varthabharthi


ಕರಾವಳಿ

ಗಾಂಧಿ ಇದ್ದಿದ್ದರೆ ಎನ್‌ಆರ್‌ಸಿ ವಿರುದ್ಧ ಸತ್ಯಾಗ್ರಹ ನಡೆಯುತ್ತಿತ್ತು: ಪ್ರೊ. ಜಿ.ಎನ್. ದೇವಿ

ವಾರ್ತಾ ಭಾರತಿ : 21 Oct, 2019

ಮಂಗಳೂರು, ಅ.21: ಮಹಾತ್ಮ ಗಾಂಧೀಜಿ ಇಂದು ಜೀವಂತವಾಗಿರುತ್ತಿದ್ದರೆ ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ವಿರುದ್ಧ ಅವರು ಸತ್ಯಾಗ್ರಹವನ್ನು ನಡೆಸುತ್ತಿದ್ದರು. ಇದಕ್ಕೆ ಕಸ್ತೂರ್ಬಾ ಅವರೂ ಜತೆಯಾಗಿರುತ್ತಿದ್ದರು ಎಂದು ಗಾಂಧೀವಾದಿ, ಚಿಂತಕ ಪ್ರೊ.ಗಣೇಶ್ ಎನ್. ದೇವಿ ಅಭಿಪ್ರಾಯಿಸಿದ್ದಾರೆ.

ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯ ನೆಹರೂ ಅಧ್ಯಯನ ಕೇಂದ್ರದ ವತಿಯಿಂದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ‘ಗಾಂಧಿಯವರ ಸಂಭಾಷಣೆಗಳು’ ವಿಷಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗಾಂಧಿ, ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯದ ಕುರಿತಂತೆ ವಿಷಯ ಮಂಡಿಸಿದರು.

ಗಾಂಧೀಜಿಯವರ ಪ್ರಥಮ ಸತ್ಯಾಗ್ರಹ ಯಶಸ್ವಿಯಾಗಲು ಕಸ್ತೂರ್ಬಾ ಜತೆಯಾಗಿದ್ದು ಕಾರಣವಾಗಿತ್ತು. ಸಮಾಜದಲ್ಲಿ ಯಾವುದೇ ಲಿಂಗ, ಧರ್ಮಗಳ ಬೇಧವಿಲ್ಲದ, ಸತ್ಯ ಹಾಗೂ ಅಹಿಂಸೆಯ ಹೋರಾಟಗಳಿಂದ ಮಾತ್ರವೇ ಪ್ರಜಾಪ್ರಭುತ್ವ ಸುಭದ್ರವಾಗಿರಲು ಸಾಧ್ಯ. ಕೇಂದ್ರವು ಜಾರಿಗೊಳಿಸಲುದ್ದೇಶಿಸಿರುವ ಎನ್‌ಆರ್‌ಸಿ ಕಾಯ್ದೆಯಂತೆ ದೇಶದ ಹೊರಗಿನ ಮುಸ್ಲಿಂ ಹಾಗೂ ಯೆಹೂದಿ ಸಮುದಾಯಕ್ಕೆ ಇಲ್ಲಿ ಆಶ್ರಯ ನಿರಾಕರಿಸಲಾಗಿದೆ. ಇದು ಗಾಂಧೀಜಿಯವರು ಬಯಸಿದ ಪ್ರಜಾಪ್ರಭುತ್ವಕ್ಕೆ ವಿರುದ್ಧಾಗಿದೆ ಎಂದು ಅವರು ವಿಶ್ಲೇಷಿಸಿದರು.

ಪ್ರಭುತ್ವವನ್ನು ಪ್ರಶ್ನಿಸುವ, ಸತ್ಯದ ಬಗ್ಗೆ ನಿರ್ಭೀತಿಯಿಂದ ಧ್ವನಿ ಎತ್ತುವುದನ್ನು ಗಾಂಧೀಜಿ ಬಯಸಿದ್ದರು. ಯುವ ಜನತೆ ಇದೀಗ ಗಾಂಧಿಯ ಚಿಂತನೆಗಳನ್ನು ಮರು ಚಿಂತನೆ ಮಾಡುವ, ಅವರ ಪ್ರಜಾಪ್ರಭುತ್ವದ ಆಶಯಗಳನ್ನು ಮುನ್ನಲೆಗೆ ತರುವ ಕೆಲಸವನ್ನು ಮಾಡಬೇಕು ಎಂದು ಅವರು ಕರೆ ನೀಡಿದರು.

ಸ್ವಾತಂತ್ರ ಹೋರಾಟದ ಸಂದರ್ಭ ಸರ್ವಾಧಿಕಾರಿ ಮುಸಲೋನಿ ಜತೆಗಿನ ಗಾಂಧೀಜಿಯವರ ಸಂಭಾಷಣೆಯ ತುಣುಕನ್ನು ಸಭೆಯಲ್ಲಿ ಪ್ರಸ್ತಾಪಿಸಿ ಮಾತನಾಡಿದ ಪ್ರೊ. ಜಿ.ಎನ್. ದೇವಿ, ಅಂದು ಗಾಂಧೀಜಿಯವರು ಸರ್ವಾಧಿಕಾರಿ ಮುಸಲೊನಿಯ ಎದುರು ಶೋಷಣೆಮುಕ್ತ, ತಾರತಮ್ಯ ರಹಿತ, ಕೋಮುವಾದ ರಹಿತ ಪ್ರಜಾಪ್ರಭುತ್ವದ ಭಾರತದ ಬಗ್ಗೆ ತಮ್ಮ ದೃಷ್ಟಿಕೋನವನ್ನು ತಿಳಿಸುವ ಧೈರ್ಯವನ್ನು ಮಾಡಿದ್ದರು. ಅಂದು ಗಾಂಧಿ ಎದುರಿಸಿದ ಸವಾಲುಗಳೇ ಇಂದು ನಮ್ಮೆದುರಿಗಿದೆ. ಅಂದು ಗಾಂಧೀಜಿ ತೋರಿದ ಅಂತಹ ಧೈರ್ಯವನ್ನು ಇಂದು ಯುವಜನತೆ ತಮ್ಮಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ. ಭಯರಹಿತ, ಅಹಿಂಸೆ ಮತ್ತು ತ್ಯಾಗದ ಹೊರತಾಗಿ ಪ್ರಜಾಪ್ರಭುತ್ವದ ಬಗೆಗಿನ ಗಾಂಧೀಜಿಯ ಚಿಂತನೆಗಳು ಸಾಕಾರವಾಗಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಧೈರ್ಯವೂ ಗಾಂಧೀಜಿಗೆ ಕಸ್ತೂರ್ಬಾರಿಂದ ದೊರಕಿತ್ತು. ತಮ್ಮ ಜತೆ ಕಸ್ತೂರ್ಬಾ ಧೈರ್ಯದಿಂದ ಸತ್ಯಾಗ್ರಹದಲ್ಲಿ ಜತೆಯಾಗಿದ್ದರಿಂದಲೇ ಪ್ರಥಮ ಸತ್ಯಾಗ್ರಹ ಯಶಸ್ವಿಯಾಗಲು ಸಾಧ್ಯವಾಯಿತು. ಸತ್ಯಾಗ್ರಹವೆಂದರೆ ಕೇವಲ ಹಕ್ಕುಗಳಿಗಾಗಿನ ಬೇಡಿಕೆಯಲ್ಲ. ಬದಲಾಗಿ ಅದು ಮಹಿಳೆ ಮತ್ತು ಪುರುಷರನ್ನು ಒಗ್ಗಟ್ಟಾಗಿಸುವ ಸಾಧನವೂ ಆಗಿತ್ತು. ಹಾಗಾಗಿಯೇ ಕಸ್ತೂರ್ಬಾ ನಿಧನದ ಬಳಿಕ ಗಾಂಧೀಜಿ ಯಾವುದೇ ಸತ್ಯಾಗ್ರಹವನ್ನು ನಡೆಸಿಲ್ಲ ಎಂಬುದು ಕೂಡಾ ವಾಸ್ತವ ಎಂದು ಅವರು ವಿವರಿಸಿದರು.

ಗಾಂಧೀಜಿಯವರು ಅಹಿಂಸೆ ಮತ್ತು ಸತ್ಯದ ಮೂಲಕ ನಡೆಸಿದ ಹೋರಾಟ ಅದು ರಾಜಕೀಯ ತತ್ವವಾಗಿರಲಿಲ್ಲ. ಅಹಿಂಸೆಯನ್ನೇ ಅಸ್ತ್ರವಾಗಿಸಿಕೊಂಡು, ಆಳುವವರನ್ನು ಪ್ರಶ್ನಿಸುವ, ಸತ್ಯವನ್ನು ಹೇಳುವ ಮೂಲಕ ಅಂದಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡಿದ್ದರು. ಈ ಮೂಲಕ ಅವರು ದ್ವೇಷ, ತಾರತಮ್ಯ, ಕೋಮುಸಂಘರ್ಷ ರಹಿತ ಪ್ರಜಾಪ್ರಭುತ್ವವನ್ನು ಅವರು ಬಯಸಿದ್ದರು. ಪ್ರಸಕ್ತ ಸನ್ನಿವೇಶದಲ್ಲಿ ಗಾಂಧೀಜಿಯ ಹೋರಾಟದ ದಾರಿಗಳು ನಮಗೆ ದಾರಿದೀಪವಾಗಬೇಕಿದೆ ಎಂದವರು ಹೇಳಿದರು.

ನೆಹರೂ ಅಧ್ಯಯನ ಕಂದ್ರದ ನಿರ್ದೇಶಕ ಪ್ರೊ. ರಾಜಾರಾಂ ತೋಳ್ಪಾಡಿ ಮಾತನಾಡಿ, ಪ್ರಜಾಪ್ರಭುತ್ವವಿಂದ ಆತಂಕದಲ್ಲಿದ್ದು, ಇಂತಹ ಸಮಯದಲ್ಲಿ ಗಾಂಧೀಜಿಯವರು ತೋರಿದ ದಾರಿಗಳು ನಮಗೆ ಅನುಕರಣೀಯ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಹೇಳಿ ಸ್ವಾಗತಿಸಿದರು.

ಖ್ಯಾತ ರಾಜಕೀಯ ವಿಶ್ಲೇಷಕ ಪ್ರೊ. ವಲೇರಿಯನ್ ರಾಡ್ರಿಗಸ್, ಮಂಗಳೂರು ವಿವಿ ಕಾಲೇಜಿನ ಆಂಗ್ಲ ವಿಭಾಗದ ಪಟ್ಟಾಭಿರಾಮ ಸೋಮಯಾಜಿ ಎಚ್., ಪ್ರಾಂಶುಪಾಲ ಡಾ. ಉದಯ ಕುಮಾರ್ ಉಪಸ್ಥಿತರಿದ್ದು.

ಕಾಶ್ಮೀರದಲ್ಲಿಂದು ಜನರು ಸಂವಹನ ಸಂಪರ್ಕವೇ ಇಲ್ಲದೇ ಬದುಕುವಂತಾಗಿದೆ. ಈ ಬಗ್ಗೆ ಯುವಜನತೆ ಇದು ತಪ್ಪು ಎಂದು ಹೇಳುವ ಧೈರ್ಯವನ್ನು ತೋರಿಸಬೇಕಾಗಿದೆ. ನಮ್ಮನ್ನಾಳುವ ಪ್ರಭುತ್ವವು ತಪ್ಪು ನಡೆ ಅನುಸರಿಸಿದಾಗ ಎಚ್ಚರಿಸುವ, ಸತ್ಯವನ್ನು ಹೇಳುವ, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂಬುದನ್ನು ಗಾಂಧೀಜಿ ಸದಾ ಬಯಸಿದ್ದರು. ಆ ಕಾರ್ಯವನ್ನು ನಾಗರಿಕರಾಗಿ ನಾವು ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕು.
ಪ್ರೊ. ಜಿ.ಎನ್. ದೇವಿ, ಗಾಂಧೀವಾದಿ, ಚಿಂತಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)