varthabharthi


ಸುಗ್ಗಿ

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಪ್ರಪ್ರಥಮ ಮುಸ್ಲಿಂ ಅಧ್ಯಕ್ಷ

ಬದ್ರುದ್ದೀನ್ ತ್ಯಾಬ್ಜಿ ಸಂಸ್ಮರಣೆ

ವಾರ್ತಾ ಭಾರತಿ : 19 Oct, 2019
ಜೆ.ಎಸ್. ಬಂದೂಕ್‌ವಾಲಾ

19ನೆಯ ಶತಮಾನದಲ್ಲಿ ಭಾರತದ ಇತಿಹಾಸದಲ್ಲಿ ಗಮನಾರ್ಹ ಬದಲಾವಣೆಯಾಯಿತು. ಶತಮಾನದಷ್ಟು ಹಳೆಯದಾದ ಮುಘಲ್ ಸಾಮ್ರಾಜ್ಯದ ಹಿಡಿತ ಸಡಿಲ ಗೊಂಡರೆ ಈಸ್ಟ್ ಇಂಡಿಯಾ ಕಂಪೆನಿ ಈ ವಿಶಾಲ ರಾಷ್ಟ್ರದ ಆಡಳಿತಾತ್ಮಕ, ವಾಣಿಜ್ಯಾತ್ಮಕ ಮತ್ತು ಸೈನ್ಯದ ಹಿಡಿತವನ್ನು ಬಿಗಿಗೊಳಿಸಿತು. ಮುಸ್ಲಿಮರಿಗೆ ಇದು ಗಣನೀಯ ತಲ್ಲಣದ ಅವಧಿಯಾಗಿತ್ತು.

ಅಕ್ಬರ್ ಮತ್ತು ಶಾಹಜಹಾನರ ವೈಭವ ಗತಕಾಲದ ನೆನಪಾಗಿತ್ತು. ಮುಸ್ಲಿಂ ಸಮುದಾಯದಲ್ಲಿ ತೀವ್ರ ಅನಿಶ್ಚಿತತೆ ನೆಲೆಸಿತ್ತು. ಒಂದರ್ಥದಲ್ಲಿ ಈಗ ದೇಶದಲ್ಲಿ ಇರುವ ಪರಿಸ್ಥಿತಿ ಯಂತೆಯೇ ಅಂದಿನ ಪರಿಸ್ಥಿತಿ ಇತ್ತು. ಶಿಕ್ಷಣ ಮತ್ತು ವ್ಯವಹಾರದ ಕೊರತೆಯಿಂದ ಕ್ರಮೇಣ ಅಧಿಕಾರ ಮುಸ್ಲಿಮರ ಕೈಜಾರತೊಡಗಿತು. ಈ ಘಟ್ಟದಲ್ಲಿ ಸರ್ ಸೈಯ್ಯದ್ ಅಹ್ಮದ್ ಮತ್ತು ಬದ್ರುದ್ದೀನ್ ತ್ಯಾಬ್ಜಿ ಎಂಬ ಎರಡು ಪ್ರಮುಖ ಮುಸ್ಲಿಂ ವ್ಯಕ್ತಿಗಳು ಉದಯಿಸಿದರು.

ಸರ್ ಸೈಯ್ಯದ್ ಅವರು ತ್ಯಾಬ್ಜಿಗಿಂತ ಸುಮಾರು ಒಂದು ತಲೆಮಾರಿನಷ್ಟು ಹಿರಿಯರಾಗಿದ್ದರು. ಭಾರತದ ಮುಸ್ಲಿಮರ ಭವಿಷ್ಯದ ಬಗ್ಗೆ ಇಬ್ಬರೂ ಸಂಪೂರ್ಣ ವಿರುದ್ಧ ಪರಿಕಲ್ಪನೆ ಹೊಂದಿದ್ದರು. ಅವರ ವಿರುದ್ಧವಾದ ದೃಷ್ಟಿಕೋನ ಮುಂದಿನ ಎರಡು ಶತಮಾನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದವು.

ಸರ್ ಸೈಯ್ಯದ್ ಮುಘಲ್ ಸಾಮ್ರಾಜ್ಯದ ಅಂತಿಮ ಆಡಳಿತದ ಭಾಗವಾಗಿದ್ದರು. ವಿಶಾಲ ಉಪಖಂಡವನ್ನು ಆವರಿಸಲಿರುವ ಅಗಾಧ ಚಾರಿತ್ರಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಮುಘಲ್ ಸಾಮ್ರಾಜ್ಯ ಅಸಮರ್ಥವಾಗಿದೆ ಎಂಬುದು ಅವರಿಗೆ ತಿಳಿದಿತ್ತು. ಮುಸ್ಲಿಂ ಸಮುದಾಯದಲ್ಲಿ ಹೆಚ್ಚಿನವರು ಅನಕ್ಷರಸ್ಥರಾಗಿರುವುದು ಸಮಸ್ಯೆಯ ಮೂಲ ತಿರುಳು ಎಂಬುದನ್ನು ಅವರು ಸರಿಯಾಗಿಯೇ ತೀರ್ಮಾನಿ ಸಿದ್ದರು. ಅದಕ್ಕಿಂತಲೂ ಮುಖ್ಯವಾಗಿ, ಇಂಗ್ಲಿಷರು ಮುಸ್ಲಿಂ ಆಡಳಿತವನ್ನು ಬದಲಾಯಿಸುತ್ತಾರೆ. ಆದ್ದರಿಂದ ಇಂಗ್ಲಿಷರು ಮತ್ತು ಮುಸ್ಲಿಮರ ಮಧ್ಯೆ ಹಗೆತನ ಹೆಚ್ಚಲಿದೆ. ಇದು ಮುಸ್ಲಿಂ ಸಮುದಾಯಕ್ಕೆ ಆಪತ್ಕಾರಿ ಎಂಬುದು ಅವರ ಅಭಿಪ್ರಾಯವಾಗಿತ್ತು.

ಸರ್ ಸೈಯ್ಯದ್ ಬ್ರಿಟಿಷ್ ಆಡಳಿತಗಾರರು ಮತ್ತು ಮುಸ್ಲಿಮರ ಮಧ್ಯೆ ಸೇತುವೆ ನಿರ್ಮಿಸಲು ಪ್ರಯತ್ನಿಸಿದರು. ಬ್ರಿಟಿಷ್ ಆಡಳಿತದ ಸನಿಹಕ್ಕೆ ಮುಸ್ಲಿಮರನ್ನು ಕರೆತರಲು ಅವರು ನಡೆಸಿದ ಪ್ರಯತ್ನ ಗಮನಾರ್ಹವಾದುದು. ಒಂದರ್ಥದಲ್ಲಿ ಅವರು ಭಾರತದಲ್ಲಿ ಬ್ರಿಟಿಷರ ಆಡಳಿತವನ್ನು ಮುಸ್ಲಿಮರು ಒಪ್ಪಿಕೊಳ್ಳುವಂತೆ ಮಾಡಿದರು. ಇದೇ ಸಂದರ್ಭ ಅವರು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಕಂದಕವನ್ನು ವಿಸ್ತರಿಸಿದರು. ಎರಡು ಸಮುದಾಯದ ನಡುವೆ ಮಿತೃತ್ವ ಇರಬೇಕೆಂಬುದು ಹಿಂದೂಗಳು ಬಯಸುತ್ತಿದ್ದರು. ಅಂದಿನ ದಿನದಲ್ಲಿ ಸಂಪರ್ಕ ಮತ್ತು ಸಂವಹನ ವ್ಯವಸ್ಥೆ ಕಷ್ಟವಾಗಿತ್ತು ಮತ್ತು ಪ್ರವಾಸ ಮಾಡುವುದು ಅಪರೂಪವಾಗಿತ್ತು. ಒಂದು ವೇಳೆ ಸಯ್ಯದ್ ಅವರೂ ಹಿಂದೂ-ಮುಸ್ಲಿಮ್ ಮೈತ್ರಿ ಬಯಸಿದ್ದರೂ ಅದು ಅವರ ಸಾಮರ್ಥ್ಯಕ್ಕಿಂತ ಅತೀತವಾಗಿತ್ತು ಮತ್ತು 1857ರ ಬಳಿಕದ ಪ್ರಕ್ಷುಬ್ಧ ದಿನಗಳಲ್ಲಿ ಎರಡೂ ಸಮುದಾಯವನ್ನು ಒಗ್ಗೂಡಿಸಲು ಪ್ರಯತ್ನಿಸುವುದು ಸುಲಭವಾಗಿರಲಿಲ್ಲ.

ಮುಂದಿನ ದಿನದಲ್ಲಿ ಈ ಪ್ರಕ್ಷುಬ್ಧ ಪರಿಸ್ಥಿತಿ ದೇಶದ ವಿಭಜನೆಗೆ ಕಾರಣವಾಯಿತು. ಮತ್ತೊಬ್ಬ ಪ್ರಮುಖ ವ್ಯಕ್ತಿ ಬದ್ರುದ್ದೀನ್ ತ್ಯಾಬ್ಜಿ. 1844ರ ಅಕ್ಟೋಬರ್‌ನಲ್ಲಿ ಭರೂಚ್‌ನ ಕ್ಯಾಂಬೆ ಎಂಬಲ್ಲಿ ಶಿಯಾ ಸುಲೈಮಾನಿ ವೋಹ್ರ ಕುಟುಂಬದಲ್ಲಿ ಜನಿಸಿದರು. ಗುಜರಾತ್‌ನ ಶಿಯಾ ವೋಹ್ರ ಕುಟುಂಬ ಮೂಲತಃ ವ್ಯಾಪಾರಿಗಳಾಗಿದ್ದು ಇವರು ಯೆಮನ್ ಮೂಲದವರು. ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದ ಇವರು ಮೃದು ಸ್ವಭಾವದವರಾಗಿದ್ದು ಯಾವುದೇ ವಿವಾದ ಬಯಸುತ್ತಿರಲಿಲ್ಲ. ಮುಘಲ್ ಆಡಳಿತದ ಉತ್ತುಂಗ ಸಮಯದಲ್ಲಿ ಶಿಯಾ ಮತ್ತು ಸುನ್ನಿಗಳ ನಡುವಿನ ಸಂಘರ್ಷ ತಪ್ಪಿಸುವಲ್ಲಿ ಇದು ಒಂದು ಬುದ್ಧಿವಂತಿಕೆಯ ತಂತ್ರವಾಗಿತ್ತು ಎನ್ನಬಹುದು. ಸಾಯುವುದಕ್ಕಿಂತ ಹೊಂದಾಣಿಕೆ ಮಾಡಿಕೊಳ್ಳುವುದು ಎಷ್ಟೋ ಉತ್ತಮ ಎಂಬುದು ಇವರ ಧೋರಣೆಯಾಗಿತ್ತು. ಸುಮಾರು 10,000 ಸುಲೈಮಾನಿ ವೋಹ್ರಾಗಳು ಇಂದಿನ ದಿನದಲ್ಲಿ ಹೈದರಾಬಾದ್ ಹಾಗೂ ವಡೋದರದಲ್ಲಿ ನೆಲೆಸಿದ್ದಾರೆ ಎಂಬುದನ್ನು ಗಮನಿಸಬಹುದು.

ರಾಷ್ಟ್ರೀಯ ಜೀವನದಲ್ಲಿ ಇವರು ವಹಿಸಿದ ಪಾತ್ರ ಇವರ ಸಂಖ್ಯೆಗೆ ಹೋಲಿಸಿದರೆ ಅಪಾರವಾದುದು. ಇದರ ಬಹುಪಾಲು ಶ್ರೇಯ ಬದ್ರುದ್ದೀನ್ ತ್ಯಾಬ್ಜಿಗೆ ಸಲ್ಲುತ್ತದೆ. ತ್ಯಾಬ್ಜಿ ರಾಷ್ಟ್ರೀಯ ರಾಜಕೀಯ ಪಕ್ಷವೊಂದರ ಅತ್ಯಗತ್ಯವನ್ನು ಅರಿತಿದ್ದರು. ಬಾಂಬೆಯ ಎಲ್ಫಿನ್‌ಸ್ಟೋನ್‌ನಲ್ಲಿ ಶಿಕ್ಷಣ ಪಡೆದ, ಇಂಗ್ಲೆಂಡ್‌ನೊಂದಿಗೆ ಸಂಪರ್ಕ ಹೊಂದಿದ್ದ ಹಾಗೂ ಕಾಂಗ್ರೆಸ್‌ನೊಂದಿಗೆ ಒಡನಾಟವಿದ್ದ ತ್ಯಾಬ್ಜಿಯವರನ್ನು 1885ರಲ್ಲಿ ಸ್ಥಾಪನೆಯಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ ಸ್ವಾಗತಿಸಿತು. ಅವರೊಬ್ಬ ಸುಶಿಕ್ಷಿತ ಮುಸ್ಲಿಮರಾಗಿದ್ದರು ಮತ್ತು ಮುಸ್ಲಿಮರು ಹಾಗೂ ದೇಶ ಎದುರಿಸುತ್ತಿರುವ ಸಮಸ್ಯೆಯನ್ನು ಅರಿತಿದ್ದರು. ಅವರು ಪಕ್ಷದ ಮೂರನೇ ಅಧ್ಯಕ್ಷರಾದರು ಮತ್ತು ಅಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷ ಹಿಂದು ಹಾಗೂ ಮುಸ್ಲಿಮರ ಪ್ರತಿನಿಧಿ ಎಂಬ ಭಾವನೆ ಬೇರೂರಲು ಪ್ರಯತ್ನಪಟ್ಟರು. ಓರ್ವ ನಯವಿನಯದ ಸಂಭಾವಿತ ವ್ಯಕ್ತಿಯಾಗಿದ್ದ ಅವರು ಬ್ರಿಟಿಷರೊಂದಿಗೆ ಹಾಗೂ ಬೃಹತ್ ಹಿಂದೂ ಸಮುದಾಯದೊಂದಿಗೆ ಸಂಘರ್ಷವನ್ನು ಬಯಸಲಿಲ್ಲ. ಕಾನೂನು ಅವರ ಪ್ರಥಮ ಆದ್ಯತೆಯಾಗಿತ್ತು ಮತ್ತು ಅವರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಪ್ರಥಮ ಭಾರತೀಯರಾಗಿದ್ದರು. ಸಂಘಟಿತ ಭಾರತದ ಬಗ್ಗೆ ತೀವ್ರ ನಂಬಿಕೆ ಇರಿಸಿದ್ದ ಕುಟುಂಬವನ್ನು ಅವರು ಬಿಟ್ಟು ಹೋಗಿದ್ದಾರೆ.

ಸರ್ ಸಯ್ಯದ್ ಅವರ ಪರಂಪರೆ ಮುಹಮ್ಮದ್ ಅಲಿ ಜಿನ್ನಾರ ಪ್ರಾಬಲ್ಯದ ಮುಂದೆ ಸಮಾಪ್ತಿಯಾಯಿತು. ಇದರ ಪರಿಣಾಮ ಎಲ್ಲಾ ಭಾರತೀಯರಿಗೂ ಕಹಿಯಾಯಿತು. ಅಳಿದುಹೋದ ಮಿಲಿಯಾಂತರ ಜನರು ಮತ್ತು ಎನ್‌ಆರ್‌ಸಿ, ಗುಂಪು ಹತ್ಯೆ ಮುಂತಾದ ಕಾರಣಗಳಿಂದ ಈಗಲೂ ತೊಂದರೆ ಅನುಭವಿಸುತ್ತಿರುವ ಮಿಲಿಯಾಂತರ ಜನರು ಸದಾ ಭಾರತದ ವಿಭಜನೆಯನ್ನು ಖಂಡಿಸುತ್ತಾರೆ. ಜೊತೆಗೆ, ಜಗಳಗಂಟ, ಆಕ್ರಮಣಕಾರಿ ಬಹುಸಂಖ್ಯಾತತೆ ಭಾರತದಲ್ಲಿ ಉದಯಿಸಲು ದೇಶವಿಭಜನೆ ಕಾರಣವಾಗಿದೆ. ದೇಶ ವಿಭಜನೆ ಗಾಂಧೀಜಿಯ ಪ್ರಭಾವವನ್ನು ಗಣನೀಯವಾಗಿ ಕುಗ್ಗಿಸಿತು. ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದ ಸ್ಥಿತಿ ತುಂಬಾ ಕಳಪೆಯಾಗಿದೆ. ಬದ್ರುದ್ದೀನ್ ತ್ಯಾಬ್ಜಿಯಂತೆಯೇ ಅವರ ಕುಟುಂಬದವರೂ ದೇಶದ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಬ್ಬಾಸ್ ತ್ಯಾಬ್ಜಿ ಮಹಾತ್ಮಾ ಗಾಂಧೀಜಿಯ ಅತ್ಯಂತ ನಿಕಟವರ್ತಿಯಾಗಿದ್ದರು ಮತ್ತು ದಂಡಿ ಉಪ್ಪಿನ ಸತ್ಯಾಗ್ರಹವನ್ನು ಸಂಘಟಿಸಿದ್ದರು. ಸತ್ಯಾಗ್ರಹ ಎಲ್ಲಿ ನಡೆಸಬೇಕು ಮತ್ತು ದಂಡಿಯಲ್ಲಿ ಗಾಂಧೀಜಿ ಎಲ್ಲಿ ಉಳಿದುಕೊಳ್ಳಬೇಕು ಎಂಬುದನ್ನು ಅಬ್ಬಾಸ್ ನಿರ್ಧರಿಸಿದ್ದರು. ರೆಹಾನಾ ತ್ಯಾಬ್ಜಿ ಮತ್ತವರ ಸಹೋದರಿ ಹಾಮಿದಾ ಮಹಾತ್ಮಾ ಗಾಂಧೀಜಿಯವರಿಗೆ ನಡೆದಾಡಲು ನೆರವಾಗುತ್ತಿದ್ದರು. ರೆಹಾನಾ ಗಾಂಧೀಜಿಯವರ ನೆಚ್ಚಿನ ಭಜನೆ ಹಾಡುವವರಾಗಿದ್ದರು.

ಸುಮಾರು ಶತಮಾನಕ್ಕಿಂತಲೂ ಹಿಂದಿನ ಕಾಲದಲ್ಲಿ, ಸಂಪ್ರದಾಯವಾದಿ ಕುಟುಂಬದ ಮುಸ್ಲಿಂ ಮಹಿಳೆಯೊಬ್ಬರು ಗಾಂಧೀಜಿಯವರ ದಿನಚರಿಯಲ್ಲಿ ಇಂತಹ ಪಾತ್ರ ವಹಿಸಿರುವುದು ಗಮನಾರ್ಹವಾಗಿದೆ. ಮತ್ತೊಬ್ಬ ಮೊಮ್ಮಗಳು ಸುರೈಯ್ಯ ದೇಶದ ಧ್ವಜದ ವಿನ್ಯಾಸ ರೂಪಿಸುವ ಗೌರವಕ್ಕೆ ಪಾತ್ರರಾಗಿದ್ದರು. ಅಝೀಮ್ ತ್ಯಾಬ್ಜಿ ಹಳೆಯ ಬರೋಡ ಪ್ರಾಂತದಲ್ಲಿ ಮುಸ್ಲಿಂ ಶಿಕ್ಷಣದ ಮಾರ್ಗದರ್ಶಕರಾಗಿ ಹೆಸರು ಪಡೆದಿದ್ದರು. ಇದ್ರಿಸ್ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿದ್ದರಲ್ಲದೆ ಬಳಿಕ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ಮೊಮ್ಮಗ ಬದ್ರುದ್ದೀನ್ ಅಲಿಗಢ ಮುಸ್ಲಿಂ ವಿವಿಯ ಉಪಕುಲಪತಿಯಾಗಿದ್ದರು ಮತ್ತು ಬಳಿಕ ಜಪಾನ್‌ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಪಟ್ಟಿ ಬೆಳೆಯುತ್ತಾ ಸಾಗಿದೆ ಮತ್ತು ಕುಟುಂಬದ ಮೂರನೇ ತಲೆಮಾರು ಮುಸ್ಲಿಮರು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಬೆರೆಯಲು ಸಹಾಯ ಮಾಡುತ್ತಿದೆ. ನಸೀಮ್‌ರಂತಹ ರಾಷ್ಟ್ರಮಟ್ಟದ ಕಲಾವಿದ, ಸಂಪುಟ ಕಾರ್ಯದರ್ಶಿ ಜಾಫರ್ ಸೈಫುಲ್ಲಾ ದೇಶದ ಸೇವೆಯಲ್ಲಿ ಕಾಣಿಕೆ ಸಲ್ಲಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ವಿಭಜನೆಯ ದುರಂತದ ಬಳಿಕ ಮುಸ್ಲಿಮರಿಗೆ ದೇಶದಲ್ಲಿ ನೆಲೆ ನಿಂತು ಜೀವನ ಸಾಗಿಸಲು ಇವರ ಉಪಸ್ಥಿತಿ ಪ್ರೇರಣೆನೀಡಿ ಅನುಕೂಲ ಮಾಡಿಕೊಟ್ಟಿದೆ. ಅಕ್ಟೋಬರ್ 10ರಂದು ಜನ್ಮದಿನದ ಪ್ರಯುಕ್ತ ಬದ್ರುದ್ದೀನ್‌ರನ್ನು ಗೌರವಿಸುವ ಜೊತೆಗೆ, 1947ರ ಬಳಿಕ ಭಾರತದಲ್ಲಿ ಹೊಂದಿಕೊಂಡು ಜೀವನ ನಡೆಸಲು ಭಾರತೀಯ ಮುಸ್ಲಿಮರಿಗೆ ಸುಲಭ ಸಾಧ್ಯವಾಗಿಸಿದ ಅವರ ಕುಟುಂಬದವರನ್ನೋ ಗೌರವಿಸಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)