varthabharthiರಾಷ್ಟ್ರೀಯ

ಐಎಂಎಫ್ ಮುನ್ನೋಟ

5 ವರ್ಷಗಳಲ್ಲಿ ನಿಧಾನಗತಿಯ ಜಾಗತಿಕ ಆರ್ಥಿಕ ಬೆಳವಣಿಗೆ

ವಾರ್ತಾ ಭಾರತಿ : 21 Oct, 2019

ನ್ಯೂಯಾರ್ಕ್, ಅ. 21: ವ್ಯಾಪಾರ ಸಮರದಿಂದಾಗಿ ಕಳೆಗುಂದಿದ ಅಂತರ್‌ರಾಷ್ಟ್ರಿಯ ವ್ಯಾಪಾರ ಮತ್ತು ಹೆಚ್ಚಿದ ಅನಿಶ್ಚಿತತೆಯಿಂದಾಗಿ ಹಿನ್ನಡೆ ಅನುಭವಿಸಿರುವ ಜಾಗತಿಕ ಆರ್ಥಿಕತೆಯು ಮುಂದಿನ ಐದು ವರ್ಷಗಳ ಅವಧಿಯಲ್ಲಿ ನಿಧಾನಗತಿಯ ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ.

ಚೀನಾದ ಬೆಳವಣಿಗೆ ದರವು ನಿಧಾನಗತಿಯಲ್ಲೇ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ ಹಾಗೂ ಸದ್ಯದಲ್ಲಿ ಅದು ಜಾಗತಿಕ ಜಿಡಿಪಿ ಬೆಳವಣಿಗೆಗೆ ಸಣ್ಣ ದೇಣಿಗೆಯನ್ನಷ್ಟೇ ನೀಡಲಿದೆ ಎನ್ನಲಾಗಿದೆ. ಜಾಗತಿಕ ಜಿಡಿಪಿ (ಒಟ್ಟು ದೇಶಿ ಉತ್ಪನ್ನ) ಬೆಳವಣಿಗೆಯಲ್ಲಿ ಚೀನಾದ ಪಾಲು 2018-19ರಲ್ಲಿದ್ದ 32.7 ಶೇಕಡದಿಂದ 2024ರ ವೇಳೆಗೆ 28.3 ಶೇಕಡಕ್ಕೆ ಇಳಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ 4.4 ಶೇಕಡ ಇಳಿಕೆಯು ತೀವ್ರ ಜಿಡಿಪಿ ಕುಸಿತವಾಗಿದೆ.

ಜಾಗತಿಕ ಆರ್ಥಿಕ ಬೆಳವಣಿಗೆಯು ಈ ವರ್ಷ 3 ಶೇಕಡಕ್ಕೆ ಇಳಿಯುವ ನಿರೀಕ್ಷೆಯಿದೆ. ಈ ದುರ್ಬಲ ಬೆಳವಣಿಗೆಯು 90 ಶೇಕಡ ಜಾಗತಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕಳೆದ ವಾರ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬಿಡುಗಡೆಗೊಳಿಸಿದ ಅಂದಾಜು ಪಟ್ಟಿಯಲ್ಲಿ ಹೇಳಲಾಗಿದೆ.

ಭಾರತ ಎರಡನೇ ಸ್ಥಾನದಲ್ಲಿ?

ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಈಗಲೂ ಗಮನಾರ್ಹ ದೇಣಿಗೆದಾರನಾಗಿರುವ ಅಮೆರಿಕ ಭಾರತದ ನಂತರ ಮೂರನೇ ಸ್ಥಾನಕ್ಕೆ ಇಳಿಯಲಿದೆ ಎಂದು ಐಎಂಎಫ್ ಅಂದಾಜು ಪಟ್ಟಿ ಹೇಳುತ್ತದೆ.

ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಅಮೆರಿಕದ ಪಾಲು 13.8 ಶೇಕಡದಿಂದ 2024ರ ವೇಳೆಗೆ 9.2ಕ್ಕೆ ಕುಸಿಯುತ್ತದೆ ಎಂದು ಹೇಳಲಾಗಿದೆ. ಅದೇ ವೇಳೆ, ಈ 5 ವರ್ಷಗಳ ಅವಧಿಯಲ್ಲಿ ಭಾರತದ ಪಾಲು 15.5 ಶೇಕಡಕ್ಕೆ ಏರಿ ಅಮೆರಿಕವನ್ನು ಹಿಂದೆ ಹಾಕಲಿದೆ ಎಂದು ಅದು ಅಭಿಪ್ರಾಯಪಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)