varthabharthiರಾಷ್ಟ್ರೀಯ

ತಡವಾಗಿ ಸಂಚರಿಸಿದ ರೈಲು: 950 ಪ್ರಯಾಣಿಕರಿಗೆ ಸಿಗಲಿರುವ ಪರಿಹಾರ ಎಷ್ಟು ಗೊತ್ತಾ ?

ವಾರ್ತಾ ಭಾರತಿ : 21 Oct, 2019

ಹೊಸದಿಲ್ಲಿ, ಅ.21: ದಿಲ್ಲಿ-ಲಕ್ನೊ ಮಧ್ಯೆ ಪ್ರಯಾಣಿಸುವ ತೇಜಸ್ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 19ರಂದು 3 ಗಂಟೆ ವಿಳಂಬವಾಗಿ ಸಂಚರಿಸಿದ್ದರಿಂದ ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ (ಐಆರ್‌ಸಿಟಿಸಿ) 950 ಪ್ರಯಾಣಿಕರಿಗೆ ಪರಿಹಾರ ರೂಪದಲ್ಲಿ ಸುಮಾರು 1.62 ಲಕ್ಷ ರೂ. ಪರಿಹಾರ ನೀಡಲಿದೆ.

ವಿಮಾ ಸಂಸ್ಥೆಗಳ ಮೂಲಕ ಪರಿಹಾರ ನೀಡಲಾಗುವುದು. ಭಾರತೀಯ ರೈಲ್ವೇಯ ಇತಿಹಾಸದಲ್ಲೇ ಇದು ಮೊತ್ತಮೊದಲ ಪ್ರಕರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಲಕ್ನೊದಿಂದ ಅಕ್ಟೋಬರ್ 19ರಂದು ಬೆಳಿಗ್ಗೆ 6:10ಕ್ಕೆ ಹೊರಡಬೇಕಿದ್ದ ತೇಜಸ್ ರೈಲು 9:55ರ ವೇಳೆಗೆ ಹೊರಟಿದ್ದು 3ಗಂಟೆ 15 ನಿಮಿಷ ತಡವಾಗಿ ಸಂಜೆ 3:40ಕ್ಕೆ ದಿಲ್ಲಿ ತಲುಪಿದೆ. ಅಲ್ಲಿಂದ ಲಕ್ನೊಗೆ ಸಂಜೆ 3:35ಕ್ಕೆ ಹೊರಡಬೇಕಿದ್ದ ರೈಲು ಸಂಜೆ 5:30ಕ್ಕೆ ಪ್ರಯಾಣ ಆರಂಭಿಸಿ ರಾತ್ರಿ 11:30ಕ್ಕೆ ಲಕ್ನೊ ತಲುಪಿದೆ. ಲಕ್ನೊದಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಸಂದರ್ಭ ರೈಲಿನಲ್ಲಿದ್ದ 450 ಪ್ರಯಾಣಿಕರು ತಲಾ 250 ರೂ. ಪರಿಹಾರ ಪಡೆಯಲಿದ್ದರೆ, ದಿಲ್ಲಿಯಿಂದ ಲಕ್ನೊಗೆ ಪ್ರಯಾಣಿಸುತ್ತಿದ್ದ ಸಂದರ್ಭ ರೈಲಿನಲ್ಲಿದ್ದ ಸುಮಾರು 500 ಪ್ರಯಾಣಿಕರು ತಲಾ 100 ರೂ. ಪರಿಹಾರ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೇಜಸ್ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್‌ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ ವಿಮಾ ಸಂಸ್ಥೆಯನ್ನು ಸಂಪರ್ಕಿಸಿ ಪರಿಹಾರ ಪಡೆಯಬಹುದು ಎಂದವರು ತಿಳಿಸಿದ್ದಾರೆ. ಐಆರ್‌ಸಿಟಿಸಿ ನೀತಿಯ ಪ್ರಕಾರ, ತೇಜಸ್ ರೈಲು ಸಂಚಾರ 1 ಗಂಟೆ ವಿಳಂಬವಾದರೆ 100 ರೂ, 2 ಗಂಟೆಗೂ ಹೆಚ್ಚು ಹೊತ್ತು ವಿಳಂಬವಾದರೆ 250 ರೂ. ಪರಿಹಾರವನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಅಲ್ಲದೆ ಪ್ರಯಾಣದ ಸಂದರ್ಭ ಪ್ರಯಾಣಿಕರ ಮನೆಬಳಕೆಯ ವಸ್ತುಗಳು ಕಳವಾದರೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)