯ ತಡೆಗಳನ್ನು ನಿವಾರಿಸಲು ಅತ್ಯುತ್ತಮ ಆಹಾರವಾಗಿದೆ. ಹೃದ್ರೋಗಗಳಿಂದ ಬಳಲುತ್ತಿರುವವರು ಪ್ರತಿ ದಿನ ಬೆಳಿಗ್ಗೆ ಬ್ರೇಕ್‌ಫಾಸ್ಟ್‌ನಲ್ಲಿ ಒಂದು ಬೌಲ್‌ನಷ್ಟು ಓಟ್ಸ್ ಸೇವಿಸುವ ಮೂಲಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ.

►ಬೇಳೆಗಳು

 ಭಾರತೀಯರ ಪಾಲಿಗೆ ಬೇಳೆಗಳು ಪ್ರಧಾನ ಆಹಾರವಾಗಿವೆ. ತೊಗರಿ,ಹೆಸರು,ಉದ್ದು,ಮಸೂರ,ಕಡಲೆ ಇತ್ಯಾದಿ ಬೇಳೆಗಳು ಪ್ರೋಟಿನ್‌ನ ಗಣಿಗಳಾಗಿವೆ. ಬೇಳೆಗಳಲ್ಲಿರುವ ನಾರು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ,ಹೀಗಾಗಿ ಅವುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಬೇಳೆಗಳು ಕಡಿಮೆ ಕೊಬ್ಬನ್ನು ಹೊಂದಿದ್ದು,ಕ್ಯಾಲ್ಸಿಯಂ,ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಇತ್ಯಾದಿಗಳಂತಹ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಹೀಗಾಗಿ ಬೇಳೆ ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಅತ್ಯುತ್ತಮ ಆಹಾರವಾಗಿದೆ.

►ಅರಿಷಿಣ

ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದಲೂ ಅರಿಷಿಣವು ಔಷಧಿಯಾಗಿ ಬಳಕೆಯಾಗುತ್ತಿದೆ. ಅರಿಷಿಣದಲ್ಲಿರುವ ಕರ್ಕುಮಿನ್ ಎಂಬ ವಿಶೇಷ ಉತ್ಕರ್ಷಣ ನಿರೋಧಕವು ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹಗೊಳ್ಳಲು ಅವಕಾಶ ನೀಡುವುದಿಲ್ಲ. ಹೀಗಾಗಿ ನಮ್ಮ ಆಹಾರದಲ್ಲಿ ಅರಿಷಿಣ ಅತ್ಯಗತ್ಯವಾಗಿ ಇರಲೇಬೇಕು. ಅಡಿಗೆಯಲ್ಲಿ ಬಳಸುವ ಜೊತೆಗೆ ಅರಿಷಿಣವನ್ನು ಹಾಲಿಗೆ ಬೆರೆಸಿಕೊಂಡೂ ಸೇವಿಸಬಹುದು. ಇದು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ.

►ಬ್ರಾಕೊಲಿ

ಕ್ಯಾಬೇಜ್ ಕುಟುಂಬಕ್ಕೆ ಸೇರಿದ ಬ್ರಾಕೊಲಿ ಅಥವಾ ಕೋಸುಗಡ್ಡೆಯು ಹಲವಾರು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ಶರೀರಕ್ಕೆ ಲಾಭದಾಯಕವಾಗಿದೆ. ಬ್ರಾಕೊಲಿ ಸೇವನೆಯಿಂದ ಕ್ಯಾನ್ಸರ್ ಮತ್ತು ಹೃದ್ರೋಗಗಳನ್ನು ದೂರವಿಡಬಹುದು ಎನ್ನುವುದನ್ನು ಇತ್ತೀಚಿನ ಸಂಶೋಧನೆಗಳು ತೋರಿಸಿವೆ. ಬ್ರಾಕೊಲಿಯಲ್ಲಿರುವ ಸಲ್ಫೊರಾಫೇನ್ ಎಂಬ ವಿಶೇಷ ರಾಸಾಯನಿಕವು ಶರೀರದಲ್ಲಿ ನಿರ್ದಿಷ್ಟ ವಿಧದ ಪ್ರೋಟಿನೊಂದನ್ನು ಕ್ರಿಯಾಶೀಲಗೊಳಿಸುವುದು ಇದಕ್ಕೆ ಕಾರಣವಾಗಿದೆ. ಈ ಪ್ರೋಟಿನ್ ಅಪಧಮನಿಗಳಲ್ಲಿ ಪಾಚಿ ಸಂಗ್ರಹಗೊಳ್ಳುವುದನ್ನು ತಡೆಯುತ್ತದೆ. ಇದಲ್ಲದೆ ಬ್ರಾಕೊಲಿ ಸಾಕಷ್ಟು ಪ್ರಮಾಣದಲ್ಲಿ ನಾರನ್ನೂ ಒಳಗೊಂಡಿದೆ.

►ಗ್ರೀನ್ ಟೀ

 ಗ್ರೀನ್ ಟೀ ಸೇವನೆಯು ಶರೀರದಲ್ಲಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಶರೀರದ ತೂಕ ಇಳಿಸಿಕೊಳ್ಳಲು ಬಯಸುವವರಲ್ಲಿ ಇದು ಜನಪ್ರಿಯವಾಗಿದೆ. ಗ್ರೀನ್ ಟೀಯಲ್ಲಿರುವ ಎಪಿಗ್ಯಾಲೊಕ್ಯಾಟೆಚಿನ್ ಗ್ಯಾಲೇಟ್ ಅಥವಾ ಇಜಿಸಿಜಿ ಎಂಬ ಸಂಯುಕ್ತವು ಅಪಧಮನಿಗಳಲ್ಲಿ ಸಂಗ್ರಹಗೊಂಡಿರುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಈ ಸಂಯುಕ್ತವು ಅಲ್ಝೈಮರ್ಸ್ ಕಾಯಿಲೆಯನ್ನು ತಡೆಯಲೂ ನೆರವಾಗುತ್ತದೆ. ಪ್ರತಿದಿನ ಗ್ರೀನ್ ಟೀ ಸೇವನೆಯಿಂದ ಎಲ್‌ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟ ಕಡಿಮೆಯಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)