varthabharthiವೈವಿಧ್ಯ

ಆರೆಸ್ಸೆಸ್ ಮತ್ತು ಮಹಿಳಾ ಸಬಲೀಕರಣ

ವಾರ್ತಾ ಭಾರತಿ : 17 Oct, 2019
ನೇಹಾ ದಭಾಡೆ

ಭಾಗ-2

ಲಿಂಗಾಧಾರಿತ ಪರಿಕಲ್ಪನೆಯ ಹಿಂದೂ ರಾಷ್ಟ್ರದಲ್ಲಿ ಮಹಿಳೆಯರು ಪುರುಷರಿಗೆ ಅಡಿಯಾಳಾಗಿರುತ್ತಾರೆ. ಆರೆಸ್ಸೆಸ್ ಮಹಿಳೆಯರನ್ನು ದೇವತೆಗಳು ಹಾಗೂ ಭಾರತ ಮಾತಾ ಎಂದು ಹೊಗಳುತ್ತದೆ. ಆದರೆ ಇದೊಂದು ಶೂನ್ಯವಾದ ಮುಖವಾಡ.

ಹೀಗಾಗಿ ವಿದೇಶಿ ಮಾಧ್ಯಮದ ಎದುರು ಭಾಗವತ್ ಆಡಿರುವ ಮಾತುಗಳು ಮಹಿಳೆಯರ ಸ್ಥಾನಮಾನದಂತಹ ವಿಷಯಗಳಲ್ಲಿ ಹೆಚ್ಚು ಉದಾರವಾದಿಯಾಗಲು ಆರೆಸ್ಸೆಸ್ ಬದಲಾಗುತ್ತಿದೆ ಎಂದು ಚಿತ್ರಿಸಲು ಹಾಡಿದ ಬಾಯಿ ಉಪಚಾರದ ಮಾತುಗಳು.

ಆರೆಸ್ಸೆಸ್ ಹಿಂದೂ ರಾಷ್ಟ್ರ ಪರಿಕಲ್ಪನೆಯಿಂದ ಮಹಿಳೆಯರಿಗೆ ಈ ಮುಖ್ಯ ಪಾತ್ರಗಳನ್ನು ನೀಡಲಾಗಿರುವುದು ಕಂಡು ಬರುತ್ತದೆ. ಪುರುಷಪ್ರಧಾನ ಚೌಕಟ್ಟಿನಲ್ಲಿರುವ ಈ ಪಾತ್ರಗಳು ಮಹಿಳೆಯರು ಸ್ವತಃ ನಿರ್ಧಾರ ತೆಗೆದುಕೊಳ್ಳುವುದು ಹೇಗೆ ಅಡ್ಡ ಬರುತ್ತದೆ ಎಂಬುದನ್ನು ತೋರಿಸುತ್ತದೆ.

ಕುಟುಂಬದ ಪರಿಕಲ್ಪನೆ

ಆರೆಸ್ಸೆಸ್‌ಗೆ ಕುಟುಂಬವು ‘ಭಾರತೀಯ’ ಮೌಲ್ಯಗಳ ತಳಹದಿ ಅದು ‘ಕುಟುಂಬ ಪ್ರಬೋಧನ್’ ಎಂಬ ಒಂದು ಕಾರ್ಯಕ್ರಮವನ್ನು, ಯೋಜನೆಯನ್ನು ಹೊಂದಿದೆ. ಕುಟುಂಬದ ಚೌಕಟ್ಟನ್ನು ಬಲಪಡಿಸುವುದಕ್ಕಾಗಿ ಈ ಯೋಜನೆ ಇದೆ.

ಮಹಿಳೆಯ ಮುಖ್ಯ ಕರ್ತವ್ಯ ತಾಯ್ತನಕ್ಕೆ ಸಂಬಂಧಿಸಿದ್ದಾಗಿದೆ. ಕುಟುಂಬದ ಸಮತೋಲನವನ್ನು ಹದಗೆಡಿಸುವ ಯಾವುದೇ ರೀತಿಯ ವಿರೋಧವನ್ನು, ಪ್ರತಿರೋಧವನ್ನು ಸಹಿಸಲಾಗುವುದಿಲ್ಲ. ಉದಾಹರಣೆಗೆ ರಾಷ್ಟ್ರೀಯ ಸೇವಿಕಾ ಸಮಿತಿಯ ಮಹಾ ಕಾರ್ಯದರ್ಶಿ ಸೀತಾ ಅನ್ನದಾನಮ್‌ರವರು ಮಹಿಳೆಯರಿಗೆ ತಮ್ಮ ಕುಟುಂಬದ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಪಾಲು ನೀಡುವುದನ್ನು ಒಪ್ಪುವುದಿಲ್ಲ: ‘‘ಮಹಿಳೆಯರ ಹಕ್ಕುಗಳ ಮತ್ತು ನಮ್ಮ ಪರಂಪರೆಗಳ ನಡುವೆ ಒಂದು ಸಮತೋಲನ ಇರಬೇಕು ಮತ್ತು ಇದನ್ನು ಶಾಸ್ತ್ರಗಳ ಆಧಾರದಲ್ಲಿ ಸಾಧಿಸಬೇಕು. ಇಲ್ಲವಾದಲ್ಲಿ ಅದು ನಮ್ಮ ಕುಟುಂಬಗಳನ್ನು ಒಡೆಯುತ್ತದೆ ಮತ್ತು ಸಹೋದರರನ್ನು ಸಹೋದರಿಯರ ವಿರುದ್ಧ ಎತ್ತಿಕಟ್ಟುತ್ತದೆ’’ (ಭಾರದ್ವಾಜ್, 2016)

ಮುಂದುವರಿದು ಅವರು ವೈವಾಹಿಕ ಅತ್ಯಾಚಾರ ಎಂಬುದಿಲ್ಲ ಎಂದು ಹೇಳಿದರು. ತಮ್ಮ ಗಂಡಂದಿರ ಬಳಿ ಲೈಂಗಿಕ ವಿಷಯದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸುವ, ನಿರಾಕರಿಸುವ ಹಕ್ಕು ಇಲ್ಲ. ಅವರು ನಿರಾಕರಿಸಿದಲ್ಲಿ ಅದರಿಂದ ವಿವಾಹದಲ್ಲಿ ‘ಸುಖ’ (ಬ್ಲಿಸ್)ದ ಮೇಲೆ ಪರಿಣಾಮವಾಗುತ್ತದೆ.

ಪತಿ ಪತ್ನಿಯನ್ನು ಬಿಟ್ಟು ಬಿಡಬಹುದಾದ್ದರಿಂದ (ಡಿಸ್‌ಓನ್‌ಮಾಡಬಹುದಾದ್ದರಿಂದ) ಮಹಿಳೆಯರು ಹೇಗೆ ವಿವಾಹ ಮತ್ತು ಕುಟುಂಬದಲ್ಲಿ ಪುರುಷರಿಗೆ ಅಧೀನರು ಎಂದು ಭಾಗವತರು ಈ ಹಿಂದೆ ವಿವರಿಸಿದ್ದಾರೆ. ‘‘ಗಂಡ ಮತ್ತು ಹೆಂಡತಿ ಒಂದು ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ. ಒಪ್ಪಂದದ ಪ್ರಕಾರ ಗಂಡ ಹೆಂಡತಿಗೆ ನೀನು ನನ್ನ ಮನೆಯನ್ನು ನೋಡಿಕೊಳ್ಳಬೇಕು ಮತ್ತು ನಾನು ನಿನ್ನ ಎಲ್ಲ ಅವಶ್ಯಕತೆಗಳನ್ನು ಪೂರೈಸುತ್ತೇನೆ ಎಂದು ಹೇಳಿದ್ದಾನೆ. ನಾನು ನಿನ್ನನ್ನು ಸುರಕ್ಷಿತವಾಗಿ ಇಡುತ್ತೇನೆ. ಆದ್ದರಿಂದ ಗಂಡ ಒಪ್ಪಂದದ ನಿಯಮಗಳನ್ನು ಪಾಲಿಸುತ್ತಾನೆ. ಹೆಂಡತಿ ಒಪ್ಪಂದವನ್ನು ಪಾಲಿಸುವವರೆಗೆ ಗಂಡ ಅವಳ ಜೊತೆ ಇರುತ್ತಾನೆ. ಹೆಂಡತಿ ಒಪ್ಪಂದವನ್ನು ಉಲ್ಲಂಘಿಸಿದರೆ ಅವನು ಅವಳನ್ನು ತ್ಯಜಿಸಬಹುದು, ಡಿಸ್‌ಓನ್ ಮಾಡಬಹುದು’’ ಎಂದು ಅವರು ಹೇಳಿದ್ದಾರೆ. (ಝಾ,2013)

ತಾಯಿಯಾಗಿ ಪಾತ್ರ ವಹಿಸುವುದು

ತಾಯ್ತನ ಆರೆಸ್ಸೆಸ್‌ಗೆ ಎರಡು ಮಹತ್ವಪೂರ್ಣವಾದ ರೀತಿಗಳಲ್ಲಿ ಮುಖ್ಯವಾಗಿದೆ: ಮೊದಲನೆಯದಾಗಿ, ಮಹಿಳೆಯರು ಮಕ್ಕಳನ್ನು ಹೆತ್ತು ಹಿಂದೂ ರಾಷ್ಟ್ರಕ್ಕೆ ಸೈನಿಕರನ್ನು ನೀಡಬಹುದಾಗಿದೆ. ಎರಡನೆಯದಾಗಿ, ಮಹಿಳೆಯರು ತಮ್ಮ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವಾಗ ಅವರಿಗೆ ‘ಸಂಸ್ಕಾರ’ (ಸಂಸ್ಕೃತಿ)ವನ್ನು ನೀಡಬೇಕು ಹಾಗೂ ಅವರಲ್ಲಿ ಹಿಂದುತ್ವದ ಬಗ್ಗೆ ಹೆಮ್ಮೆಯನ್ನು ಬೆಳೆಸಬೇಕು. (ಬ್ಯಾನರ್ಜಿ 2003)

ಹಿಂದೂ ದಂಪತಿಗಳು ಹೆಚ್ಚು ಮಕ್ಕಳನ್ನು ಪಡೆಯಬೇಕೆಂಬ ಬಗ್ಗೆ ಭಾಗವತ್ ಯಾಕೆ ಹೆಚ್ಚು ಒತ್ತು ನೀಡುತ್ತಾರೆ ಎಂಬುದನ್ನು ಇದು ವಿವರಿಸುತ್ತದೆ. ಹಿಂದೂಗಳು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳದಿದ್ದರೆ ಅವರು ಅಲ್ಪಸಂಖ್ಯಾತರಾಗುತ್ತಾರೆಂಬ ಭಯದಲ್ಲಿ ಅವರು ಎಚ್ಚರಿಕೆ ನೀಡಿದರು: ‘‘ಪರಿಸ್ಥಿತಿ ಹೀಗೆಯೇ ಉಳಿದರೆ, 2025ರ ವೇಳೆಗೆ ನಮ್ಮದೇ ದೇಶದಲ್ಲಿ ನಮ್ಮ ಅಸ್ತಿತ್ವ ಉಳಿದಿರುವುದಿಲ್ಲ ಎಂಬುದನ್ನು ಮರೆಯಬಾರದು’’(ಭಾರದ್ವಾಜ್ ಮತ್ತು ಮಿಶ್ರಾ, ಇಂಡಿಯನ್ ಎಕ್ಸ್‌ಪ್ರೆಸ್, 2016)

 ಪರಿಶುದ್ಧತೆ

ಮಹಿಳೆಯರಿಗೆ ಸಮಾಜದಲ್ಲಿ ಸಿಗುವ ಗೌರವವನ್ನು ನಿರ್ಧರಿಸುವ ಎರಡು ಅಂಶಗಳಾದ ಪರಿಶುದ್ಧತೆ (ಪಾವಿತ್ರ್ಯ) ಮತ್ತು ಮರ್ಯಾದೆ (ಆನರ್) ಆರೆಸ್ಸೆಸ್‌ಗೆ ಮಹಿಳೆಯರಲ್ಲಿ ಶ್ರೇಷ್ಠ ಗುಣಗಳು. ಮಹಿಳೆಯರನ್ನು ಅಸ್ಮಿತೆಯ, ಐಡೆಂಟಿಟಿಯ ಸಾಕಾರ ಮೂರ್ತಿಗಳೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅವರ ಸಮುದಾಯಕ್ಕೆ ಅವರು ಯಾವುದೇ ರೀತಿಯ ಅಗೌರವ ತರುವಂತಹ ಸಂಬಂಧಗಳನ್ನು ಬೆಳೆಸಬಾರದೆಂದು ನಿರೀಕ್ಷಿಸಲಾಗುತ್ತದೆ. ಆದ್ದರಿಂದ ಆರೆಸ್ಸೆಸ್ ‘ಲವ್ ಜಿಹಾದ್’ ಎಂದು ಕರೆಯುವ ಅಂತರ್-ಧಾರ್ಮಿಕ ವಿವಾಹಗಳ ವಿರುದ್ಧ ಸಮರ ಸಾರಿರುವುದರಲ್ಲಿ ಆಶ್ಚರ್ಯವಿಲ್ಲ.

ಇಂತಹ ಪದಗಳು, ಪರಿಭಾಷೆ ಮತ್ತು ಅಭಿಯಾನವು ಮಹಿಳೆಯರಿಗೆ ತಾವು ತಮಗೆ ಬೇಕಾದ ಸಂಗಾತಿಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಅವರಿಂದ ಕಿತ್ತುಕೊಳ್ಳುತ್ತದೆ. ಅವರ ದೇಹದ ಮೇಲೆ ಅವರಿಗೆ ಇರಬೇಕಾದ ನಿಯಂತ್ರಣವನ್ನು ಅವರಿಗೆ ನಿರಾಕರಿಸುತ್ತದೆ. ಮಹಿಳೆಯರು ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕೆಂಬ ತನ್ನ ಈಗಿನ ಹೇಳಿಕೆಗೆ ವ್ಯತಿರಿಕ್ತವಾಗಿ ಭಾಗವತ್ ಅವರು ಮಹಿಳೆಯರಿಗೆ ಸಮಾಜವು ‘ಲವ್ ಜಿಹಾದ್’ ಬಗ್ಗೆ ಎಚ್ಚರಿಸಬೇಕೆಂದು ಕರೆ ನೀಡಿದ್ದರು. ‘‘ಮುಂದಿನ ತಲೆಮಾರಿನ ಹುಡುಗಿಯರಿಗೆ ‘ಲವ್ ಜಿಹಾದ್’ ಎಂದರೆ ಅದರ ಅರ್ಥವೇನೆಂದು ತಿಳಿಸಿ ಹೇಳಬೇಕು ಮತ್ತು ಅದರ ಬೋನಿಗೆ ಬೀಳದಂತೆ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ಅವರಿಗೆ ಹೇಳಬೇಕು’’ (ಇಕನಾಮಿಕ್ ಟೈಮ್ಸ್, 2014)

ಇನ್ನೊಂದು ಸಂದರ್ಭದಲ್ಲಿ ಭಾಗವತ್ ಲೈಂಗಿಕ ಹಿಂಸೆಗೆ ‘ಪಾಶ್ಚಾತ್ಯ ಸಂಸ್ಕೃತಿ’ ಕಾರಣ ಎನ್ನುತ್ತಾರೆ. ‘‘ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ‘ಭಾರತ’ ಎಲ್ಲಿ ಇಂಡಿಯಾ ಆಗುತ್ತದೋ, ಅಲ್ಲಿ ಆಗ ಅಂತಹ ಘಟನೆಗಳು ಸಂಭವಿಸುತ್ತವೆ. ಎಲ್ಲಿ ಮಹಿಳೆಯರನ್ನು ತಾಯಿ ಎಂದು ನಡೆಸಿಕೊಳ್ಳಲಾಗುತ್ತದೋ, ಅಲ್ಲಿ ಸಮಾಜದ ಪ್ರತಿ ಹಂತದಲ್ಲಿಯೂ ನಿಜವಾದ ಭಾರತೀಯ ಮೌಲ್ಯಗಳನ್ನು ಹಾಗೂ ಸಂಸ್ಕೃತಿಯನ್ನು ಸ್ಥಾಪಿಸಬೇಕು.’’ ಭಾರತದಲ್ಲಿ ಅತ್ಯಾಚಾರಕ್ಕೆ ಏನು ಕಾರಣವೆಂದು ವಿವರಿಸುತ್ತಾ ಭಾಗವತ್ ಹೇಳಿದ ಮಾತು ಇದು. (ಘೋಷ್,2013)

ಉಪಸಂಹಾರ

ಹಿಂದೂ ರಾಷ್ಟ್ರವೇ ಆರೆಸ್ಸೆಸ್‌ನ ಮೂಲ, ಅಸ್ತಿತ್ವ.

ಲಿಂಗಾಧಾರಿತ ಪರಿಕಲ್ಪನೆಯ ಹಿಂದೂ ರಾಷ್ಟ್ರದಲ್ಲಿ ಮಹಿಳೆಯರು ಪುರುಷರಿಗೆ ಅಡಿಯಾಳಾಗಿರುತ್ತಾರೆ. ಆರೆಸ್ಸೆಸ್ ಮಹಿಳೆಯರನ್ನು ದೇವತೆಗಳು ಹಾಗೂ ಭಾರತ ಮಾತಾ ಎಂದು ಹೊಗಳುತ್ತದೆ. ಆದರೆ ಇದೊಂದು ಶೂನ್ಯವಾದ ಮುಖವಾಡ.

ಹೀಗಾಗಿ, ವಿದೇಶಿ ಮಾಧ್ಯಮದ ಎದುರು ಭಾಗವತ್ ಆಡಿರುವ ಮಾತುಗಳು ಮಹಿಳೆಯರ ಸ್ಥಾನಮಾನದಂತಹ ವಿಷಯಗಳಲ್ಲಿ ಹೆಚ್ಚು ಉದಾರವಾದಿಯಾಗಲು ಆರೆಸ್ಸೆಸ್ ಬದಲಾಗುತ್ತಿದೆ ಎಂದು ಚಿತ್ರಿಸಲು ಹಾಡಿದ ಬಾಯಿ ಉಪಚಾರದ ಮಾತುಗಳು. ಅಂದ ಹಾಗೆ, ವಿದೇಶಿ ಮಾಧ್ಯಮದ ಈ ಪತ್ರಿಕಾಗೋಷ್ಠಿ ‘‘ಭವಿಷ್ಯಕಾ ಭಾರತ್-ಆರೆಸ್ಸೆಸ್ ದೃಷ್ಟಿಕೋನ್’’ ಎಂಬ ಮೂರು ದಿನಗಳ ಸಮಾವೇಶದಲ್ಲಿ ಭಾಗವತ್ ಅವರು ಭಾಷಣ ಮಾಡಿದ ಬಳಿಕ ನಡೆದ ಪತ್ರಿಕಾಗೋಷ್ಠಿ. ಆ ಸಮಾವೇಶದಲ್ಲಿ ಆರೆಸ್ಸೆಸ್‌ನ ವರ್ಚಸ್ಸನ್ನು ಹೆಚ್ಚಿಸುವ ಒಂದು ಪ್ರಯತ್ನ ನಡೆಯಿತು. ಆರೆಸ್ಸೆಸ್ ಎಲ್ಲರನ್ನೂ ಒಳಗೊಳ್ಳುವ ಒಂದು ದರ್ಶನ (ವಿಜನ್) ಮತ್ತು ಭಾರತದ ಏಕತೆಯನ್ನು ಸಾಧಿಸುವ ಒಂದು ಸಂಘಟನೆ ಎಂದು ಬಿಂಬಿಸುವ ಒಂದು ಪ್ರಯತ್ನ ಅದಾಗಿತ್ತು. ಎನ್‌ಆರ್‌ಸಿಯ ಪರಿಣಾಮವಾಗಿ ಅಸ್ಸಾಮಿನಲ್ಲಿ 1.9 ಮಿಲಿಯ ಜನರು ದಿಗ್ಬಂಧನ ಕೇಂದ್ರಗಳಲ್ಲಿ ಇರಬೇಕಾಗುವ ಪರಿಸ್ಥಿತಿಯಿಂದ ಅಂತರ್‌ರಾಷ್ಟ್ರೀಯ ಗಮನವನ್ನು ಬೇರೆಡೆಗೆ ಸೆಳೆಯಲು ನಡೆಸಿದ ಪ್ರಯತ್ನ ಇದು. ಆದ್ದರಿಂದ ಭಾರತದಲ್ಲಿ ಮಹಿಳೆಯರ ಸಬಲೀಕರಣದ ಕುರಿತು ಭಾಗವತ್ ಆಡಿರುವ ಮಾತುಗಳು ಟೊಳ್ಳು ಮಾತುಗಳು ಅನ್ನಿಸುತ್ತದೆ.

ಕೃಪೆ: caravandaily.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)