varthabharthi


ಕ್ರೀಡೆ

ನಾಯಕನಾಗಿ ಹೆಚ್ಚು ಬಾರಿ ಫಾಲೋ-ಆನ್ ಹೇರಿಕೆ

ಮುಹಮ್ಮದ್ ಅಝರುದ್ದೀನ್ ದಾಖಲೆ ಮುರಿದ ಕೊಹ್ಲಿ

ವಾರ್ತಾ ಭಾರತಿ : 21 Oct, 2019

ರಾಂಚಿ, ಅ.21: ಭಾರತೀಯ ಬೌಲರ್‌ಗಳು ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಸರದಿಯನ್ನು ಬೇಗನೆ ಬೇಧಿಸಿ ಮೂರನೇ ಟೆಸ್ಟ್‌ನ ಮೂರನೇ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಲು ದಾರಿ ಮಾಡಿಕೊಟ್ಟರು. ಅತ್ಯಂತ ಹೆಚ್ಚು ಬಾರಿ ಎದುರಾಳಿ ತಂಡಕ್ಕೆ ಫಾಲೋ-ಆನ್ ವಿಧಿಸಿದ ಕೊಹ್ಲಿ ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಹೆಸರಲ್ಲಿದ್ದ ದಾಖಲೆಯೊಂದನ್ನು ಮುರಿದರು.

ಕೊಹ್ಲಿ ನಾಯಕನಾದ ಬಳಿಕ ಎದುರಾಳಿ ತಂಡವೊಂದಕ್ಕೆ 8ನೇ ಬಾರಿ ಫಾಲೋ-ಆನ್ ಹೇರಿದ್ದಾರೆ. ಈಗ ನಡೆಯುತ್ತಿರುವ ದ.ಆಫ್ರಿಕಾ ವಿರುದ್ಧ ಸರಣಿಯಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಅಝರುದ್ದೀನ್ 7 ಬಾರಿ ಫಾಲೋ-ಆನ್ ವಿಧಿಸಿದ ಸಾಧನೆ ಮಾಡಿದ್ದರು. ಎಂಎಸ್ ಧೋನಿ ಐದು ಹಾಗೂ ಸೌರವ್ ಗಂಗುಲಿ ನಾಲ್ಕು ಬಾರಿ ಫಾಲೋ-ಆನ್ ವಿಧಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಸರಣಿಯ ಎರಡನೇ ಹಾಗೂ ಮೂರನೇ ಟೆಸ್ಟ್ ಪಂದ್ಯದಲ್ಲಿ ಫಾಲೋ-ಆನ್ ಬಲೆಗೆ ಬಿದ್ದಿದೆ. 18 ವರ್ಷಗಳಲ್ಲಿ ಇದೇ ಮೊದಲ ಬಾರಿ ತಂಡವೊಂದು ಸತತ 2 ಬಾರಿ ಫಾಲೋ-ಆನ್‌ಗೆ ತುತ್ತಾಗಿದೆ. ಭಾರತ 26 ವರ್ಷಗಳ ಬಳಿಕ ಮೊದಲ ಬಾರಿ ಸತತ 2 ಟೆಸ್ಟ್ ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಫಾಲೋ-ಆನ್ ಹೇರಿದೆ. ಶ್ರೀಲಂಕಾ ವಿರುದ್ಧ ನಡೆದಿದ್ದ ಸ್ವದೇಶಿ ಸರಣಿಯಲ್ಲಿ ಕೊನೆಯ ಬಾರಿ ಭಾರತ ಈ ಸಾಧನೆ ಮಾಡಿತ್ತು.

ಕೊಹ್ಲಿ ಈ ಹಿಂದೆ 7 ಬಾರಿ ವಿಧಿಸಿರುವ ಫಾಲೋ-ಆನ್‌ಗಳ ಪೈಕಿ 5 ಬಾರಿ ಜಯ ಸಾಧಿಸಿದ್ದು, ಎರಡು ಬಾರಿ ಡ್ರಾಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 162 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಉಮೇಶ್ ಯಾದವ್ 3 ವಿಕೆಟ್‌ಗಳನ್ನು ಪಡೆದಿದ್ದರೆ, ಶಮಿ, ಜಡೇಜ ಹಾಗೂ ನದೀಂ ತಲಾ 2 ವಿಕೆಟ್‌ಗಳನ್ನು ಉರುಳಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)