varthabharthi


ನಿಮ್ಮ ಅಂಕಣ

ತಾಲೂಕು ಆಯಿತು, ಅಭಿವೃದ್ಧಿ ಯಾವಾಗ?

ವಾರ್ತಾ ಭಾರತಿ : 18 Oct, 2019
-ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ

ಮಾನ್ಯರೇ,

ರಾಜ್ಯದಲ್ಲಿ 48 ಹೊಸ ತಾಲೂಕುಗಳ ಘೋಷಣೆ ಮಾಡಿ ನಾಲ್ಕು ವರ್ಷಗಳೇ ಉರುಳಿದವು. ಇವುಗಳಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿ ಪಟ್ಟಣ ಕೂಡ ಒಂದು. ತಾಲೂಕು ಕೇಂದ್ರದಿಂದ ಈ ಊರು ಸುಮಾರು 45 ಕಿ.ಮೀ. ದೂರವಿದ್ದು, ಸುತ್ತಲಿನ ಹತ್ತಾರು ಹಳ್ಳಿಗಳಿಗೆಲ್ಲ ವ್ಯಾಪಾರ ಕೇಂದ್ರವಾಗಿದೆ. ಸ್ಥಳೀಯ ಬೇಡಿಕೆ ಇಲ್ಲದಿದ್ದರೂ ಆಡಳಿತದ ಅನುಕೂಲಕ್ಕಾಗಿ ತಾಲೂಕು ಕೇಂದ್ರ ಎಂದು ಯಡ್ರಾಮಿಯನ್ನು ಸರಕಾರವೇ ಸ್ವಯಂ ಘೋಷಣೆ ಮಾಡಿತ್ತು. ಆದರೆ, ಈವರೆಗೂ ಇಲ್ಲಿ ಗ್ರಾಮ ಪಂಚಾಯತ್ ಆಡಳಿತವಿರುವುದು ಸೋಜಿಗದ ಸಂಗತಿಯಾಗಿದೆ. ಬಿದ್ದು ಹೋಗುವ ಶಿಥಿಲವಾದ ಕಟ್ಟಡದಲ್ಲಿ ಉಪತಹಶೀಲ್ದಾರ್ ಕಚೆೇರಿ ಹೊರತು ಪಡಿಸಿದರೆ, ಯಾವುದೇ ಸರಕಾರಿ ಕಚೇರಿಗಳು ಆರಂಭವಾಗಿಲ್ಲ. ಜನರು ಬಹುತೇಕ ಕೆಲಸ ಕಾರ್ಯಗಳಿಗೆ ಮಾತೃ ತಾಲೂಕು ಕೇಂದ್ರವಾದ ಜೇವರ್ಗಿಗೆ ನಿತ್ಯವೂ ಅಲೆದಾಡಬೇಕು. ಸರಿಯಾದ ರಸ್ತೆ, ಸಾರಿಗೆ ಸೌಲಭ್ಯ, ಮೂಲ ಭೂತ ಸೌಲಭ್ಯಗಳ ಇಲ್ಲ. ತಾಲೂಕು ಕೇಂದ್ರದಲ್ಲೇ ಕುಡಿಯುವ ನೀರಿಗೂ ಜನ ಸದಾ ಪರದಾಡುತ್ತಾರೆ. ಬಹುತೇಕ ಸರಕಾರಿ ನೌಕರರು, ಜಿಲ್ಲಾ ಕೇಂದ್ರ ಹಾಗೂ ಜೇವರ್ಗಿಯಿಂದಲೇ ಓಡಾಡುತ್ತಾರೆ. ಇಡೀ ಊರಿಗೆ ಒಂದೇ ಒಂದು ರಾಷ್ಟ್ರೀಯ ಬ್ಯಾಂಕ್ ಇದೆ. ಬಸ್ ಡಿಪೋ ಇಲ್ಲ. ಹೊಸ ತಾಲೂಕುಗಳಲ್ಲೇ ಇದು ಅತ್ಯಂತ ಹಿಂದುಳಿದ ತಾಲೂಕು ಕೇಂದ್ರವಾಗಿದೆ. ಇಲ್ಲಿ ಹೊಸ ತಾಲೂಕೊಂದರಲ್ಲಿ ಇರಬೇಕಾದ ಎಲ್ಲಾ ರೀತಿಯ ಸರಕಾರಿ ಕಚೆೇರಿಗಳನ್ನು ಆದಷ್ಟು ಬೇಗ ಸ್ಥಾಪನೆ ಮಾಡಬೇಕಿದೆ. ಅತ್ಯಂತ ಹಿಂದುಳಿದ ಈ ತಾಲೂಕಿನ ಅಭಿವೃದ್ಧಿಯ ಮುನ್ನುಡಿ ಬರೆಯಲು ಸ್ಥಳೀಯ ಜನನಾಯಕರಲ್ಲಿ ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಬೇಕಾಗಿದೆ. ಇನ್ನಾದರೂ ಬದಲಾವಣೆಯ ಗಾಳಿ ಬೀಸಬೇಕಿದೆ.

-ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)