varthabharthi


ವಿಶೇಷ-ವರದಿಗಳು

2006ಕ್ಕಿಂತ ಈ ಬಾರಿ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತೇವೆ: ಇ.ಪಿ.ಜಯರಾಜನ್

ವಾರ್ತಾ ಭಾರತಿ : 19 Oct, 2019
ಸಂದರ್ಶನ: ಸ್ಟೀಫನ್ ಕಯ್ಯಾರ್

ಕಾಸರಗೋಡು, ಅ.18: ಕೇರಳ ಕೈಗಾರಿಕೆ ಹಾಗೂ ಕ್ರೀಡಾ ಸಚಿವ ಇ.ಪಿ.ಜಯರಾಜನ್ ರಾಜ್ಯ ಸಿಪಿಎಂನ ಅತ್ಯಂತ ಪ್ರಭಾವೀ ನಾಯಕ. ಪಕ್ಷದ ಕೇಂದ್ರ ಸಮಿತಿ ಸದಸ್ಯರೂ ಆಗಿರುವ ಜಯರಾಜನ್ ಕೇರಳ ಸರಕಾರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿಕದ ಎರಡನೇ ಅತ್ಯಂತ ಪ್ರಮುಖ ಸಚಿವ. ಈಗ ಮಂಜೇಶ್ವರ ಉಪಚುನಾವಣೆಯಲ್ಲಿ ಎಡರಂಗದ ಪ್ರಚಾರದ ಜವಾಬ್ದಾರಿ ಇವರ ಮೇಲಿದೆ. ಕಳೆದ ಕೆಲವು ದಿನಗಳಿಂದ ಕ್ಷೇತ್ರದಲ್ಲೇ ಉಳಿದುಕೊಂಡು ಪ್ರಚಾರ ಮಾಡುತ್ತಿರುವ ಜಯರಾಜನ್ ಅವರು ಶುಕ್ರವಾರ ವಾರ್ತಾಭಾರತಿ ಜೊತೆ ಮಾತನಾಡಿದರು.

►ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಯಾವ ರೀತಿಯ ಫಲಿತಾಂಶ ನಿರೀಕ್ಷಿಸುತ್ತಿದ್ದೀರಿ?

-ನಿರೀಕ್ಷೆಯಲ್ಲ. ಸದ್ಯದ ರಾಜಕೀಯ ಚಿತ್ರಣವನ್ನು ಸಮಗ್ರವಾಗಿ ನೋಡಿ ವಸ್ತುಸ್ಥಿತಿ ಹೇಳುತ್ತಿದ್ದೇನೆ. ಐದರಲ್ಲಿ ಐದೂ ಕ್ಷೇತ್ರಗಳನ್ನು ಎಡರಂಗ ಗೆಲ್ಲಲಿದೆ.

►ಆದರೆ ಐದರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಹಾಲಿ ಯುಡಿಎಫ್ ಶಾಸಕರಿದ್ದರು...

-ಇರಲಿ. ಆದರೆ ಈ ಬಾರಿ ಅಲ್ಲಿ ಗೆಲ್ಲುವುದು ಎಲ್‌ಡಿಎಫ್. ಯುಡಿಎಫ್ ಭದ್ರಕೋಟೆ ಎಂದೇ ಪರಿಗಣಿಸಲಾದ ಕೋಟೆಯಂನ ಪಾಲಾ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಎಲ್‌ಡಿಎಫ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಎಲ್‌ಡಿಎಫ್ ಕಡೆ ಜನರ ಒಲವು ಬದಲಾಗಿರುವ ಸ್ಪಷ್ಟ ಸೂಚನೆಯಿದು. ಅವರು (ಯುಡಿಎಫ್) ಯಾವ ವಿಶ್ವಾಸದಲ್ಲಿ ಈಗ ಉಪಚುನಾವಣೆ ಎದುರಿಸುತ್ತಾರೆ?

►ರಾಜ್ಯದಲ್ಲಿ ನಿಮ್ಮದೇ ಸರಕಾರವಿದ್ದೂ ಲೋಕಸಭಾ ಚುನಾವಣೆಯಲ್ಲಿ ಎಡರಂಗ ಹೀನಾಯವಾಗಿ ಸೋತಿದೆ ...

-ಹೌದು. ಅದೊಂದು ಅತ್ಯಂತ ಅನಿರೀಕ್ಷಿತ ಫಲಿತಾಂಶ. ಆದರೆ ಅದರ ಬಗ್ಗೆ ಜನರಿಗೆ ಈಗ ವಾಸ್ತವ ಗೊತ್ತಾಗಿದೆ. ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರುತ್ತದೆ. ರಾಜ್ಯದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಆಗುತ್ತಾರೆ ಎಂದೆಲ್ಲಾ ಜನರನ್ನು ನಂಬಿಸಲಾಗಿತ್ತು. ಹಾಗಾಗಿ ಜನರು ಈ ಅಪಪ್ರಚಾರವನ್ನು ನಂಬಿ ಯುಡಿಎಫ್‌ಗೆಮತ ಚಲಾಯಿಸಿದರು. ಆದರೆ ಅದು ಎಲ್‌ಡಿಎಫ್ ವಿರುದ್ಧದ ಮತವಾಗಿರಲಿಲ್ಲ. ಈಗ ಎಲ್ಲವೂ ಜನರ ಮುಂದಿದೆ. ಕಾಂಗ್ರೆಸ್ ಸಂಪೂರ್ಣ ಸೋತು ಸುಣ್ಣವಾಗಿದೆ. ರಾಹುಲ್ ಸ್ವತಃ ಅಲ್ಲಿ (ಅಮೇಠಿ) ಸೋತಿದ್ದಾರೆ.ಇಲ್ಲಿಯೂ ಈಗ ಅವರು ಲೆಕ್ಕಕ್ಕಿಲ್ಲ. ಕಾಂಗ್ರೆಸ್‌ಗೆ ಇಲ್ಲಿ ನೆಲೆಯೇ ಇಲ್ಲ. ಈಗ ಜನರು ಸಂಪೂರ್ಣವಾಗಿ ಎಡರಂಗದತ್ತ ತಮ್ಮ ಒಲವು ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ನಮಗೆ ಗೆಲುವು ಖಚಿತ.

►ಮಂಜೇಶ್ವರದಲ್ಲಿ ಯುಡಿಎಫ್ ಹಾಗೂ ಬಿಜೆಪಿ ನಡುವೆ ಹಣಾಹಣಿ ಇದೆ. ಎಡರಂಗ ಮೂರನೇಸ್ಥಾನದಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ ...

-ನೋ .. ನೋ.. ನೆವರ್ ( ಇಲ್ಲವೇ ಇಲ್ಲ ). ಈಗ ಇಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿದೆ. ಮೊದಲ ಸ್ಥಾನದಲ್ಲಿ ಎಲ್‌ಡಿಎಫ್ ಇದೆ. ಯುಡಿಎಫ್ ಎರಡನೇ ಸ್ಥಾನದಲ್ಲಿದೆ. ಬಿಜೆಪಿ ಮೂರನೇ ಸ್ಥಾನಕ್ಕಿಳಿದಿದೆ. ಕೆಲವೇ ಕೆಲವು ದಿನ ಕಾದು ನೋಡಿ. ನಿಮಗೇ ಗೊತ್ತಾಗುತ್ತದೆ.

►ಕೇರಳದಲ್ಲಿ ಬಿಜೆಪಿ ರಾಜಕೀಯವಾಗಿ ಬೆಳೆಯುತ್ತಿದೆ. ಅದನ್ನು ತಡೆಯುವಲ್ಲಿ ಎಡರಂಗ ವಿಫಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ ...

-ಇದು ತಪ್ಪು. ಏಕೆಂದರೆ ಇಲ್ಲಿ ಬಿಜೆಪಿ ಬೆಳೆದಿದ್ದರೆ ಅದು ಕಾಂಗ್ರೆಸ್‌ನಿಂದಾಗಿ. ಬಿಜೆಪಿಯಿಂದಾಗಿ ಎಡರಂಗದ ಪ್ರಭಾವ ಹಾಗೂ ರಾಜಕೀಯ ಶಕ್ತಿಗೆ ಒಂದಿಷ್ಟೂ ಧಕ್ಕೆಯಾಗಿಲ್ಲ. ಇಲ್ಲಿ ಬಿಜೆಪಿ ಎದುರು ಶರಣಾಗಿರುವುದು ಕಾಂಗ್ರೆಸ್. ಇಡೀ ರಾಜ್ಯದಲ್ಲಿ ಮುಸ್ಲಿಂ ಲೀಗ್ ಇಲ್ಲದಿದ್ದರೆ ಕಾಂಗ್ರೆಸ್‌ಗೆ ಒಂದೇ ಒಂದು ಕ್ಷೇತ್ರದಲ್ಲಿ ಠೇವಣಿ ಕೂಡ ಸಿಗುವುದಿಲ್ಲ. ಅಂತಹ ಪರಿಸ್ಥಿತಿ ಇದೆ. ಇಲ್ಲೇ ನೋಡಿ. ಮಂಜೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಐದು ಸಾವಿರ ಮತಗಳಿಲ್ಲ. ಹಾಗಾಗಿ ಬಿಜೆಪಿ ಬೆಳೆಯುತ್ತಿದೆ ಎಂಬುದು ನಿಜವಲ್ಲ. ಈಗ ಬಿಜೆಪಿ ಕಡೆ ಹೋಗಿದ್ದ ಕಾಂಗ್ರೆಸ್ ಕಾರ್ಯಕರ್ತರು ನಿರಾಶರಾಗಿ ಎಡರಂಗದತ್ತ ಮರಳಿ ಬರುತ್ತಿದ್ದಾರೆ.

►ಮಂಜೇಶ್ವರ ಎಲ್‌ಡಿಎಫ್ ಅಭ್ಯರ್ಥಿ ಆರೆಸ್ಸೆಸ್ ನಂಟಿರುವವರು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಆರೋಪಿಸಿದ್ದಾರೆ ...

-ಕೆಪಿಸಿಸಿ ಅಧ್ಯಕ್ಷರು ಸ್ವತಃ ಆರೆಸ್ಸೆಸ್ ಮನೋಭಾವ ದವರು. ಇಲ್ಲಿ ಸೋಲುವ ಹತಾಶೆ ಅವರನ್ನು ಆವರಿಸಿದ್ದು, ಪರೋಕ್ಷವಾಗಿ ಆರೆಸ್ಸೆಸ್ ಹಾಗೂ ಬಿಜೆಪಿಗೆ ಲಾಭವಾಗಲಿ ಎಂದು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ನಮ್ಮ ಅಭ್ಯರ್ಥಿ ಎಂ.ಶಂಕರ್ ರೈ ಮಾಸ್ಟರ್ ಎಂದು ಘೋಷಣೆಯಾದಾಗಲೇ ಸೋಲುವ ಭಯ ಆವರಿಸಿಕೊಂಡಿದೆ. ಹಾಗಾಗಿ ಇಂತಹ ಹತಾಶೆಯ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಜನರಿಗೆ ಇದು ಸ್ಪಷ್ಟವಾಗಿ ಗೊತ್ತಾಗಿದೆ.

►ಮಂಜೇಶ್ವರದಲ್ಲಿ ಅಲ್ಪಸಂಖ್ಯಾತರ ಮತ ನಿರ್ಣಾಯಕವಾಗಿದೆ ...

-ನಮಗೆ ಇಲ್ಲಿನ ಮುಸ್ಲಿಮರು, ಹಿಂದೂಗಳು, ಕ್ರೈಸ್ತರು , ಹಿಂದುಳಿದ ವರ್ಗಗಳು ಎಲ್ಲರೂ ಈ ಬಾರಿ ಬೆಂಬಲಿಸಲಿದ್ದಾರೆ. ಗೆಲುವು ನಮ್ಮದೇ.

►ನಾಯರ್ ಸರ್ವಿಸ್ ಸೊಸೈಟಿ (ಎನ್.ಎಸ್.ಎಸ್.) ಉಪಚುನಾವಣೆಯಲ್ಲಿ ಯುಡಿಎಫ್‌ಗೆ ಬೆಂಬಲ ಘೋಷಿಸಿದೆ. ಇದರ ಪರಿಣಾಮ ಏನಾಗ ಬಹುದು?

-ನಾಯರ್ ಸಮುದಾಯದವರು ಈ ಬಾರಿ ಯಾವುದೇ ರೀತಿಯಲ್ಲಿ ನಮ್ಮ ವಿರುದ್ಧ ಮತ ಚಲಾಯಿಸುವುದಿಲ್ಲ ಎಂದು ನಮಗೆ ವಿಶ್ವಾಸವಿದೆ. ನಮ್ಮ ಸರಕಾರದ ಕೆಲಸ ಹಾಗೂ ರಾಜಕೀಯ ಸ್ಥಿತಿಗತಿ ನೋಡಿ ಅವರು ನಮಗೆ ಮತ ನೀಡಲಿದ್ದಾರೆ .

►ಬಿಜೆಪಿ ಮಂಜೇಶ್ವರದಲ್ಲಿ ಹಿಂದೂ ಮತಗಳ ಧ್ರುವೀಕರಣಕ್ಕೆ ಯತ್ನಿಸುತ್ತಿದೆ. ನೀವು ಇದನ್ನು ಹೇಗೆ ಎದುರಿಸುತ್ತೀರಿ ?

-ಇಲ್ಲಿ ಬಿಜೆಪಿಗೆ ಕಾರ್ಯಕರ್ತರೇ ಇಲ್ಲ. ಇರುವ ಕಾರ್ಯಕರ್ತರು ಬಿಜೆಪಿ ನಾಯಕತ್ವ ಹಾಗೂ ಇಲ್ಲಿನ ಅಭ್ಯರ್ಥಿಯನ್ನು ವಿರೋಧಿಸುತ್ತಿದ್ದಾರೆ. ಹಾಗಾಗಿ ಕರ್ನಾಟಕದಿಂದ ಬಿಜೆಪಿ ನಾಯಕರು, ಕಾರ್ಯಕರ್ತರುಬಂದು ಇಲ್ಲಿ ಕೋಮುವಾದಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಮುಸ್ಲಿಂ ಲೀಗ್ ಈ ಎರಡೂ ಪಕ್ಷಗಳು ಕೋಮು ರಾಜಕೀಯ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿವೆ. ಅವರದ್ದು ಆತ್ಮಹತ್ಯಾ ರಾಜಕೀಯ. ಇದನ್ನು ಜನರು ಸೋಲಿಸುತ್ತಾರೆ.

►ಕಾಸರಗೋಡು ಜಿಲ್ಲೆಯ ಸರಕಾರಿ ಕನ್ನಡ ಶಾಲೆಗಳಲ್ಲಿ ಮಲಯಾಳಂ ಶಿಕ್ಷಕರನ್ನು ನೇಮಿಸಿ ವಿವಾದವಾಗಿತ್ತು. ಇದಕ್ಕೆ ಏನು ಹೇಳುತ್ತೀರಿ?

-ಆ ಬಗ್ಗೆ ನಾವು ಗಮನ ಹರಿಸುತ್ತೇವೆ. ಕನ್ನಡ ಶಿಕ್ಷಕರನ್ನೇ ನೇಮಿಸಲು ನಾವು ಕ್ರಮ ಕೈಗೊಳ್ಳುತ್ತೇವೆ.

►ಮಂಜೇಶ್ವರದ ಕನ್ನಡಿಗರನ್ನು ಅಭಿವೃದ್ಧಿ ವಿಷಯದಲ್ಲಿ ಕಡೆಗಣನೆ ಮಾಡಲಾಗುತ್ತಿದೆ ಎಂಬ ಆರೋಪವಿದೆ...

-ನಮ್ಮ ಸರಕಾರದಲ್ಲಿ ಅಂತಹ ಯಾವುದೇ ಕಡೆಗಣನೆ ಆಗಿಲ್ಲ. ಆಗಲು ಬಿಡುವುದೂ ಇಲ್ಲ. ಕನ್ನಡ ಭಾಷಿಕರಿಗೂ ಅಭಿವೃದ್ಧಿಯಲ್ಲಿ ಸಮಪಾಲು ಸಿಗುವಂತೆ ನಾವು ನೋಡಿಕೊಳ್ಳುತ್ತೇವೆ. ಅದಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತೇವೆ. ಈಗ ನಾವು ಪ್ರಕಟಿಸಿರುವ ಮಂಜೇಶ್ವರ ಪ್ಯಾಕೇಜ್ ಈ ಕ್ಷೇತ್ರವನ್ನು ಇಡೀ ರಾಜ್ಯದಲ್ಲೇ ಒಂದು ಮಾದರಿ ಅಭಿವೃದ್ಧಿ ಕ್ಷೇತ್ರವಾಗಿ ಬದಲಾಯಿಸುತ್ತದೆ.

►ಮಂಜೇಶ್ವರ ಕ್ಷೇತ್ರಕ್ಕೆ ನಿಮ್ಮ ಆಶ್ವಾಸನೆಗಳೇನು ?

-ನಾವು ಮಂಜೇಶ್ವರದ ಸಮಗ್ರ ಅಭಿವೃದ್ಧಿಗಾಗಿ ಪ್ಯಾಕೇಜ್ ತರುತ್ತೇವೆ. ಇದರಲ್ಲಿ ಕಾಸರಗೋಡು ಜಿಲ್ಲೆ ಹಾಗೂ ವಿಶೇಷವಾಗಿ ಮಂಜೇಶ್ವರದಲ್ಲಿ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭವಾಗಲಿದೆ. ಇಲ್ಲಿ ಹೊಸ ಹೊಸ ಕೈಗಾರಿಕೆಗಳನ್ನು ತರಲು, ಸಾವಿರಾರು ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಲು, ಇಲ್ಲಿನ ಮೂಲಭೂತ ಸೌಲಭ್ಯಗಳನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ನಾವು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಇವುಗಳನ್ನು ನಾವು ಒಂದೊಂದಾಗಿ ಬಹಳ ಬೇಗ ಜಾರಿಗೆ ತರುತ್ತೇವೆ. ಮುಂದಿನ ಚುನಾವಣೆಯಲ್ಲಿ ನಾವು ಬಂದಾಗ ಜನರು ಅದನ್ನು ನೋಡಿ ನಮ್ಮಲ್ಲಿ ಕೇಳಬಹುದು. ಇಲ್ಲಿ ಪಂಚಾಯತ್‌ಗಳಲ್ಲಿ ಅಧಿಕಾರದಲ್ಲಿರುವ ಯುಡಿಎಫ್ ಯಾವುದೇ ಕೆಲಸ ಮಾಡದೆ ಕ್ಷೇತ್ರವನ್ನು ಹಾಳು ಮಾಡಿದೆ. ನಮ್ಮ ಸರಕಾರ ಅದನ್ನು ಸರಿಪಡಿಸಲಿದೆ.

►ಬಿಡಿಜೆಎಸ್ ಪಕ್ಷ ಎನ್‌ಡಿಎ ಬಿಡುವ ಲಕ್ಷಣ ಗಳಿವೆ. ಅವರನ್ನು ಎಡರಂಗಕ್ಕೆ ಸೇರಿಸಿಕೊಳ್ಳುತ್ತೀರಾ?

-ಬಿಟ್ಟು ಬರಲಿ. ಆಮೇಲೆ ನೋಡುವ. ಇಲ್ಲಿ ಬಿಜೆಪಿಯೇ ಎಷ್ಟು ಸಮಯ ಇರುತ್ತದೆ ಎಂದು ಹೇಳಲಾಗದು.

ಮಂಜೇಶ್ವರದಲ್ಲಿ ನಿಮಗೆ ಎಡರಂಗ ಗೆಲ್ಲುವ ವಿಶ್ವಾಸ ಇರುವುದು ಯಾವ ಆಧಾರದಲ್ಲಿ ?

-ಯಾಕೆಂದರೆ ನಾನಿಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ, ಕಳೆದ ಕೆಲವು ದಿನಗಳಿಂದ ಗಮನಿಸಿದ್ದೇನೆ. ಈಗ ಬಿಜೆಪಿಯ ಕೋಮುವಾದಿ ರಾಜಕೀಯದಿಂದ ಜನರು ಬೇಸತ್ತಿದ್ದಾರೆ. ಅದನ್ನು ಸಮರ್ಥವಾಗಿ ಎದುರಿಸಲು ಯುಡಿಎಫ್ ಶಕ್ತವಲ್ಲ ಎಂಬುದೂ ಜನರಿಗೆ ಗೊತ್ತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸರಕಾರದ ಕೆಲಸ, ಸಾಧನೆಗಳನ್ನು ಜನರು ಗುರುತಿಸಿದ್ದಾರೆ. ನಮ್ಮದು ಜನಪರ ಸರಕಾರ ಎಂದು ಪರಿಗಣಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಆದ ಎಡವಟ್ಟಿಗೆ ಈಗ ಪಶ್ಚಾತ್ತಾಪವಾಗಿ ಜನರು ನಮ್ಮನ್ನು ಬೆಂಬಲಿಸುತ್ತಾರೆ. 2006ರಲ್ಲಿ ಗೆದ್ದಿರುವುದಕ್ಕಿಂತ ಹೆಚ್ಚಿನ ಅಂತರದಲ್ಲಿ ಈ ಬಾರಿ ನಾವು ಗೆಲ್ಲುತ್ತೇವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)