varthabharthiಕ್ರೀಡೆ

ಪ್ರೊ ಕಬಡ್ಡಿ ಲೀಗ್: ಬೆಂಗಳೂರು, ಮುಂಬಾ ಸೆಮಿ ಫೈನಲ್‌ಗೆ ಲಗ್ಗೆ

ವಾರ್ತಾ ಭಾರತಿ : 14 Oct, 2019

ಅಹ್ಮದಾಬಾದ್,ಅ.15: ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ತಂಡಗಳು ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿವೆ.

ಸೋಮವಾರ ನಡೆದ ಮೊದಲ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ತಂಡ ಯುಪಿ ಯೋಧಾ ತಂಡವನ್ನು ಹೆಚ್ಚುವರಿ ಸಮಯದಲ್ಲಿ 48-45 ಅಂಕಗಳ ಅಂತರದಿಂದ ಮಣಿಸಿ ಅಂತಿಮ-4ರ ಹಂತ ಪ್ರವೇಶಿಸಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದವು.

ಬೆಂಗಳೂರಿನ ಸ್ಟಾರ್ ರೈಡರ್ ಪವನ್ ಕುಮಾರ್ 20 ಅಂಕ ಗಳಿಸಿ ಗೆಲುವಿನ ರೂವಾರಿಯಾದರು. ಯುಪಿ ಪರ ಕನ್ನಡಿಗ ರಿಶಾಂತ್ ದೇವಾಡಿಗ 11 ಅಂಕ ಗಳಿಸಿ ಒಂದಷ್ಟು ಪ್ರತಿರೋಧ ಒಡ್ಡಿದರು.

2ನೇ ಎಲಿಮಿನೇಟರ್‌ನಲ್ಲಿ ಯು ಮುಂಬಾ ತಂಡ ಹರ್ಯಾಣ ಸ್ಟೀಲರ್ಸ್ ತಂಡವನ್ನು 46-38 ಅಂಕಗಳ ಅಂತರದಿಂದ ಸೋಲಿಸಿ ಸೆಮಿ ಫೈನಲ್‌ನಲ್ಲಿ ಸ್ಥಾನ ಪಡೆಯಿತು. ಮುಂಬಾ ಪರ ಅಭಿಷೇಕ್ ಸಿಂಗ್(16) ಹಾಗೂ ಅರ್ಜುನ್(15)ಉತ್ತಮ ಪ್ರದರ್ಶನ ನೀಡಿದರು. ಹರ್ಯಾಣದ ಪರ ವಿಕಾಸ್ 13ಹಾಗೂ ಪ್ರಶಾಂತ್ ಕುಮಾರ್ ರೈ 9 ಅಂಕ ಗಳಿಸಿದರು.

ಎಲಿಮಿನೇಟರ್ ಸುತ್ತಿನಲ್ಲಿ ಸೋಲನುಭವಿಸಿರುವ ಯೋಧಾ ಹಾಗೂ ಹರ್ಯಾಣ ತಂಡಗಳು ಟೂರ್ನಿಯಿಂದ ನಿರ್ಗಮಿಸಿದವು. ಅ.16ರಂದು ನಡೆಯಲಿರುವ ಮೊದಲ ಸೆಮಿ ಫೈನಲ್‌ನಲ್ಲಿ ಬೆಂಗಳೂರು ತಂಡ ಅಂಕಪಟ್ಟಿಯ ಅಗ್ರಸ್ಥಾನಿ ದಬಾಂಗ್ ದಿಲ್ಲಿಯನ್ನು ಎದುರಿಸಿದರೆ, 2ನೇ ಸೆಮಿ ಫೈನಲ್‌ನಲ್ಲಿ ಯು ಮುಂಬಾ ತಂಡ 2ನೇ ಸ್ಥಾನಿ ಬಂಗಾಳ ವಾರಿಯರ್ಸ್ ಸವಾಲು ಎದುರಿಸಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)