varthabharthi

ನಿಮ್ಮ ಅಂಕಣ

ಅಗೋಚರ ಹನಿಗಳು ಮತ್ತು ಹನಿಗೂಡಿದ ಹಳ್ಳಗಳು

ವಾರ್ತಾ ಭಾರತಿ : 15 Oct, 2019
-ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ಮಾನ್ಯರೆ,

ವಿಶ್ವದ ಅಗ್ರಪಂಕ್ತಿಯ ಕೋಟ್ಯಧೀಶರ ಪಟ್ಟಿಯಲ್ಲಿ ಭಾರತದ ಕೋಟ್ಯಧೀಶರು ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ ಎಂಬ ಸಂಭ್ರಮದ ಸುದ್ದಿ ಪ್ರಕಟವಾಗಿದೆ. ಭಾರತಾಂಬೆಯ ಈ ಸುಪುತ್ರರಿಂದಾಗಿ (ಸುಪುತ್ರಿಯರು ಒಬ್ಬರೂ ಇಲ್ಲ ಎಂಬ ಕೊರತೆಯ ಮಧ್ಯೆಯೂ) ಭಾರತದ ಬಾವುಟ ಮತ್ತೂ ಮೇಲಕ್ಕೇರಿದೆ ಎಂದು ಸಂಭ್ರಮಿಸುವವರು ಜನಸಾಮಾನ್ಯರ ಮಧ್ಯೆ ಇರುವುದು ಸ್ವಾಭಾವಿಕ. ಒಂದು ಕಡೆ, ಆರ್ಥಿಕ ಬಿಕ್ಕಟ್ಟುಗಳಿಂದ ಪರಿತಪಿಸುತ್ತಿರುವ (ವಿಶ್ವದ ಇತರ ದೇಶಗಳು ಹಾಗಿರಲಿ), ಭಾರತದ ಸದ್ಯದ ಆರ್ಥಿಕತೆಯನ್ನು ಬಿಂಬಿಸುವ ಅಧಿಕೃತ ಅಂಕಿ-ಅಂಶಗಳು, ನಿರುದ್ಯೋಗದ ಮಟ್ಟ, ರಾಷ್ಟ್ರೀಯ ಬ್ಯಾಂಕುಗಳ ವಸೂಲಾಗದ ಸಾಲಗಳ ಬೃಹತ್ ಮೊತ್ತ, ಉದ್ದಿಮೆಗಳ ವ್ಯವಹಾರದಲ್ಲಿ ತೀವ್ರ ಕುಸಿತ, ಲಕ್ಷಾಂತರ ಪ್ರವಾಹ ಸಂತ್ರಸ್ತರು. ಮತ್ತೊಂದು ಕಡೆ, ವಿಪಕ್ಷಗಳ ರಾಜಕಾರಣಿಗಳ ಮೇಲೆ ಐಟಿ, ಇಡಿ ದಾಳಿಗಳು, ಜೊತೆಯಲ್ಲೇ ಆಳುವ ಪಕ್ಷಗಳ ವೈಭವೋಪೇತ ಸಮಾವೇಶ-ಮೆರವಣಿಗೆಗಳು, ಸದಾ ಉತ್ಸವಮೂರ್ತಿಯಾಗಿ ಸಂಚರಿಸುವ ಪ್ರಧಾನಿ ಇವುಗಳ ಮಧ್ಯೆಯೂ ವಿಶ್ವಮಟ್ಟದಲ್ಲಿ ಉನ್ನತ ಸ್ಥಾನ ಪಡೆದ ಕೋಟ್ಯಧೀಶ ಉದ್ಯಮಿಗಳು ನಮ್ಮ ನಡುವೆ ಇದ್ದಾರೆಂಬುದೇ ಭಾರತದ ಬಂಡವಾಳಶಾಹಿ ಆರ್ಥಿಕತೆಯ ವಿಕೃತಿಯತ್ತ ಬೆಟ್ಟುಮಾಡಿ ತೋರಿಸುತ್ತದೆ. ಈ ಕೋಟ್ಯಧೀಶ ಉದ್ದಿಮೆದಾರರೇನೂ ರೈತರಂತೆ ಗದ್ದೆಯಲ್ಲಿಳಿದು ಬೆಳೆ ತೆಗೆಯುವುದಿಲ್ಲ. ದುಡಿಮೆಗಾರರಂತೆ ಬೆವರು ಸುರಿಸಿ ಏನನ್ನೂ ಉತ್ಪಾದಿಸುವುದಿಲ್ಲ. ಆದರೂ ದುಡಿಯುವವರಿಗಿಲ್ಲದ ಆದಾಯ, ಅವರ ದುಡಿಮೆಯಿಂದ ಹುಟ್ಟುವ ಮೌಲ್ಯವನ್ನು ಚಾಕಚಕ್ಯತೆಯಿಂದ ಸಂಗ್ರಹಿಸಿ ಕೋಟ್ಯಧೀಶರೆನಿಸಿಕೊಳ್ಳುವ ‘ಪವಾಡ’ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಮಾತ್ರ ಸಾಧ್ಯ. ಮೇಲುನೋಟಕ್ಕೆ ಈ ಕೋಟ್ಯಧೀಶ ಉದ್ದಿಮೆದಾರರು ಆಕಾಶದಲ್ಲಿದ್ದು ಸಾಮಾನ್ಯಜನರು ನೆಲದಮೇಲೆ ತೆವಳುತ್ತಿರುವಂತೆ ಕಾಣುತ್ತದೆ. ಆದರೆ, ನೆಲದಮೇಲೆ ಬಿದ್ದ ಒಂದೊಂದು ಮಳೆಹನಿಯೂ ಹನಿಗೂಡುತ್ತಾ ಹಳ್ಳವಾಗಿ ತಗ್ಗಿನ ಕಡೆಗೇ ಹರಿಯುವಂತೆ, ಬಂಡವಾಳಶಾಹಿ ಆರ್ಥಿಕತೆಯಲ್ಲಿ, ಜನಸಾಮಾನ್ಯರ ಒಂದೊಂದು ಬೆವರಹನಿಯೂ ಉದ್ದಿಮೆದಾರರ ಸಂಚಯಿತ ಮೌಲ್ಯವಾಗಿ, ಬಂಡವಾಳದ ಕಡೆ ಹರಿಯುತ್ತದೆ. ವಾಸ್ತವದಲ್ಲಿ ಈ ಕೋಟ್ಯಧೀಶರ ಕಣ್ಣು ಕುಕ್ಕುವ ಸಂಪತ್ತು ಜನಸಾಮಾನ್ಯರಾದ ದುಡಿಮೆಗಾರರ ಅಗೋಚರ ಬೆವರಹನಿಗಳೇ. ಅಂದರೆ ಭಾರತದ ಕುಸಿದ ಆರ್ಥಿಕತೆ, ಬಿಕ್ಕಟ್ಟು, ನಿರುದ್ಯೋಗ ಮತ್ತು ಭ್ರಷ್ಟಾಚಾರಗಳ ಹಿಂದಿರುವ ಶ್ರಮದ್ರೋಹದ ಫಲವಾಗಿ ಶ್ರಮಿಕರಿಗೆ ನ್ಯಾಯವಾಗಿ ಸಲ್ಲಬೇಕಾಗಿದ್ದೂ ಸಲ್ಲದ ಅವರ ಶ್ರಮಫಲವೇ ಈ ಉನ್ನತ ಶ್ರೇಣಿಗೇರಿಸಿದ ಕೋಟ್ಯಧೀಶರ ಸಂಪತ್ತಾಗಿ ರೂಪತಾಳಿವೆ ಅಷ್ಟೆ.

-ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)