varthabharthi


ವಿಶೇಷ-ವರದಿಗಳು

ಬಿಜೆಪಿ, ಆರೆಸ್ಸೆಸ್ ಆರೋಪಗಳು ಸಂಪೂರ್ಣ ಸುಳ್ಳು

5 ನಿಮಿಷಗಳಲ್ಲಿ 3 ಹತ್ಯೆ: ಬಂಗಾಳ ತ್ರಿವಳಿ ಕೊಲೆಯ ಅಸಲಿ ಕಥೆ ಇಲ್ಲಿದೆ

ವಾರ್ತಾ ಭಾರತಿ : 15 Oct, 2019

ಅಕ್ಟೋಬರ್ 8ರಂದು ದುರ್ಗಾಪೂಜೆಯ ಕೊನೆಯ ದಿನ ಬಂಧು ಪ್ರಕಾಶ್ ಪಾಲ್ ಮತ್ತು ಅವರ ಕುಟುಂಬಕ್ಕೂ ಕೊನೆಯ ದಿನವಾಗಿತ್ತು. ಅಂದು ಮನೆಗೆ ಬಂದಿದ್ದ ಆರೋಪಿ ಉತ್ಪಲ್ ಬೆಹಾರ ಪ್ರಕಾಶ್ ಪಾಲ್, ಅವರ ಗರ್ಭಿಣಿ ಪತ್ನಿ ಮತ್ತು 6 ವರ್ಷದ ಪುತ್ರನನ್ನು ನಿರ್ದಯವಾಗಿ ಕೊಲೆಗೈದಿದ್ದ. 5 ನಿಮಿಷಗಳೊಳಗೆ 3 ಕೊಲೆಗಳು ನಡೆದಿತ್ತು.

ಈ ಹತ್ಯೆಗಳ ಬಗ್ಗೆ ದೇಶಾದ್ಯಂತ ಸುದ್ದಿಯಾಗುತ್ತಲೇ ಆನ್ ಲೈನ್ ನಲ್ಲಿ ದ್ವೇಷದ ಸಂದೇಶಗಳು ಹರಡಲಾರಂಭಿಸಿತು. ಹತ್ಯೆಯಾದ ಪ್ರಕಾಶ್ ಪಾಲ್ ಸಂಘಟನೆಯ ಕಾರ್ಯಕರ್ತ ಎಂದು ಆರೆಸ್ಸೆಸ್ ಪ್ರತಿಪಾದಿಸಿದರೆ, ಬಿಜೆಪಿಯು ಈ ಕೊಲೆ ಹಿಂದಿ 'ಜಿಹಾದಿ ಶಕ್ತಿ'ಗಳಿವೆ ಎಂದು ಆರೋಪಿಸಿತು. ಆದರೆ ಘಟನೆಗೆ ಸಂಬಂಧಿಸಿ ನಂತರ ಮಾತನಾಡಿದ್ದ ಪ್ರಕಾಶ್ ಪಾಲ್ ಅವರ ತಾಯಿ "ನನ್ನ ಪುತ್ರ ಆರೆಸ್ಸೆಸ್ ಕಾರ್ಯಕರ್ತನಲ್ಲ" ಎಂದು ಸ್ಪಷ್ಟಪಡಿಸಿದ್ದರು.

ಈ ಘಟನೆಗೆ ರಾಜಕೀಯ, ಧಾರ್ಮಿಕ ಬಣ್ಣ ಬಳಿಯುವ ಹಲವು ಪ್ರಯತ್ನಗಳು ಆನ್ ಲೈನ್ ನಲ್ಲಿ ನಡೆಯಿತು. ಇದಕ್ಕೆ ಪೂರಕವಾದ ಫೊಟೊಗಳು, ಪೋಸ್ಟ್ ಗಳು ಫೇಸ್ ಬುಕ್, ವಾಟ್ಸ್ಯಾಪ್, ಟ್ವಿಟರ್ ಗಳಲ್ಲಿ ವೈರಲ್ ಆದವು. ಆದರೆ ಇದೀಗ ಪೊಲೀಸರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ರಾಜಕೀಯ ಕಾರಣಕ್ಕೆ ನಡೆದ ಹತ್ಯೆಗಳಲ್ಲ. ಬದಲಾಗಿ, ಹಣಕಾಸಿನ ವಿಚಾರಣಕ್ಕೆ ನಡೆದ ಕೊಲೆಗಳು ಎಂದಿದ್ದಾರೆ.

ಈ ಘಟನೆಯ ಪ್ರಮುಖ ಆರೋಪಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಈತನ ಹೆಸರು ಉತ್ಪಲ್ ಬೆಹರಾ. ಈತ ಕೊಲೆಗೀಡಾದ ಪ್ರಕಾಶ್ ಪಾಲ್ ಅವರ ಮನೆ ಸಮೀಪದಲ್ಲೇ ವಾಸಿಸುತ್ತಿದ್ದ.

ಇನ್ಶೂರೆನ್ಸ್ ವ್ಯವಹಾರ ನಡೆಸುತ್ತಿದ್ದ ಪ್ರಕಾಶ್ ಪಾಲ್ ಅವರಿಂದ ಉತ್ಪಲ್ ಬೆಹ್ರಾ ಎರಡು ಎಲ್‌ಐಸಿ ಪಾಲಿಸಿಗೆ ಹಣ ಪಾವತಿಸಿದ್ದ.  ಪಾಲ್ ಮೊದಲ ಪಾಲಿಸಿಗೆ ರಶೀದಿ ನೀಡಿದ್ದರು. ಆದರೆ, ಎರಡನೇ ಪಾಲಿಸಿಗೆ ರಶೀದಿ ನೀಡಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಕೆಲವು ವಾರಗಳ ಕಾಲ ಪಾಲ್ ಹಾಗೂ ಬೆಹ್ರಾ ನಡುವೆ ಜಗಳ ಕೂಡ ನಡೆದಿತ್ತು. ಪಾಲ್ ಬೆಹ್ರಾನನ್ನು ಅವಮಾನಿಸಿದ್ದರು. ಇದರಿಂದ ಕ್ರೋಧಗೊಂಡಿದ್ದ ಬೆಹ್ರಾ ಹತ್ಯೆಗೆ ಸಂಚು ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಧ್ಯಾಹ್ನ 12:06ರಿಂದ 12:11ರ ನಡುವೆ ಎಲ್ಲಾ ಕೊಲೆಗಳು ನಡೆದಿವೆ. ಮನೆಯೊಳಗೆ ಪ್ರವೇಶಿಸುತ್ತಲೇ ಆತ ಈ ಕೃತ್ಯವೆಸಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಪೊಲೀಸರೇ ಆರೋಪಿಯನ್ನು ಬಂಧಿಸಿ, ಆತ ಸ್ವತಃ ತಪ್ಪೊಪ್ಪಿಕೊಂಡ ನಂತರವೂ ಆರೆಸ್ಸೆಸ್ ತನ್ನ ಪ್ರತಿಪಾದನೆಯನ್ನು ಬಿಟ್ಟಿಲ್ಲ. ರಾಜ್ಯದ ಬಿಜೆಪಿ ನಾಯಕರಂತೂ ಈ ಕೊಲೆಗಳ ಹಿಂದೆ 'ಜಿಹಾದಿಗಳ ಕೈವಾಡವಿದೆ' ಎಂದು ಆರೋಪಿಸುತ್ತಿದ್ದಾರೆ.

"ನಾವು ಈ ತನಿಖೆಯನ್ನು ನಂಬುವುದಿಲ್ಲ. ಬಿಜೆಪಿ ಕಾರ್ಯಕರ್ತರ ಹತ್ಯೆಯಾದರೆ ಪೊಲೀಸರು ಅದನ್ನು ಆತ್ಮಹತ್ಯೆ ಅಥವಾ ಕುಟುಂಬ ಕಲಹ ಎನ್ನುತ್ತಾರೆ. ನಾವು ನಮ್ಮ ಆರೋಪಗಳಿಗೆ ಬದ್ಧರಾಗಿದ್ದೇವೆ. ಈ ಘಟನೆಯ ಹಿಂದೆ ಜಿಹಾದಿಗಳು ಇದ್ದಾರೆ" ಎಂದು ರಾಜ್ಯದ ಬಿಜೆಪಿ ನಾಯಕ ಸಯಾಂತನ್ ಬಸು ಹೇಳಿದ್ದಾಗಿ 'ದ ಪ್ರಿಂಟ್' ವರದಿ ಮಾಡಿದೆ.

ಆದರೆ ಘಟನೆ ನಡೆದು ಕೆಲ ದಿನಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಪ್ರಕಾಶ್ ಪಾಲ್ ಕುಟುಂಬಸ್ಥರು, ಪ್ರಕಾಶ್ ಪಾಲ್ ಯಾವುದೇ ರಾಜಕೀಯ ಪಕ್ಷ ಯಾ ಸಂಘಟನೆಯ ಜತೆ ನಂಟು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

"ಆತ ಒಂದು ಬಿಳಿ ಕಾಗದದಂತಿದ್ದ. ಆತ ಬಿಜೆಪಿ ಸದಸ್ಯನೆಂದು ನಿಮಗೆ ಯಾರು ಹೇಳಿದ್ದು?, ಆತ ಯಾವತ್ತೂ ಬಿಜೆಪಿ ಅಥವಾ ತೃಣಮೂಲ ಕಾಂಗ್ರೆಸ್ ಜತೆ ಸಂಬಂಧ ಹೊಂದಿರಲಿಲ್ಲ. ಆತ ಯಾವತ್ತೂ ಆರೆಸ್ಸೆಸ್ ಜತೆಗಿರಲಿಲ್ಲ. ಸುಳ್ಳನ್ನು ಹರಡಲಾಗುತ್ತಿದೆ'' ಎಂದು ಪ್ರಕಾಶ್ ಪಾಲ್ ತಾಯಿ, 68 ವರ್ಷದ ಮಾಲಾ ಪಾಲ್ ಆಕ್ರೋಶದಿಂದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)