varthabharthi


ಸಿನಿಮಾ

ಬಾಲಿವುಡ್ ನಲ್ಲಿ ಎರಡು ಮೊಟ್ಟೆಗಳ ವಿವಾದ

ವಾರ್ತಾ ಭಾರತಿ : 20 Oct, 2019

ಕಾಪಿರೈಟ್ ವಿವಾದ ಬಾಲಿವುಡ್ ಚಿತ್ರಗಳನ್ನು ಸದಾಕಾಲ ಕಾಡುತ್ತಾ ಬಂದಿದೆ. ಇದೀಗ ಆಯುಷ್ಮಾನ್ ಖುರಾನಾ ಅಭಿನಯದ ಬಾಲಾ ಹಾಗೂ ಸನ್ನಿಸಿಂಗ್ ನಟಿಸಿರುವ ಉಜ್ಡಾ ಚಮನ್ ಚಿತ್ರಗಳ ನಡುವೆ ಕಾಪಿರೈಟ್ ಜಟಾಪಟಿ ಶುರುವಾಗಿದೆ. ಬಾಲಾ ಚಿತ್ರ ಬಿಡುಗಡೆಗೆ ಒಂದು ವಾರ ಮೊದಲು ಅಂದರೆ ನವೆಂಬರ್ 7ರಂದು ಅಭಿಷೇಕ್ ಪಾಠಕ್ ನಿರ್ದೇಶನದ ಉಜ್ಡಾ ಚಮನ್‌ನ ಬಿಡುಗಡೆಗೆ ದಿನ ನಿಗದಿಯಾಗಿತ್ತು. ಈಗ ಬಾಲಾ ಚಿತ್ರವು ತನ್ನ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಮಾಡಿದ್ದು, ನವೆಂಬರ್ 15ರ ಬದಲಿಗೆ ನವೆಂಬರ್ 7ರಂದು ರಿಲೀಸ್ ಆಗಲಿದೆ. ಇದು ಉಜ್ಡಾ ಚವುನ್‌ನ ನಿರ್ಮಾಪಕರನ್ನು ಕೆರಳಿಸಿದೆ.

ಉಜ್ಡಾ ಚಮನ್ ಹಾಗೂ ಬಾಲಾ ಚಿತ್ರಗಳ ಕಥೆಗಳಲ್ಲಿ ಸಾಮ್ಯತೆ ಇರುವುದೇ ಈ ರಾದ್ಧಾಂತಕ್ಕೆ ಕಾರಣವೆನ್ನಲಾಗಿದೆ. ತನ್ನ ಚಿತ್ರವು ಸ್ಯಾಂಡಲ್‌ವುಡ್‌ನ ಸೂಪರ್‌ಹಿಟ್ ಚಿತ್ರ ಒಂದು ಮೊಟ್ಟೆಯ ಕಥೆಯ ಅಧಿಕೃತ ರಿಮೇಕ್ ಎಂದು ಉಜ್ಡಾ ಚಮನ್‌ನ ನಿರ್ದೇಶಕ ಅಭಿಷೇಕ್ ಪಾಠಕ್ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷದ ಆರಂಭದಲ್ಲೇ ತಾವು ಒಂದು ಮೊಟ್ಟೆಯ ಕಥೆ ಚಿತ್ರದ ರಿಮೇಕ್ ಹಕ್ಕುಗಳನ್ನು ಪಡೆದಿದ್ದೆವು ಹಾಗೂ ಉಜ್ಡಾ ಚಮನ್ ಚಿತ್ರವನ್ನು ಒಂದು ವರ್ಷದೊಳಗೆ ಬಿಡುಗಡೆಗೊಳಿಸಲು ತೀರ್ಮಾನಿಸಿದ್ದೆವು. ಅಂತೆಯೇ ನವೆಂಬರ್ 8ರಂದು ಚಿತ್ರವನ್ನು ರಿಲೀಸ್ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ಇದೀಗ ಬಾಲಾ ಚಿತ್ರವನ್ನು ನವೆಂಬರ್ 15ರ ಬದಲು ನವೆಂಬರ್ 7ಕ್ಕೆ ಬಿಡುಗಡೆಗೊಳಿಸಲು ಅದರ ನಿರ್ಮಾಪಕರು ನಿರ್ಧರಿಸಿರುವುದು ಬಿಕ್ಕಟ್ಟನ್ನುಂಟು ಮಾಡಿದೆಯೆಂದು ಅಭಿಷೇಕ್ ಅಸಮಾಧಾನ ತೋರಿದ್ದಾರೆ. ಇದರಿಂದಾಗಿ ಎರಡೂ ಚಿತ್ರಗಳಿಗೆ ದುಷ್ಪರಿಣಾಮವಾಗುವುದು ಖಚಿತವೆಂದು ಪಾಠ್ ಹೇಳಿದ್ದಾರೆ.

ಬೊಕ್ಕತಲೆಯ ಪಾತ್ರಗಳಿಂದ ಕೇಂದ್ರೀಕೃತವಾಗಿದ್ದು, ಎರಡೂ ಚಿತ್ರಗಳು ಇದೊಂದು ಕಾಪಿರೈಟ್ ಉಲ್ಲಂಘನೆಯ ಪ್ರಕರಣವಾಗಿದೆಯೆಂದು ಅಭಿಷೇಕ್ ಆರೋಪಿಸುತ್ತಾರೆ. ಒಂದು ಮೊಟ್ಟೆಯ ಕಥೆ ಚಿತ್ರದ ರಿಮೇಕ್ ಹಕ್ಕುಗಳು ತನ್ನ ಬಳಿಯಿದೆ. ಆದರೆ ಬಾಲಾ ಚಿತ್ರವು ಉಜ್ಡಾ ಚಮನ್ ಚಿತ್ರದ ಕಥೆಯೊಂದಿಗೆ ತುಂಬಾ ಹತ್ತಿರದ ಸಾಮ್ಯತೆಗಳನ್ನು ಹೊಂದಿರುವುದು ಎದ್ದು ಕಾಣುತ್ತಿದೆ. ಈ ಬಗ್ಗೆ ಬಾಲಾ ನಿರ್ಮಾಪಕರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವ ಬಗ್ಗೆ ವಕೀಲರೊಂದಿಗೆ ಚರ್ಚಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಆದರೆ ಬಾಲಾ ಚಿತ್ರದ ನಿರ್ಮಾಪಕ ದಿನೇಶ್ ವಿಜಾನ್, ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಬಾಲಾ ಚಿತ್ರವು ಒಂದು ಅಪ್ಪಟ ಸ್ವಮೇಕ್ ಚಿತ್ರವಾಗಿದ್ದು, ಸ್ವಂತ ಕಥೆಯನ್ನು ಹೊಂದಿದೆ. ಚಿತ್ರದ ಕುರಿತಾಗಿ ಅಗತ್ಯಬಿದ್ದಲ್ಲೇ ಯಾವುದೇ ಕಾನೂನು ಸಂಘರ್ಷ ಎದುರಿಸಲು ತಾನು ಸಿದ್ಧನಿದ್ದೇನೆ ಎಂದು ಅವರು ಹೇಳುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)