varthabharthiವೈವಿಧ್ಯ

ಕೋಮುವಾದದ ಮುಖಾಮುಖಿ: ಅಂದು-ಇಂದು

ವಾರ್ತಾ ಭಾರತಿ : 17 Oct, 2019
ಮುಝಫ್ಫರ್ ಅಹ್ಮದ್, ಅನುವಾದ: ಡಾ. ಕೃಷ್ಣಪ್ಪ ಕೊಂಚಾಡಿ

ಭಾರತದಲ್ಲಿ ರಾಜಕೀಯ ಅಧಿಕಾರಕ್ಕೆ ‘ಧಾರ್ಮಿಕತೆಯು’ ಮೆಟ್ಟಲು ಆಗಿರುವ ವಾಸ್ತವಾಂಶದ ಹಿನ್ನೆಲೆಯಲ್ಲಿ ನಿಷ್ಕಳಂಕ ಧಾರ್ಮಿಕತೆಯು ಅಮೂರ್ತ ಭ್ರಮೆಯಾಗಿದೆ. ಅದರಲ್ಲಿ ನಿರ್ದಿಷ್ಟವಾಗಿ ಧಾರ್ಮಿಕ ನಂಬಿಕೆಗೆ ಸಂಬಂಧಿಸಿ ಹಿಂದುತ್ವದ ಶಕ್ತಿಗಳು ಎಲ್ಲಾ ಆಯಾಮಗಳನ್ನು ಒಳಹೊಕ್ಕು ತನ್ನ ಬೇಳೆ ಬೇಯಿಸಿ, ಮತೀಯ ದ್ವೇಷದ ವಿಷ ಬೀಜ ನಿರಂತರ ಬಿತ್ತುವ ಸನ್ನಿವೇಶದಲ್ಲಿ ಇಂತಹ ಧಾರ್ಮಿಕತೆಯನ್ನೇ ‘ಜಾತ್ಯತೀತ’ಗೊಳಿಸುತ್ತೇನೆಂಬುದು ಒಂದು ಭ್ರಮೆಯಾಗಿದೆ.

ಪ್ರಸಕ್ತ ಭಾರತದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಆಯಾಮಗಳ ಎಲ್ಲ ನರನಾಡಿಗಳನ್ನು ಪ್ರವೇಶಿಸಿರುವ, ಕೋಮುವಾದದ ಅಪಾಯಕಾರಿ ಸನ್ನಿವೇಶವು ದಿನೇ ದಿನೇ ಹೆಚ್ಚಾಗುತ್ತಿರುವ ಹಾಗೂ ಸರಕಾರವನ್ನು ಕೈವಶಪಡಿಸಿರುವ ಸನ್ನಿವೇಶದಲ್ಲಿ ಜಾತ್ಯತೀತತೆಯ ಸಿದ್ಧಾಂತದ ಮಹತ್ವ ಮತ್ತು ಹೋರಾಟದ ಅನಿವಾರ್ಯತೆಗಳು ಕಾಲದ ಅವಶ್ಯಕತೆಯಾಗಿದೆ. ಸಂಘ ಪರಿವಾರದ ಹಿಂದುತ್ವದ ವಿಷಯುಕ್ತ ಧಾರ್ಮಿಕತೆಗೆ ಪ್ರತಿಯಾಗಿ ಮೃದು ಹಿಂದುತ್ವವನ್ನು ಮುಖಾಮುಖಿಗೊಳಿಸಬೇಕೆಂಬ ವಾದ, ಹಿಂದೂ ಕೋಮುವಾದವನ್ನು ಎದುರಿಸಲು ಧಾರ್ಮಿಕ ನೆಲೆಗಟ್ಟಿನ ಆಚರಣೆ, ಸಂಕೇತ ಮತ್ತು ಸಿದ್ಧಾಂತಗಳನ್ನು ಸಮರ್ಥವಾಗಿ ಉಪಯೋಗಿಸಬೇಕೆಂಬುದನ್ನೂ ಪ್ರಬಲವಾಗಿ ಪ್ರತಿಪಾದಿಸಲಾಗುತ್ತಿದೆ. ಪ್ರಗತಿಪರ ಶಕ್ತಿಗಳು ಮತ್ತು ವ್ಯಕ್ತಿಗಳು ಪ್ರಜ್ಞಾಪೂರ್ವಕವಾಗಿ ಈ ಚಿಂತನೆಯ ಭಾಗವಾಗಬೇಕೆಂದು ಹೇಳಲಾಗುತ್ತದೆ. ಭಾರತದಲ್ಲಿ ರಾಜಕೀಯ ಅಧಿಕಾರಕ್ಕೆ ‘ಧಾರ್ಮಿಕತೆಯು’ ಮೆಟ್ಟಲು ಆಗಿರುವ ವಾಸ್ತವಾಂಶದ ಹಿನ್ನೆಲೆಯಲ್ಲಿ ನಿಷ್ಕಳಂಕ ಧಾರ್ಮಿಕತೆಯು ಅಮೂರ್ತ ಭ್ರಮೆಯಾಗಿದೆ. ಅದರಲ್ಲಿ ನಿರ್ದಿಷ್ಟವಾಗಿ ಧಾರ್ಮಿಕ ನಂಬಿಕೆಗೆ ಸಂಬಂಧಿಸಿ ಹಿಂದುತ್ವದ ಶಕ್ತಿಗಳು ಎಲ್ಲಾ ಆಯಾಮಗಳನ್ನು ಒಳಹೊಕ್ಕು ತನ್ನ ಬೇಳೆ ಬೇಯಿಸಿ, ಮತೀಯ ದ್ವೇಷದ ವಿಷ ಬೀಜ ನಿರಂತರ ಬಿತ್ತುವ ಸನ್ನಿವೇಶದಲ್ಲಿ ಇಂತಹ ಧಾರ್ಮಿಕತೆಯನ್ನೇ ‘ಜಾತ್ಯತೀತ’ಗೊಳಿಸುತ್ತೇನೆಂಬುದು ಒಂದು ಭ್ರಮೆಯಾಗಿದೆ. ಭಾರತದಂತಹ ರಾಷ್ಟ್ರದಲ್ಲಿ ಹಿಂದೂ, ಮುಸ್ಲಿಂ ಕೋಮುಭಾವನೆಯ ಉದ್ದೀಪನೆಯ ಪ್ರಕ್ರಿಯೆಗಳಿಗೆ ಕೆಲವು ಶತಮಾನಗಳ ಚರಿತ್ರೆ ಇರುವಾಗ, ನಾಳೆ ಯಾವುದೇ ಹಿಂದೂಯೇತರ ಧಾರ್ಮಿಕ ನಂಬಿಕೆಯ ಸಂಘಟನೆಗಳೂ ಹಿಂದೂ ಧಾರ್ಮಿಕ ಉತ್ಸವ, ಆಚರಣೆಗಳನ್ನು ಸಂಘಟಿಸಿದ್ದೇ ಆದಲ್ಲಿ ಅದರ ಎಲ್ಲಾ ರಾಜಕೀಯ ಲಾಭ ನೇರವಾಗಿ ಎಲ್ಲಾ ಆಯಾಮಗಳಿಂದಲೂ ಹಿಂದುತ್ವ ಪರ ಸಂಘಟನೆಗಳಿಗೆ ದೊರಕುತ್ತದೆ ಎಂಬುದಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಸಂದರ್ಭದಲ್ಲಿ ಸರಿಸುಮಾರು ಒಂದು ಶತಮಾನದ ಹಿಂದೆ ಅಂದರೆ 1920ರಲ್ಲಿ ಆಗಷ್ಟೇ ಉದಯಿಸಿದ ಭಾರತ ಕಮ್ಯುನಿಸ್ಟ್ ಪಕ್ಷವು 1926ರಲ್ಲಿ ಗುವಾಹಟಿಯಲ್ಲಿ ಜರುಗಿದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಪ್ರತಿನಿಧಿಗಳನ್ನು ಉದ್ದೇಶಿಸಿ ಬಿಡುಗಡೆ ಮಾಡಿದ ಮ್ಯಾನಿಫೆಸ್ಟೋದಲ್ಲಿ ಉಲ್ಲೇಖಿತವಾಗಿರುವ ಕೋಮುವಾದದ ಅಪಾಯ ಮತ್ತು ಅದರ ಅಂದಿನ ಅನ್ವಯಿಕೆ ಮತ್ತು ಪರಿಹಾರಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ನೀಡಿದ ದಿಕ್ಸೂಚಿ ದಸ್ತಾವೇಜು ಸಮಕಾಲೀನ ಸಂದರ್ಭಕ್ಕೂ ಅನ್ವಯಿಸಲು ಯೋಗ್ಯವಾಗಿದೆ. ಮ್ಯಾನಿಫೆಸ್ಟೋದಲ್ಲಿ ಉಲ್ಲೇಖಿತವಾಗಿರುವ ಭಾಗವನ್ನು ಯಥಾ ಪ್ರಕಾರ ನೀಡಲಾಗಿದೆ.

ಕೋಮು ಸಂಘರ್ಷಗಳು

ಕಳೆದ ವರ್ಷ (1925) ದೇಶದಾದ್ಯಂತ ಸಂಭವಿಸಿದ ಕೋಮು ಸಂಘರ್ಷವು ಬಹಳಷ್ಟು ಜನರನ್ನು ಧೃತಿಗೆಡಿಸಿದೆ ಮಾತ್ರವಲ್ಲದೆ ದೇಶವನ್ನು ಧ್ವಂಸಗೊಳಿಸಿದೆ. ಇದು ಖಂಡಿತವಾಗಿಯೂ ಎದೆಗುಂದಿಸುವ ಆಘಾತಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಮತ್ತೆ ಜನರ ಪಕ್ಷವೇ ಪರಿಹಾರವನ್ನು ಕಂಡು ಹಿಡಿಯಬೇಕಾಗುತ್ತದೆ. ಸಮಾಜದಲ್ಲಿರುವ ಮೇಲ್ವರ್ಗದ ಜನತೆ ತಮ್ಮ ಹಕ್ಕು ಮತ್ತು ವಿಶೇಷಾಧಿಕಾರಕ್ಕಾಗಿ ಹೋರಾಟ ಮಾಡುತ್ತಾರೆ. ಆದರೆ ಎರಡೂ ಸಮುದಾಯದಲ್ಲಿ ಇರುವ ಜನಸಾಮಾನ್ಯರಿಗೆ ಸಮಾನವಾದ ಒಂದೇ ಒಂದು ಪ್ರಮುಖ ವಿಷಯವಿರುತ್ತದೆ. ಅದು ಯಾವುದೆಂದರೆ ‘‘ಶೋಷಣೆ’’. ಹಿಂದೂ ಮತ್ತು ಮುಸ್ಲಿಂ ಕಾರ್ಮಿಕರು ಒಂದೇ ಫ್ಯಾಕ್ಟರಿಯಲ್ಲಿ ಬೆವರು ಸುರಿಸಿ ಕಷ್ಟ ಪಡುತ್ತಿರುತ್ತಾರೆ. ಹಿಂದೂ ಮತ್ತು ಮುಸ್ಲಿಂ ರೈತರು ಅಕ್ಕಪಕ್ಕದ ಗದ್ದೆಗಳಲ್ಲಿ ಉಳುಮೆ ಮಾಡುತ್ತಿರುತ್ತಾರೆ. ಅವರಿಬ್ಬರನ್ನು ಸಮಾನವಾದ ರೀತಿಯಲ್ಲಿ ಭೂ ಮಾಲಕರು, ಲೇವಾದೇವಿಗಾರರು ಮತ್ತು ಸಾಮ್ರಾಜ್ಯ ಶಾಹಿಯ ಏಜೆಂಟರು ದರೋಡೆ ಮಾಡುತ್ತಿರುತ್ತಾರೆ. ಮುಸ್ಲಿಂ ಕಾರ್ಮಿಕನಿಗೆ ಆತನ ಮಾಲಕ ಅದೇ ಮತದ ಅನುಯಾಯಿಯಾಗಿದ್ದಲ್ಲಿ ಆತನಿಗೆ ಹೆಚ್ಚಿನ ಮೊತ್ತದ ಕೂಲಿಯನ್ನೇನೂ ಕೊಡುವುದಿಲ್ಲ ಅಥವಾ ಹಿಂದೂ ಭೂ ಮಾಲಕ ತನ್ನ ಹಿಂದೂ ಗೇಣಿದಾರರಿಂದ, ಮುಸ್ಲಿಂ ಗೇಣಿದಾರನಿಗಿಂತ ಕಡಿಮೆ ಪ್ರಮಾಣದ ಗೇಣಿಯನ್ನೇನೂ ವಸೂಲು ಮಾಡುವುದಿಲ್ಲ.

ಇದೇ ನಿಯಮಗಳು ಶೋಷಿತ ಮಧ್ಯವರ್ಗ (ಸಣ್ಣ ವ್ಯಾಪಾರಸ್ಥರು, ಕುಶಲ ಕರ್ಮಿಗಳು ಮೊದಲಾದವರು)ಕ್ಕೂ ದೊಡ್ಡ ಪ್ರಮಾಣದಲ್ಲಿ ಅನ್ವಯವಾಗುತ್ತದೆ. ಜನಸಂಖ್ಯೆಯ ಶೇ.98ರಷ್ಟು ಭಾಗದ ಜನ ‘ಶೋಷಣೆ’ ಎಂಬ ಸಾಮಾನ್ಯ ಬಂಧನದಿಂದ ಬಂಧಿಸಲ್ಪಟಿರುವಾಗ ಕೋಮು ಸಂಘರ್ಷದಲ್ಲಿ ಭಾಗವಹಿಸುವುದಕ್ಕೆ ಯಾವುದೇ ಕಾರಣವಿಲ್ಲ. ಅವರು ತಮ್ಮ ಆರ್ಥಿಕ ಹಿತಾಸಕ್ತಿಯ ಬಗ್ಗೆ ಪ್ರಜ್ಞಾವಂತರಾಗಲು ಸಹಾಯ ಮಾಡಬೇಕು. ಅವರು ತಮ್ಮ ಸಾಮಾನ್ಯ ಶತ್ರುವಾಗಿರುವ ಶೋಷಕ ಕೂಟದ ಶಕ್ತಿಗಳ ವಿರುದ್ಧ ಧೈರ್ಯದಿಂದ ಹೋರಾಡಲು ನಾಯಕತ್ವ ನೀಡುವ ಮೂಲಕ ಕೋಮು ಸಂಘರ್ಷವನ್ನು ಪ್ರಚೋದಿಸುವ ವಿದ್ರೋಹಕ ಧೋರಣೆಯನ್ನು ಬುಡದಿಂದಲೇ ಕಿತ್ತೊಗೆಯಬೇಕು. ಹೌದು... ಇದನ್ನು ರಾತ್ರಿ ಬೆಳಗಾಗುವುದರೊಳಗೆ ಮಾಡಿ ಮುಗಿಸಲು ಸಾಧ್ಯವಿಲ್ಲವೆಂಬುದು ನಿಜ. ದೇಶದ ರಾಷ್ಟ್ರೀಯ ಚಳವಳಿಯ ಪ್ರಮುಖ ಅಂಗಾಂಗಗಳನ್ನು ಕಿತ್ತು ತಿನ್ನುವ ‘ಕೋಮುವಾದ’ ಎಂಬ ಅರ್ಬುಧ ರೋಗ (ಕ್ಯಾನ್ಸರ್)ದ ವಿರುದ್ಧ ಬೇರೆ ಯಾವುದೇ ಪರಿಹಾರೋಪಾಯವಿಲ್ಲ.

 ರಾಷ್ಟ್ರೀಯ ಚಳವಳಿಯಲ್ಲಿ ಆಗಿರುವ ಕುಸಿತವು ಕೋಮು ಸಂಘರ್ಷಕ್ಕೆ ಉತ್ತೇಜನ ನೀಡಿದೆ. ರಾಷ್ಟ್ರೀಯ ಚಳವಳಿಯನ್ನು ಸಮರಧೀರ ಸಾಮೂಹಿಕ ಆಂದೋಲನದ ಕಾರ್ಯಕ್ರಮದ ಮೂಲಕ ಪುನರ್ ಸಂಘಟನೆ ಮಾಡುವುದರಿಂದ ಈ ವಿಭಜನಕಾರಿ ಅಂಶವನ್ನು ಕಿತ್ತೆಸೆಯಬಹುದು. ಅಸಹಕಾರ ಚಳವಳಿ ಮತ್ತು ಖಿಲಾಫತ್ ಆಂದೋಲನಗಳು ರಾಜಕೀಯ ಪ್ರಜ್ಞೆಯ ಖರ್ಚಿನಲ್ಲಿ ಧಾರ್ಮಿಕ ಧರ್ಮಾಂಧತೆಯನ್ನು ತೀವ್ರಗೊಳಿಸಿದೆ. ಈ ಗಂಭೀರ ತಪ್ಪುಗಳನ್ನು ಸರಿಪಡಿಸಬೇಕಾಗಿದ್ದಲ್ಲಿ ರಾಷ್ಟ್ರೀಯ ಚಳವಳಿಯನ್ನು ಭದ್ರವಾದ ಜಾತ್ಯತೀತ ಆಧಾರದ ಮೇಲೆ ನಿಲ್ಲಿಸಬೇಕು. ಜನಸಮೂಹವನ್ನು ರಾಷ್ಟ್ರೀಯತೆಯ ಬ್ಯಾನರಿನಡಿಯಲ್ಲಿ ಅವರ ತುರ್ತಿನ ಆರ್ಥಿಕ ಬೇಡಿಕೆಗಳ ಘೋಷಣೆಯೊಂದಿಗೆ ಒಗ್ಗೂಡಿಸಬೇಕು. ಭೂಮಿಯ ಭೋಗ್ಯ, ಗೇಣಿ, ಬಡ್ಡಿ ವ್ಯಾಪಾರಿಗಳ ವಿಪರೀತ ಬಡ್ಡಿದರ, ಬೆಲೆಗಳು, ಕೂಲಿ ಕೆಲಸದ ಪರಿಸ್ಥಿತಿ, ಪ್ರಾಥಮಿಕ ಶಿಕ್ಷಣ ಇವೆಲ್ಲವುಗಳು ಚಳವಳಿಯ ಅತೀ ಪ್ರಮುಖ ವಿಷಯಗಳಾಗಬೇಕು. ಈ ಮೇಲಿನ ಪ್ರತಿಯೊಂದು ಅಂಶಗಳೂ ಪ್ರಾಮುಖ್ಯವಾಗಿ ಜನರ ಬದುಕಿನ ಬಗ್ಗೆ ಸಂಬಂಧಿಸಿರುವುದರಿಂದಲೇ ‘ಹಿತಾಸಕ್ತಿ’ಗಳ ಗುರುತಿಸುವಿಕೆ ಬಹಳ ಸ್ಪಷ್ಟವಾಗಿ ಮತ್ತು ಸುಲಭವಾಗಿ ನಿರ್ಧರಿಸಲ್ಪಡಬೇಕು. ಈ ಧೋರಣೆೆಯನ್ನು ಅನುಸರಿಸಿ ರೂಪಿಸುವ ಚಳವಳಿಯು ರಾಷ್ಟ್ರೀಯ ಚಳವಳಿಗೆ ಭದ್ರ ಬುನಾದಿಯನ್ನು ನಿರ್ಮಿಸುವುದರೊಂದಿಗೆ ಕೋಮು ಉದ್ವಿಘ್ನತೆಯ ವಿರುದ್ಧ ಸುರಕ್ಷತೆಯ ಗ್ಯಾರಂಟಿಯನ್ನು ನೀಡುತ್ತದೆ.

ಪ್ರಜಾಸತ್ತಾತ್ಮಕ ಸಿದ್ಧಾಂತವು ರಾಷ್ಟ್ರೀಯ ಅಲ್ಪಸಂಖ್ಯಾತರ ವಿರುದ್ಧ ಕಾರ್ಯಪ್ರವೃತ್ತವಾಗಲಾರದು. ಭಾರತದಲ್ಲಿರುವ ಹಿಂದೂಗಳು ಮತ್ತು ಮುಸ್ಲಿಂ ಸಮುದಾಯದ ಮಧ್ಯೆ ಇರುವ ಪರಸ್ಪರ ಅವಿಶ್ವಾಸದ ಬಗ್ಗೆ ಚಾರಿತ್ರಿಕ ಹಿನ್ನೆಲೆ ಇದೆ. ಆದುದರಿಂದ ಕೋಮುವಾದದ ಪ್ರಶ್ನೆಯನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಪ್ರಶ್ನೆಯಾಗಿ ಮುಖಾಮುಖಿಗೊಳಿಸಬೇಕಾಗಿದೆ. ರಾಷ್ಟ್ರೀಯವಾದಿ ವೇದಿಕೆಯ ಒಂದು ಅತೀ ಮುಖ್ಯ ರಾಜಕೀಯ ಕರ್ತವ್ಯ ರಾಷ್ಟ್ರದ ಮತ್ತು ಮತೀಯ ಅಲ್ಪಸಂಖ್ಯಾತರ ರಕ್ಷಣೆಯಾಗಿದೆ. ಒಂದು ವೇಳೆ ರಾಷ್ಟ್ರೀಯವಾದಿ ಚಳವಳಿಯು ಈ ಭರವಸೆಯನ್ನು ನೀಡಲು ಅಂದರೆ ರಕ್ಷಣೆ ಕೊಡಲು ವಿಫಲವಾದರೆ ಸಾಮ್ರಾಜ್ಯಶಾಹಿಯು ಈ ಅವಕಾಶವನ್ನು ಉಪಯೋಗಿಸಿಕೊಂಡು ಅದನ್ನು ‘ನಾನು ಕೊಡುತ್ತೇನೆ’ ಎಂಬ ಪ್ರಸ್ತಾಪ ಮಂಡಿಸುತ್ತದೆ.

ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು ಹೆಚ್ಚು ಪ್ರಖ್ಯಾತವಾಗಿರುವ ಹಿಂದೂ ರಾಷ್ಟ್ರೀಯವಾದಿ ಹೋರಾಟಗಾರರ ಗುಣ ನಡತೆಯಲ್ಲಿ ಮತ್ತು ಈ ನಾಯಕರು ಕೊಡುತ್ತಿರುವ ಹೇಳಿಕೆಗಳು ಮುಸ್ಲಿಂ ಸಮುದಾಯವು ಸಂದೇಹಗಳನ್ನು ಹೊಂದಲು ಸಾಕಷ್ಟು ಕಾರಣಗಳನ್ನು ಒದಗಿಸುತ್ತದೆ. ಮುಸ್ಲಿಂ ಸಮುದಾಯದ ಒಂದು ವಿಭಾಗದ ನಾಯಕರ ಹೆಚ್ಚಾದ ಭೌಗೋಳಿಕ ದೇಶಪ್ರೇಮವು ಹಿಂದೂ ಪ್ರತಿಗಾಮಿಗಳಿಗೆ ಸೌಹಾರ್ದಕ್ಕೆ ಭಂಗ ತರುವ ಪ್ರಚಾರ ನಡೆಸಲು ಬತ್ತಳಿಕೆಯನ್ನು ಒದಗಿಸುತ್ತದೆ. ಎರಡೂ ಕಡೆಗಳಲ್ಲಿ ಇರುವ ಅತಿರೇಕಗಳನ್ನು ದೂರವಿರಿಸಬೇಕಾಗಿದೆ. ಕೋಮುವಾದದ ವಿರುದ್ಧ ಖಡಾಖಂಡಿತವಾದ ಆಯುಧವೆಂದರೆ ಜನಸಮುದಾಯವನ್ನು ಆರ್ಥಿಕ ಪ್ರಶ್ನೆಯ ಮೇಲೆ ಒಗ್ಗೂಡಿಸುವುದಾಗಿದೆ. ವರ್ಗಾಧಾರಿತವಾದ ಗೆರೆಯು ‘ಪೊಳ್ಳು’ ಮತ್ತು ‘ಕೃತಕ’ವಾಗಿ ಎಳೆದಿರುವ ಕೋಮುವಾದದ ಗೆರೆಯನ್ನು ತುಂಡರಿಸಬಲ್ಲದು.

ಮೂಲ: ಮೈಸೆಲ್ಫ್ ಆ್ಯಂಡ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)