varthabharthi

ನಿಮ್ಮ ಅಂಕಣ

ಮರಳು ಗಣಿಗಾರಿಕೆ ಗೊಂದಲ

ವಾರ್ತಾ ಭಾರತಿ : 24 Oct, 2019
-ಲಕ್ಷ್ಮೀಕಾಂತರಾಜು ಎಂ.ಜಿ., ಮಠ, ಗುಬ್ಬಿ

ಮಾನ್ಯರೇ,

ರಾಜ್ಯದಲ್ಲಿ ಉಂಟಾಗಿರುವ ಮರಳಿನ ಸಮಸ್ಯೆಯ ಕುರಿತು ಕೊರತೆ ನೀಗಿಸಲು ಪ್ರವಾಹ ಉಂಟಾಗಿರುವ ನದಿಗಳಲ್ಲಿನ ಪಕ್ಕದ ಪಟ್ಟಾಭೂಮಿಯಲ್ಲಿನ ಸಂಗ್ರಹವಾಗಿರುವ ಮರಳನ್ನು ತೆಗೆಯಲು ಸರಕಾರ ಮಾರ್ಗಸೂಚಿ ಹೊರಡಿಸಿದೆ.

ಪಟ್ಟಾಭೂಮಿಯಲ್ಲಿ ಸಂಗ್ರಹವಾಗಿರುವ ಮರಳನ್ನು ತೆಗೆಯಲು ಅನುಮತಿ ನೀಡಲು ಹೊರಟಿರುವುದು ಪ್ರವಾಹ ಉಂಟಾಗಿರುವ ನದಿಗಳ ಪಕ್ಕದ ಕೃಷಿ ಭೂಮಿಗಳಿಗೆ ಮಾತ್ರವೇ? ಅಥವಾ ಎಲ್ಲ ನದಿಗಳಿಗೆ ಹೊಂದಿಕೊಂಡಂತಿರುವ ಪಟ್ಟಾಭೂಮಿಗಳಿಗೂ ಅನ್ವಯವಾಗುತ್ತವೆಯೋ ಎಂಬ ಬಗ್ಗೆ ಗೊಂದಲವಿದೆ.
ಪ್ರವಾಹದಿಂದ ನದಿಪಾತ್ರದ ಪಟ್ಟಾಭೂಮಿಯಲ್ಲಿ ಮೇಲ್ಮೈಯಲ್ಲಿ ಉಂಟಾಗಿರುವ ಮರಳನ್ನು ಎತ್ತಲು ಮಾತ್ರವೇ ಅನುಮತಿ ನೀಡಲು ಹೊರಟಿದ್ದರೆ ಆ ಬಗ್ಗೆ ಸರಕಾರ ಸ್ವಷ್ಟನೆ ಕೊಡಬೇಕಿದೆ.

ಸರಕಾರದ ಮಾರ್ಗಸೂಚಿಯ ಪ್ರಕಾರ ಮರಳು ಸಿಗುವ ಸ್ಥಳದಿಂದ ಆ ಪಂಚಾಯತ್‌ನ ವ್ಯಾಪ್ತಿಗೆ ಮಾತ್ರವೇ ಅಲ್ಲಿ ಸಿಗುವ ಮರಳನ್ನು ಪೂರೈಸಬೇಕೆಂಬ ನಿಯಮವಿದ್ದು, ಒಂದು ವೇಳೆ ಬೇರೆಡೆಗೆ ಸಾಗಿಸಬೇಕಾದರೆ ಪರವಾನಿಗೆ ಅವಶ್ಯವೆಂದಿದೆ. ಮರಳುಗಾರಿಕೆಗೆ ಅನುಮತಿ ಪಡೆದವರು ಈ ಎಲ್ಲ ನಿಯಮಗಳನ್ನು ಪಾಲಿಸುತ್ತಾರೆಯೇ? ಪ್ರವಾಹದ ಹೆಸರಲ್ಲಿ ಮರಳನ್ನು ಎತ್ತುವವರಿಗೆ ಇದು ವರದಾನವಾಗಲಿದೆ.

ಈ ಹಿಂದೆ ಸರಕಾರ ಪಟ್ಟಾಭೂಮಿಯಲ್ಲಿನ ಮರಳನ್ನು ಎತ್ತಲು ಅನುಮತಿ ನೀಡಿ ಅದರಲ್ಲಿ ಉಂಟಾದ ಅಕ್ರಮಗಳನ್ನು ಕಂಡು ಮತ್ತೆ ತಡೆಹಿಡಿದಿತ್ತು. ಆದರೆ, ಇಂದಿನ ಬಿಜೆಪಿ ಸರಕಾರ ನೆರೆಯ ವಿಷಯ ಮುಂದಿಟ್ಟುಕೊಂಡು ಮರಳು ಗಣಿಗಾರಿಕೆಗೆ ಮುಂದಾಗಿರುವುದು ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದವರಿಗೆ ಆನೆ ಬಲ ನೀಡಿದಂತಾಗಿದೆ.

ಸರಕಾರವೇ ಸರಕಾರಿ ಕಟ್ಟಡಗಳಿಗೆ ಎಂ ಸ್ಯಾಂಡ್ ಬಳಸಲು ಕಡ್ಡಾಯ ಮಾಡಿರುವಾಗ ನದಿ ಪಾತ್ರದ ಭೂಮಿಯಲ್ಲಿ ಮರಳನ್ನು ಎತ್ತಿ ಅಂತರ್ಜಲ ಬಸಿಯಲು ಹೊರಟಿರುವುದು ಸರಿಯೇ? ಮಾರ್ಗಸೂಚಿಯಲ್ಲೇನೋ ಪಟ್ಟಾಭೂಮಿಯ ಮೇಲ್ಮೈ ಇರುವ ಮರಳನ್ನು ಎತ್ತುವ ಅವಕಾಶ ಇದೆಯಾದರೂ ಇಲ್ಲಿ ಅಳತೆ ನೋಡಿಕೊಂಡು ಕೂರುವವರು ಯಾರಿದ್ದಾರೆ?

ಈ ಅದೇಶವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅಕ್ರಮ ಮರಳು ಗಣಿಗಾರಿಕೆ ಮಾಡುವವರು ಇತರ ನದಿಗಳು ಮತ್ತು ಹಳ್ಳಗಳಲ್ಲಿನ ಮರಳನ್ನು ಕದಿಯಲು ಹೊರಡುವ ಮೊದಲೇ ಸರಕಾರ ಎಚ್ಚರವಹಿಸಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)