varthabharthi


ನಿಮ್ಮ ಅಂಕಣ

ಆಡಳಿತ ಪಾರದರ್ಶಕವಿದ್ದರೆ ಆರ್‌ಟಿಐ ತಿದ್ದುಪಡಿಯೇಕೆ?

ವಾರ್ತಾ ಭಾರತಿ : 16 Oct, 2019
-ಲಕ್ಷ್ಮೀಕಾಂತರಾಜು ಎಂ. ಜಿ., ಮಠ, ಗುಬ್ಬಿ

ಮಾನ್ಯರೇ,

‘‘ಸರಕಾರದ ಆಡಳಿತದಲ್ಲಿ ಪಾರದರ್ಶಕತೆ ಇರುವುದರಿಂದ ಮಾಹಿತಿ ಹಕ್ಕು ಅಡಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದು ನಮ್ಮ ಸ್ವಚ್ಛ ಆಡಳಿತ ವ್ಯವಸ್ಥೆಗೆ ಉದಾಹರಣೆ’’ ಎಂದು ಕೇಂದ್ರ ಗೃಹ ಸಚಿವರು ಕೇಂದ್ರ ಮಾಹಿತಿ ಆಯೋಗ ವಾರ್ಷಿಕ ಸಭೆಯಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ.

ಸಚಿವರ ಮಾತಿನಂತೆ ದೇಶದ ಆಡಳಿತದಲ್ಲಿ ಪಾರದರ್ಶಕತೆ ಕಂಡಿದ್ದರೆ ನಾವು ಕೂಡ ಸಂತಸ ಪಡಬಹುದಿತ್ತು. ಆದರೆ, ಆಡಳಿತದಲ್ಲಿ ಮಿತ ಪಾರದರ್ಶಕವೂ ಕಾಣದಾಗಿದೆ. ಸಚಿವರು ಹೇಳಿದಂತೆ ಆರ್‌ಟಿಐ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿರಬಹುದೇನೋ. ಕಾರಣ, ಆಡಳಿತ ಪಾರದರ್ಶಕದ ಕತೆಯಲ್ಲ. ಕೇಂದ್ರ ಸರಕಾರವು ಈ ಕಾಯ್ದೆಗೆ ಅನೇಕ ತಿದ್ದುಪಡಿ ತಂದು ಹಲ್ಲುಕಿತ್ತ ಹಾವಿನಂತೆ ಮಾಡಿರುವುದು ಮತ್ತು ಕಾಯ್ದೆಯ ಮೂಲ ಸ್ವರೂಪವನ್ನೇ ಬದಲಾಯಿಸಿರುವುದು ಅರ್ಜಿ ಸಲ್ಲಿಸಲು ಕಾರ್ಯಕರ್ತರೂ ಹಿಂದೇಟು ಹಾಕುತ್ತಿದ್ದಾರೆ.

ಇದೆಲ್ಲದರ ಜೊತೆಗೆ, ಸ್ಥಳೀಯ ಕಚೇರಿಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಅರ್ಜಿಯಲ್ಲಿ ಕೋರಿದ ಮಾಹಿತಿಯು ಕಾಯ್ದೆಯ ವ್ಯಾಪ್ತಿಯಲ್ಲಿದ್ದರೂ ಸಕಾರಣವಲ್ಲದ ಹಿಂಬರಹ ನೀಡಿ ಮಾಹಿತಿ ನಿರಾಕರಿಸಲಾಗುತ್ತಿದೆ. ಇದು ಪಾರದರ್ಶಕವೇ?

ಒಂದು ಕಚೇರಿಯಿಂದ ವರ್ಷದಲ್ಲಿ ಒಬ್ಬ ಅರ್ಜಿದಾರನಿಗೆ ಮೂರು ಅರ್ಜಿಗೆ ಮಾತ್ರ ಮಾಹಿತಿ ನೀಡಲಾಗುವುದೆಂದು ಅರ್ಜಿದಾರರೊಬ್ಬರು ಮೂರು ಅರ್ಜಿಗೆ ಮೇಲ್ಪಟ್ಟು ಅರ್ಜಿ ಸಲ್ಲಿಸಿದರೆ ಮಾಹಿತಿಯನ್ನೇ ನೀಡುತ್ತಿಲ್ಲ. ಮಾನ್ಯ ಸಚಿವರೇ ಇಷ್ಟು ಸಾಕಲ್ಲವೆ ಅರ್ಜಿದಾರರ ಸಂಖ್ಯೆ ಕಡಿಮೆಯಾಗಲು? ಈ ಎಲ್ಲ ಕಾರಣಗಳಿಂದ ಮಾಹಿತಿ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಸಚಿವರು ಇದನ್ನೇ ಹೇಳಿರಬಹುದು. ಮಾನ್ಯ ಸಚಿವರೇ ಪಾರದರ್ಶಕತೆ ಎನ್ನುವುದು ಕೇವಲ ಮಾತಿನಲ್ಲಿರದೆ ಅದನ್ನು ಆಡಳಿತದಲ್ಲಿ ಜಾರಿಗೆ ತನ್ನಿ. ತಮ್ಮ ಪಾರದರ್ಶಕತೆಯನ್ನು ಪ್ರಶ್ನಿಸಿ ನೋಡುವವರಿಗೆ ಅವಕಾಶ ನೀಡಿ. ಅದನ್ನು ಬಿಟ್ಟು ಅಪಾರದರ್ಶಕ ಕತೆ ಹೇಳಬೇಡಿ.

-ಲಕ್ಷ್ಮೀಕಾಂತರಾಜು ಎಂ. ಜಿ., ಮಠ, ಗುಬ್ಬಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)