varthabharthi


ವೈವಿಧ್ಯ

ತರಕಾರಿ ಬೆಲೆಗಳನ್ನು ತಹಬದಿಗೆ ತರಲು ಸರಕಾರವು ಅನುಸರಿಸುತ್ತಿರುವ ಕಾರ್ಯತಂತ್ರಗಳ ವ್ಯಾಪ್ತಿ ಮತ್ತು ಸ್ವರೂಪಗಳೆರಡೂ ದೋಷಪೂರಿತವಾಗಿವೆ.

ತರಕಾರಿ ಬೆಲೆಗಳು ಮುಗಿಲು ಮುಟ್ಟಲು ಕಾರಣವೇನು?

ವಾರ್ತಾ ಭಾರತಿ : 24 Oct, 2019
ಕೃಪೆ: Economic and Political Weekly

 ಭಾರತದಲ್ಲಿ ಆಹಾರ ಸಾಮಗ್ರಿಗಳ ಬೆಲೆಗಳಲ್ಲಿನ ವೈಪರೀತ್ಯವು ಎಂತಹ ಸರ್ವೇ ಸಾಮಾನ್ಯವಾದ ಸಂಗತಿಯಾಗಿಬಿಟ್ಟಿದೆಯೆಂದರೆ ಸರಕಾರದ ಪ್ರತಿಸ್ಪಂದನೆಗಳೂ ಸಹ ರೈತರ ಬದುಕನ್ನು ಉತ್ತಮಗೊಳಿಸುತ್ತೇವೆಂಬ ರೂಢಿಗತ ಆಶ್ವಾಸನೆಗಳ ನಿರೀಕ್ಷಿತ ಸ್ವರೂಪವನ್ನು ಪಡೆದುಕೊಂಡುಬಿಟ್ಟಿದೆ. ಅದೇನೇ ಇದ್ದರೂ ಕಳೆದ ಕೆಲವು ವಾರಗಳಿಂದ ಮುಗಿಲಿಗೇರುತ್ತಿರುವ ತರಕಾರಿ ದರಗಳು ಅದರಲ್ಲೂ ಈರುಳ್ಳಿಯ ಬೆಲೆಯು ರಾಜಕೀಯ ವರ್ತುಲದಲ್ಲಿ ಚಟುವಟಿಕೆಗಳನ್ನು ಬಿರುಸುಗೊಳಿಸಿದೆ. ಆದರೆ ಈ ಯಾವುದೇ ಚಟುವಟಿಕೆಗಳು ಈ ಹಿಂದಿನಂತೆ ರಫ್ತುದಾರರ ಮೇಲೆ ಕನಿಷ್ಠ ರಫ್ತು ಬೆಲೆಯನ್ನು ನಿಗದಿಗೊಳಿಸುವಂತಹ ಮತ್ತು ಸ್ಥಳೀಯ ವರ್ತಕರ ಮೇಲೆ ಸಂಗ್ರಹ ಮಿತಿಯನ್ನು ಹೇರುವಂತಹ ಕ್ರಮಗಳನ್ನು ಮೀರಿ ಬೇರೆ ಯಾವುದೇ ಕ್ರಮಗಳನ್ನಂತೂ ಹುಟ್ಟುಹಾಕಲಿಲ್ಲ. ವಾಸ್ತವವಾಗಿ 2017ರಲ್ಲಿ ಈರುಳ್ಳಿಯ ಬೆಲೆ ಕೆಜಿಗೆ 80ರೂ. ಮತ್ತು ಟೊಮ್ಯಾಟೊ ಬೆಲೆ ಕೆಜಿಗೆ 110 ರೂ. ಆಗಿದ್ದಾಗಲೂ ಈ ಸರಕಾರ ಯಥಾವತ್ ಇದೇ ಕ್ರಮಗಳನ್ನು ಕೈಗೊಂಡಿತ್ತು. ವಾಸ್ತವವಾಗಿ ತರಕಾರಿಗಳ ಬೆಲೆಗಳು ಋತುಮಾನ ನಿರ್ಧರಿತವಾಗಿರುತ್ತವೆ ಎಂಬುದಕ್ಕಿಂತ ಪ್ರತಿ ಎರಡು ವರ್ಷಗಳಿಗೊಮ್ಮೆ ಅವುಗಳ ಬೆಲೆ ಆಕಾಶದ ಕಡೆಗೇರುತ್ತವೆ ಎಂಬುದೇ ಆಡಳಿತರೂಢ ಸರಕಾರಗಳನ್ನು ಕಂಗೆಡಿಸುತ್ತಾ ಬಂದಿವೆ. ಇಂತಹ ಬೆಲೆ ಹೆಚ್ಚಳಗಳ ನಿಯಂತ್ರಣವು ಸರಕಾರದ ಪರಿಧಿಗೆ ಮೀರಿದ್ದು ಎಂಬ ಅಸಹಾಯಕತೆಯನ್ನು ಸರಕಾರವು ಅಧಿಕೃತವಾಗಿ ಹೇಳಿಕೊಳ್ಳುತ್ತಾ ಬಂದಿದ್ದರೂ ಸರಕಾರದ ಅಸಹಾಯಕತೆಗಳನ್ನು ಅಧಿಕೃತವಾಗಿ ಘೋಷಿಸುವುದರಲ್ಲಿ ಹಲವು ಲಾಭಗಳಿವೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.
ಮೊದಲಿಗೆ ಇದು ಹಲವಾರು ವರ್ಷಗಳ ನಿಷಕ್ರೆಿಯತೆಯನ್ನು ‘ತುರ್ತು’ ಕಾರ್ಯಾಚರಣೆಗಳ ಹಿಂದೆ ಮುಚ್ಚಿಡುತ್ತದೆ. ಈ ಬೆಲೆ ಹೆಚ್ಚಳಗಳೂ ವ್ಯವಸ್ಥೆಯೊಳಗಿನ ದೋಷಗಳ ಪರಿಣಾಮವೆಂದು ಅರ್ಥಮಾಡಿಕೊಳ್ಳುವ ಬದಲಿಗೆ ಒಂದು ವಿಶೇಷವಾದ ವಿದ್ಯಮಾನವೆಂದು ಅರ್ಥಪಡಿಸಲಾಗುತ್ತದೆ. ಎರಡನೆಯದಾಗಿ ಇದು ಸರಕಾರದ ಭರವಸೆ ಮತ್ತು ಕ್ರಿಯೆಗಳ ನಡುವಿನ ವೈರುಧ್ಯವನ್ನು ಕೂಡಾ ಮುಚ್ಚಿಹಾಕುತ್ತದೆ. ‘ಒಂದು ದೇಶ, ಒಂದು ಮಾರುಕಟ್ಟೆ’ ಎಂಬ ಭವ್ಯ ಪ್ರಸ್ತಾಪಗಳನ್ನು ಮಾಡುವ ಸರಕಾರವೊಂದು ಶೀಘ್ರವಾಗಿ ಬೆಲೆಗಳನ್ನು ನಿಯಂತ್ರಿಸುವ ಸಲುವಾಗಿ ರೈತರು ತಮ್ಮ ದಾಸ್ತಾನುಗಳನ್ನು ಹೆಚ್ಚು ಲಾಭ ದಕ್ಕುವ ಮಾರುಕಟ್ಟೆಗೆ (ಈರುಳ್ಳಿಯ ವಿಷಯಕ್ಕೆ ಬರುವುದಾದರೆ ರಫ್ತು ಮಾರುಕಟ್ಟೆಗೆ) ಮಾರದಂತೆ ನಿಯಂತ್ರಣ ಹೇರುತ್ತದೆ. ಮೂರನೆಯದಾಗಿ ತಮ್ಮ ತಿಂಗಳ ಬಜೆಟ್‌ನ ಸೀಮಿತ ವ್ಯಾಪ್ತಿಯಲ್ಲಿ ಬದುಕು ನಿರ್ವಹಣೆ ಮಾಡುವ ಮಧ್ಯಮವರ್ಗದ ಅಸಹಾಯಕತೆಗಳು ಮಾತ್ರ ಸರಕಾರದಲ್ಲಿ ಪ್ರತಿಸ್ಪಂದನೆ ಉಂಟುಮಾಡುತ್ತದೆ. ಏಕೆಂದರೆ ಈ ಸರಕಾರದ ಪ್ರಧಾನ ಮತದಾರರ ನೆಲೆಯು ಮಧ್ಯಮ ವರ್ಗವೇ ಆಗಿದೆ. ಆದರೆ ಈ ಭಾವನಾತ್ಮಕ ರಾಜಕೀಯದಲ್ಲಿ ಮಹತ್ವದ ಸಂಗತಿಗಳನ್ನು ಅಂಚಿಗೆ ದೂಡಿಬಿಡುವ ಅಪಾಯವಡಗಿದೆ. ಉದಾಹರಣೆಗೆ ಈ ಸರಕಾರದ ಬೆಲೆ ನಿಯಂತ್ರಣ ನೀತಿಗಳು ಏಕೆ ರೈತಾಪಿಯನ್ನು ಅಂತಿಮವಾಗಿ ಕೊಳ್ಳುವವರೂ ಅಥವಾ ಆಹಾರ ಸಾಮಗ್ರಿಗಳ ಗ್ರಾಹಕರೂ ಆಗಿದ್ದಾರೆಂಬುದನ್ನು ಗುರುತಿಸುವುದಿಲ್ಲ. ಅಥವಾ ಈ ಸಂಗತಿಗಳು ಏಕೆ ‘ಗ್ರಾಹಕ ಸ್ನೇಹಿ’ ಅಥವಾ ‘ಗ್ರಾಹಕ ಪರ’ ನೀತಿಗಳ ಸಾರ್ವಜನಿಕ ಚರ್ಚೆಯಲ್ಲಿ ಮೂಕವಾಗುತ್ತವೆ ಎಂಬ ಮೂಲಭೂತ ವಿಷಯಗಳನ್ನು ಮರೆಮಾಚಲಾಗುತ್ತದೆ. ಆದರೆ, ತಳಮಟ್ಟದ ವಾಸ್ತವತೆಗಳು ಇಂತಹ ಪ್ರಸ್ತಾಪಗಳ ಯಥಾರ್ಥತೆಯನ್ನು ಪ್ರಶ್ನೆಗೊಳಪಡಿಸುತ್ತವೆ.
ಸರಕಾರಿ ಉತ್ಪನ್ನಗಳ ಚಿಲ್ಲರೆ ಮಾರಾಟದ ಬೆಲೆಯ ಶೇ.60-70ರಷ್ಟು ಪಾಲನ್ನು ಮಧ್ಯವರ್ತಿಗಳು ರೈತರಿಂದ ಕೊಂಡ ನಂತರದಲ್ಲಿ ತೀರ್ಮಾನ ಮಾಡುತ್ತಾರೆ ಹಾಗೂ ಅದು ರೈತರ ನಿಯಂತ್ರಣದಲ್ಲಿ ಇರುವುದೇ ಇಲ್ಲ. ಮತ್ತೊಂದು ಕಡೆ ತರಕಾರಿ ಮಾರಾಟದಲ್ಲಿ ಸಿಗುವ ಲಾಭಾಂಶದ ಬಹಳಷ್ಟು ಭಾಗವು ಚಿಲ್ಲರೆ ವ್ಯಾಪಾರಿಗಳ ಪಾಲಾಗುವುದರಿಂದ, ಚೆಲ್ಲರೆ ಮಾರಾಟದ ಬೆಲೆಯು ಸಗಟು ಮಾರಾಟದ ಬೆಲೆಯನ್ನು ಅನುಸರಿಸುವುದು ಬಹಳ ಕಡಿಮೆ. ಉದಾಹರಣೆಗೆ ರಾಷ್ಟ್ರೀಯ ತೋಟಗಾರಿಕಾ ನಿಗಮವು ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ 2018ರ ಜನವರಿಯಲ್ಲಿ ದಿಲ್ಲಿಯಲ್ಲಿ ಈರುಳ್ಳಿಯ ಸಗಟು ಮಾರಾಟದ ಬೆಲೆಯು ಕೆಜಿಗೆ 32 ರೂ. ಇದ್ದದ್ದು ಫೆಬ್ರವರಿಯಲ್ಲಿ ಕೆಜಿಗೆ 20, ಮಾರ್ಚ್‌ನಲ್ಲಿ 11 ಹಾಗೂ ಅಂತಿಮವಾಗಿ ಎಪ್ರಿಲ್‌ನಲ್ಲಿ ಕೆಜಿಗೆ 9 ರೂ.ಗಳಿಗೆ ಇಳಿದಿದ್ದರೂ, ಸರಾಸರಿ ಚಿಲ್ಲರೆ ಮಾರಾಟದ ಬೆಲೆಯು ಮಾತ್ರ ಕೆಜಿಗೆ 49 ರೂ.ಗಳಿಂದ 37-38ರೂ.ಗಳಿಗೆ ಮಾತ್ರ ಇಳಿದಿತ್ತು. ಅದೇ ರೀತಿಯಲ್ಲಿ ಕಳೆದ ಕೆಲವು ವಾರಗಳಲ್ಲಿ ದಿಲ್ಲಿಯಲ್ಲಿ ಈರುಳ್ಳಿಯ ಸಗಟು ಮಾರಾಟ ದರ ಕೆಜಿಗೆ 30-32 ರೂ.ಗಳ ನಡುವೆ ಇದ್ದರೂ, ಚಿಲ್ಲರೆ ಮಾರಾಟ ದರ ಮಾತ್ರ ಕೆಜಿಗೆ ರೂ.50 ರಿಂದ 59ರೂ.ಗಳಿಗೆ ಏರಿದೆ.
ಸದ್ಯದ ಸಂದರ್ಭದಲ್ಲಿ ಸರಕಾರವು ಅನುಸರಿಸುತ್ತಿರುವ ಯಾವುದೇ ನೀತಿಗಳು ಉತ್ಪಾದಕರ ಮತ್ತು ಗ್ರಾಹಕರ ನಡುವಿನ ಅಸಮ ಬೆಲೆ ವರ್ಗಾವಣೆಯಲ್ಲಿರುವ ವ್ಯವಸ್ಥಾಗತ ಲೋಪಗಳನ್ನು ಸರಿಪಡಿಸುವ ಉದ್ದೇಶವನ್ನೇ ಹೊಂದಿಲ್ಲ. ಅಂತಹ ನೀತಿಗಳಲ್ಲಿ ಒಣಮಾತುಗಳು ಬಿಟ್ಟರೆ ಸಾರದಲ್ಲಿ ಗ್ರಾಹಕ ಸ್ನೇಹಿಯಲ್ಲ. ಅಂತರ್‌ರಾಷ್ಟ್ರೀಯ ಪುನರ್ರಚನಾ ಮತ್ತು ಅಭಿವೃದ್ಧಿ ಬ್ಯಾಂಕಿನ (ಐಬಿಆರ್‌ಡಿ) 2017ರ ವರದಿಯು ತಿಳಿಸುವಂತೆ ಸರಕಾರದ ಗ್ರಾಹಕಪರ ನೀತಿಗಳ ಧೋರಣೆಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿಯ ದರಗಳು ಹೆಚ್ಚಾದಾಗ ಅದರ ವ್ಯಾಪಾರವನ್ನು ನಿಯಂತ್ರಿಸುವುದಕ್ಕಾಗಿ ಮಾತ್ರ ಉಪಯೋಗವಾಗುತ್ತಿದೆ. ಒಂದು ಸ್ಥಿರವಾದ ವ್ಯಾಪಾರ ನೀತಿಯು ಇಲ್ಲದಿರುವುದು ಒಟ್ಟಾರೆಯಾಗಿ ಕೃಷಿ ಮಾರುಕಟ್ಟೆಯ ಅಭಿವೃದ್ಧಿಗೆ ಧಕ್ಕೆಯುಂಟು ಮಾಡುತ್ತಿದೆಯಲ್ಲದೆ ಪ್ರತ್ಯೇಕವಾಗಿ ಉತ್ಪಾದಕರಿಗಾಗಲೀ ಅಥವಾ ಗ್ರಾಹಕರಿಗಾಗಲೀ ಪ್ರಯೋಜನ ಉಂಟು ಮಾಡುತ್ತಿಲ್ಲ. ಈರುಳ್ಳಿ ದರವು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಾಸರಿ ಟನ್ನಿಗೆ 300 ಡಾಲರ್ ಆಗಿರುವಾಗ ಈರುಳ್ಳಿಯ ಕನಿಷ್ಠ ರಫ್ತು ದರವನ್ನು ಟನ್ನಿಗೆ 850 ಡಾಲರಿಗೆ ನಿಗದಿಗೊಳಿಸುವ ಮೂಲಕ ಈರುಳ್ಳಿಯ ರಫ್ತನ್ನು ನಿಷೇಧಿಸಲಾಗಿದೆ. ಆ ಮೂಲಕ ರೈತಾಪಿಗೆ ರಫ್ತು ಮಾರುಕಟ್ಟೆಯ ಲಾಭವನ್ನು ನಿರಾಕರಿಸಲಾಗುತ್ತಿದೆ. ಮಾತ್ರವಲ್ಲದೆ ಹೀಗೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರಂತರತೆಯನ್ನು ಕಳೆದುಕೊಳ್ಳುವುದರಿಂದ ಭಾರತದ ಅಂತರ್‌ರಾಷ್ಟ್ರೀಯ ವ್ಯಾಪಾರವೂ ಮತ್ತು ಅದರ ರಫ್ತಿನ ಘಟಕ ಮೌಲ್ಯೂ ಕಡಿಮೆಯಾಗುತ್ತಾ ಹೋಗುತ್ತದೆ.
 ವಿಪರ್ಯಾಸವೆಂದರೆ ಇದೇ ಸರಕಾರವೇ ರೈತಾಪಿಗಳ ಆದಾಯವನ್ನು 2022ರ ವೇಳೆಗೆ ದುಪ್ಪಟ್ಟುಗೊಳಿಸುವ ಮತ್ತು ಅದೇ ಸಮಯದಲ್ಲಿ ಕೃಷಿ ಸರಕುಗಳ ರಫ್ತನ್ನು 2022ರ ವೇಳೆಗೆ 60 ಬಿಲಿಯನ್ ಡಾಲರ್‌ಗಳಿಗೆ ಏರಿಸುವ, ಕೃಷಿಯಲ್ಲಿ ಹೆಚ್ಚು ವಾಣಿಜ್ಯದ ಸಾಮರ್ಥ್ಯವನ್ನು ಹೊಂದಿರುವ ತೋಟಗಾರಿಕಾ ಬೆಳೆಗಳ ಉತ್ಪಾದನೆನ್ನು ಹೆಚ್ಚಿಸುವ ಮತ್ತು ಸಂಸ್ಕರಿತ ಆಹಾರೋತ್ಪನ್ನಗಳನ್ನು ಉತ್ಪಾದಿಸುವ ಮಾತುಗಳನ್ನು ಸಹ ಆಡುತ್ತದೆ. ಆದರೆ ವಾಸ್ತವದಲ್ಲಿ ರೈತಾಪಿಗಳ ವ್ಯಾಪಾರವನ್ನು ಸರಕುಗಳ ಹರಾಜು ಪ್ರಕ್ರಿಯೆಯನ್ನು ಮಧ್ಯವರ್ತಿಗಳು ಹಾಗೂ ದಲ್ಲಾಳಿ ಏಜೆಂಟರೇ ನಿಯಂತ್ರಿಸುವ ‘ಮಂಡಿ’ ವ್ಯವಸ್ಥೆಗೇ ಆತುಕೊಂಡಿರುವಂತೆ ಮಾಡುತ್ತಿದೆ. ಭಾರತದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೊಸ ಆಸಕ್ತರು ಪ್ರವೇಶಿಸಿದ್ದರೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಾಗಲಿ ಅಥವಾ ಸಗಟು ಮಾರಾಟ ವ್ಯವಸ್ಥೆಯಾಗಲೀ ಈ ಹೊಸ ಆಸಕ್ತರು ಬಯಸುವ ನಿರಂತರತೆ ಮತ್ತು ಗುಣಮಟ್ಟವನ್ನು ಖಾತರಿ ಪಡಿಸುತ್ತಿಲ್ಲ ಅಥವಾ ಆ ನಿಟ್ಟಿನೆಡೆ ಹೆಜ್ಜೆಯನ್ನೂ ಕೂಡಾ ಹಾಕುತ್ತಿಲ್ಲ. ಮೇಲಾಗಿ ಸಂತ್ರಸ್ತ ಗ್ರಾಹಕರ ಪರವಾಗಿ ಸರಕಾರವು ಮಾಡುವ ಆಯ್ದ ಮಧ್ಯಪ್ರವೇಶಗಳು ಕೃಷಿ ಮಾರುಕಟ್ಟೆಯಲ್ಲಿರುವ ಯಾವುದೇ ಸಾಂಸ್ಥಿಕ ಅಸಮತೆಗಳನ್ನು ತೊಡೆದುಹಾಕುವುದಿಲ್ಲ. ಭಾರತದ ಸಂದರ್ಭದಲ್ಲಿ ಹೆಚ್ಚಿನ ಗ್ರಾಹಕ ದರಗಳು ರೈತರಿಗೆ ಹೆಚ್ಚಿನ ದರಗಳನ್ನೇನೂ ಕೊಡಮಾಡುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಇಂತಹ ಸಂದರ್ಭದಲ್ಲಿ ಇತರ ಗ್ರಾಹಕರಂತೆ ರೈತರೂ ಸಹ ಆಹಾರ ಸರಕಿನ ಅಂತಿಮ ಕೊಳ್ಳುಗರೇ ಆಗಿದ್ದಾರೆ ಮತ್ತು ಅವರೂ ಸಹ ಆಹಾರ ಸಾಮಗ್ರಿಗಳ ಬೆಲೆ ವೈಪರೀತ್ಯದಿಂದ ಸಂಕಷ್ಟಕ್ಕೆ ತುತ್ತಾಗುತ್ತಾರೆ. ಹಾಗಿರುವಾಗ ರೈತಾಪಿಯ ಈ ಸಂಕಷ್ಟಗಳಿಗೆ ಯಾರು ಹೊಣೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)