varthabharthi

ಕರಾವಳಿ

ರಕ್ಷಣೆ ನೀಡಲು ಎಸ್ಪಿಗೆ ಕಾಂಗ್ರೆಸ್ ಆಗ್ರಹ

ಹರೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ: ಆರೋಪ

ವಾರ್ತಾ ಭಾರತಿ : 21 Oct, 2019

ಮಂಗಳೂರು, ಅ.21: ಬಂಟ್ವಾಳ ನಗರ ಠಾಣೆ ವ್ಯಾಪ್ತಿಯ ನಾವೂರ ಎಂಬಲ್ಲಿ 2015ರಲ್ಲಿ ನಡೆದ ಹರೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಶಮಿವುಲ್ಲಾ ಎಂಬವರಿಗೆ ಜೀವ ಬೆದರಿಕೆ ಒಡ್ಡಲಾಗಿದ್ದು, ಅವರಿಗೆ ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಾಂಗ್ರೆಸ್ ನಿಯೋಗ ಸೋಮವಾರ ಮನವಿ ಸಲ್ಲಿಸಿದೆ.

2015ರ ನವೆಂಬರ್‌ನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ವೇಳೆ ಹರೀಶ್ ಪೂಜಾರಿ ಹಾಗೂ ಶಮಿವುಲ್ಲಾ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹರೀಶ್ ಪೂಜಾರಿ ಅವರನ್ನು ಮಾರಕಾಸ್ತ್ರದಿಂದ ಕೊಲೆ ಮಾಡಲಾಗಿತ್ತು. ಘಟನೆ ನಡೆದ ಸಂದರ್ಭ ಜತೆಗೇ ಇದ್ದ ಶಮಿವುಲ್ಲಾ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದಾನೆ.

ಪ್ರಕರಣ ಈಗ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ ಹರೀಶ್ ಪೂಜಾರಿ ಕೊಲೆ ಆರೋಪಿಗಳು ಹಾಗೂ ಅವರ ಬೆಂಬಲಿಗರು ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳದಂತೆ ಶಮಿವುಲ್ಲಾ ಅವರಿಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಪ್ರಕರಣದ ವಿಚಾರಣೆಗೂ ಇದರಿಂದ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ರಕ್ಷಣೆ ಒದಗಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಒತ್ತಾಯಿಸಿದರು.

ಶಮಿವುಲ್ಲಾ ಅವರಿಗೆ ಯಾವುದೇ ರೀತಿ ತೊಂದರೆಯಾದಲ್ಲಿ ಪೊಲೀಸ್ ಇಲಾಖೆ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಲಾಯಿತು.

ನಿಯೋಗದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಪಂ ಸದಸ್ಯರಾದ ಎಂ.ಎಸ್. ಮುಹಮ್ಮದ್, ಪದ್ಮಶೇಖರ್ ಜೈನ್, ಮಂಜುಳ ಮಾವೆ, ಅನಿತಾ ಹೇಮನಾಥ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪುರಸಭೆ ಸದಸ್ಯರಾದ ಗಂಗಾಧರ ಪೂಜಾರಿ, ಮಾಯಿಲಪ್ಪ ಸಾಲ್ಯಾನ್, ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಮುಖಂಡರಾದ ಜಗದೀಶ್ ಕೊಯಿಲ, ಲೋಕೇಶ್ ಸುವರ್ಣ, ನವಾಝ್ ಬಡಕಬೈಲು, ಚಂದ್ರಶೇಖರ್ ಪೂಜಾರಿ ಬಾಳ್ತಿಲ, ಎ.ಕೆ. ಶಾರೂಖ್ ಅಹ್ಮದ್, ವಿಕ್ಟರ್ ಪಾಯಸ್, ಸದಾನಂದ ಶೆಟ್ಟಿ ಕಾವಳಕಟ್ಟೆ ಇದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)