varthabharthiವೈವಿಧ್ಯ

ಪ್ರಕ್ಷುಬ್ಧ ಸ್ವರ್ಗದಲ್ಲಿ ಕಳೆದು ಹೋದ ಬಾಲ್ಯಗಳು

ವಾರ್ತಾ ಭಾರತಿ : 19 Oct, 2019
ಆರ್.ವೈಗೈ, ಅಣ್ಣಾ ಮ್ಯಾಥ್ಯೂ ಮತ್ತು ದೇವಿಕಾ ಎಸ್.

ಕಾಶ್ಮೀರದಲ್ಲಿ ಸರಕಾರವು ತನ್ನ ವಿರುದ್ಧ ಪ್ರತಿಭಟಿಸುವವರನ್ನು ಶಿಕ್ಷಿಸ ಬಯಸುತ್ತದೆ. ಅದರ ಈ ಬಯಕೆ ಈಡೇರುವುದಕ್ಕಾಗಿ ಅಲ್ಲಿ ನಡೆಯುತ್ತಿರುವ ಒಂದು ರಾಜಕೀಯ ಆಟದಲ್ಲಿ ಮಕ್ಕಳು ದಾಳಗಳಾಗಿದ್ದಾರೆ. ಪಬ್ಲಿಕ್ ಕಮಿಶನ್ ಆನ್ ಹ್ಯೂಮನ್ ರೈಟ್ಸ್‌ನ 2006ರ ಒಂದು ವರದಿಯ ಪ್ರಕಾರ, 1990-2005ರ ನಡುವೆ ಒಟ್ಟು 46 ಶಾಲೆಗಳನ್ನು ಸಶಸ್ತ್ರ ಪಡೆಗಳು ಆಕ್ರಮಿಸಿಕೊಂಡಿವೆ ಮತ್ತು 1990-2005ರ ನಡುವೆ 400ಕ್ಕೂ ಶಾಲೆಗಳು ಅಗ್ನಿಗೆ ಆಹುತಿಯಾಗಿವೆ. ಮಕ್ಕಳು ಅಕ್ರಮ ದಿಗ್ಬಂಧನವಲ್ಲದೆ, ಶೈಕ್ಷಣಿಕ ಮೂಲ ಸೌಕರ್ಯಗಳ ನಾಶ ಮಕ್ಕಳ ಮೇಲೆ ಅವುಗಳ ಇಡೀ ಜೀವಮಾನದಲ್ಲಿ ಅವುಗಳು ಮರೆಯಲಾಗದಂತಹ ಋಣಾತ್ಮಕ ಪರಿಣಾಮ ಬೀರುತ್ತವೆ. ಆಘಾತ, ಭಯ ಹಾಗೂ ಕಹಿ ಅನುಭವಗಳ ನಿರಂತರವಾದ ಒಂದು ಸರಮಾಲೆಯನ್ನೇ ಅವುಗಳು ಸೃಷ್ಟಿಸುತ್ತವೆೆ.

ಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಪ್ರತಿ ಮೂರು ಮಕ್ಕಳಲ್ಲಿ ಒಂದು ಮಗುವಿಗೆ (ವೈದ್ಯಕೀಯವಾಗಿ ಪರೀಕ್ಷಿಸಿದ ಬಳಿಕ) ಮನಸ್ಸಿನ ಸಮಸ್ಯೆ (ಮೆಂಟಲ್ ಡಿಸಾರ್ಡರ್) ಇದೆ ಎಂದು ತಿಳಿದು ಬಂದಿದೆ. ಈ ವರ್ಷದ ಆದಿಯಲ್ಲಿ ಕಮ್ಯುನಿಟಿ ಮೆಂಟಲ್ ಹೆಲ್ತ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸಮೀಕ್ಷೆ ವ್ಯಕ್ತಪಡಿಸಿದ ಅಭಿಪ್ರಾಯ ಇದು. ಹಾಗೆಯೇ ಡಾಕ್ಟರ್ಸ್‌ ವಿದೌಟ್ ಬಾರ್ಡರ್ಸ್‌ ಹೇಳುವ ಪ್ರಕಾರ, ಕಾಶ್ಮೀರ ಕಣಿವೆಯಲ್ಲಿರುವ ಸುಮಾರು 1.8 ಮಿಲಿಯ ವಯಸ್ಕರಲ್ಲಿ, ಅಂದರೆ ಅಲ್ಲಿನ ಜನಸಂಖ್ಯೆಯ ಶೇ.45 ಮಂದಿಯಲ್ಲಿ, 2015ರಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡು ಬಂದಿದ್ದವು. ಹೀಗೆ, ಆಗಸ್ಟ್ 5ರ ಘಟನೆಗಳಿಗೂ ಮೊದಲೇ ಹಿಂಸೆ, ಅಕ್ರಮ ದಿಗ್ಬಂಧನಗಳು ಮತ್ತು ಚಿತ್ರಹಿಂಸೆಯ ಒಂದು ಇತಿಹಾಸದ ಅನಾಹುತಕಾರಿ ಪರಿಣಾಮಗಳು ಕಾಶ್ಮೀರ ಕಣಿವೆಯ ಮಕ್ಕಳ ಮೇಲೆ ಆಗಿದ್ದವು.

ಹಲವು ವರದಿಗಳು ಈ ಭಯಾನಕ ಪರಿಣಾಮಗಳನ್ನು ದಾಖಲಿಸಿವೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ನೂರಾರು ಮಕ್ಕಳನ್ನು ಅಕ್ರಮವಾಗಿ ಬಂಧನದಲ್ಲಿಡಲಾಗಿದೆ. ಇವರಲ್ಲಿ ಹಲವು ಮಕ್ಕಳನ್ನು ಕಾನೂನು ಅನುಷ್ಠಾನ ಅಧಿಕಾರಿಗಳು ನಡುರಾತ್ರಿಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ. ಆ ಮಕ್ಕಳ ಬಂಧನದ ಯಾವ ದಾಖಲೆಗಳೂ ಇಲ್ಲ. ಪರಿಣಾಮವಾಗಿ ಅವುಗಳು ಎಲ್ಲಿದ್ದಾವೆಂದು ಪತ್ತೆ ಹಚ್ಚುವುದು ಕಷ್ಟವಾಗಿದೆ. ಆಗಸ್ಟ್ ತಿಂಗಳಲ್ಲಿ ಅರ್ಥಶಾಸ್ತ್ರಜ್ಞ ಜೀನ್ ಡ್ರೆಝ್ ಸಿದ್ಧಪಡಿಸಿದ ವರದಿಯು ಹುಡುಗರ ಅಕ್ರಮ ಬಂಧನ ಮತ್ತು ಅವರಿಗೆ ನೀಡಲಾದ ಚಿತ್ರಹಿಂಸೆಯ ವಿವರಗಳನ್ನು ದಾಖಲಿಸಿದೆ. ‘ಇಂಡಿಯನ್ ಫೆಡರೇಶನ್ ಆಫ್ ಇಂಡಿಯನ್ ವಿಮೆನ್’ ಹಾಗೂ ಇತರ ಸಂಘಟನೆಗಳ ಒಂದು ವರದಿಯು ತಾಯಂದಿರು ಹತಾಶರಾಗಿ ತಮ್ಮ ಮಕ್ಕಳಿಗಾಗಿ ತಮ್ಮ ಮನೆಗಳ ಮುಂದೆ ಕಾಯುತ್ತ ನಿಂತಿರುವ ಚಿತ್ರದ ಮನಕಲಕುವ ಚಿತ್ರಣ ನೀಡಿದೆ. ತಮ್ಮ ಮಕ್ಕಳು ಎಲ್ಲಿದ್ದಾರೆಂದೇ ಆ ತಾಯಂದಿರಿಗೆ ತಿಳಿದಿಲ್ಲ.

ಕಾಶ್ಮೀರದಲ್ಲಿ ಸರಕಾರವು ತನ್ನ ವಿರುದ್ಧ ಪ್ರತಿಭಟಿಸುವವರನ್ನು ಶಿಕ್ಷಿಸ ಬಯಸುತ್ತದೆ. ಅದರ ಈ ಬಯಕೆ ಈಡೇರುವುದಕ್ಕಾಗಿ ಅಲ್ಲಿ ನಡೆಯುತ್ತಿರುವ ಒಂದು ರಾಜಕೀಯ ಆಟದಲ್ಲಿ ಮಕ್ಕಳು ದಾಳಗಳಾಗಿದ್ದಾರೆ. ಪಬ್ಲಿಕ್ ಕಮಿಶನ್ ಆನ್ ಹ್ಯೂಮನ್ ರೈಟ್ಸ್‌ನ 2006ರ ಒಂದು ವರದಿಯ ಪ್ರಕಾರ, 1990-2005ರ ನಡುವೆ ಒಟ್ಟು 46 ಶಾಲೆಗಳನ್ನು ಸಶಸ್ತ್ರ ಪಡೆಗಳು ಆಕ್ರಮಿಸಿಕೊಂಡಿವೆ ಮತ್ತು 1990-2005ರ ನಡುವೆ 400ಕ್ಕೂ ಶಾಲೆಗಳು ಅಗ್ನಿಗೆ ಆಹುತಿಯಾಗಿವೆೆ. ಮಕ್ಕಳು ಅಕ್ರಮ ದಿಗ್ಬಂಧನವಲ್ಲದೆ, ಶೈಕ್ಷಣಿಕ ಮೂಲ ಸೌಕರ್ಯಗಳ ನಾಶ ಮಕ್ಕಳ ಮೇಲೆ ಅವುಗಳ ಇಡೀ ಜೀವಮಾನದಲ್ಲಿ ಅವುಗಳು ಮರೆಯಲಾಗದಂತಹ ಋಣಾತ್ಮಕ ಪರಿಣಾಮ ಬೀರುತ್ತವೆ. ಆಘಾತ, ಭಯ ಹಾಗೂ ಕಹಿ ಅನುಭವಗಳ ನಿರಂತರವಾದ ಒಂದು ಸರಮಾಲೆಯನ್ನೇ ಅವುಗಳು ಸೃಷ್ಟಿಸುತ್ತವೆೆ.

ಈ ವರ್ಷದ ಆದಿಭಾಗದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಶನರ್ ಅವರ ವರದಿ ಹೇಳಿರುವ ಮಾತುಗಳಿವು: ಕಾಶ್ಮೀರದಲ್ಲಿ ಮಕ್ಕಳನ್ನು ಪೊಲೀಸ್ ಲಾಕಪ್‌ಗಳಲ್ಲಿ ಬಂಧನದಲ್ಲಿಟ್ಟು ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ. ಆ ಮಕ್ಕಳ ವಯಸ್ಸನ್ನು ತಪ್ಪಾಗಿ ದಾಖಲಿಸಲಾಗಿದೆ. ಅವರ ಮೇಲೆ ಯಾವುದೇ ಆಪಾದನೆಗಳಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಆ ಮಕ್ಕಳನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಂದರೆ ಪಬ್ಲಿಕ್ ಸೇಫ್ಟಿ ಆ್ಯಕ್ಟ್ (ಪಿಎಸ್‌ಎ)ನ ಅಡಿಯಲ್ಲಿ ಬಂಧಿಸಲಾಗಿದೆ. ಈ ಕಾಯ್ದೆಯ ಪ್ರಕಾರ ಯಾವುದೇ ವಿಚಾರಣೆ ನಡೆಸದೆ ಬಂಧಿತರನ್ನು ಎರಡು ವರ್ಷಗಳ ಕಾಲ ಬಂಧನದಲ್ಲಿ ಇಡಬಹುದಾಗಿದೆ. ಇದಕ್ಕೆ ಯಾರನ್ನೂ ಉತ್ತರದಾಯಿಗಳನ್ನಾಗಿ ಮಾಡದಂತೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಸರಕಾರದ ಬಳಿ ಇರುವ ಅಸ್ತ್ರವಾಗಿದೆ. 1990-2013ರ ನಡುವೆ ನೂರಾರು ಮಕ್ಕಳನ್ನು ಪಿಎಸ್‌ಎ ಬಳಸಿ ಬಂಧನದಲ್ಲಿಡಲಾಗಿತ್ತು. ಜಮ್ಮು ಆ್ಯಂಡ್ ಕಾಶ್ಮೀರ್ ಕೊಯೆಲಿಶನ್ ಆಫ್ ಸಿವಿಲ್ ಸೊಸೈಟಿ (ಜೆಕೆಸಿಸಿಎಸ್) ಬಹಿರಂಗಪಡಿಸಿದ ಮಾಹಿತಿ ಇದು. ಮಕ್ಕಳ ಬಂಧನದ ಈ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ/ನ್ಯಾಯಾಧೀಶರಿಗೆ ಬಂಧಿತ ಮಕ್ಕಳ ವಯಸ್ಸನ್ನು ಖಚಿತಪಡಿಸಿಕೊಳ್ಳುವ ಯಾವುದೇ ಪ್ರಕ್ರಿಯೆಗಳು ಲಭ್ಯವಿರಲಿಲ್ಲ ಮತ್ತು ಅಪ್ರಾಪ್ತ ವಯಸ್ಕ ಬಾಲಕರನ್ನು ಪ್ರೌಢ ಕ್ರಿಮಿನಲ್‌ಗಳ ಜೊತೆ ಜೈಲುಗಳಲ್ಲಿ ಕೂಡಿ ಹಾಕಲಾಗಿತ್ತು. ನ್ಯಾಯಾಂಗದ ಮಧ್ಯಪ್ರವೇಶದ ಬಳಿಕವಷ್ಟೇ ಆ ಮಕ್ಕಳನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. ಈ ಬಂಧನಗಳಲ್ಲಿ ಸುಮಾರು ಶೇ.50 ಬಂಧನಗಳು ಕಾನೂನು ವಿರೋಧಿಯಾದ, ಅಕ್ರಮ ಬಂಧನಗಳು ಎಂದು ನ್ಯಾಯಾಲಯಗಳು ಹೇಳಿದವು.

ಮಕ್ಕಳನ್ನು ಈ ರೀತಿಯಾಗಿ ನಡೆಸಿಕೊಳ್ಳುವುದು ನಿಸ್ಸಂಶಯವಾಗಿಯೂ ಹಲವಾರು ಕಾನೂನುಗಳ ಹಾಗೂ ಅಂತರ್‌ರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗಿದೆ. ಮೊದಲನೆಯದಾಗಿ, ಸರಕಾರದ ಇಂತಹ ಕ್ರಮಗಳು ನಾಗರಿಕ ಹಾಗೂ ರಾಜಕೀಯ ಹಕ್ಕುಗಳ ಕುರಿತಾದ ಅಂತರ್‌ರಾಷ್ಟ್ರೀಯ ಒಡಂಬಡಿಕೆಯ 14(4)ನೇ ವಿಧಿಯ ಉಲ್ಲಂಘನೆಯಾಗಿದೆ. ಈ ವಿಧಿಯ ಅಪ್ರಾಪ್ತ ವಯಸ್ಕರ ವಿರುದ್ಧ ತೆಗೆದುಕೊಳ್ಳುವ ಎಲ್ಲ ಕಾನೂನು ಪ್ರಕ್ರಿಯೆಗಳಲ್ಲಿ ಮಕ್ಕಳ ವಯಸ್ಸನ್ನು ಮತ್ತು ಆ ಮಕ್ಕಳ ಪುನರ್ವಸತಿಯ ಸಾಧ್ಯತೆಗಳನ್ನು ಪರಿಗಣಿಸಬೇಕು ಎನ್ನುತ್ತದೆ.

2003ರಲ್ಲಿ ಪ್ರಭಾಕರನ್ ವರ್ಸಸ್ ತಮಿಳುನಾಡು ರಾಜ್ಯ ಸರಕಾರದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಹೇಳಿತು: ಅಪ್ರಾಪ್ತ ವಯಸ್ಕ ನ್ಯಾಯ ಕಾಯ್ದೆ ವ್ಯಾಪಕವಾದ ಒಂದು ಕಾನೂನು ಮತ್ತು ರಾಷ್ಟ್ರೀಯ ಭದ್ರತೆಗಾಗಿ ಮಾಡಿರುವ ಪ್ರತಿಬಂಧಕ ಕಾನೂನುಗಳನ್ನು ಅದು ಅಸಿಂಧುಗೊಳಿಸುತ್ತದೆ.

 ಈ ಮೊದಲು 1982ರಲ್ಲಿ ಸುಪ್ರೀಂ ಕೋರ್ಟ್ ಜಯಮಾಲಾ ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬರನ್ನು ಪ್ರಿವೆಂಟಿವ್ ಡಿಟೆನ್ಶೆನ್ ಕಾಯ್ದೆಯನ್ವಯ ಬಂಧಿಸಿರುವುದನ್ನು ಖಂಡಿಸಿತ್ತು. ಅಲ್ಲದೆ, ಯುವಕರು ತಪ್ಪು ಮಾರ್ಗದರ್ಶನದ ಪರಿಣಾಮವಾಗಿ ಏನೋ ತಪ್ಪು ಮಾಡಿದಾಗ ಅವರನ್ನು ತೀರ ಕಠಿಣವಾಗಿ ಶಿಕ್ಷಿಸುವಂತಿಲ್ಲ ಎಂದು ಹೇಳಿತ್ತು.

ಅದೇನಿದ್ದರೂ, ಕಾಶ್ಮೀರದಲ್ಲಿ ಈ ಯಾವುದೇ ಕಾನೂನುಗಳನ್ನು ಅನುಸರಿಸಲಾಗುತ್ತಿರುವಂತೆ ಕಾಣಿಸುತ್ತಿಲ್ಲ. ಪೋಷಕರು ಈಗ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ವಿಪರೀತ ಭಯಪಡುತ್ತಿದ್ದಾರೆ. ತಮ್ಮ ಮಕ್ಕಳನ್ನು ಪೊಲೀಸರು ಕರೆದೊಯ್ಯಬಹುದು ಅಥವಾ ಅವುಗಳು ಪೊಲೀಸ್ ಹಾಗೂ ಇತರರ ನಡುವೆ ನಡೆಯುವ ಘರ್ಷಣೆಯಲ್ಲಿ ಗುಂಡಿನ ಚಕಮಕಿಯಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು ಎಂಬ ಭಯ ಅವರನ್ನು ಸದಾ ಕಾಡುತ್ತಿರುತ್ತದೆ. ಘರ್ಷಣೆ ಪೀಡಿತವಾದ ಅಂತಹ ಒಂದು ಪ್ರದೇಶದಲ್ಲಿ ಮಕ್ಕಳು ನಾಪತ್ತೆಯಾದಾಗ, ಶಾಲೆಗೆ ಹೋದ ಮಕ್ಕಳು ಮನೆಗೆ ಮರಳಿ ಬರದಿದ್ದಾಗ ಪೋಷಕರು ಯಾರಿಗೆ ದೂರು ಕೊಡಬೇಕು? ಸಹಜವಾಗಿಯೇ, ಅವರು ನ್ಯಾಯಾಲಯಗಳಿಗೆ ಮೊರೆಹೋಗಬೇಕು. ಯಾಕೆಂದರೆ ಸ್ವಲ್ಪವಾದರೂ ಪರಿಹಾರ ಸಿಗುವುದು ನ್ಯಾಯಾಲಯಗಳಿಂದ ಮಾತ್ರ ಅನ್ನಿಸುತ್ತದೆ ಅವರಿಗೆ. ಆದರೆ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಸರಕಾರ ರದ್ದು ಪಡಿಸಿದಂದಿನಿಂದ, ಸರಕಾರ ಕಾಶ್ಮೀರಿಗಳಿಂದ ಈ ಸೀಮಿತ ಆಯ್ಕೆಯನ್ನು ಕಿತ್ತು ಕೊಂಡಂತಾಗಿದೆ. ಪಿಎಸ್‌ಎಯ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಹಾಗೂ ಜಿಲ್ಲಾ ಬಾರ್ ಅಸೋಸಿಯೇಶನ್‌ಗಳ ಅಧ್ಯಕ್ಷರನ್ನು ಬಂಧಿಸಿದ ಬಳಿಕ, ಕಾಶ್ಮೀರದ 1,050 ಮಂದಿ ನ್ಯಾಯವಾದಿಗಳಲ್ಲಿ ಬಹುತೇಕ ನ್ಯಾಯವಾದಿಗಳು ಮುಷ್ಕರ ನಿರತರಾಗಿದ್ದಾರೆ. ಇಷ್ಟರವರೆಗೆ ಅಲ್ಲಿಯ ನ್ಯಾಯಾಲಯಗಳಲ್ಲಿ 200ಕ್ಕೂ ಹೆಚ್ಚು ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ, ಅಲ್ಲಿಯ ಹೆಚ್ಚಿನ ಅಂಚೆ ಕಚೇರಿಗಳು ಮುಚ್ಚಿರುವುದರಿಂದ ನ್ಯಾಯಾವಾದಿಗಳು ಸಂಬಂಧಿತ ವ್ಯಕ್ತಿಗಳಿಗೆ, ಪ್ರತಿವಾದಿಗಳಿಗೆ ನೋಟಿಸ್ ಗಳನ್ನು ಕಳುಹಿಸಲು ಅಸಮರ್ಥರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿನ ಶ್ರೀನಗರ ಪೀಠದ ‘ಆರ್ಡರ್ಸ್‌ ಲಿಸ್ಟ್’ನಲ್ಲಿ ನಮೂದಿಸಲಾಗಿದ್ದ ಎಲ್ಲ 31 ಮೊಕದ್ದಮೆಗಳನ್ನು ಆಗಸ್ಟ್ 5ರಂದು ‘‘ವಾಹನ ಸಂಚಾರದ ಮೇಲೆ ಹೇರಲಾಗಿದ್ದ ನಿರ್ಬಂಧಗಳಿಂದಾಗಿ’’ ಮುಂದೂಡಲಾಯಿತು. ಕೆಲವು ವಾರಗಳ ಬಳಿಕ, ಸೆಪ್ಟಂಬರ್ 24ರಂದು, ಅಪ್‌ಲೋಡ್ ಮಾಡಲಾಗಿದ್ದ 78 ಮೊಕದ್ದಮೆಗಳ ಪೈಕಿ, ವಾದಿ ಮತ್ತು ಪ್ರತಿವಾದಿ- ಎರಡೂ ಕಡೆಯವರ ಪರವಾಗಿ ನ್ಯಾಯವಾದಿಗಳು ಹಾಜರಾಗಿದ್ದದ್ದು ಕೇವಲ ಹನ್ನೊಂದು ಮೊಕದ್ದಮೆಗಳಲ್ಲಿ ಮಾತ್ರ. 9 ಮೊಕದ್ದಮೆಗಳಲ್ಲಿ ಒಬ್ಬನೇ ಒಬ್ಬ ವಕೀಲ ಹಾಜರಾಗಿರಲಿಲ್ಲ, 9 ಪ್ರಕರಣಗಳಲ್ಲಿ ಅರ್ಜಿದಾರರ ವಕೀಲರು ಮಾತ್ರ ಹಾಜರಿದ್ದರು ಮತ್ತು 47 ಮೊಕದ್ದಮೆಗಳಲ್ಲಿ ಸರಕಾರದ ವಕೀಲರು ಮಾತ್ರ ಹಾಜರಿದ್ದರು.

ಇಂತಹ ಸಮಸ್ಯೆಗಳನ್ನು ನಿರೀಕ್ಷಿಸಿಯೇ ನಮ್ಮ ಸಂವಿಧಾನವು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಅವರಿಗೆ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಅವಕಾಶ ಒದಗಿಸಿದೆ.

ಈ ನಿಟ್ಟಿನಲ್ಲಿ ಇಂಟರ್ ಅಮೆರಿಕನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ ಹೇಳಿರುವ ಮಾತುಗಳು ಗಮನಾರ್ಹ: ‘‘ಭಯವನ್ನು, ಭಯೋತ್ಪಾದನೆಯನ್ನು ಭಯೋತ್ಪಾದನೆಯಿಂದ ಎದುರಿಸದೆ ಕಾನೂನಿನ ಚೌಕಟ್ಟಿನ ಒಳಗಿಂದಲೇ ಎದುರಿಸಬೇಕು. ಪಾಶವೀ ಬಲವನ್ನು ಬಳಸುವವರು ಸ್ವತಃ ತಾವೇ ಬರ್ಬರ ಪಶುಗಳಾಗುತ್ತಾರೆ. ಹೀಗೆ ಸ್ವತಃ ಅವರೇ ಪಶುಗಳಾದಾಗ, ಮಕ್ಕಳೂ ಸೇರಿದಂತೆ ಮುಗ್ಧರನ್ನು ಬಲಿಪಶುಗಳನ್ನಾಗಿಸುವ ಹಿಂಸೆಯ ಸರಮಾಲೆಯನ್ನೇ ಅವರು ಸೃಷ್ಟಿಸುತ್ತಾರೆ.’’

ವಿಚಲಿತಗೊಂಡ ಪಂಜರದೊಳಗಿನ ಮಕ್ಕಳು

ಕಾಶ್ಮೀರದಲ್ಲಿ ಮಕ್ಕಳು ಪಂಜರದೊಳಗಿಟ್ಟ ಹಕ್ಕಿಗಳಂತೆ, ಕೋವಿಯ ನೆರಳಿನಲ್ಲಿ ಬೆಳೆಯುತ್ತಾರೆ. ಅವರಲ್ಲಿ ಹಲವರ ತಂದೆ ತಾಯಿ ನಾಪತ್ತೆಯಾಗಿ ಹೋಗುವುದರಿಂದ, ಅವರು ತಮ್ಮ ಮನೆಯಲ್ಲಿರುವ ತಮ್ಮ ತಮ್ಮ ಪುಟ್ಟ ಪುಟ್ಟ ಸಹೋದರ, ಸಹೋದರಿಯರ ಆರೈಕೆಯ ಜವಾಬ್ದಾರಿಯನ್ನು ಕೂಡ ಅನಿವಾರ್ಯವಾಗಿ ಹೊರಲೇಬೇಕಾಗುತ್ತದೆ: ಕುಟುಂಬ ವಾತಾವರಣ, ಸುರಕ್ಷಿತ ಸ್ಥಳಗಳು, ಶಿಕ್ಷಣ ಹಾಗೂ ಆರೋಗ್ಯ ಸವಲತ್ತುಗಳಿಂದ ವಂಚಿತರಾಗುವ ಆ ಮಕ್ಕಳು ವಾಸಿಸುವ ಸಾಮಾಜಿಕ ಚೌಕಟ್ಟುಗಳ ಮೇಲೆ ವಿಪರೀತ ಒತ್ತಡ ಬೀಳುತ್ತದೆ. ಪರಿಣಾಮವಾಗಿ ಮಕ್ಕಳು ಆಘಾತಕ್ಕೊಳಗಾಗುತ್ತಾರೆ; ಅವರ ಬಾಲ್ಯವನ್ನು ಅವರಿಂದ ಕಿತ್ತುಕೊಳ್ಳಲಾಗುತ್ತದೆ. ಹೀಗೆ ಬಾಲ್ಯವಂಚಿತರಾದ ಮಕ್ಕಳು ಪಡಬಾರದ ಪಾಡು ಪಡಬೇಕಾಗುತ್ತದೆ; ಗೌಹರ್ ಗೀಲಾನಿ ತಮ್ಮ ಇತ್ತೀಚಿನ ಪುಸ್ತಕದಲ್ಲಿ (‘ಕಾಶ್ಮೀರ್ ರೇಜ್ ಆ್ಯಂಡ್ ರೀಸನ್’) ಹೇಳುತ್ತಾರೆ: ಕಾಶ್ಮೀರದಲ್ಲಿ ಮಕ್ಕಳು ತಾವು ಕಲಿಯಬಾರದಂತಹ ಪದಗಳನ್ನು ಕಲಿಯುತ್ತಾರೆ, ‘‘ಕಸ್ಟಡಿ ಹತ್ಯೆ’’; ‘‘ಹಿಡಿ ಮತ್ತು ಕೊಲ್ಲು’’; ‘‘ಚಿತ್ರಹಿಂಸೆ’’; ‘‘ಪೊಲೀಸ್ ವಿಚಾರಣೆ’’; ‘‘ಬಂಧನ’’ ಮತ್ತು ‘‘ನಾಪತ್ತೆಯಾಗುವುದು’’ ಇತ್ಯಾದಿ ಪದಗಳು ಅವುಗಳು ಕಲಿಯುವ ಪದಗಳಾಗಿವೆ. ಅಷ್ಟು ಚಿಕ್ಕವಯಸ್ಸಿನಲ್ಲಿ ಮಕ್ಕಳು ಕಲಿಯಬಾರದ ಶಬ್ದಗಳು ಇವು.

ತಮಗೆ ತಿಳಿಯದೇ ಇರುವ ಒಂದು ಅಪರಾಧಕ್ಕಾಗಿ ಬಂಧಿಸಲ್ಪಟ್ಟು ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ಯಲಾಗುವ ಭಯದಲ್ಲೇ ಸದಾ ಬದುಕುವ ಆ ಮಕ್ಕಳು ಯಾವ ರೀತಿಯ ಭವಿಷ್ಯವನ್ನು, ಯಾವ ರೀತಿಯ ಭವಿಷ್ಯದ ಪ್ರಪಂಚವನ್ನು ನಿರೀಕ್ಷಿಸಲು ಸಾಧ್ಯ? ಖಂಡಿತವಾಗಿಯೂ, ಇದು ಹಲವರು ತಿಳಿದಂತೆ ಭೂಮಿಯ ಮೇಲಿರುವ ಕಾಶ್ಮೀರವೆಂಬ ಸ್ವರ್ಗವಲ್ಲ.

ಅಭಿವೃದ್ಧಿಯ ಆಶ್ವಾಸನೆ ನೀಡಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವುದು ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದಕ್ಕೆ ಯಾವ ರೀತಿಯ ಸಮರ್ಥನೆಯನ್ನೂ ನೀಡಲಾಗದು. ಕಾಶ್ಮೀರದ ಮಕ್ಕಳ ಪರವಾಗಿ ನಾವು ಮಾತನಾಡಲೇಬೇಕಾಗಿದೆ. ಇಲ್ಲವಾದಲ್ಲಿ, ಅಲ್ಲಿಯ ಸರಕಾರ ಮಾಡುತ್ತಿರುವ ‘‘ಹೀನ ಅಪರಾಧ’’ದಲ್ಲಿ ನಾವು ಕೂಡ ಭಾಗಿಗಳಾದಂತಾಗುತ್ತದೆ. ಮಕ್ಕಳ ಪ್ರತಿಬಂಧಕ ಬಂಧನಗಳು ನಿಲ್ಲಲೇಬೇಕು, ಇಲ್ಲವಾದಲ್ಲಿ ಕಾಶ್ಮೀರದ ಮಕ್ಕಳು ಶಾಶ್ವತವಾಗಿ ನಾಪತ್ತೆಯಾದಾರು.

(ಆರ್.ವೈಗೈ, ಅಣ್ಣಾ ಮ್ಯಾಥ್ಯೂ ಮತ್ತು ದೇವಿಕಾ ಎಸ್. ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯವಾದಿಗಳಾಗಿದ್ದಾರೆ)

(ಕೃಪೆ: ದಿ ಹಿಂದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)