ಸತತ ಮೂರನೇ ಬಾರಿ ಮೆಸ್ಸಿಗೆ ಗೋಲ್ಡನ್ ಶೂ ಟ್ರೋಫಿ
ಬಾರ್ಸಿಲೋನ,ಅ.16: ಯುರೋಪಿಯನ್ ಲೀಗ್ಗಳಲ್ಲಿ ಅಗ್ರ ಗೋಲ್ ಸ್ಕೋರರ್ ಆಗಿರುವ ಬಾರ್ಸಿಲೋನದ ನಾಯಕ ಲಿಯೊನೆಲ್ ಮೆಸ್ಸಿ ಸತತ ಮೂರನೇ ಹಾಗೂ ಒಟ್ಟಾರೆ ಆರನೇ ಬಾರಿ ಗೋಲ್ಡನ್ ಶೂ ಟ್ರೋಫಿ ಗೆದ್ದುಕೊಂಡಿದ್ದಾರೆ.
ಒಟ್ಟು 36 ಗೋಲುಗಳನ್ನು ಗಳಿಸಿದ ಮೆಸ್ಸಿ ಪ್ರತಿಸ್ಪರ್ಧಿ ಪ್ಯಾರಿಸ್ ಸೈಂಟ್ ಜರ್ಮೈನ್ನ ಕೈಲ್ಯಾನ್ ಬಾಪೆ(33 ಗೋಲು)ಅವರನ್ನು ಹಿಂದಿಕ್ಕಿ ಗೋಲ್ಡನ್ ಶೂ ಗಿಟ್ಟಿಸಿಕೊಂಡರು. ಮೆಸ್ಸಿ ಟ್ರೋಫಿ ಸ್ವೀಕಾರದ ವೇಳೆ ಅವರ ಇಬ್ಬರು ಮಕ್ಕಳು ಹಾಗೂ ಪತ್ನಿ, ಸಹ ಆಟಗಾರರು ಉಪಸ್ಥಿತರಿದ್ದರು. ‘‘ನನ್ನೊಂದಿಗಿರುವ ನನ್ನ ಕುಟುಂಬ, ನನ್ನ ಸಹೋದ್ಯೋಗಿಗಳಿಗೆ ಪ್ರಶಸ್ತಿಯನ್ನು ಸಮರ್ಪಿಸುವೆ. ತಂಡವಿಲ್ಲದೆ ಈ ಪ್ರಶಸ್ತಿಯನ್ನು ಮತ್ತೊಮ್ಮೆ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ’’ ಎಂದು ಮೆಸ್ಸಿ ಪ್ರತಿಕ್ರಿಯಿಸಿದರು. ಮೆಸ್ಸಿ ತನ್ನ ಪ್ರಬಲ ಪ್ರತಿಸ್ಪರ್ಧಿ ಕ್ರಿಸ್ಟಿಯಾನೊ ರೊನಾಲ್ಡೊಗಿಂತ 2 ಗೋಲ್ಡನ್ ಶೂ ಹೆಚ್ಚಿಗೆ ಜಯಿಸಿದ್ದಾರೆ. ತಲಾ 2 ಪ್ರಶಸ್ತಿ ಪಡೆಯದವರ ಪೈಕಿ ಲೂಯಿಸ್ ಸುಯರೆಝ್ ಒಬ್ಬರಾಗಿದ್ದಾರೆ. 1967ರಲ್ಲಿ ಪ್ರಶಸ್ತಿಯನ್ನು ಆರಂಭಿಸಲಾಗಿತ್ತು.