ಅ. 24ರಂದು ಶ್ವೇತಭವನದಲ್ಲಿ ಟ್ರಂಪ್ರಿಂದ ದೀಪಾವಳಿ ಆಚರಣೆ
ವಾಶಿಂಗ್ಟನ್, ಅ. 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ದಿನಗಳ ಮೊದಲೇ, ಅಂದರೆ ಗುರುವಾರ ಶ್ವೇತಭವನದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ.
ಇದು ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್ರ ಮೂರನೇ ದೀಪಾವಳಿ ಆಚರಣೆಯಾಗಿರುತ್ತದೆ.
ಶ್ವೇತಭವನದಲ್ಲಿ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಅವರ ಪೂರ್ವಾಧಿಕಾರಿ ಬರಾಕ್ ಒಬಾಮ 2009ರಲ್ಲಿ ಆರಂಭಿಸಿದ್ದರು.
ಶ್ವೇತಭವನದಲ್ಲಿ ಸಾಂಪ್ರದಾಯಿಕ ದೀಪ ಬೆಳಗಿಸುವ ಮೂಲಕ ಅಧ್ಯಕ್ಷ ಟ್ರಂಪ್ ದೀಪಾವಳಿ ಆಚರಣೆಗೆ ಚಾಲನೆ ನೀಡಲಿದ್ದಾರೆ.
ಟ್ರಂಪ್ ಶ್ವೇತಭವನದಲ್ಲಿ ತನ್ನ ಮೊದಲ ದೀಪಾವಳಿಯನ್ನು ಭಾರತೀಯ-ಅಮೆರಿಕನ್ ಸಮುದಾಯದ ನಾಯಕರು ಮತ್ತು ತನ್ನ ಆಡಳಿತದ ಸದಸ್ಯರೊಂದಿಗೆ 2017ರಲ್ಲಿ ಆಚರಿಸಿದರು.
ಈ ನಡುವೆ, ಅಮೆರಿಕದಲ್ಲಿ ದೀಪಾವಳಿ ಆಚರಣೆ ಈಗಾಗಲೇ ಆರಂಭವಾಗಿದೆ. ಟೆಕ್ಸಾಸ್ ಗವರ್ನರ್ ಗ್ರೆಗ್ ಆ್ಯಬಟ್ ದೀಪಾವಳಿಯನ್ನು ಭಾರತೀಯ-ಅಮೆರಿಕನ್ ಸಮುದಾಯದೊಂದಿಗೆ ಶನಿವಾರ ಆಚರಿಸಿದರು.
Next Story