varthabharthi


ವಿಶೇಷ-ವರದಿಗಳು

ಖಂಡಕಾವ್ಯದ ಕಲಿ ಕೆ.ಬಿ.ಸಿದ್ದಯ್ಯ

ವಾರ್ತಾ ಭಾರತಿ : 18 Oct, 2019
ಬಸವರಾಜು ಮೇಗಲಕೇರಿ

ಕೆ.ಬಿ.ಸಿದ್ದಯ್ಯ

ಇಂದು ಬೆಳಗ್ಗೆ ನಿಧನರಾದ ಕೆ.ಬಿ.ಸಿದ್ದಯ್ಯ ಕುರಿತು...

ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಅಧ್ಯಾತ್ಮವನ್ನು ವಿವಿಧ ನೆಲೆಗಳಲ್ಲಿ ಶೋಧಿಸುತ್ತಿದ್ದ ಕೆ.ಬಿ.ಸಿದ್ದಯ್ಯನವರು ಗಂಭೀರ ಓದುಗ ಮತ್ತು ಮೌನಿ. ತಮ್ಮ ಪಾಡಿಗೆ ತಾವು- ತಮ್ಮಿಷ್ಟದ ಹಾದಿಯಲ್ಲಿ ಅಡ್ಡಾಡಲು ಹಾತೊರೆವ ಭಾವಜೀವಿ. ದಲಿತ ಮತ್ತು ರೈತ ಚಳುವಳಿಗಳನ್ನು ಭಾವನಾತ್ಮಕವಾಗಿ ಮತ್ತು ತಾತ್ವಿಕವಾಗಿ ಬೆಸೆಯ ಬಯಸಿದವರು.

ಬಕಾಲ, ದಕ್ಲಕಥಾದೇವಿ ಕಾವ್ಯ, ಅನಾತ್ಮ ಎಂಬ ಖಂಡಕಾವ್ಯಗಳ ಮೂಲಕ ಕನ್ನಡ ಕಾವ್ಯಲೋಕವನ್ನು ಶ್ರೀಮಂತಗೊಳಿಸಿದವರು. ಇತ್ತೀಚಿನ `ಗಲ್ಲೆಬಾನಿ' ಕವನ ಸಂಕಲನ ಹೊರಬಂದ ಹೊತ್ತಲ್ಲಿ, ನಮ್ಮ ಜೊತೆ ಕೂತ ಸಿದ್ದಯ್ಯನವರು ಕೊಂಚ ಹೊತ್ತು ಮಾತಿನ ಮಂಟಪ ಕಟ್ಟಿಕೊಟ್ಟಿದ್ದಾರೆ. ಅದು ಅವರದೋ, ಅಲ್ಲಮನದೋ- ನಿಮಗೂ ಒಂದಿಷ್ಟು ದಕ್ಕಲೆಂಬ ಭಾವ ನಮ್ಮದು.

''ಒಂದು ಹೆಂಗ್ಸು... ಮಾಸಲು ಕುಪ್ಸ, ಸೊಂಟದಲ್ಲಿ ಡಾಬು, ಕತ್ತಲ್ಲಿ ತಾಲಿ, ಹಸಿರು ಸೀರೆ ಧರಿಸಿದ್ದಳು. ಒಂದು ಮನೆಯ ಮುಂದೆ ನಿಂತು, `ಯಾರಿದ್ದೀರೀ...' ಅಂತ ಕೂಗ್ತಿದ್ದಳು.

ಮನೆಯ ಒಳಗಡೆಯಿಂದ, `ಏನ್ ಇಷ್ಟೋತ್ತಿಗೇ ಬಂದಿದ್ದೀಯಲ್ಲ, ಕೆಲ್ಸಿಲ್ವಾ...' ಅಂತು ಒಂದು ದನಿ.
`ಒಂದ್ ನಾಕಾಣಿ ಬೇಕಾಗಿತ್ತು...'
`ಯಾಕೆ?'
`ನಮ್ ಹುಡುಗಂಗೆ ಇಸ್ಕೂಲಿಗೆ ಕಳ್ಸಕೆ ಬೇಕು...'
`ಮನ್ಲೇನು ಇಟ್ಟೋಗಿಲ್ಲ ಅವ್ರು, ಮಾಗ್ಡಿಯಿಂದ ಸಾಬಿ ಬತ್ತನೆ, ಹುಚ್ಚೆಳ್ಳೋ ಹುಳ್ಳಿಕಾಳೋ ಮಾರಿ ಸಂಜಿಕ್ ಕೊಡ್ತಿನಿ ಹೋಗು...' ಅಂದರು.
ಹೀಗೆ ಯಾರದೋ ಮನೆಯ ಮುಂದೆ ನಿಂತು ನಾಲ್ಕಾಣೆ ಕೇಳುತ್ತಿದ್ದ ಹೆಂಗಸು- ಅದು ನಮ್ಮವ್ವ. ಆಕೆಯ ಮಾಸಲು ಸೀರೆಯ ಸೆರಗನ್ನು ಚೀಪುತ್ತಿದ್ದೆ, ಅದು ಉಪ್ಪುಪ್ಪಾಗಿತ್ತು- ಅದು ನಾನು.''

ಇದು ಕವಿ ಕೆ.ಬಿ.ಸಿದ್ದಯ್ಯನವರು ತಮ್ಮ ಬಾಲ್ಯವನ್ನು ನೆನಪಿಗೆ ತಂದುಕೊಂಡ ಬಗೆ. ಇಲ್ಲಿ ಅವರು ಅವರ ಬಡತನದ ಚಿತ್ರಣವನ್ನು ಕೀಳರಿಮೆ, ಸ್ವಮರುಕದಿಂದ ಕಟ್ಟಿಕೊಟ್ತಿಲ್ಲ. ಅವರಿಗನ್ನಿಸಿದ್ದನ್ನು ಸಹಜವಾಗಿ ನಮ್ಮ ಮುಂದಿಡುತ್ತಿದ್ದರು.

'ಆ ನಾಲ್ಕಾಣೆ ಯಾಕೆ- ಮೂವತ್ತೆರಡು ಪೇಜಿನ ಎಕ್ಸರ್ಸೈಜ್ ಕೊಡ್ಸಕೆ. ಮಗ ಅಕ್ಷರ ಕಲೀಬೇಕು ಅನ್ನೋ ಅಮ್ಮನಿಗೆ ಘನವಾದ, ಗಾಢವಾದ ಕನಸು ಇರಬೇಕು. ಅವಳ ಕನಸು ಆಕಾಶದಷ್ಟು, ಆದರೆ ಭೂಮಿ ಮೇಲೇ ನಿಂತಿದ್ಲು. ನನ್ನ ತಾಯಿ ಮುಟ್ಟಲಾರದ ಅಕ್ಷರ, ನನ್ನ ಜನಾಂಗ ಮುಟ್ಟಲಾರದ ಅಕ್ಷರ ಇತ್ತಲ್ಲ, ಆ ಕಾಲದಲ್ಲಿ ಬಂಧಿಸಲ್ಪಟ್ಟಿತ್ತಲ್ಲ, ಅದನ್ನು ಮುಟ್ಟಬೇಕು, ಅದರ ನೃತ್ಯ ನೋಡಬೇಕು... ಅದಕ್ಕಾಗಿ ಬರಿತಿದೀನಿ. ಇದು ನನ್ನ ನಂಬಿಕೆ, ವಿಚಾರವಲ್ಲ.

'ಅಸ್ಪೃಶ್ಯನಾಗಿ ಹುಟ್ಟಿದ್ದೇನೆ, ಹುಟ್ಟಿದ ಮೇಲೆ ಹಾಗೆ ಕರೆಯಲ್ಪಟ್ಟಿದ್ದೇನೆ. ಆದರೆ ನನ್ನ ಸಂಕಟ ತಾಯಿ ಸಂಕಟಕ್ಕಿಂತ ದೊಡ್ಡದಲ್ಲ. ಅಕ್ಷರನ ಮುಟ್ಟಿದೆ, ಬಿಡುಗಡೆಯಾಯಿತು. ನನ್ನ ಕೈಗೆ ಸಿಕ್ತು, ಬರೆದೆ, ಬಳಸಿದೆ. ಹಾಗೆ ಅಕ್ಷರಗಳನ್ನು ಬಳಸೋದು, ದುಡಿಸಿಕೊಳ್ಳೋದು ನನಗಿಷ್ಟವಿಲ್ಲ. ಈಗ ನೋಡಿ, ಕಳೆದ ವರ್ಷ ನಡೀತಲ್ಲ... ನಾರ್ಥ್ ನಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬಳ ಮೇಲಿನ ಅತ್ಯಾಚಾರ... ಆ ಸನ್ಯಾಸಿನಿ ತನ್ನ ದೂರಿನಲ್ಲಿ, `ಐ ಯಾಮ್ ಬಿಲೀವ್ಡ್ ಐ ಯಾಮ್ ರೇಪ್ಡ್' ಅಂತ ಬರ್ದಿದಾಳೆ... ಅಂದ್ರೆ, ಅದರ ಹಿಂದಿನ ನೋವು, ಅವಮಾನ, ಸಂಕಟವನ್ನು ಕಲ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ.

'ಅಕ್ಷರವನ್ನು, ಮಾತನ್ನು ಹಾಗೆಯೇ ಚೆಲ್ಲಾಡಲು ಸಾಧ್ಯವಿಲ್ಲ. ಹಾಗೇನಾದರೂ ಆದರೆ ಹೊಡೆದುಹೋದ ಬುಡುಬುಡಿಕೆ ಅಂತ ನಾನು ಭಾವಿಸುತ್ತೇನೆ.'

ಅದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ದೇಸಿ ಚಿಂತಕ, ಅಲ್ಲಮನ ಬಗ್ಗೆ ಅಥೆಂಟಿಕ್ ಆಗಿ ಮಾತನಾಡುವ ವಿಚಾರವಂತ ಅಂತೆಲ್ಲ ಕರೆಸಿಕೊಳ್ಳುವ, `ಬಕಾಲ, ದಕ್ಕಲಕಥಾ ದೇವಿ ಕಾವ್ಯ, ಅನಾತ್ಮ ಗಲ್ಲೆಬಾನಿ' ಎಂಬ ಖಂಡಕಾವ್ಯಗಳನ್ನು ಕೊಟ್ಟ ಕವಿ ಪ್ರೊ. ಕೆ.ಬಿ. ಸಿದ್ದಯ್ಯನವರನ್ನು ಮಾತುಕತೆಗಾಗಿ ಕರೆಸಿದ ಕಾರ್ಯಕ್ರಮವದು.

ಇಂತಹ ಕಾರ್ಯಕ್ರಮಕ್ಕೆ ಇಂತಹವರನ್ನು ಕರೆದಿದ್ದಾರಲ್ಲ ಅಂತ ಕೆಲವರು, ಇಂಥವರನ್ನೇ ಕರೀಬೇಕಾಗಿರೋದು ಅಂತ ಕೆಲವರು... ಸಭೆಗೆ ಬಂದಿದ್ದವರೊಬ್ಬರು ಕೇಳಿಯೇಬಿಟ್ಟರು, `ಇಲ್ಲಿಗೆ ಬಂದಿದ್ದು ನಿಮಗೇನನ್ನಿಸುತ್ತಿದೆ' ಅಂತ.

ಸಭೆಯಲ್ಲಿದ್ದವರತ್ತ ಒಮ್ಮೆ ನೋಡಿದ ಸಿದ್ದಯ್ಯ ಗಡ್ಡ ನೀವಿಕೊಳ್ಳುತ್ತ ಧ್ಯಾನಸ್ಥರಾದರು. ನಗುನಗುತ್ತಲೇ, `ನನಗೆ... ನನಗೆ... ನಿಜವಾಗಲೂ ಹೆದರಿಸಿದ್ದು ಈ ಸಭೆ, ಏನು ಹೇಳಬೇಕು ಈ ಸಭೆಗೆ ಅಂತಾನೆ ಅರ್ಥವಾಗ್ತಿಲ್ಲ. ನನ್ನನ್ನೇ ನಾನು ನೋಡಿಕೊಳ್ಳುವ ಬಗೆ ಕಷ್ಟದ್ದು. ಅಂತಹ ಕಾರ್ಯಕ್ರಮವಿದು. ನಿಮ್ಮನ್ನು ನೋಡ್ತಿದ್ದ ಹಾಗೆ... ನನ್ನ ನೆನಪು ಹಿಂದಕ್ಕೆ ಬಾರಯ್ಯ ಅಂತ ಕರೀತಿದೆ.

'ನಮ್ಮೂರು ಕೆಂಕೆರೆ ಗ್ರಾಮ, ಮಾಗಡಿ ತಾಲೂಕಿನಲ್ಲಿದೆ. ಅಲ್ಲಿ ಮೇಲ್ಜಾತಿಯವರು ಕೆಲಜಾತಿಯವರು- ಇಬ್ಬರೇ ಇರೋದು ಆ ಹಳ್ಳೀಲಿ. ನಮ್ಮೂರಲ್ಲಿ ಭೂ ಮಾಲೀಕರಿಲ್ಲ. ನನಗನ್ನಿಸಿದಂತೆ... ತಿನ್ನಕ್ಕೆ ಉಣ್ಣಕ್ಕೆಲ್ಲ ಚೆನ್ನಾಗಿರೋರೆ, ಆದ್ರೆ ಅವರ್ಯಾರೂ ಭೂ ಮಾಲೀಕರಲ್ಲ. ನನ್ಗೆ ನನ್ನ ಹಳ್ಳೀಲಿ ಜಾತಿಗೀತಿ ಏನೂ ಕಾಣ್ಲಿಲ್ಲ.

'ಇನ್ನಾ... ಎಲ್ಲೋ ಕೂತ್ಕೊಂಡು, ಪೆಗ್ ಹಾಕ್ಕೊಂಡು ರಾಜಕಾರಣ, ಸಂಘಟನೆ... ಅದೂ ಇದೂ ಅಂತ ಹರಟೆ ಹೊಡ್ಕೊಂಡು ಕೂತಿದ್ದ ನನಗೆ... ಇಲ್ಲಿಗೆ ಬಂದಿದ್ದು ಹ್ಯೆಂಗ್ ಕಾಣ್ತಿದಿಯಪ್ಪ ಅಂದ್ರೆ...

'ಹೆಗಲಿಗೆ ಸತ್ತೆಮ್ಮೆಕರ ಹಾಕ್ಕಂಡು, ಕೊರಳಿಗೆ ಸೇಂದಿ ಗಡಿಗೆ ಕಟ್ಕಂಡು, ಕಲ್ಯಾಣಕ್ಕೆ ಪ್ರವೇಶ ಮಾಡುವ ಮಂಟೇಸ್ವಾಮಿ ಥರ ಕಾಣ್ತಿದೆ... ಸಂತೋಷಾನು ಆಗ್ತಿದೆ' ಅಂದರು.

ಮತ್ತೊಬ್ಬರು, `ನೀವು ಕವಿಯಾದ ಬಗೆ ಹೇಗೆ...?' ಅಂದರು.

'ಚಿಕ್ಕಂದಿನಲ್ಲಿ... ಹಳ್ಳೀಲಿ ಹೆಂಗಸ್ರು, ಗಂಡಸ್ರು ಹಾಡ್ತಿದ್ದ ಜನಪದ ಗೀತೆಗಳು, ಹರಿಕಥೆ ದಾಸರು ಹಾಡುತ್ತಿದ್ದ ಕೀರ್ತನೆಗಳು... ಅಂದರೆ ಮೌಖಿಕ ಪರಂಪರೆಯಿಂದ ಬಹಳವಾಗಿಯೇ ಪ್ರಭಾವಿತನಾದವನು ನಾನು. ಅವು ನನ್ನನ್ನು ಕವಿಯನ್ನಾಗಿಸಿವೆ. ಹಾಗೆಯೇ ಮೈಸೂರಿನಲ್ಲಿ ಓದ್ತಿದ್ದಾಗ... ಅನಂತಮೂರ್ತಿ, ರಾಮದಾಸ್, ಮಹಾದೇವ, ಸುಬ್ಬರಾಯಚಾರ್ಯರು- ಇವರ ಸಂಪರ್ಕ- ಇವರಿಂದ ತುಂಬಾನೇ ಕಲಿತಿದೀನಿ. ಹಾಗೆ ನೋಡಿದರೆ ಮೈಸೂರಿನಲ್ಲಿ ಎಂಎ ಮಾಡ್ತಿದ್ದ ಕಾಲ ನನ್ನ ದೀಕ್ಷೆಯ ಕಾಲ. ಆಮೇಲೆ ದಲಿತ ಸಂಘಟನೆ. ಅದು ಆಗ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಹೆಗಲಲ್ಲಿ ಬ್ಯಾಗು, ಕೈಯಲ್ಲಿ ಕಂಜ್ರಿ, ಬಾಯಲ್ಲಿ ಹಾಡು... ಊರೂರು ತಿರುಗ್ತಿದ್ದ ಕಾಲ. ಅದು ನನ್ನ ಬದುಕಿನ ಅತ್ಯಂತ ಮುಖ್ಯ ಕಾಲ.
`ಆ ಕ್ರಿಯೆ ಕರ್ನಾಟಕದಲ್ಲಿ ಆಗದೇ ಇದ್ದಿದ್ದರೆ, ನಾನು ಬರೆಯಲಿಕ್ಕೆ ಪ್ರಚೋದನೇನೆ ಸಿಗ್ತಿರಲಿಲ್ಲ. ಆ ಹೋರಾಟ, ಸಂಘಟನೆ ನನ್ನನ್ನು ಬರೆಯಲಿಕ್ಕೆ ಪ್ರೇರೇಪಿಸಿತು. ಹೀಗೆ ನಾನು ಪದ್ಯ ಬರೆಯುವುದನ್ನು ಆರಂಭಿಸಿದವನು...'

ಸಿದ್ದಯ್ಯನವರ ಮಾತು ಮುಗಿಯುವ ಮುಂಚೆಯೇ ಮತ್ತೊಬ್ಬರು ಮತ್ತೊಂದು ಪ್ರಶ್ನೆಯನ್ನು ಎಸೆದೇಬಿಟ್ಟರು, `ಅಲ್ಲಾ ಸ್ವಾಮಿ ಮೌಖಿಕ ಪರಂಪರೆಯಿಂದ ಬಂದವರು ಅಂತೀರಾ, ಜನರ ನಾಲಗೆಯ ಮೇಲೆ ಹರಿದಾಡಿದ ಹಾಡನ್ನು ಗ್ರಹಿಸಿದೆ, ಪ್ರಭಾವಿತನಾದೆ ಅಂತೀರಾ. ಆದರೆ ನಿಮ್ಮ ಖಂಡಕಾವ್ಯ ನಮ್ಮಂತಹ ಸಾಮಾನ್ಯರಿಗೆ ದಕ್ಕುವುದಿಲ್ಲ, ಅರ್ಥವೂ ಆಗುವುದಿಲ್ಲವಲ್ಲ...?'

`ದಕ್ಕಬೇಕು ಅಂತ ನಾನು ಬರೆಯಲ್ಲ...' ಯಾರದೂ ತಕರಾರಿಲ್ಲ. ಸಭೆಯೇ ಮೌನ. ನಾನು ಹೇಳಿದ್ದು ಸರಿ ಎನ್ನುವ ಭಾವ ಕವಿಯದ್ದು.
ಈ ಮೌನದಿಂದ ಸಿದ್ದಯ್ಯನವರನ್ನು ಮತ್ತು ಸಭೆಯನ್ನು ಹೊರತರಲಿಕ್ಕಾಗಿಯೇ ಎನ್ನುವಂತೆ ಹಿರಿಯರೊಬ್ಬರು ಬಹಳ ಗಂಭೀರವಾದ ಪ್ರಶ್ನೆಯೊಂದನ್ನು ಎತ್ತಿದರು. `ಈ ಹಿಂದೂ ಮತ್ತು ದಲಿತ ಅನ್ನುವ ಶಬ್ದಗಳು ಯಾಕೋ ಇತ್ತೀಚೆಗೆ ಸಿಕ್ಕಾಪಟ್ಟೆ ದುರ್ಬಳಕೆಯಾಗ್ತಿವೆ. ಇದಕ್ಕೆ ನೀವಂನಂತೀರಿ...?'

'ನನಗೊತ್ತಿರೋಹಂಗೆ, ಹಿಂದೂ-ದಲಿತ ಪ್ರಾಚೀನವಾದ ಶಬ್ದಗಳಲ್ಲ. ಮ್ಯಾಕ್ಸ್ ಮುಲ್ಲರ್ ಬಳಸುವವರೆಗೆ ಹಿಂದೂ ಶಬ್ದ ಬಳಕೆಗೆ ಬಂದಿರಲಿಲ್ಲ. ಇನ್ನು ದಲಿತ... ದಲಿತ ಅನ್ನುವ ಶಬ್ದದ ಬಗ್ಗೆ ನನ್ನ ಭಿನ್ನಾಭಿಪ್ರಾಯವಿದೆ. ಅದು ಸಕಲವನ್ನು ಒಳಗೊಳ್ಳುವ ಶಬ್ದ ಅಲ್ಲ. ಅದು ಕೆಲವನ್ನು ಹಾಗೆ ಬಿಟ್ಟುಬಿಡುವ ಶಬ್ದ. ಈಗ... ದಲಿತ ಜನಪ್ರಿಯವಾಗಿದೆ. ಜನಪರವಾಗಿದೆ ಅಂತ ವಾದ ನಡೀತಿದೆ. ಆದರೆ ಈಗ ಅದು ಕಾರ್ಪೋರೇಟ್ ಬ್ರ್ಯಾಂಡ್ ಆಗಿದೆ. ದಲಿತ ಅನ್ನುವುದು ಏಕರೂಪಿ ಅಲ್ಲ, ಬಹುರೂಪಿ. ಬಾಳ ಜನ ನನ್ನ ದಲಿತ ಕವಿ ಅಂತ ಕರೀತಾರೆ, ನಾನು ಹಾಗೆ ಹೇಳಿಲ್ಲ. ನನ್ನ ಅನುಭವವನ್ನು ಧ್ಯಾನಿಸುವಂತಹ ಶಕ್ತಿಯನ್ನು ಅದು ಹೊಂದಿಲ್ಲ. ಯಾವ ಕವಿ ಓದುಗನಿಗೆ ಹೇಗೆ ಕಾಣುತ್ತಾನೋ, ದಕ್ಕುತ್ತಾನೋ ಅದೇ ಸರಿ.

'ನನಗೆ ಯಾವಾಗಲೂ ಎರಡು ಪ್ರಶ್ನೆಗಳು ಎದುರಾಗುತ್ತವೆ... ನಾನ್ಯಾಕೆ ಹುಟ್ಟಬೇಕಾಗಿತ್ತು. ಅದರಲ್ಲೂ ದಲಿತನಾಗಿಯೇ ಹುಟ್ಟಬೇಕಾಗಿತ್ತು. ಅಸ್ಪೃಶ್ಯನಿಗೆ ಸಂಕಟ ಹೇಳೋ ಸಂಕಟ- ಅದು ಮಹಿಳೆಯರ ಹೆರಿಗೆ ಸಂಕಟ. ಅದನ್ನು ಹೇಳಲಾಗುವುದಿಲ್ಲ. ಇದು ನಿಮಗೆ ಅರ್ಥವಾಗುತ್ತೆ ಅಂದ್ಕೊಂಡಿದ್ದೇನೆ...' ಎಂದರು.

ಅದು ಸಿದ್ದಯ್ಯ ಮತ್ತು ಸಭಿಕರ ನಡುವೆ ಒಂದು ರೀತಿಯ ಸಂವಾದದಂತಿದ್ದರೂ, ಸಿದ್ದಯ್ಯನವರ ಮಾತು ಸಭಿಕರನ್ನು ಅರ್ಥಪೂರ್ಣ ಮೌನಕ್ಕೆ ತಳ್ಳಿತ್ತು. ಹಾಗೆ ನೋಡಿದರೆ, ಪ್ರತಿ ತಿಂಗಳ ಆ ಕಾರ್ಯಕ್ರಮದಲ್ಲಿ ಯಾವತ್ತೂ ಇರದಿದ್ದ ಮೌನ ಅವತ್ತಿತ್ತು. ಅದನ್ನೂ ಭೇದಿಸಿ ಕೇಳುಗರೊಬ್ಬರು, `ಈ ಇಂಗ್ಲಿಷ್-ಕನ್ನಡ... ಭಾಷೆ ಬಗ್ಗೆ ಏನಂತೀರಾ?' ಎಂದರು.

`ಭಾಷೆ ಬಗ್ಗೆ ಗಂಭೀರ ಚರ್ಚೆ ಹಿಂದಿನಿಂದಲೂ ಇದೆ. ಇಂಗ್ಲಿಷ್ ಕಲೀಬೇಕು, ಬದಲಾವಣೆಯಾಗಬೇಕು ನಿಜ... ಆದರೆ ನಾನು ಕನ್ನಡ ಮಾಧ್ಯಮಕ್ಕೆ ಹೆಚ್ಚು ಒತ್ತು ಕೊಡೋನು. ಇದರ ಬಗ್ಗೆ ನನಗೂ ಸ್ವಲ್ಪ ಗೊಂದಲವಿದೆ' ಎಂದರು. ಸಿದ್ದಯ್ಯನವರ ಉತ್ತರ ತಕ್ಷಣಕ್ಕೆ ಕೆಲವರಿಗೆ ಇಂಗ್ಲಿಷ್ ಬಲ್ಲ ಸಿದ್ದಯ್ಯನವರ ಧಿಮಾಕಿನಂತೆ ಕಂಡರೂ, ಅದರ ಬಗ್ಗೆ ಪೂರ್ಣವಾಗಿ ತೆರೆದುಕೊಳ್ಳಲಿಲ್ಲವೇನೋ, ಅಥವಾ ಆ ಬಗ್ಗೆ ಮಾತನಾಡಲು ಹಿಂಜರಿದರೇನೋ ಎನ್ನಿಸುವಂತಿತ್ತು.

ಮಾತುಕತೆ ಮುಗಿದ ನಂತರ ಅವರ ಹೊಸ ಸಂಕಲನ `ಗಲ್ಲೆಬಾನಿ'ಯಿಂದ ಆಯ್ದು ಮೊಗೆದ ಮೂರ್ನಾಲ್ಕು ಕವನಗಳನ್ನು ಓದಿದರು. ಸಿದ್ದಯ್ಯನವರ ಓದುವ ಶೈಲಿಯೇ ವಿಶಿಷ್ಟವಾದುದು. ಅವರ ಒಡಲಾಳದ ತಳಮಳ ಅಕ್ಷರವಾಗಿ, ದನಿಯಾಗಿ... ಕೇಳುಗರನ್ನು ಸಮ್ಮೋಹನಗೊಳಿಸುವಂಥಾದ್ದು.

ಗೆಳೆಯರು, ಹಿತೈಷಿಗಳು, ಅಭಿಮಾನಿಗಳು ಹಾಗೆಯೇ ಸಿದ್ದಯ್ಯ ಇಲ್ಲಿಗೆ ಬಂದು ಬಿಗಿಯದೇನು ಅಂದುಕೊಂಡು ಕುತೂಹಲಕ್ಕೆ ಬಂದಿದ್ದವರು... ಎಲ್ಲರನ್ನು ಕಂಡು ಕವಿ ಖುಷಿಗೊಂಡಿದ್ದರು. ಒಂದು ಅಪರೂಪದ ಆತ್ಮೀಯ ಸಂಜೆ ಅದಾಗಿತ್ತು. ನೆನಪಿನಲ್ಲುಳಿಯುವಂತಿತ್ತು.

ಗಲ್ಲೇಬಾನಿ ಅಂದ್ರೇನು: ಕೆ.ಬಿ.ಸಿದ್ದಯ್ಯನವರ ಬರಹ

ಗಲ್ಲೆಬಾನಿಯೊಳಗೆ ತುಂಬಿತುಳುಕುವ ಜಲ-ಔಷಧಿ ಗುಣ ಹೊಂದಿದೆ. ಇದು ಪವಿತ್ರ ಜಲವೆಂದು ಜನಪದರ ನಾಲಿಗೆ ಮೇಲಿರುವ ನಂಬಿಕೆ. ವಿಶೇಷವಾಗಿ ಮಾದಿಗರ ಜನಾಂಗ ಪುರಾಣದಲ್ಲಿ ಇಂತಹ ನಂಬಿಕೆಗಳು ಬೇರು ಬಿಟ್ಟಿರುವುದನ್ನು ನಮ್ಮ ಹಿರೀಕರ ಬಾಯಿಂದ ಕೇಳಿದ್ದೇನೆ. ಇದು ಕಟ್ಟೆಮನೆಯ ಮಾತು.

ಯಾವುದೇ ರೋಗ ತಗುಲಿದವರಿಗೆ ಗಲ್ಲೆಬಾನಿ ನೀರು ಕುಡಿಸಿದರೆ ಗುಣಮುಖರಾಗುತ್ತಾರೆ. ಚರ್ಮರೋಗ ತಗುಲಿದವರು ಒಂದು ರಾತ್ರಿ ಒಂದು ಹಗಲು ಗಲ್ಲೆಬಾನಿಯೊಳಗೆ ತಂಗಿದ್ದು ಪೂಜೆ ಸಲ್ಲಿಸಿದರೆ ರೋಗಮುಕ್ತರಾಗುತ್ತಾರೆ. ಔಷಧಿಯಂತೆ ಬಳಕೆಯಾದ ಗಲ್ಲೆಬಾನಿ ನೀರನ್ನು ವಿವಾಹ ಸಂದರ್ಭದಲ್ಲಿ ಪವಿತ್ರ ಜಲವನ್ನಾಗಿಯೂ ಬಳಸುತ್ತಾರೆ. ಈ ನೀರನ್ನು `ಶಾಸ್ತ್ರದ ನೀರು' ಎಂದು ಕರೆಯುತ್ತಾರೆ. ವಿಪ್ರಬಂಧುಗಳು ಅವರಲ್ಲಿ ನಡೆಯುವ ವಿವಾಹ ಸಂದರ್ಭದಲ್ಲಿ ನವ ವಧುವರರ ನೆತ್ತಿಯ ಮೇಲೆ `ಶಾಸ್ತ್ರದನೀರ'ನ್ನು ಚುಮುಕಿಸಿ, ಅರುಂಧತಿ ನಕ್ಷತ್ರ ದರ್ಶನ ಮಾಡಿಸಿದರೆ ಶುಭವಾಗುತ್ತದೆ ಎಂದು ಕಲ್ಲುನೀರು ಕರಗೋ ಹೊತ್ತಿನಲ್ಲಿ ಕಾಡಿಬೇಡಿ `ಗಲ್ಲೆಬಾನಿ' ನೀರನ್ನು ಚಮ್ಮಾರನ ಅನುಗ್ರಹದಿಂದ ಪಡೆದು ಕೊಳ್ಳುತ್ತಾರೆಂಬುದು ಜನಪದರ ನಾಲಿಗೆ ಮೇಲಿನ ಸೋಜಿಗದ ಸಂಗತಿಯಾಗಿದೆ.

ಆದ ಕಾರಣ `ಗಲ್ಲೆಬಾನಿ' ನಮ್ಮ ಸಾಮಾಜಿಕ ಆಧ್ಯಾತ್ಮಿಕ ಪ್ರಜ್ಞೆಯಾಗಿ ಉಳಿದುಕೊಂಡು ಬಂದಿದೆ. ಚಮ್ಮಾರ ಕಾಯಕಕ್ಕೆ ಗಲ್ಲೆಬಾನಿ ಹೇಗೆ ಜೀವಾಳ ಆಗಿದೆಯೋ ಅದೇ ರೀತಿ ನನ್ನ ಕಾವ್ಯ ರಚನೆಯ ಜೀವಾಳವೂ ಆಗಿದೆ. ಚಮ್ಮಾರನು ತೊಗಲಿಗೆ ಜೀವಕಳೆ ತುಂಬುವಂತೆ, ಕಮ್ಮಾರನು ಕಬ್ಬಿಣವನ್ನು ತನ್ನಿಚ್ಚೆಗೆ ತಕ್ಕಂತೆ ಬಗ್ಗಿಸುವಂತೆ ಸಿಕ್ಕಿದ ದಕ್ಕಿದ ಶಬ್ದಗಳನ್ನು ನನ್ನ ಇಚ್ಚೆಗೆ ತಕ್ಕಂತೆ ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. `ಗಲ್ಲೆಬಾನಿ' ಎಂಬು ಶಬ್ದಶಿಲ್ಪವೊಂದನ್ನು ಕಟ್ಟಲು ಪ್ರಯತ್ನಿಸಿದ್ದೇನೆ. `ಗಲ್ಲೆಬಾನಿ'ಯೊಳಗಿನ ಜಲ ನನ್ನ ಕಾವ್ಯದೊಳಗೆ ಜೀವಜಲದಂತೆಯೋ, ರಕ್ತದಂತೆಯೋ ಹರಿದಾಡುತ್ತಿದೆ. ಇಂತಹ ಜೀವಜಲವೋ, ರಕ್ತವೋ ನಿಮ್ಮೊಳಗೂ ಹರಿದಾಡಲೆಂದು ಬಯಸುತ್ತೇನೆ. ಇಂತಹ ಬಯಕೆಗಳೂ ದುಃಖದ ಮೂಲ ಆಗಿರುವುದರಿಂದ ಬಯಕೆಗಳನ್ನು ನೀಗಿಕೊಳ್ಳಲು ಕಾಜಗದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದೇನೆ. ಕಾಜಗದ ದೋಣಿ ಈಜುವ ಸೋಜಿಗ ಕಾಣುತ್ತಿದ್ದೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)