varthabharthi


ನಿಮ್ಮ ಅಂಕಣ

ನೀವಾಡಿದ ಮಾತಿಗೆ ವಿಷಾದವೆನಿಸುತ್ತಿದೆ...

ವಾರ್ತಾ ಭಾರತಿ : 17 Oct, 2019
ಡಾ. ಎಸ್. ತುಕಾರಾಮ್, ಮೈಸೂರು

ಆದರಣೀಯ, ಸಂಸದರಾದ ಪ್ರತಾಪ ಸಿಂಹ ಅವರೇ,

ಮೈಸೂರು ದಸರಾ ಸಂದರ್ಭದಲ್ಲಿ ತಮ್ಮ ನಡೆ-ನುಡಿಯಿಂದ ಇವತ್ತಿಗೂ ಮುಂದುವರಿದಿರುವ ಘಟನೆ ಬಗ್ಗೆ ಈ ಪತ್ರ ಬರೆದಿರುವೆ. ವಿಷಾದಿಸುತ್ತೇನೆ. ತಮ್ಮ ಬಾಯಿಂದ ಹೊರಟ ಮಾತಿಗೆ! ಬಹು ಸಂಸ್ಕೃತಿಯ ಈ ನೆಲದಲ್ಲಿ ‘‘ನಮಗೂ ಹಬ್ಬ ಮಾಡಿಕೊಳ್ಳುವ ಹಕ್ಕಿದೆ’’ ಎಂಬುದನ್ನು ತಾವು ತಿರಸ್ಕಾರದಿಂದ ಕಂಡಿದ್ದಕ್ಕಲ್ಲ ನನ್ನ ವಿಷಾದ. ಮಹಿಷಾಸುರನ ಬಗ್ಗೆ ಒಲವು ತೋರುತ್ತಿರುವ ಸಮುದಾಯದ ಬಗ್ಗೆ ನೀವು ಆಡಿದ ಮಾತಿಗೆ. ಅಲ್ಲದೆ ಕಾನೂನು ಪಾಲಕರ ಕುರಿತ ನಿಮ್ಮ ಹಗುರ ಮಾತಿಗೆ ನೀವು ಸಂಸತ್ತಿನಲ್ಲಿ ಕುಳಿತುಕೊಂಡಾಗ ನಿಮ್ಮ ಆತ್ಮಸಾಕ್ಷಿ ನಿಮಗೆ ಅಡ್ಡಿಬರದಿರಲಿ ಮತ್ತು ಎಲ್ಲ ಜಾತಿ-ಧರ್ಮಗಳ ಜನ ಸಮೂಹದ ಓಟು ಪಡೆದಿರುವ ನೀವು ‘ಸಂಸದ’ ಪಾವಿತ್ರ್ಯವನ್ನು ಉಳಿಸಿಕೊಳ್ಳುವಂತಾಗಲಿ ಎಂದಷ್ಟೇ ಈ ಪತ್ರ. ಭಾರತ ಕಂಡ ಅಪ್ರತಿಮ ಸಂಸದೀಯ ಪಟು ಹಾಗೂ ಮಾಜಿ ಪ್ರಧಾನಿಯಾಗಿದ್ದ ದಿವಂಗತ ವಾಜಪೇಯಿ ಅವರು ನಡೆದಾಡಿದ ಸಂಸತ್ತು ಭವನಕ್ಕೆ ಪ್ರವೇಶ ಪಡೆದಿರುವ ನಿಮ್ಮ ಮಾತು ಸಹಜವಾಗೇ ಘಾಸಿಯಾಯಿತು. ಅವಮಾನ ಕೂಡ. ನಿಮಗೆ ಅವರ ನೆನಪಾದರೂ ಆ ಕ್ಷಣಕ್ಕೆ ಬರಬೇಕಿತ್ತು. ಅದೂ ಬೇಡ ನಿಮ್ಮದೇ ಪಕ್ಷದಲ್ಲಿರುವ ದಲಿತ ಸಮೂಹದ ಹಿರಿಯ ರಾಜಕಾರಣಿಗಳು ಏನೆಂದುಕೊಂಡಾರು ಎಂಬ ಪ್ರಜ್ಞೆಯಾದರೂ ಇರಬೇಕಿತ್ತು. ನೀವು ಆಡಿರುವ ಮಾತಿಗೆ ಮುಜಗರಪಡುತ್ತಿರುವ ನಿಮ್ಮದೇ ಪಕ್ಷದ ಸಜ್ಜನರು ಏನೆಂದಿರಬಹುದು!? ಇರಲಿ. ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು, ಹಿಂದುಳಿದವರು, ಮಹಿಳೆಯರೆಲ್ಲರಿಗೂ ನೀವು ಸಂಸದರು, ವ್ಯಕ್ತಿ ಅಲ್ಲ. ಆದರೆ ನೀವು ಆಡಿದ ಮಾತಿಗೆ ನಿಮ್ಮನ್ನು ನನ್ನ ಪ್ರತಿನಿಧಿ ಎಂದು ಹೇಗೆ ಗೌರವಿಸಬೇಕು? ದೇಶವನ್ನಾಳುವವರು ವೈವಿಧ್ಯತೆಯ ಜೊತೆ ಸಾಗಬೇಕೆಂಬ ವಿವೇಚನೆ ಬೇಡವೇ? ಬಹುತ್ವದ ಬೇಕು-ಬೇಡಗಳನ್ನು ಆಲಿಸಬೇಕಲ್ಲವೇ? ನೀವು ಯಾವ ತತ್ವ ಸಿದ್ಧಾಂತ ಅನುಸರಿಸಿದರೂ ನೀವು ಬಹುಸಂಸ್ಕೃತಿಯ ಜನರ ಪ್ರತಿನಿಧಿ, ನೆನಪಿರಲಿ. ನೀವಾಡಿದ ಮಾತಿಗೆ ವಿಷಾದವೆನಿಸುತ್ತದೆ. ದುಡುಕಿನ ನಿಮ್ಮ ವರ್ತನೆ, ನಾಳೆಯ ಹಲವು ಕೆಡುಕುಗಳಾಗಿ ಮುಂದುವರಿಯುತ್ತಿರುವುದು ನೋಡಿದರೆ, ಬಹುತ್ವವನ್ನು ಪ್ರೀತಿಸುವರಿಗೆ ಘಾಸಿಯಾಗದೆ ಇನ್ನೇನಾದೀತು!?

ನಿಮ್ಮಂತೆ ಇನ್ನೂ ಒಂದೆರಡು ಸಚಿವರು, ಸಂಸದರು ತಮ್ಮನ್ನು ಮೀರಿಸುವ ರೀತಿಯಲ್ಲಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಇಂತಹವರ ಮಾತು ಕೇಳಿದಾಗ, ವಿಶ್ವಕವಿ ರವೀಂದ್ರನಾಥ ಠಾಗೂರ್‌ರವರ ಮಾತೊಂದು ನೆನಪಾಗುತ್ತಿದೆ. ಅವರ ಮಾತು ಎಲ್ಲರ ಎದೆಯನ್ನು ತಟ್ಟಲಿ ಎಂದಿಲ್ಲಿ ಕಾಣಿಸಿದ್ದೇನೆ, ಓದಿ : ‘‘ಇಂದು ಜಗತ್ತಿನ ಪರಿಸ್ಥಿತಿ ಎಲ್ಲ ವ್ಯತ್ಯಾಸಗಳನ್ನು ಅಳಿಸಿ ಹೇಗೆ ಒಂದಾಗ ಬೇಕಿನ್ನುವುದಲ್ಲ; ಎಲ್ಲ ಭಿನ್ನತೆಗಳನ್ನು ಇಟ್ಟುಕೊಂಡೇ ಹೇಗೆ ಒಟ್ಟಾಗಬಹುದು ಎಂಬುದು.. ಸಹವಾದ ಭಿನ್ನತೆಗಳು ಮಿಲನಗೊಂಡಾಗ ವಾಸ್ತವದ ಐಕ್ಯ ಸಾಧ್ಯವಾಗುತ್ತದೆ.’’ ಇಂತಹ ಸಾಧ್ಯತೆಗಳನ್ನು ಕಟ್ಟುವುದಕ್ಕೆ ನೀವು ನಮ್ಮ ಪ್ರತಿನಿಧಿಯಾಗಿದ್ದಿರಿ ಹೊರತು ಕೆಡಹುವುದ್ಕಲ್ಲ, ಛಿದ್ರಗೊಳಿಸುವುದಕ್ಕೂ ಅಲ್ಲ.

ಪ್ರೀತಿಯ ಪ್ರಗತಿಪರ ಸ್ನೇಹಿತರೇ,

ಮಹಿಷಾಸುರನ ಹಬ್ಬಕ್ಕಾಗಿ ಅದರ ಸಿದ್ಧತೆಯಲ್ಲಿದ್ದಾಗ ಸಂಸದರಾದ ಪ್ರತಾಪ ಸಿಂಹ ಪ್ರವೇಶ ಮಾಡಿ ಆಡಿದ ಮಾತಿಗೆ ದಿಗ್ಭ್ರಮೆಗೊಂಡಿರುವುದು ಸಹಜವೇ. ಈ ಬಗ್ಗೆ ಪರ, ವಿರೋಧದ ಚರ್ಚೆಗಳು ಸಾಮಾಜಿಕ ಜಲತಾಣಗಳಲ್ಲಿ ಬರುತ್ತಿವೆ. ಕೆಲವರು ಈ ವಿಚಾರದ ಬಗ್ಗೆ ಇತಿಹಾಸದ ಸಂಗತಿಗಳನ್ನು ಕೊಡಮಾಡಿದ್ದಾರೆ. ಮಹಿಷಾಸುರನ ಬಗೆಗಿನ ಚಾರಿತ್ರಿಕ ವಿಚಾರಗಳು ಇನ್ನೂ ವಿಸ್ತಾರಗೊಳ್ಳಬೇಕು. ಇರಲಿ. ಆದರೆ ಸಂಸದರಾಡಿದ ಮಾತಿಗೆ ನನ್ನ ಗೆಳೆಯರು ಕೆಲವರು, ಅವರ ಬಗ್ಗೆ ಒಂದು ಪದ್ಯಕಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿತು. ಆ ಪದ್ಯದ ಸಾಲುಗಳನ್ನು ಕಟ್ಟಿದ ತಿಳಿಗೇಡಿ ಮನಸ್ಸಿಗೆ ನನ್ನ ತಿರಸ್ಕಾರವಿದೆ. ಅವರ ಕುಟುಂಬದ ಕುರಿತು ಆಡಿದ್ದು ಅಕ್ಷಮ್ಯ. ಪ್ರತಿಭಟನೆ-ಪ್ರತಿಕ್ರಿಯೆ ನೀಡುವ ಸಭ್ಯ ಭಾಷೆಯೇ ನಾಶವಾಗುತ್ತಿರುವ ಹೊತ್ತಿನಲ್ಲಿ ನೀವು ಗೆಳೆಯರು ಹೀಗೆ ತುಚ್ಛವಾಗಿ ಆಡಿರುವ ಮಾತು ತಪ್ಪು. ಮಗ ಮಾಡಿದ ತಪ್ಪಿಗೆ ತಂದೆಯನ್ನು, ತಾಯಿ ತಪ್ಪಿಗೆ ಮಗಳನ್ನು, ಬೈಯುವಂಥ ಕೆಟ್ಟಸಂಸ್ಕೃತಿಯಂತೆ ಕಂಡಿತು. ನಿಮಗೂ ಸಭ್ಯತೆಯಿಂದ ವರ್ತಿಸುವ ಅಭಾವ ಬಂದಿತ್ತೇ? ಇದರಿಂದ ಜನಬಲ - ಆತ್ಮಬಲ ನಾಶವಾದಂತಾಯಿತಲ್ಲವೇ? ಜನಮುಖಿ ಹೋರಾಟಗಳು ಯಾವತ್ತು ಅಶ್ಲೀಲ ಭಾಷೆಯಲ್ಲಿ, ಯಾವ ವ್ಯಕ್ತಿ ನಿಂದನೆಯನ್ನು ಮಾಡಿಲ್ಲ. ಧರ್ಮಾಂಧರನ್ನು, ಜಾತಿವಾದಿಗಳನ್ನು, ಉದ್ದೇಶಿಸಿ ಮಾತನಾಡುವಾಗಲೂ ಅವರಿಗೂ ವಿವೇಕ ಮತ್ತು ಮನುಷ್ಯತ್ವ ಬರಲಿ ಎಂಬುದು ನಡೆದುಬಂದಿದೆ. ಭಾರತೀಯ ಸಮಾಜ ಎಲ್ಲ ಬಗೆಯ ತಾರತಮ್ಯವನ್ನು ಹೇಗೆ ದಲಿತ ಸಮೂಹದ ಮೇಲೆ ಹೇರಿದೆ ಎಂಬುದನ್ನು ಅರ್ಥಮಾಡಿಸಲು ಹೊರಟವರು ಈ ಮಟ್ಟಕ್ಕೆ ಇಳಿಯಬಾರದಿತ್ತು.

ಇಂತಹ ಹೋರಾಟದ ಹಾದಿಯಲ್ಲಿ ನಡೆದ ಕೆಲವರು ಗೆಳೆಯರು ಸಂಸದ ಪ್ರತಾಪ ಸಿಂಹ ಅವರಿಗೆ ಏನೆಲ್ಲ ಅವಾಚ್ಯ ಶಬ್ದಗಳನ್ನು ಬಳಸಿದ್ದೀರೋ, ಅದನ್ನು ನನಗೂ ನನ್ನ ಕುಟುಂಬಕ್ಕೂ ಬಳಸಿ ಎಂದು ಕೋರುವೆ. ಮುಜುಗರವಿಲ್ಲದೆ ಪ್ರತಿಭಟಿಸುವ ಆವೇಗದಲ್ಲಿ ನೀವು ಕೆಲವು ಗೆಳೆಯರು ಆಡಿದ ಮಾತುಗಳು ಸಂಘಟನೆಯ ಚರಿತ್ರೆಯಲ್ಲಿ ದಾಖಲಾಗಬಾರದು. ಪ್ರತಾಪ ಸಿಂಹ ಆಡಿದ ಮಾತುಗಳಿಂದ ಅವರ ಆತ್ಮಸಾಕ್ಷಿಗೆ ಕುಂದುಮಾಡಿಕೊಂಡಂತೆ, ಹೋರಾಟಗಾರರು ಮಾಡಿಕೊಳ್ಳಬಾರದಿತ್ತು. ಇದೇ ಅವರಿಗೂ ಹೋರಾಟಗಾರರಿಗೂ ಇರುವ ವ್ಯತ್ಯಾಸ. ಆತ್ಮಸಾಕ್ಷಿ ಇದ್ದವರೊಟ್ಟಿಗೆ ಮಾತು ಮತ್ತು ಹೋರಾಟ ಸಾಧ್ಯ. ಮಹಿಷ ತಳವರ್ಗಗಳ ಸಾಂಸ್ಕೃತಿಕ ಪ್ರತಿನಿಧಿ ಎನ್ನುವ ಅರಿವಿನ ಹೋರಾಟ ಗುರಿಮುಟ್ಟಬೇಕಾದರೆ, ಹೋರಾಟದ ಭಾಷೆ ಕಳೆದುಹೋಗಬಾರದು.

ಡಾ. ಅಂಬೇಡ್ಕರ್ ಅವರು ಎಲ್ಲ ಬಗೆಯ, ಹಿಂಸೆ ಮತ್ತು ಅವಮಾನಗಳಿಂದ ನೊಂದು ‘‘...ನನಗೆ ತಾಯಿನಾಡು ಎಂಬುದಿದೆಯೇ?’’ ಎಂದು ಪ್ರಶ್ನಿಸಿದ್ದರು ಅಲ್ಲವೇ? ಹೌದು ಅವರ ಮಾತನ್ನು ದೃಢಪಡಿಸುವಂತಹ ಘಟನೆಗಳ ಸರಮಾಲೆ ಶುರುವಾಗಿದೆ. ಆದರೂ ಬುದ್ಧನೆಡೆಗೆ ಸಾಗಬೇಕಾದ ಚಳವಳಿಗೆ ಇದು ‘ಸಕಾಲ’ ಎಂಬುದನ್ನು ಅರಿಯದೆ ಹೋಗುತ್ತಿದ್ದೇವೆ. ಈ ಚಳವಳಿ ಪ್ರತಾಪ ಸಿಂಹರ ಮಾತುಗಳನ್ನು ಅಲ್ಲಗಳೆಯುವುದಕ್ಕೆ ಸೀಮಿತವಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವವರ ನೈತಿಕ ಬೆಂಬಲಕ್ಕಾಗಿ. ದೇವ-ದಾನವರಿಗಾಗಿ ಅಲ್ಲ! ದಯೆವುಳ್ಳ ಸಮಾಜಕ್ಕಾಗಿ. ಬಹುತ್ವದ ಒಡನಾಟಕ್ಕಾಗಿ. ಕವಿಯ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟದ ಮರುಹುಟ್ಟಿಗಾಗಿ ಎಂಬುದನ್ನು ದೃಢಪಡಿಸಬೇಕಾಗಿರುವ ಅನಿವಾರ್ಯತೆಗಾಗಿ...

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)