varthabharthi


ವಿಶೇಷ-ವರದಿಗಳು

►ಉತ್ಪಾದನೆ ಪ್ರಮಾಣ ಕುಸಿತ ►ಕಾರ್ಮಿಕರು, ವ್ಯಾಪಾರಸ್ಥರು, ಚಾಲಕರು, ಮಾಲಕರ ಮೇಲೆ ಪರಿಣಾಮ

ಆರ್ಥಿಕ ಸಂಕಷ್ಟದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ: ಸಾಮಾನ್ಯರ ಬದುಕು ಜರ್ಜರಿತಗೊಳಿಸಿದ ಆರ್ಥಿಕ ಹಿಂಜರಿತ

ವಾರ್ತಾ ಭಾರತಿ : 23 Oct, 2019
ಬಾಬುರೆಡ್ಡಿ ಚಿಂತಾಮಣಿ

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.22: ಇತ್ತೀಚಿನ ಆರ್ಥಿಕ ಹಿಂಜರಿತದ ಪರಿಣಾಮ ನಗರದ ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ನಗರದ ಬಹುತೇಕ ಕೈಗಾರಿಕಾ ಪ್ರದೇಶಗಳಲ್ಲಿನ ಕಂಪೆನಿಗಳಿಗೆ ತೀವ್ರ ಪೆಟ್ಟು ಬಿದ್ದಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ.

ಕಂಪೆನಿಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರು, ಅರೆಕಾಲಿಕ ಉದ್ಯೋಗಿಗಳ ಬದುಕಿನ ಮೇಲೆ ಆತಂಕದ ಛಾಯೆ ಆವರಿಸಿದೆ. ಇದಲ್ಲದೆ, ಈ ಕೈಗಾರಿಕಾ ವಲಯ ಪ್ರದೇಶವನ್ನೇ ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಸಣ್ಣ ಸಣ್ಣ ವ್ಯಾಪಾರಸ್ಥರು, ಸರಕು ಸಾಗಣೆಯ ವಾಹನ ಚಾಲಕರು, ಆಟೊ ಚಾಲಕರ ಮೇಲೆಯೂ ಪರಿಣಾಮ ಬೀರಿದೆ.

ಈಗಾಗಲೇ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನೆ ಪ್ರಮಾಣ ಕುಸಿದಿದ್ದು, ಹಂತ ಹಂತವಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಕೆಲವೇ ವರ್ಷಗಳ ಹಿಂದೆ, ಪ್ರತಿದಿನ 24 ಗಂಟೆಗಳ ಕಾಲ ಕೆಲಸ ನಿರ್ವಹಿಸಿದರೂ ಬೇಡಿಕೆಯಿರುವಷ್ಟು ಉತ್ಪಾದನೆಯ ಗುರಿಯನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ದಿನದಲ್ಲಿ 8 ಗಂಟೆಗಳ ಕಾಲ ಕೆಲಸ ನೀಡುವುದಕ್ಕೂ ಹಿಂದೆ ಮುಂದೆ ನೋಡುತ್ತಿದ್ದಾರೆ.

ಆರ್ಥಿಕ ಹಿಂಜರಿತದ ಬಳಿಕ ಕಾರ್ಮಿಕರನ್ನು ಕೆಲವು ಕಡೆಗಳಲ್ಲಿ ಕೆಲಸದಿಂದ ತೆಗೆದಿದ್ದಾರೆ. ದಸರಾ ಹಬ್ಬದ ಬಳಿಕ ಬಂಡವಾಳವಿಲ್ಲದೆ, ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕಾ ಕಂಪೆನಿಗಳನ್ನು ನಡೆಸಲಾಗದೇ ಅನಿವಾರ್ಯವಾಗಿ ಬೀಗ ಜಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ದಯಾನಂದ್ ಅಭಿಪ್ರಾಯಿಸಿದರು.

ಕಾರ್ಮಿಕರಿಗೆ ಇದೀಗ ಸರಿಯಾದ ವೇತನಗಳು ಸಿಗುತ್ತಿಲ್ಲ. ಅಲ್ಲದೆ, ಹಬ್ಬದ ದಿನಗಳಲ್ಲಿ ಬೋನಸ್ ಸಿಗುತ್ತಿತ್ತು, ಈಗ ಅದಕ್ಕೂ ಸಂಚಕಾರ ಬಂದೊದಗಿದೆ. ಕೆಲವು ಕಡೆ ಅಲ್ಪಪ್ರಮಾಣದ ಉತ್ಪಾದನಾ ಕಾರ್ಯ ಚಾಲ್ತಿಯಲ್ಲಿದ್ದರೆ, ಕೆಲವೆಡೆ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಮೊದಲು ಅಧಿಕವಾಗಿ ಓಟಿ ಸಿಗುತ್ತಿತ್ತು. ಈಗ ಸರಿಯಾಗಿ ವಾರ ಪೂರ್ತಿ ಕೆಲಸವೇ ಸಿಗುತ್ತಿಲ್ಲ ಎಂದು ಮತ್ತೊಬ್ಬ ಕಾರ್ಮಿಕ ಆನಂದ್ ಅಳಲು ತೋಡಿಕೊಂಡರು.

ಸಣ್ಣ ವ್ಯಾಪಾರಸ್ಥರ ಮೇಲೆಯೂ ಪ್ರಭಾವ: ಆರ್ಥಿಕ ಹಿಂಜರಿತದ ಬಳಿಕ ಕೈಗಾರಿಕೆಗಳು ಕಾರ್ಮಿಕರಿಗೆ ಕೆಲಸವನ್ನೂ ಕಡಿಮೆ ಮಾಡಿವೆ. ಇದರಿಂದ ತೀವ್ರ ಪೆಟ್ಟು ತಿಂದಿರುವ ಸಣ್ಣ ವ್ಯಾಪಾರಸ್ಥರು ಜೀವನ ಸಾಗಿಸಲು ಕಷ್ಟ ಪಡಬೇಕಾದ ಪರಿಸ್ಥಿತಿ ಎದುರಾಗಿದೆ.

"ನಾವಿಲ್ಲಿ ಸುಮಾರು 10 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಆದರೆ, ಇಂತಹ ಭೀಕರ ಪರಿಸ್ಥಿತಿಯನ್ನು ನಾವೆಂದೂ ಎದುರಿಸಿಲ್ಲ. ಈ ಮೊದಲು ದಿನಕ್ಕೆ 600ಕ್ಕೂ ಅಧಿಕ ಟೀ ಮಾರಾಟ ಮಾಡುತ್ತಿದ್ದೆವು. ಆದರೆ, ಈಗ 150-200 ಟೀ ಮಾರಾಟ ಮಾರುವುದೇ ಕಷ್ಟವಾಗುತ್ತಿದೆ. ಮನೆಯಲ್ಲಿ ಮಕ್ಕಳಿದ್ದು, ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು ಎಂಬುದೇ ಇದೀಗ ನಮ್ಮನ್ನು ಕಾಡುತ್ತಿದೆ" ಎಂದು ಸಣ್ಣ ವ್ಯಾಪಾರಿ ರುದ್ರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಹಿಂದೆ ಗಾರ್ಮೆಂಟ್ಸ್‌ಗೆ ಹೋಗುತ್ತಿದ್ದೆ. ತಿಂಗಳಿಗೆ 10 ಸಾವಿರ ರೂ. ಸಂಬಳ ಕೊಡುತ್ತಿದ್ದರು. ಅದರಿಂದ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ತಿಂಡಿ ಅಂಗಡಿಯನ್ನು ಇಟ್ಟುಕೊಂಡಿದ್ದೇನೆ. ಆದರೆ, 15 ದಿನಗಳಿಂದ ವ್ಯಾಪಾರದಲ್ಲಿ ತೀವ್ರ ಏರುಪೇರಾಗುತ್ತಿದೆ. ಮೂರು ತಿಂಗಳಿನಿಂದಲೂ ಜನರು ಬರುವುದು ಕಡಿಮೆಯಾಗಿತ್ತು. ಈಗ ಪೂರ್ತಿ ಕಡಿಮೆಯಾಗಿದೆ. ಮುಂದೆ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ವ್ಯಾಪಾರಸ್ಥ ಮಹಿಳೆ ಗೌರಿ ಅಸಹಾಯಕತೆ ತೋರ್ಪಡಿಸಿದರು.

ಆಟೋ ಚಾಲಕರನ್ನೂ ಬಿಟ್ಟಿಲ್ಲ: ಆರ್ಥಿಕ ಕುಸಿತ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಆಟೊ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದವರನ್ನೂ ಬಿಟ್ಟಿಲ್ಲ. ಈ ಹಿಂದೆ ಹೆಚ್ಚಿನ ಮಟ್ಟದಲ್ಲಿ ಸಿಗುತ್ತಿದ್ದ ಬಾಡಿಗೆಗಳು ಕಡಿಮೆಯಾಗಿವೆ. ಮತ್ತೊಂದು ಕಡೆ, ಕೆಲಸದಿಂದ ವಂಚಿತರಾದವರೂ ಆಟೋ ಖರೀದಿಗೆ ರಸ್ತೆಗಿಳಿದಿದ್ದಾರೆ. ಇದರಿಂದ ನಮ್ಮ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಆಟೊ ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಂಪೆನಿಗಳ ಮಾಲಕರ ಅನುಭವ: ಆಟೊ ಮೊಬೈಲ್ಸ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಬಿಡಿ ಭಾಗಗಳನ್ನು ಪೀಣ್ಯ ಕೈಗಾರಿಕಾ ವಲಯದಿಂದಲೇ ಹೋಗುತ್ತಿದ್ದವು. ಇದು ಸಣ್ಣ, ಅತಿ ಸಣ್ಣ ಹಾಗೂಮಧ್ಯಮ ಕೈಗಾರಿಕಾ ವಲಯದ ಅತಿದೊಡ್ಡ ಕ್ಷೇತ್ರವಾಗಿದೆ. ಆದರೆ, ಆರ್ಥಿಕ ಕುಸಿತದ ಪರಿಣಾಮ ಶೇ.30-40 ರಷ್ಟು ಬೇಡಿಕೆ ಕುಸಿದಿದೆ. ಇದರಿಂದ ಕಂಪೆನಿಗಳು ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿವೆ ಎಂದು ಖಾಸಗಿ ಕಂಪೆನಿಯ ಮಾಲಕ ಡಿ.ಟಿ.ಚಂದ್ರಶೇಖರ್ ಅಭಿಪ್ರಾಯಿಸಿದ್ದಾರೆ.

ಸರಕು ಸಾಗಣೆ ವಾಹನಗಳಿಗೆ ತಟ್ಟಿದ ಬಿಸಿ

ಸಣ್ಣ ವ್ಯಾಪಾರಿಗಳು, ಕಾರ್ಮಿಕರಿಗೆ ಅಷ್ಟೇ ಅಲ್ಲದೆ ಸರಕು ಸಾಗಣೆ ವಾಹನಗಳಿಗೆ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ. ಇದೀಗ ಅವರ ಬದುಕು ಶೋಚನೀಯವಾಗಿದ್ದು, ಹೇಳುವವರು-ಕೇಳುವವರಿಲ್ಲದೆ ಅಸಾಯಕರಾಗಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನೆಯ ಪ್ರಮಾಣ ಕಡಿಮೆ ಯಾಗುತ್ತಿದ್ದಂತೆಯೇ ನಮಗೂ ಕೆಲಸವಿಲ್ಲದಂತಾಗಿದೆ. ಮೊದಲು ಪ್ರತಿದಿನವೂ ಒಂದು ತಾಸು ಬಿಡುವಿಲ್ಲದಂತೆ ವಾಹನ ಚಲಾಯಿಸುತ್ತಿದ್ದೆವು. ಆದರೆ, ಈಗ ದಿನದಲ್ಲಿ ಒಂದು ಬಾಡಿಗೆ ಸಿಕ್ಕಿದರೆ ಸಾಕು ಎಂಬಂತೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದೇವೆ.ವಾಹನಗಳನ್ನು ಬ್ಯಾಂಕ್‌ಗಳಿಂದಲೋ ಅಥವಾ ಪ್ರವೇಟ್ ಫೈನಾನ್ಸ್ ಬಳಿಯೋ ಸಾಲ ಮಾಡಿ ಖರೀದಿ ಮಾಡಿರುತ್ತೇವೆ. ಇಲ್ಲಿ ತಂದು ನಿಲ್ಲಿಸಿಕೊಂಡರೆ ಬಾಡಿಗೆ ಸಿಗುತ್ತದೆ ಎಂಬ ಆಶಾಭಾವನೆಯಿತ್ತು. ಇಷ್ಟು ದಿನವೂ ಸರಿಯಿತ್ತು. ಆದರೆ, ಈಗ ಕಷ್ಟವಾಗಿದೆ. ಜೀವನ ನಡೆಸುವುದೇ ಕಷ್ಟವಾದಾಗ, ಇನ್ನು ನಾವು ಲೋನ್ ಕಟ್ಟುವುದು ಹೇಗೆ ಎಂದು ಚಾಲಕ ವಸಂತಕುಮಾರ್ ಪ್ರಶ್ನಿಸಿದ್ದಾರೆ.

ಆರ್ಥಿಕ ಹಿಂಜರಿತದ ಬಳಿಕ ನಮ್ಮಲ್ಲಿಯೂ ಯಾವುದೇ ರೀತಿಯ ಆಶಾದಾಯಕ ಬೆಳವಣಿಗೆ ಕಾಣಲಿಲ್ಲ. ಜಾಗತಿಕವಾಗಿ ಆರ್ಥಿಕತೆಯ ಮೇಲೆ ತೀವ್ರವಾದ ಪರಿಣಾಮ ಉಂಟು ಮಾಡಿದೆ. ಕೇಂದ್ರ ಸರಕಾರ ಸಂಪೂರ್ಣ ಗೊಂದಲಮಯವಾದ ಆರ್ಥಿಕ ನೀತಿಯನ್ನು ಜಾರಿ ಮಾಡುತ್ತಿದೆ. ಕೇವಲ ಬಂಡವಾಳಿಗರ ಪರವಾಗಿರುವ ನೀತಿಗಳೇ ಇದ್ದು, ಸಣ್ಣ, ಮಧ್ಯಮ ಉದ್ಯಮಕ್ಕೆ ಪೆಟ್ಟು ಬೀಳುತ್ತಿದೆ. ಪೀಣ್ಯ ಕೈಗಾರಿಕಾ ಪ್ರದೇಶವು 10-15 ವರ್ಷಗಳಿಂದ ಶಾಪಗ್ರಸ್ಥ ಕೈಗಾರಿಕಾ ಪ್ರದೇಶವಾಗಿದೆ. ಇದರ ನಡುವೆ ಇಂದಿನ ಆರ್ಥಿಕ ಕುಸಿತದಿಂದ ಶೇ.60ರಷ್ಟು ಉತ್ಪಾದನೆ ಕುಸಿದಿದೆ. ಇದು ಮತ್ತಷ್ಟು ಕುಸಿಯುವ ಆತಂಕವಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಪಾಧ್ ಭಟ್ ಹೇಳಿದರು.

20 ವರ್ಷಗಳಿಂದ ಇಲ್ಲಿಯೇ ಸಣ್ಣ ವ್ಯಾಪಾರ ಮಾಡಿಕೊಂಡಿದ್ದೇನೆ. ಆದರೆ, ಕೇಂದ್ರ ಸರಕಾರವು ಜಿಎಸ್‌ಟಿ, ನೋಟ್ ಬ್ಯಾನ್ ಮಾಡಿದಾಗಿನಿಂದ ವ್ಯಾಪಾರ ಕಡಿಮೆ ಆಗಿದೆ. ಈಗ ಒಂದು 10 ದಿನಗಳಿಂದ ಏನೂ ವ್ಯಾಪಾರವೇ ಆಗುತ್ತಿಲ್ಲ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ.
-ಕವಿತಾ, ಸಣ್ಣ ವ್ಯಾಪಾರಿ

ಕೇಂದ್ರ ಸರಕಾರದ ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿಯಂತಹ ಅವೈಜ್ಞಾನಿಕ ನೀತಿಗಳಿಂದ ಸಣ್ಣ, ಮಧ್ಯಮ, ಅತಿ ಸಣ್ಣ ಕೈಗಾರಿಕೆಗಳು ತೀವ್ರ ಪೆಟ್ಟು ತಿನ್ನುತ್ತಿವೆ. ಈ ನೀತಿಗಳಿಂದ ಉದ್ಯಮಕ್ಕೆ ನಷ್ಟವಾಗುತ್ತಿದೆ. ಈಗ ಆರ್ಥಿಕ ಹಿಂಜರಿತಕ್ಕೂ ಅದೇ ಕಾರಣವಾಗಿದೆ. ಇಲ್ಲಿನ ಹಲವು ಕಡೆ ಕಾರ್ಮಿಕರಿಗೆ ವೇತನ, ಬೋನಸ್ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಕೆಲಸದಿಂದ ತೆಗೆಯುತ್ತಿದ್ದಾರೆ, ನಿರುದ್ಯೋಗ ಅಧಿಕವಾಗುತ್ತಿದೆ. 

-ಚಂದ್ರಶೇಖರ್, ಎಸ್‌ಸಿಎಂ ಕಂಪೆನಿಯ ಮಾಲಕ

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪ್ರಸ್ತುತ ಉತ್ಪಾದನಾ ಪ್ರಮಾಣ ಕಡಿಮೆಯಾಗಿದೆ. ಶೇ.42-50ರಷ್ಟು ಉತ್ಪಾದನೆ ಕಡಿಮೆಯಾಗಿದೆ. ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ, ಇದೀಗ 8 ಗಂಟೆ ಕೆಲಸ ನೀಡುವುದೇ ಕಷ್ಟವಾಗಿದೆ. ಮತ್ತೊಂದು ಕಡೆ ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡವರು, ಕಟ್ಟಲಾಗದೇ ಸಂಕಷ್ಟ ಸ್ಥಿತಿ ನಿರ್ಮಾಣವಾಗಿದೆ.

-ಮಲ್ಲೇಧರರೆಡ್ಡಿ, ಪೀಣ್ಯ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)