varthabharthi


ಕರ್ನಾಟಕ

ಗೃಹ ಸಚಿವ ಬಸವರಾಜ ಬೊಮ್ಮಾಯಿ

ನ.14ರಿಂದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ: ಏಳು ದಿನ ಏಳು ಜಿಲ್ಲೆಗಳಲ್ಲಿ ಕಾರ್ಯಕ್ರಮ

ವಾರ್ತಾ ಭಾರತಿ : 21 Oct, 2019

ಬೆಂಗಳೂರು, ಅ.21: ರಾಷ್ಟ್ರೀಯ ಸಹಕಾರಿ ಯೂನಿಯನ್‌ನ ಮಾರ್ಗದರ್ಶನದಲ್ಲಿ 66ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ನ.14 ರಿಂದ 20 ರವರೆಗೆ ಏಳು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಚಾಮರಾಜಪೇಟೆಯ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಪ್ತಾಹದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, 'ನವ ಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ' ಎಂಬುದು ಈ ಬಾರಿಯ ಸಪ್ತಾಹದ ಮುಖ್ಯ ಧ್ಯೇಯವಾಗಿದ್ದು, ಸಪ್ತಾಹದ ಏಳು ದಿನಗಳಲ್ಲಿ ಏಳು ವಿವಿಧ ವಿಷಯಗಳನ್ನಾಧರಿಸಿ ಕಾರ್ಯಕ್ರಮಗಳನ್ನು ಪ್ರತಿದಿನ ಬೇರೆ ಬೇರೆ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನೆರೆ ಬಂದಿರುವ ಕಾರಣ ಆ ಜಿಲ್ಲೆಗಳನ್ನು ಹೊರತುಪಡಿಸಿ ಮತ್ತು ಇತರೆ ಚುನಾವಣೆಗಳು ನಡೆಯಲಿರುವ ಜಿಲ್ಲೆಗಳನ್ನು ಹೊರತುಪಡಿಸಿ ಶೀಘ್ರವಾಗಿ ಇನ್ನೆರಡು ದಿನಗಳಲ್ಲಿ ಕಾರ್ಯಕ್ರಮಗಳ ಸ್ಥಳಗಳನ್ನು ತೀರ್ಮಾನಿಸಲಾಗುವುದು. ಉದ್ಘಾಟನಾ ಅಥವಾ ಸಮರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದ್ದು, ಅವರು ಬರುವ ದಿನದಂದು ಸಹಕಾರ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ವಿವರಿಸಿದರು.

ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ರಾಜಣ್ಣ ಮಾತನಾಡಿ, ನ.14 ರಂದು ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ, ನ.15ರಂದು ಸಹಕಾರ ಸಂಸ್ಥೆಗಳಿಗಾಗಿ ಶಾಸನಾಧಿಕಾರ ರೂಪಿಸುವುದು, ನ.16ರಂದು ಸಹಕಾರ ಸಂಸ್ಥೆಗಳ ಯಶೋಗಾಥೆಗಳ ಮೂಲಕ ಸಹಕಾರ ಶಿಕ್ಷಣ, ತರಬೇತಿಯನ್ನು ಪುನರ್ ರೂಪಿಸುವದು, ನ.17ರಂದು ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು, ನ.18ರಂದು ಸಹಕಾರ ಸಂಸ್ಥೆಗಳ ಮೂಲಕ ಸರಕಾರದ ಹೊಸ ಯೋಜನೆಗಳು, ನ.19ರಂದು ಯುವಜನ, ಮಹಿಳಾ ಮತ್ತು ಅಬಲವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ಮತ್ತು ನ.20ರಂದು ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ತಂತ್ರಜ್ಞಾನ ಅಳವಡಿಕೆ ಮತ್ತು ಗಣಕೀಕರಣ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಸಹಕಾರ ರತ್ನ ಪ್ರಶಸ್ತಿಯನ್ನು ಜಿಲ್ಲಾ ಮಟ್ಟದ ಸಮಿತಿಯಿಂದ ಶಿಫಾರಸ್ಸು ಮಾಡಿದ ಸಹಕಾರಿಗಳ ಪೈಕಿ ಪ್ರತಿ ಕಂದಾಯ ವಿಭಾಗಕ್ಕೆ ಒಬ್ಬರಂತೆ ನಾಲ್ಕು ವಿಭಾಗಗಳಿಗೆ ಹಾಗೂ ಬೆಂಗಳೂರು ನಗರಕ್ಕೆ ಒಬ್ಬರಿಗೆ ಮತ್ತು ಒಬ್ಬ ನಿವೃತ್ತ ಅಧಿಕಾರಿಗೆ ಪ್ರಶಸ್ತಿ ನೀಡಲು ಗೃಹ ಸಚಿವರ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ರಾಜ್ಯ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿಗಳಾದ ಧರ್ಮೇಗೌಡ, ಬೋಜೆಗೌಡ, ಮಾಜಿ ವಿಧಾನ ಪರಿಷತ್ ಸಭಾಪತಿ ರಮೇಶ್ ಬಾಬು, ಮಂಡಳದ ಉಪಾಧ್ಯಕ್ಷ ಎನ್. ಚಂದ್ರಪ್ಪ, ರಾಜೇಂದ್ರ ಕುಮಾರ್, ವೆಂಕಟಬಾಬು, ಜಿ.ಟಿ. ಪಾಟೀಲ್, ಚಂದ್ರಪ್ಪ, ಲಲಿತಾ ಜಿ.ಟಿ ಗೌಡರ್, ಷಡಕ್ಷರಿ, ಅಜೇಯ್ ಕುಮಾರ್, ಕೃಷ್ಣಾರೆಡ್ಡಿ, ವಿವೇಕ್ ಪಾಟೀಲ್ ಸೇರಿದಂತೆ ಮತ್ತಿತರರಿದ್ದರು.

ಕ್ಷೀಣಿಸುತ್ತಿರುವ ಸಹಕಾರಿ ರಂಗ...

ಆರ್ಥಿಕ ಹಿಂಜರಿತದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಹಕಾರಿ ರಂಗವೂ ಸಹ ಕ್ಷೀಣಿಸುತ್ತಿದೆ. ಸಹಕಾರಿ ರಂಗಕ್ಕೆ ರಕ್ಷಣಾ ಕವಚ ಇಲ್ಲದಂತೆ ಆಗಿದೆ. ಈ ಕುರಿತು ಸಪ್ತಾಹದಲ್ಲಿ ಚರ್ಚೆ ನಡೆಯಬೇಕು. ಕೃಷಿಗೆ ಮೂಲ ಬಂಡವಾಳ ಹೂಡಿಕೆಯಾಗುತ್ತಿಲ್ಲ. ರೈತರಿಗೆ ಅವಕಾಶ ಕಡಿಮೆ ಸಿಗುತ್ತಿದೆ. ಎಲ್ಲಾ ರಂಗದಲ್ಲೂ ಸಹಕಾರಿ ಇದೆ. ಆದರೆ, ಅದರ ಆರ್ಥಿಕ ನೆಲಗಟ್ಟು ಕುಸಿಯುತ್ತಿದೆ. ಈ ಕುರಿತು ಹೆಚ್ಚಿನ ಚರ್ಚೆ ಆಗಬೇಕು. ಇನ್ನಾದರೂ ಈ ಕುರಿತು ಚಿಂತನೆಯಲ್ಲಿ ತೊಡಗೋಣ.

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)